ಬೆಂಗಳೂರು: ಎರಡೆರಡು ಟಿಕೆಟ್ ಪಡೆದು ತಾವೂ ಗೆದ್ದು ʼತಮ್ಮವರನ್ನೂʼ ಗೆಲ್ಲಿಸಿಕೊಂಡು ಬರುವ ಸಿದ್ದರಾಮಯ್ಯ ಮಾರ್ಗ ಅಷ್ಟು ಸುಲಭವಾಗಿಲ್ಲ ಅನ್ನುವುದು ಸಾಬೀತಾಗಿದೆ. ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಗೆಲ್ಲುವುದಿಲ್ಲ ಎಂಬುದು ಅನೇಕ ಸಮೀಕ್ಷೆಗಳಲ್ಲಿ ತಿಳಿದುಬಂದ ನಂತರವೂ ಅಲ್ಲಿ ಸ್ಪರ್ಧೆಗೆ ಸಿದ್ದರಾಮಯ್ಯ ಪಟ್ಟು ಹಿಡಿದಿರುವುದು ಮೂಲ ಕಾಂಗ್ರೆಸಿಗರನ್ನು ಕೆಣಕಿದೆ. ನಮಗೇ ಇಲ್ಲದ ವಿಶೇಷ ಸವಲತ್ತು ಸಿದ್ದರಾಮಯ್ಯ ಅವರಿಗೆ ಏಕೆ ಬೇಕು ಎಂದು ಸಿಡಿದೆದ್ದಿದ್ದಾರೆ.
ಇಲ್ಲಿಯವರೆಗೆ ಕ್ಷೇತ್ರದಲ್ಲಿ, ತಮ್ಮ ಬೆಂಬಲಿಗರ ಜತೆಗೆ ಈ ವಿಷಯವನ್ನು ಮಾತನಾಡಿಕೊಳ್ಳುತ್ತಿದ್ದ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಈ ಬಾರಿ ನವದೆಹಲಿಯ ಟಿಕೆಟ್ ಆಯ್ಕೆ ಸಮಿತಿ ಸಭೆಯಲ್ಲೇ ಪ್ರಸ್ತಾಪಿಸಿದ್ದಾರೆ. ಕೊರಟಗೆರೆ ಕ್ಷೇತ್ರದ ಜತೆಗೆ ಬೆಂಗಳೂರಿನ ಒಂದು ಕ್ಷೇತ್ರದಲ್ಲೂ ಸ್ಪರ್ಧಿಸಿ ಅಂತ ಬೆಂಬಲಿಗರು ಕೇಳುತ್ತಿದ್ದಾರೆ, ಇದರಿಂದ ಅಲ್ಲಿನ ಸುತ್ತಮುತ್ತ ದಲಿತ ಮತಗಳು ಬರುತ್ತವಂತೆ. ಎರಡನೇ ಟಿಕೆಟ್ ಕೊಡುವುದಿದ್ದರೆ ನಾನೂ ಆಸಕ್ತನಾಗಿದ್ದೇನೆ ಎಂದು ಪರಮೇಶ್ವರ್ ಕೇಳಿದ್ದಾರೆ. ಸಣ್ಣ ಧ್ವನಿಯಲ್ಲೇ ಪರಮೇಶ್ವರ್ ಕೇಳಿದ್ದಾರಾದರೂ ಅದು ಸಿದ್ದರಾಮಯ್ಯ ಹಾಗೂ ಸಭೆಯಲ್ಲಿದ್ದ ಇತರರಿಗೆ ಬರಸಿಡಿಲಿನಂತೆ ಅಪ್ಪಳಿಸಿದೆ!
ಪರಮೇಶ್ವರ್ ಇಷ್ಟು ಸ್ಪಷ್ಟ ಧ್ವನಿಯಲ್ಲಿ ತಮ್ಮ ಪರ ತಾವೇ ಲಾಬಿ ಮಾಡಿಕೊಂಡಿದ್ದು ಕಾಂಗ್ರೆಸಿಗರು ನೋಡಿಯೇ ಇರಲಿಲ್ಲವಂತೆ. ತಮಗೆ ಕೊರಟಗೆರೆ ಟಿಕೆಟ್ ಕೊಟ್ಟರೆ ಸಾಕು, ಇನ್ಯಾರದ್ದು ಏನಾದರೂ ಆಗಲಿ ಎಂದು ಇರುತ್ತಿದ್ದ ಪರಮೇಶ್ವರ್ ಈಗ ಎರಡನೇ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಪರಮೇಶ್ವರ್ ಮಾತು ಮುಗಿದ ಮರುಕ್ಷಣವೇ ಮಧ್ಯಪ್ರವೇಶಿಸಿದ ಸಿದ್ದರಾಮಯ್ಯ, ಅದು ನಾನು ಇಷ್ಟಪಟ್ಟಿದ್ದಲ್ಲ. ಕೋಲಾರ ಜಿಲ್ಲೆಯಲ್ಲಿ ಈಗಿರುವ ಕಾಂಗ್ರೆಸ್ ಶಾಸಕರಿಗೆ ಆಡಳಿತ ವಿರೋಧಿ ಅಲೆ ಇದೆ. ನಾನು ಹೋದರೆ ಸುಮಾರು ಆರೇಳು ಶಾಸಕರಿಗೆ ಅದರಿಂದ ಲಾಭ ಆಗುತ್ತದೆ ಅಂತ ಹೋಗ್ತಾ ಇದ್ದೀನಿ. ಕೋಲಾರದಲ್ಲಿ ನನ್ನ ಗೆಲುವು ಕಷ್ಟ ಅಂತ ಸಮೀಕ್ಷೆಗಳು ಹೇಳಿವೆಯೇ ಹೊರತು ಅಸಾಧ್ಯ ಅಂತ ಹೇಳಿಲ್ಲ. ನಾನು ವರುಣದಲ್ಲಿ ಪ್ರಚಾರವನ್ನೇ ಮಾಡಲ್ಲ. ಬರೀ ನಾಮಪತ್ರ ಸಲ್ಲಿಸಿ ಹೊರಗೆ ಬರ್ತೀನಿ, ಯತೀಂದ್ರನೇ ಎಲ್ಲ ನೋಡ್ಕೊತಾನೆ. ನಾನು ಕೋಲಾರದಲ್ಲಿ ಹೆಚ್ಚು ಸಮಯ ಕೊಟ್ಟು ಗೆಲ್ಲುತ್ತೇನೆ. ಆಮೇಲೆ ರಾಜೀನಾಮೆ ನೀಡಿ ಒಬ್ಬ ಕಾಂಗ್ರೆಸ್ ಅಭ್ಯರ್ಥಿಗೇ ಅವಕಾಶ ನೀಡುತ್ತೇನೆ. ಇದರಿಂದ ಪಕ್ಷಕ್ಕೆ ಒಂದು ಸ್ಥಾನ ಸಿಕ್ಕುತ್ತೆ ಅಲ್ವೇ ಅಂತ ಹೊಸ ಲಾಜಿಕ್ ಮುಂದೆ ಇಟ್ಟಿದ್ದಾರೆ.
ಕೆಳಮನೆ ಪ್ರತಿಪಕ್ಷ ನಾಯಕನ ಮಾತಿನ ನಂತರ ಪರಮೇಶ್ವರ್ ಸೈಲೆಂಟಾದರೂ ಮೇಲ್ಮನೆ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಸುಮ್ಮನಾಗಿಲ್ಲ. ಇದು ಯಾವ ಲಾಜಿಕ್ಕು? ಎಲ್ಲರಿಗೂ ರಾಜ್ಯದ ಬೇರೆ ಬೇರೆ ಕಡೆ ಅಭಿಮಾನಿಗಳು ಇರ್ತಾರೆ. ಈ ರೀತಿ ಎಲ್ಲರೂ ಎರಡೆರಡು ಟಿಕೆಟ್ ಕೇಳಿದರೆ ಹೇಗೆ? ಕಳೆದ ಬಾರಿಯೇನೋ ನೀವು ಸಿಎಂ ಆಗಿದ್ದಿರಿ. ಸಿಎಂ ಆಗಿದ್ದವರೇ ಸೋತರೆ ಪಕ್ಷಕ್ಕೆ ಅವಮಾನ ಎನ್ನೋ ಕಾರಣಕ್ಕೆ ಎರಡು ಕಡೆ ಕೊಟ್ಟಾಯಿತು. ಈಗ ಹೇಗಿದ್ದರೂ ಸೇಫ್ ಸೀಟ್ ವರುಣದಲ್ಲಿ ಟಿಕೆಟ್ ಕೊಟ್ಟಾಗಿದೆ. ಸೋಲುವ ಸಾಧ್ಯತೆಯಿರುವ ಕ್ಷೇತ್ರದಲ್ಲಿ ಟಿಕೆಟ್ ಕೇಳೋದು ಯಾವ ನೀತಿ ಎಂದು ಮಾತನಾಡಿದ್ದಾರೆ.
ಇಷ್ಟೊತ್ತಿಗೆ ಮಲ್ಲಿಕಾರ್ಜುನ ಖರ್ಗೆ ಮಧ್ಯಪ್ರವೇಶಿಸಿ ಸಮಾಧಾನ ಮಾಡಿದ್ದಾರೆ. ಈಗಾಗಲೆ ವರುಣದಲ್ಲಿ ಟಿಕೆಟ್ ಕೊಟ್ಟಾಗಿದೆ. ಕೋಲಾರದ ಬಗ್ಗೆ ನಾವ್ಯಾರೂ ತೀರ್ಮಾನ ಮಾಡುವುದು ಬೇಡ, “ರಾಹುಲ್ ಜಿ ಕೆ ಊಪರ್ ಛೋಡ್ ದೇತೇ ಹೈ” ( ರಾಹುಲ್‌ಗೆ ಬಿಟ್ಟುಬಿಡೋಣ). ಪಕ್ಷದ ಹಿತದೃಷ್ಟಿಯಿಂದ ಅವರು ಏನು ಹೇಳುತ್ತಾರೊ ಅದು ಆಗಲಿ ಎಂದಿದ್ದಾರೆ.
ಇದೆಲ್ಲವನ್ನೂ ಕೇಳಿಸಿಕೊಂಡ ರಾಹುಲ್ ಗಾಂಧಿ, ಹೇಗಿದ್ದರೂ ಮಾರ್ಚ್ 9ಕ್ಕೆ ಕೋಲಾರಕ್ಕೆ ಹೋಗುತ್ತಾ ಇದ್ದೀನಿ. ಸತ್ಯಮೇವ ಜಯತೇ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿನ ಜನರ ಅಭಿಪ್ರಾಯ ತಿಳಿಯುತ್ತದೆ. ನಂತರದಲ್ಲಿ ಒಂದು ನಿರ್ಧಾರ ಮಾಡೋಣ ಅಂತ ಹೇಳಿ ಮುಂದಿನ ಕ್ಷೇತ್ರದ ಚರ್ಚೆಗೆ ಹೋಗಿದ್ದಾರೆ. ಒಟ್ಟಿನಲ್ಲಿ, ಕೋಲಾರದಿಂದಲೂ ಸ್ಪರ್ಧೆ ಮಾಡುವುದು ಅಷ್ಟು ಸುಲಭವಲ್ಲ ಎನ್ನುವುದು ಸಿದ್ದರಾಮಯ್ಯ ಅವರಿಗೆ ಗೊತ್ತಾಗಿದೆ.
ಹಾಗೊಂದು ವೇಳೆ ತಮ್ಮ ಬೆಂಬಲಿಗರ ಒತ್ತಾಯಕ್ಕೆ ಮಣಿದು ಕೋಲಾರ ಬೇಕೇಬೇಕು ಅಂತ ಪಟ್ಟು ಹಿಡಿದರೆ ಡಿ.ಕೆ. ಶಿವಕುಮಾರ್ ಹಾಗೂ ಇತರರ ಪ್ಲ್ಯಾನ್ ಬಿ ಇಟ್ಟುಕೊಂಡಿದ್ದಾರೆ. ಇಷ್ಟೊಂದು ಬಲವಂತ ಮಾಡುತ್ತಾ ಇದ್ದೀರ ಅಂತ ಒಪ್ಪುತ್ತೇವೆ. ಆದರೆ ಕೋಲಾರದ ಬದಲಿಗೆ 6-7 ಕ್ಷೇತ್ರಗಳಲ್ಲಿ ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡಬೇಕು ಅಂತ ಚೌಕಾಸಿಗೆ ಇಳಿಯೋ ಸಾಧ್ಯತೆ ಇದೆ. ಒಂದು ಕಡೆ ಬೆಂಬಲಿಗರಿಗಾಗಿ ಕೋಲಾರ ಬೇಕು ಎಂದು ಕೇಳಲು ಹೊರಟ ಸಿದ್ದರಾಮಯ್ಯ, ಬೇರೆ ಕಡೆಗಳಲ್ಲಿ ಬೆಂಬಲಿಗರಿಗೆ ಟಿಕೆಟ್ ಸಿಗುವುದನ್ನು ತಪ್ಪಿಸುವ ಧರ್ಮಸಂಕಟಕ್ಕೆ ಸಿಲುಕಿದ್ದಾರೆ. ಕೋಲಾರ ಟಿಕೆಟ್ ನೀಡಬೇಕೊ ಬೇಡವೊ ಅನ್ನೋ ನಿರ್ಧಾರ ಈಗ ರಾಹುಲ್ ಗಾಂಧಿ ಹಾಗೂ ಸ್ವತಃ ಆಕಾಂಕ್ಷಿ ಸಿದ್ದರಾಮಯ್ಯ ಹೆಗಲೇರಿದೆ. ಚುನಾವಣೆ ಮುಗಿದ ನಂತರ ಯಾರ ಕಡೆಗೆ ಹೆಚ್ಚು ಶಾಸಕರು ಕೈ ಎತ್ತುತ್ತಾರೊ ಅವರೇ ಸಿಎಂ ಎಂದು ಸುರ್ಜೆವಾಲ ಸೂತ್ರ ಸಿದ್ಧಪಡಿಸಿರುವುದರಿಂದ ತಮ್ಮ ಕಡೆಯವರನ್ನು ಹೆಚ್ಚು ಗೆಲ್ಲಿಸಿಕೊಳ್ಳುವ ಸ್ಪರ್ಧೆ ಈಗ ತಾರ್ಕಿಕ ಘಟ್ಟ ಮುಟ್ಟಿದೆ.
ಇದನ್ನೂ ಓದಿ: Inside Story: ಕಾಂಗ್ರೆಸ್ ಮೊಲವಂತೆ, ಬಿಜೆಪಿ ಆಮೆಯಂತೆ: ದಾಪುಗಾಲಿಗೆ ಪುಟಾಣಿ ಹೆಜ್ಜೆಯೇ ಉತ್ತರವಂತೆ ಹೌದಾ?