Site icon Vistara News

Inside Story: ಶೆಟ್ಟರ್, ಸವದಿಗೆ ಕಾಂಗ್ರೆಸ್ ರೆಡ್ ಕಾರ್ಪೆಟ್; ಲಿಂಗಾಯತರಿಗೆ ಅವಮಾನ ಮಾಡಿದ ಶಾಪ ವಿಮೋಚನೆಯ ಲೆಕ್ಕಾಚಾರ!

inside story congress calculation regarding jagadish shettar joining party

#image_title

ಬೆಂಗಳೂರು: ಜನಸಂಘದ ಕಾಲದಿಂದಲೂ ಬಿಜೆಪಿಯಲ್ಲಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೊನೆಗೂ ಕಾಂಗ್ರೆಸ್ ಬಾವುಟ ಹಿಡಿದಿದ್ದಾರೆ. ಆರು ಬಾರಿ ಶಾಸಕರಾಗಿದ್ದು, ಯಾವುದೇ ಕಪ್ಪು ಚುಕ್ಕೆಯೂ ಇಲ್ಲದವನನ್ನು ಏಕಾಏಕಿ ಅವಮಾನಕರವಾಗಿ ಟಿಕೆಟ್ ನಿರಾಕರಿಸಿದ್ದು ತಪ್ಪು ಎಂದು ಶೆಟ್ಟರ್ ಹೇಳಿದ್ದಾರೆ. ಸದಾ ನಗುಮೊಗದ, ಕೋಪವನ್ನೇ ಮಾಡಿಕೊಳ್ಳದ ಶೆಟ್ಟರ್ ಈ ಪಾಟಿ ಖಡಕ್ ಆಗಿರುವುದು ಬಹುಶಃ ಇದೇ ಮೊದಲು.

ನಿವೃತ್ತಿಯಾಗಲು ಸಿದ್ಧವಿದ್ದೆ, ಆದರೆ ಅದನ್ನು ಸರಿಯಾಗಿ ಹ್ಯಾಂಡಲ್ ಮಾಡಬೇಕಿತ್ತು ಎನ್ನುವುದೊಂದೇ ವರಿಷ್ಠರ ಮೇಲೆ ಶೆಟ್ಟರ್‌ಗಿರುವ ಅಸಮಾಧಾನ. ಇಷ್ಟು ವರ್ಷ ಪಕ್ಷ ಕಟ್ಟಿರುವವನನ್ನು ಏಕಾಏಕಿ ಕಿತ್ತು ಹಾಕುವುದು ಎಂದರೆ ಏನು? ಸಮೀಕ್ಷೆಗಳಲ್ಲಿ ನೆಗೆಟಿವ್ ಒಪಿನಿಯನ್ ಬಂದಿದೆಯಾ? ಭ್ರಷ್ಟಾಚಾರ ಮಾಡಿದ್ದೇನಾ? ವಯಸ್ಸು 70 ದಾಟಿದೆಯಾ? ಪಕ್ಷ ಸಂಘಟನೆಯಿಂದ ದೂರ ಇದ್ದೇನೆಯೆ? ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದೇನಾ? ಹೀಗೆ, ತಮಗೆ ಟಿಕೆಟ್ ತಪ್ಪಿಸಲು ಯಾವ ಕಾರಣ ಎಂದು ನವದೆಹಲಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಎದುರು ಉದ್ದ ಪ್ರಶ್ನಾವಳಿಗಳನ್ನು ಶೆಟ್ಟರ್ ಮುಂದಿಟ್ಟಿದ್ದಾರೆ. ಆದರೆ ಅದ್ಯಾವುದಕ್ಕೂ ನಡ್ಡಾ ಬಳಿ ಉತ್ತರವಿರಲಿಲ್ಲವಂತೆ.
ಪಾರ್ಟಿ ಡಿಸೈಡ್ ಮಾಡಿದೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಕಿರಿಯರನ್ನು ಕಣಕ್ಕಿಳಿಸಲು, ಕುಟುಂಬ ರಾಜಕಾರಣವನ್ನು ಪಕ್ಕಕ್ಕೆ ಸರಿಸಿ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡಲು ಈ ನಿರ್ಧಾರ ಎಂದು ಸಮಜಾಯಿಷಿ ನೀಡಲು ನಡ್ಡಾ ಮುಂದಾಗಿದ್ದಾರೆ. ಶೆಟ್ಟರ್ ಈ ಮಾತನ್ನು ಕೇಳಲು ಸಿದ್ಧವಿಲ್ಲ ಎಂದು ತಿಳಿದಾಗ, ಹೈಕಮಾಂಡ್ ಜತೆ ಮಾತನಾಡಿ ತಿಳಿಸುತ್ತೇನೆ ಎಂದಿದ್ದಾರೆ.

ನಂತರ ಧರ್ಮೇಂದ್ರ ಪ್ರಧಾನ್‌ಗೆ ಕರೆ ಮಾಡಿ, ಈಗಾಗಲೆ ಅವರಿಗೆ ಟಿಕೆಟ್ ನೀಡಬಾರದು ಎಂದು ಪಕ್ಷ ತೀರ್ಮಾನ ಮಾಡಿರುವುದರಿಂದ ಅವರಿಗೆ ನೀಡುವುದು ಸರಿಯಲ್ಲ. ಆದರೆ ಅವರು ಪಕ್ಷದಿಂದ ಹೊರಗೆ ಹೋದರೆ ಕಷ್ಟವಾಗುತ್ತದೆ. ಬೇಕಿದ್ದರೆ ಅವರಿಗೆ ರಾಜ್ಯಸಭೆ ಸ್ಥಾನ ನೀಡುವುದಾಗಿ, ಅಥವಾ ಶಾಸಕ ಸ್ಥಾನಕ್ಕೆ ಶೆಟ್ಟರ್ ಪತ್ನಿಗೆ ಅವಕಾಶ ನೀಡುವುದಾಗಿ ತಿಳಿಸಿ ಎಂದಿದ್ದಾರೆ. ಆದರೆ ಈ ಮಾತನ್ನು ಶೆಟ್ಟರ್ ಒಪ್ಪಿಲ್ಲ. ಕಿರಿಯರಿಗೆ ಅವಕಾಶ ನೀಡಲು ಹಾಗೂ ಕುಟುಂಬ ರಾಜಕಾರಣ ಮಾಡದೇ ಇರಲು ಟಿಕೆಟ್ ತಪ್ಪಿಸಿದಿರಿ ಎಂದು ತಿಳಿಸಿದ್ದೀರ. ಈಗ ನೋಡಿದರೆ ನನ್ನ ಹೆಂಡತಿಗೆ ಅಥವಾ ನಾನು ಯಾರಿಗೆ ಹೇಳುತ್ತೀನೊ ಅವರಿಗೆ ಟಿಕೆಟ್ ಕೊಡುತ್ತೀರಿ ಎನ್ನುತ್ತೀರ. ಅಂದರೆ ಇದರಲ್ಲಿ ಪಕ್ಷದ ನೀತಿಗಿಂತಲೂ ನನ್ನ ಮೇಲಿನ ಸೇಡು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಖಡಕ್ಕಾಗಿ ಹೇಳಿದ್ದಾರೆ. ಅಲ್ಲಿಗೆ ಎಲ್ಲ ಮಾತುಕತೆಗಳೂ ಮುರಿದುಬಿದ್ದಿವೆ.

ಹೀಗೆ ಶೆಟ್ಟರ್, ಈಶ್ವರಪ್ಪ ಅವರಿಗೆ ಟಿಕೆಟ್ ತಪ್ಪಿಸುವ ಮುನ್ಸೂಚನೆಯನ್ನು ಸಭೆಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಗಮನಿಸಿದ್ದರು. ಈಶ್ವರಪ್ಪಗೆ ಟಿಕೆಟ್ ತಪ್ಪಿದರೆ, ಹಳೆಯ ಕಾಲದ ಸೇಡನ್ನು ಯಡಿಯೂರಪ್ಪ ತೀರಿಸಿಕೊಂಡರು ಎಂದಾಗುತ್ತದೆ. ಶೆಟ್ಟರ್, ಲಕ್ಷ್ಮಣ ಸವದಿಗೆ ಟಿಕೆಟ್ ತಪ್ಪಿದರೆ ಇತರೆ ಲಿಂಗಾಯತರಲ್ಲಿ ಯಡಿಯೂರಪ್ಪ ತುಳಿದರು ಎಂದಾಗುತ್ತದೆ. ಈ ರೀತಿ ಮಾಡಬೇಡಿ ಎಂದು ಜೆ.ಪಿ. ನಡ್ಡಾ ಅವರ ಮನೆಗೆ ತೆರಳಿ ಹೇಳಿದ್ದಾರೆ. ಆದರೆ ಅವರು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಈ ಉಸಾಬರಿಯೇ ಬೇಡ ಎಂದುಕೊಂಡವರೇ ಟಿಕೆಟ್ ಆಯ್ಕೆ ಸಮಿತಿ ಸಭೆಯಲ್ಲಿ ಅಂತಿಮ ತೀರ್ಮಾನ ಆಗುವ ಮೊದಲೇ ದೆಹಲಿಯಿಂದ ಹೊರಟು ಬೆಂಗಳೂರಿಗೆ ಯಡಿಯೂರಪ್ಪ ಬಂದುಬಿಟ್ಟರು. ಈ ರೀತಿ ಟಿಕೆಟ್ ತಪ್ಪಿಸಿದರ ಶಾಪ ತಮಗೆ ಅಂಟಿಕೊಳ್ಳುವುದು ಬೇಡ ಎಂದು ಅವರು ಹುಷಾರಾಗಿದ್ದರು.

ಶಾಪ ವಿಮೋಚನೆಯ ಲೆಕ್ಕ
ಇದೆಲ್ಲದರ ನಡುವೆ ಕಾಂಗ್ರೆಸ್ ತನ್ನ ಶಾಪ ವಿಮೋಚನೆಯ ಗುರಿ ಇಟ್ಟುಕೊಂಡಿದೆ. ಎಸ್. ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲರಿಗೆ ಅವಮಾನ ಮಾಡಿದ್ದರ ಪರಿಣಾಮವಾಗಿ ವೀರಶೈವ ಲಿಂಗಾಯತ ಮತಗಳು ರಾಮಕೃಷ್ಣ ಹೆಗಡೆ ಮೂಲಕ ಬಿಜೆಪಿಗೆ ಆಗಮಿಸಿ ಅಲ್ಲೇ ಉಳಿದಿವೆ. ಅಲ್ಲಲ್ಲಿ ವೀರಶೈವ ಲಿಂಗಾಯತ ಶಾಸಕರು ತಮ್ಮ ಸ್ವಸಾಮರ್ಥ್ಯದಲ್ಲಿ ಗೆದ್ದು ಬರುತ್ತಿದ್ದಾರೆಯೇ ವಿನಃ ಇಡೀ ಪಕ್ಷದ ಮೇಲೆ ಸಮುದಾಯಕ್ಕೆ ವಿಶ್ವಾಸ ಇಲ್ಲ.
ಈಗಾಗಲೆ ಪಂಚಮಸಾಲಿ ಲಿಂಗಾಯತರಿಗೆ ಮೀಸಲಾತಿ ನೀಡುವಲ್ಲಿ ಸರ್ಕಾರದ ನಡೆ ಆ ಸಮುದಾಯವನ್ನು ಎಷ್ಟು ಕನ್ವಿನ್ಸ್ ಮಾಡಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಇದರ ನಡುವೆ ಗಾಣಿಗ ಲಿಂಗಾಯತ ಸಮುದಾಯದ ಲಕ್ಷ್ಮಣ ಸವದಿ, ಬಣಜಿಗ ಲಿಂಗಾಯತ ಸಮುದಾಯದ ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್ ಬರಮಾಡಿಕೊಂಡಿದೆ.
ಬಣಜಿಗ ಲಿಂಗಾಯತರು ಬೆಳಗಾವಿ, ಬಳ್ಳಾರಿ, ಬೀದರ್, ಬಿಜಾಪುರ, ಬಾಗಲಕೋಟ, ಚಿತ್ರದುರ್ಗ, ದಾವಣಗೆರೆ, ಕೊಪ್ಪಳ, ಗದಗ, ಹಾವೇರಿ, ಧಾರವಾಡ, ಗುಲ್ಬರ್ಗಾ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇವರಲ್ಲಿ ಆದಿಬಣಜಿಗ, ಶೀಲವಂತ, ಧೋಳಪಾವಡ ಮುಂತಾದ ಒಳಪಂಗಡಗಳಿವೆ.
ಗಾಣಿಗ ಲಿಂಗಾಯತರು ಬೆಳಗಾವಿ, ಬೀದರ, ಬಿಜಾಪುರ, ಬಳ್ಳಾರಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಚಿತ್ರದುರ್ಗ, ಗುಲ್ಬರ್ಗಾ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ.

ಇವರಿಬ್ಬರ ಆಗಮನದಿಂದ ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಎಷ್ಟು ಸ್ಥಾನ ಗೆಲ್ಲಬಹುದು ಎನ್ನುವುದು ಎರಡನೇ ಪ್ರಶ್ನೆ. ಕೆಲವು ಕ್ಷೇತ್ರಗಳಲ್ಲಿ ಮತ ಹೆಚ್ಚಳ ಆಗಬಹುದು. ಆದರೆ, ವೀರಶೈವ ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್ ಅಸ್ಪೃಶ್ಯವಲ್ಲ ಎಂಬ ಸಂದೇಶವನ್ನು ನೀಡಲು ಆ ಪಕ್ಷದ ನಾಯಕರು ಮುಂದಾಗಿದ್ದಾರೆ. ಲಿಂಗಾಯತರಿಗೆ ಅವಮಾನ ಮಾಡಿದರು ಎಂಬ ಶಾಪ ವಿಮೋಚನೆಯಿಂದ ಹೊರಬಂದರೆ ಸಾಕು. ಮುಂದಿನ ಚುನಾವಣೆಯಿಂದ ಮತವಾಗಿ ಪರಿವರ್ತಿಸಿಕೊಳ್ಳಬಹುದು ಎನ್ನುವುದು ಕಾಂಗ್ರೆಸ್ ನಾಯಕರ ಸದ್ಯದ ಲೆಕ್ಕಾಚಾರ.

ಇದನ್ನೂ ಓದಿ: Karnataka Elections : ಪಕ್ಷದ್ರೋಹ ಮಾಡಿಲ್ಲ, 10 ಬಾರಿ ಯೋಚಿಸಿ ಕಾಂಗ್ರೆಸ್‌ ಸೇರಿದ್ದೇನೆ; ಬಿ ಫಾರಂ ಸ್ವೀಕರಿಸಿದ ಜಗದೀಶ್‌ ಶೆಟ್ಟರ್‌

Exit mobile version