ಬೆಂಗಳೂರು: ವಿಧಾನಸಭೆ ಚುನಾವಣೆಗಳು ಹತ್ತಿರವಾಗುತ್ತಿರುವಂತೆ ಪಕ್ಷಗಳ ಕಾರ್ಯತಂತ್ರಗಳು ಸ್ಪಷ್ಟವಾಗುತ್ತಾ ಸಾಗಿವೆ. ಸಿದ್ದರಾಮೋತ್ಸವ, ಭಾರತ್ ಜೋಡೊ, ಅಮೃತ ಮಹೋತ್ಸವ ನಡಿಗೆ, ಪ್ರಜಾಧ್ವನಿ ಯಾತ್ರೆ, 40% ಸರ್ಕಾರ, ಪೇ ಸಿಎಂನಂತಹ ಹತ್ತು ಹಲವು ಘೋಷಣೆ, ಕಾರ್ಯಕ್ರಮಗಳ ಮೂಲಕ ಕಾಂಗ್ರೆಸ್ ಅಬ್ಬರಿಸುತ್ತಿದೆ.
ಕಾಂಗ್ರೆಸ್‌ನಲ್ಲಿರುವ ಇಬ್ಬರು ನಾಯಕರೂ ಅಬ್ಬರಿಸುವವರೆ. ಅಭಿಮಾನಿಗಳ ಪಾಲಿನ ಬಂಡೆ ಡಿ.ಕೆ. ಶಿವಕುಮಾರ್ ಆಕ್ರಮಣಕಾರಿ ಆಟವನ್ನು ಮುಂದುವರಿಸಿದ್ದಾರೆ. ಅದೇ ರೀತಿ ಅಭಿಮಾನಿಗಳ ಟಗರು ಸಿದ್ದರಾಮಯ್ಯ ಸಹ ಗುಟುರು ಹಾಕುತ್ತ ಚುನಾವಣಾ ಹವಾ ಕಾಯ್ದುಕೊಂಡಿದ್ದಾರೆ.
ಎರಡೂ ರಾಷ್ಟ್ರೀಯ ಪಕ್ಷಗಳ ಪೈಕಿ ಕಾಂಗ್ರೆಸ್ ಮುನ್ನಡೆ ಕಂಡುಕೊಂಡಿರುವಂತೆ ಕಾಣುತ್ತಿದೆ. ಟಿಕೆಟ್ ಘೊಷಣೆಯಲ್ಲಿ ಕಾಂಗ್ರೆಸ್ ಮುಂದಿದೆ. 124 ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಣೆ ಮಾಡಿದ್ದ ಕಾಂಗ್ರೆಸ್ ಇದೀಗ 42 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಮೊದಲ ಪಟ್ಟಿ ಬಿಡುಗಡೆ ನಂತರ ಅಲ್ಲಲ್ಲಿ ಒಂದಿಷ್ಟು ಬಂಡಾಯ ಕೇಳಿಬಂದವಾದರೂ ʼಕಾಂಗ್ರೆಸ್‌ನ ಸಾಂಪ್ರದಾಯಿಕʼ ರೀತಿಯ ಬಂಡಾಯಗಳು ಕಾಣಲಿಲ್ಲ. ಅಷ್ಟರ ಮಟ್ಟಿಗೆ ತೆರೆಯ ಹಿಂದೆ ಕಾಂಗ್ರೆಸ್ ನಾಯಕರು ವರ್ಕೌಟ್ ಮಾಡಿರುವುದು ನೀಟಾಗಿ ಕಾಣುತ್ತದೆ. ಎರಡನೇ ಪಟ್ಟಿ ನಂತರವೂ ತೀರಾ ಅಸಮಾಧಾನ ಭುಗಿಲೇಳುವ ಲಕ್ಷಣ ಇನ್ನೂ ಕಾಣುತ್ತಿಲ್ಲವಾದರೂ ನಿಜವಾದ ಫಲಿತಾಂಶ ಹೊರಬರಲು ಇನ್ನೂ ಒಂದೆರಡು ದಿನವಾಗಬೇಕು.
ಸಾಲುಸಾಲಾಗಿ ಬಿಜೆಪಿ, ಜೆಡಿಎಸ್ ನಾಯಕರು ಕಾಂಗ್ರೆಸ್ ಸೇರುತ್ತಿದ್ದಾರೆ. ಬಿಜೆಪಿಯ ಪುಟಣ್ಣ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಈಗಾಗಲೆ ರಾಜಾಜಿನಗರದ ಟಿಕೆಟ್ ಪಡೆದಿದ್ದಾರೆ. ಆಯನೂರು ಮಂಜುನಾಥ್ ರಾಜೀನಾಮೆ ನೀಡಿದ್ದು, ಇನ್ನಷ್ಟೆ ಸೇರಲಿದ್ದಾರೆ. ಅರಸೀಕೆರೆ ಶಾಸಕ ಶಿವಲಿಂಗೇಗೌಡ ಸಹ ಕಾಂಗ್ರೆಸ್ ಸೇರಲಿದ್ದಾರೆ. ಬಿಜೆಪಿ ಶಾಸಕ ಬಾಬುರಾವ್ ಚಿಂಚನಸೂರು, ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಈಗಾಗಲೆ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿದ್ದಾರೆ. ಹೀಗೆ ಅಬ್ಬರದಿಂದ ಮುನ್ನುಗ್ಗುತ್ತಿರುವ ಕಾಂಗ್ರೆಸ್ ಎದುರು ಬಿಜೆಪಿ ಮಂಕಾಗಿ ಕಾಣುತ್ತಿದೆ. ಆದರೆ ಈ ಮಾತನ್ನು ಒಪ್ಪಲು ಬಿಜೆಪಿ ನಾಯಕರು ಸಿದ್ಧವಿಲ್ಲ.
ಬಿಜೆಪಿ ಪಡಸಾಲೆಯಲ್ಲಿ ಹರಿದಾಡುತ್ತಿರುವ ಮಾತಿನ ಪ್ರಕಾರ ಕರ್ನಾಟಕದಲ್ಲಿ ಈ ಸಾರಿ ಮೊಲ-ಆಮೆ ಕಥೆ ರಿಪೀಟ್ ಆಗತ್ತದೆಯಂತೆ. ಮೊಲ ಬೇಗಬೇಗನೆ ಓಡಿ ಸುಸ್ತಾಗಿ ವಿಶ್ರಾಂತಿ ಪಡೆಯುತ್ತ ಹಾಗೇ ಮಲಗಿಬಿಡುತ್ತದೆ. ಆಮೆ ನಿಧಾನವಾಗಿ ಒಂದೊಂದೇ ಹೆಜ್ಜೆ ಇಡುತ್ತಾ ಗುರಿ ಮುಟ್ಟುತ್ತದೆ ಎನ್ನುವ ರೀತಿ.
ಪಡಸಾಲೆಯ ವಾದ ಈ ರೀತಿ ಇದೆ: ಮೊದಲಿಗೆ ಬಿಜೆಪಿ ಸಣ್ಣ ಸಣ್ಣ ಸಮುದಾಯಗಳನ್ನು ಒಳಗೆ ಹಾಕಿಕೊಳ್ಳುತ್ತಾ ಇದೆ. ನೇಕಾರರು, ಬಂಜಾರರು, ಕೊರಮ, ದಕ್ಕಲಿಗರು, ದಲಿತ ಎಡಗೈ, … ಹೀಗೆ ಸುಮಾರು ಮೂರು ತಿಂಗಳಿನಿಂದಲೂ ಒಂದೊಂದೇ ಸಮುದಾಯಗಳ ಅನೇಕ ಸಮಾರಂಭಗಳನ್ನು ಆಯೋಜಿಸಿದೆ. ಬಹುತೇಕ ಸಮ್ಮೇಳನಗಳು ಜಿಲ್ಲಾಮಟ್ಟದಲ್ಲಿ ನಡೆದಿರುವುದರಿಂದ ಅಬ್ಬರ ಇಲ್ಲ.
ಇದೀಗ ಎಸ್‌ಸಿಎಸ್‌ಟಿ ಮೀಸಲಾತಿ ಹೆಚ್ಚಿಸುವ ಜತೆಗೆ ಒಳಮೀಸಲಾತಿಯನ್ನೂ ಕಲ್ಪಿಸುವ ನಿರ್ಧಾರ ಮಾಡಲಾಗಿದೆ. ಈ ಆದೇಶ ಅನುಷ್ಠಾನದ ನಂತರ ಎಸ್‌ಸಿ, ಎಸ್‌ಟಿ, ಒಕ್ಕಲಿಗ, ವೀರಶೈವ ಲಿಂಗಾಯತ ಸೇರಿ ಅನೇಕ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳವಾಗುತ್ತದೆ. ಪ್ರತ್ಯೇಕವಾಗಿ ಪಂಚಮಸಾಲಿಗಳಿಗೆ ಮೀಸಲಾತಿ ನೀಡಬೇಕು ಎಂಬ ಆಗ್ರಹಕ್ಕೆ ಪ್ರತಿಯಾಗಿ, ಅಖಂಡ ವೀರಶೈವ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಲಾಗಿದೆ. ಇದರಿಂದ, ಧರ್ಮವನ್ನು ಒಡೆಯುವುದಿಲ್ಲ ಎಂಬ ಸಂದೇಶ ನೀಡಿದೆ. ಇದರಿಂದ ವೀರಶೈವ ಲಿಂಗಾಯತ ಸಮುದಾಯದ ಪ್ರಮುಖ ಮಠಗಳೆಲ್ಲವೂ ಸಂತಸಗೊಂಡಿವೆ. ಮೀಸಲಾತಿಯನ್ನು ಬಸವ ಜಯಮೃತ್ಯುಂಜಯ ಸ್ವಾಮೀಜಿ, ವಚನಾನಂದ ಸ್ವಾಮೀಜಿ ಸ್ವಾಗತಿಸಿದ್ದಾರೆ.
ಎಲ್ಲರಿಗೂ ಮೀಸಲಾತಿ ನೀಡಿದ ಮೇಲೆ ಎಲ್ಲಿಂದ ಕಿತ್ತುಕೊಳ್ಳಲಾಯಿತು? ಮುಸ್ಲಿಂ ಮೀಸಲಾತಿಯನ್ನು ಸಂಪೂರ್ಣ ಹೊರತರಲಾಯಿತು. ಹೊರತರುವುದಷ್ಟೆ ಅಲ್ಲದೆ ತಲಾ ಶೇ.2 ಮೀಸಲನ್ನು ಒಕ್ಕಲಿಗರು ಹಾಗೂ ವೀರಶೈವ ಲಿಂಗಾಯತರಿಗೆ ಹಂಚಲಾಯಿತು. ಹಾಗಾಗಿ ಯಾವುದೇ ರಾಜಕೀಯ ನಾಯಕರೂ ವಿರೋಧಿಸುವುದೂ ಕಷ್ಟವಾಯಿತು. ಇನ್ನು ಈ ನಿರ್ಧಾರದಿಂದ ಮುಸ್ಲಿಂ ಮತ ಹೋಗುತ್ತದೆ ಎಂಬ ಭಯ ಒಟ್ಟಾರೆ ಬಿಜೆಪಿಗೆ ಇಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಕೆಲವು ಕ್ಷೇತ್ರಗಳಲ್ಲಿ ಮುಸ್ಲಿಂ ಮತದಾರರೂ ಬಿಜೆಪಿಗೆ ಮತ ನೀಡುತ್ತಾರೆ, ಆದರೆ ಅದು ಒಟ್ಟಾರೆ ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಮಾಡುವುದಿಲ್ಲ. ಎಲ್ಲ ಮುಸ್ಲಿಮರೂ ಕಾಂಗ್ರೆಸ್ ಕಡೆ ವಾಲುತ್ತಾರೆ, ಅದೇ ವೇಳೆ ಹಿಂದುಗಳ ಮತ ಕ್ರೋಢೀಕರಣ ಆಗುತ್ತದೆ. ಹೀಗೆ ಮೀಸಲಾತಿ ಜೇನುಗೂಡಿಗೆ ಕೈ ಹಾಕಿ, ಜೇನುಗಳಿಂದಲೂ ಕಚ್ಚಿಸಿಕೊಳ್ಳದೆ, ಜೇನುತುಪ್ಪ ಸವಿಯುವ ಪ್ಲಾನ್ ಮಾಡಲಾಗಿದೆ.
ಟಿಕೆಟ್ ಘೊಷಣೆಗೂ ಮುನ್ನ ಬಿಜೆಪಿ ಅಳೆದು ತೂಗಿ ನೋಡುತ್ತಿದೆ. ಯಾವ್ಯಾವ ಕ್ಷೇತ್ರದಲ್ಲಿ ಬಂಡಾಯ ಏಳಬಹುದು ಎಂದು ಮಾರ್ಕ್ ಮಾಡಿಕೊಳ್ಳಲಾಗಿದೆ. ಇದಕ್ಕಾಗಿಯೇ ಆಂತರಿಕ ಚುನಾವಣೆಯನ್ನೂ ನಡೆಸಲಾಗಿದೆ. ಅಂತಹ ಕಡೆಗೆ ಸೂಕ್ತ ಸಂಧಾರಕಾರರನ್ನೂ ಈಗಲೇ ನಿಯೋಜಿಸಲಾಗಿದೆಯಂತೆ. ಸುಮಾರು ಒಂದು ವರ್ಷದಿಂದ ವಿವಿಧ ರೀತಿಯ ಸಂಘಟನಾತ್ಮಕ ಚಟುವಟಿಕೆಗಳನ್ನು ನಡೆಸುತ್ತಲೇ ಬರಲಾಗಿದೆ. ಬೂತ್ ಸಮಿತಿ ಸಭೆಗಳು, ಮೋರ್ಚಾಗಳ ಕಾರ್ಯಾಗಾರಗಳು, ತರಬೇತಿ ಶಿಬಿರಗಳು ನಡೆದಿವೆ. ಬೂತ್ ಸಮಿತಿಗೆ ಹೆಚ್ಚು ಒತ್ತು ನೀಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ಅನೇಕ ಜಾತಿಗಳಿಗೆ ನಿಗಮ ಮಂಡಳಿ ಘೋಷಣೆ ಮಾಡಲಾಗಿದೆ ಎನ್ನುವುದೂ ಸೇರಿ ಅನೇಕ ತೀರ್ಮಾನಗಳನ್ನು ಆಗಿಂದಾಗ್ಗೆ ಕೈಗೊಂಡಿದೆ. ಇವುಗಳು ಒಟ್ಟಾರೆ ದೊಡ್ಡದಾಗಿ ಕಾಣದೇ ಇದ್ದರೂ ಆಯಾ ಸಮುದಾಯಕ್ಕೆ ಸಂದೇಶ ರವಾನೆ ಆಗಿದೆ. ಇದೆಲ್ಲದರ ನಂತರ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಗುಜರಾತ್ ಬಿಟ್ಟರೆ ಮೋದಿ ಜನಪ್ರಿಯತೆ ಹೆಚ್ಚಿರುವುದು ಕರ್ನಾಟಕದಲ್ಲೆ. ಇದೆಲ್ಲ ಅಂಶಗಳೂ ಸೇರಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆಯಂತೆ.
ಈಗ 80-90 ಸ್ಥಾನಗಳು ಬರಬಹುದು ಎಂಬ ಅಂದಾಜಿದೆ. ಟಿಕೆಟ್ ಘೋಷಣೆ ನಂತರ ಸುಮಾರು ನೂರರ ಆಸುಪಾಸಿಗೆ ಬರುತ್ತದೆ. ಮುಂದೆ ಮೋದಿ ಪ್ರವಾಸಗಳು, ವ್ಯಾಪಕ ಪ್ರಚಾರದ ಮೂಲಕ 15-20 ಸೀಟ್ ಪಡೆಯುವುದು ಖಚಿತ. ಹಾಗಾಗಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎನ್ನುವುದು ಬಿಜೆಪಿ ವಲಯದಲ್ಲಿರುವ ಮಾತುಗಳು. ಆಮೆ-ಮೊಲದ ಕತೆಯೇನೋ ಸೊಗಸಾಗಿದೆ. ಹಾಗಾದರೆ ಈಗ ಬಿಜೆಪಿ ಭವಿಷ್ಯ, ಕಾಂಗ್ರೆಸ್ ಯಾವ ರೀತಿ ಓಡುತ್ತದೆ ಎನ್ನುವುದರ ಮೇಲೆ ನಿಂತಿದೆಯೇ? ಪ್ರಾಚೀನ ಕತೆಯ ರೀತಿ ಕಾಂಗ್ರೆಸ್ ಮೊಲ ಸೋಮಾರಿತನ ತೋರದೆ ಪೂರ ಓಡಿ ಗುರಿ ಮುಟ್ಟಿದರೆ ಬಿಜೆಪಿ ಆಮೆಯ ಕತೆ ಏನು?
ಇದನ್ನೂ ಓದಿ: Inside Story: ಚೆಕ್‌ಮೇಟ್ ಕೊಟ್ಟಿದ್ದ ಡಿ.ಕೆ. ಶಿವಕುಮಾರ್‌ಗೆ ಸುದೀಪ್ ಕರೆತಂದು ಶಾಕ್ ಕೊಟ್ಟ ಬಸವರಾಜ ಬೊಮ್ಮಾಯಿ