ಬೆಂಗಳೂರು: ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಲ್ಲಿ ಹೊಸಕೋಟೆಯ ಎಂಟಿಬಿ ನಾಗರಾಜ್ ಸಿರಿವಂತರಲ್ಲಿ ಸಿರಿವಂತರು. ಅವರ ಘೋಷಿತ ಆಸ್ತಿಯೇ 1,224 ಕೋಟಿ ರೂಪಾಯಿ. ಹೀಗಿರುವ ನಾಗರಾಜು ವ್ಯವಹಾರದಲ್ಲಿ ಬಹಳ ಚಾಣಾಕ್ಷ.
ದೇವರ ಜಾತ್ರೆಯಲ್ಲಿ ಬಾಯಿಗೆ ನಿಂಬೆ ಹಣ್ಣು ಇಟ್ಟುಕೊಂಡು ಸ್ಟೆಪ್ ಹಾಕುವ ನಾಗರಾಜು ಹಣಕಾಸಿನ ವಿಚಾರದಲ್ಲಿ ಒಂದೊಂದು ಸ್ಟೆಪ್ಪನ್ನೂ ಲೆಕ್ಕಾಚಾರ ಮಾಡಿಯೇ ಇಡೋದು. ಆದರೆ ಏಕೋ 2019ರಲ್ಲಿ ಅದೃಷ್ಟ ಕೈ ಕೊಟ್ಟಿತು.
ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿಯಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಾಗರಾಜು ವಿರುದ್ಧ, ಬಿಜೆಪಿ ಸಂಸದ ಬಿ.ಎನ್. ಬಚ್ಚೇಗೌಡರ ಮಗ ಶರತ್ ಬಚ್ಚೇಗೌಡ ಬಂಡಾಯ ನಿಂತು ಗೆದ್ದುಬಿಟ್ಟರು. ಈಗ ಶರತ್ ಬಚ್ಚೇಗೌಡ ಕಾಂಗ್ರೆಸ್‌ನಲ್ಲಿದ್ದಾರೆ.
ಉಪ ಚುನಾವಣೆಯಲ್ಲಿ ಸೋತ ಎಂಟಿಬಿಯವರನ್ನು ವಿಧಾನ ಪರಿಷತ್ ಸದಸ್ಯರಾಗಿ ಮಾಡಿ ಸಚಿವ ಸ್ಥಾನ ನೀಡಿದ್ದು ಬಿ.ಎಸ್. ಯಡಿಯೂರಪ್ಪ. ಯಡಿಯೂರಪ್ಪ ಅವರನ್ನು ನಂಬಿದರೆ ಕೈಬಿಡಲ್ಲ ಎನ್ನೋ ಮಾತನ್ನು ಅವರು ಉಳಿಸಿಕೊಂಡಿದ್ದರು. ಎಂಟಿಬಿ ಅವಧಿ 2026ರ ಜೂನ್ 30ರವರೆಗೂ, ಅಂದರೆ ಇನ್ನೂ ಮೂರು ವರ್ಷ ಇದೆ.
ಈ ಬಾರಿ ಹೊಸಕೋಟೆಯಿಂದ ಯಾರನ್ನಾದರೂ ಅಭ್ಯರ್ಥಿ ಮಾಡೋಣ, ಹಾಗೊಂದು ವೇಳೆ ಪರಿಷತ್‌ಗೆ ರಾಜೀನಾಮೆ ಕೊಡಿಸಿ ಎಂಟಿಬಿಗೇ ಟಿಕೆಟ್ ಕೊಡಿಸೋಣ ಅನ್ನೋ ಲೆಕ್ಕಾಚಾರದಲ್ಲಿ ಬಿಜೆಪಿ ನಾಯಕರಿದ್ದರು. ಅದೇನೊ ಉಪಚುನಾವಣೆಯಾಗಿತ್ತು, ಬಂಡಾಯ ಅಭ್ಯರ್ಥಿಗೆ ಕಾಂಗ್ರೆಸ್ ಬೆಂಬಲ ನೀಡಿ ಶರತ್ ಗೆದ್ದುಬಿಟ್ಟರು. ಆದರೆ ಈ ಬಾರಿ ಶರತ್ ಕಾಂಗ್ರೆಸ್ ನಿಂದಲೇ ಸ್ಪರ್ಧಿಸಬಹುದು. ನಾಗರಾಜು ಹೇಗಿದ್ದರೂ ಹಣ ಇರುವ ಮನುಷ್ಯ, ಗೆದ್ದುಕೊಂಡು ಬರ್ತಾರೆ ಎನ್ನೊ ಚಿಂತನೆ ಇತ್ತು.
ಆದರೆ ಶನಿವಾರ ದಿಢೀರನೆ ಬಿ.ಎಸ್. ಯಡಿಯೂರಪ್ಪ ಮನೆಗೆ ಹೋದ ಎಂಟಿಬಿ, ಅಚ್ಚರಿಯ ನಿರ್ಧಾರ ಪ್ರಕಟಿಸಿದ್ದಾರೆ. ಅವತ್ತು ಸಂಜೆಯೇ ನವದೆಹಲಿಯಲ್ಲಿ ಟಿಕೆಟ್ ಆಯ್ಕೆ ಸಮಿತಿ ಸಭೆಗೆ ಹೊರಡುವ ತರಾತುರಿಯಲ್ಲಿದ್ದ ಬಿ.ಎಸ್. ಯಡಿಯೂರಪ್ಪ ಮಾತನಾಡಿಸಿದ್ದಾರೆ. ಈ ಬಾರಿ ನನಗೆ ಟಿಕೆಟ್ ಬೇಡ. ನನ್ನ ಮಗನಿಗೆ ಕೊಟ್ಟುಬಿಡಿ. ನಾನು ಕ್ಷೇತ್ರ ತ್ಯಾಗ ಮಾಡಿಬಿಡುತ್ತೇನೆ ಎಂದು ಹೇಳಿದ್ದಾರೆ.
ಇದೇನು ಹೊಸ ವರಸೆ ಎಂದವರೇ ಯಡಿಯೂರಪ್ಪ ತಮ್ಮ ಜೆರ್ಸಿಯ ಜೇಬಿನಲ್ಲಿದ್ದ ಚೀಟಿಯನ್ನು ಹೊರಗೆ ತೆಗೆದಿದ್ದಾರೆ. ನೋಡಿದರೆ ಹೊಸಕೋಟೆಗೆ ಎಂಟಿಬಿ ನಾಗರಾಜ್ ಹೆಸರನ್ನೇ ಬರೆದುಕೊಂಡದ್ದಿದೆ. ಅದ್ಯಾಕಪ್ಪ ಈಗ ನಿರ್ಧಾರ ಬದಲಾಯಿಸಿದೇ ಎಂದು ಬಿಎಸ್ವೈ ಕೇಳಿದ್ದಾರೆ.
ಶರತ್ ಯುವಕರಿದ್ದಾರೆ, ಈಗ ಕ್ಷೇತ್ರದಲ್ಲಿ ಯುವಕರ ಹವಾ ಜೋರಾಗಿದೆ. ನನ್ನ ಮಗನೂ ಯುವಕನಿದ್ದಾನೆ. ಅವನು ನಿಂತರೆ ಗೆಲ್ಲೋ ಸಾಧ್ಯತೆ ಹೆಚ್ಚು. ಹಾಗಾಗಿ ಅವನಿಗೇ ಟಿಕೆಟ್ ಕೊಟ್ಟುಬಿಡಿ ಎಂದಿದ್ದಾರೆ. ಪ್ರಾರಂಭದಲ್ಲಿ ಹೌದು ಎನ್ನುವಂತೆ ತಲೆಯಾಡಿಸಿದ ಯಡಿಯೂರಪ್ಪ, ಇವತ್ತು ಡೆಲ್ಲಿಗೆ ಹೋಗ್ತಾ ಇದ್ದೀನಿ. ಅಲ್ಲಿ ಈ ವಿಚಾರ ಪ್ರಸ್ತಾಪ ಮಾಡ್ತೀನಿ, ಏನಾಗುತ್ತೆ ನೋಡೋಣ ಎಂದು ಹೇಳಿ ಕಳಿಸಿದ್ದಾರೆ. ಹೊರಗೆ ಬಂದ ಎಂಟಿಬಿ ಕಪ್ಪು ಕೂಲಿಂಗ್ ಗ್ಲಾಸ್ ಏರಿಸಿಕೊಂಡು, ಅವತ್ತಿನ್ನೂ ಗ್ಯಾರೇಜ್‌ನಿಂದ ಹೊರಕ್ಕೆ ತಂದಿದ್ದ ರೋಲ್ಸ್ ರಾಯ್ಸ್ ಕಾರಿನಲ್ಲಿ ಹೊರಟುಬಿಟ್ಟಿದ್ದಾರೆ.
ಆಗಲೇ ಹೇಳಿದಂತೆ ಎಂಟಿಬಿ ಪಕ್ಕಾ ವ್ಯವಹಾರಸ್ಥ. 2019ರಲ್ಲಿ ಉಪಚುನಾವಣೆಗೆ ನಿಂತಾಗ ಎಂಟಿಬಿ ಅಣ್ಣ ಪಿಳ್ಳಣ್ಣ ಅವರೇ ವಾಗ್ದಾಳಿ ನಡೆಸಿದ್ದರು. ಈ ಹಿಂದೆಲ್ಲ, ನನ್ನ ಎದೆಯಲ್ಲಿ ಸಿದ್ದರಾಮಯ್ಯ ಇದ್ದಾರೆ ಎನ್ನುತ್ತಿದ್ದ. ಆಮೇಲೆ, ಕ್ಷೇತ್ರದ ಜನರೇ ನನ್ನ ಎದೆಯಲ್ಲಿದ್ದಾರೆ ಎಂದ. ಈಗ ನೋಡಿದರೆ ಯಡಿಯೂರಪ್ಪ ಮಾತ್ರ ನನ್ನ ಹೃದಯದಲ್ಲಿದ್ದಾರೆ ಎನ್ನುತ್ತಿದ್ದಾನೆ. ಅವನಿಗೆ ಯಾವ ಅಂಜಿಕೆಯೂ ಇಲ್ಲ. ಒಂದು ರೂಪಾಯಿಯನ್ನೂ ಬಿಡಲ್ಲ. ಕುರಿ ಕಡಿಯೋನು ಬೇಕಾದರೆ ಒಂದು ನಿಮಿಷ ಯೋಚನೆ ಮಾಡ್ತಾನೆ. ಆದರೆ ಇವನು ಮಾತ್ರ ಯೋಚನೇನೂ ಮಾಡಲ್ಲ. ಇವನ ಹತ್ತಿರ ಹುಷಾರಾಗಿರಪ್ಪ ಅಂತ 95 ವರ್ಷ ಬದುಕಿದ್ದ ನಮ್ಮ ತಂದೆ ಹೇಳ್ತಾ ಇದ್ದರು ಎಂದಿದ್ದರು!
ಇಂತಹ ವ್ಯವಹಾರಸ್ಥ ಎಂಟಿಬಿ ನಾಗರಾಜು ಪ್ಲ್ಯಾನ್ ಬೇರೆಯೇ ಇದೆ. ಈಗ ಹೇಗಿದ್ದರೂ ಇನ್ನೂ ಮೂರು ವರ್ಷ ಪರಿಷತ್ ಅವಧಿ ಇದೆ. ಶರತ್ ಎದುರು ಈಗಾಗಲೆ ಒಂದು ಸಾರಿ ಸೋತಾಗಿದೆ. ಈಗ ಮತ್ತೆ ಎಲೆಕ್ಷನ್ ನಿಲ್ಲಬೇಕೆಂದರೆ, ಪರಿಷತ್‌ಗೆ ರಾಜೀನಾಮೆ ನೀಡಿ ಎಂದು ಪಕ್ಷ ಹೇಳುತ್ತದೆ. ಇಲ್ಲಿ ಮತ್ತೆ ಸೋತರೆ ಅತ್ತ ಪರಿಷತ್ತೂ ಇಲ್ಲ, ಇಲ್ಲಿ ಎಂಎಲ್ಎನೂ ಇಲ್ಲ. ಅದರ ಬದಲು ಮಗನನ್ನು ಕಣಕ್ಕೆ ಇಳಿಸಿದರೆ, ಭರ್ಜರಿ ಪ್ರಚಾರ ಮಾಡಬಹುದು. ಹಾಗೊಂದು ವೇಳೆ ಗೆದ್ದರೆ ಮಗನ ರಾಜಕೀಯ ಬದುಕು ಸೆಟಲ್ ಆಗುತ್ತದೆ. ಒಂದೇ ಮನೆಯಲ್ಲಿ ಇಬ್ಬರೂ ಶಾಸಕರಾಗುತ್ತೀವಿ. ಮಗನೇನಾದರೂ ಸೋತರೂ ತೊಂದರೆ ಇಲ್ಲ, ಹೇಗಿದ್ದರೂ ಇನ್ನೂ ಮೂರು ವರ್ಷ ಪರಿಷತ್ ಇದ್ದೇ ಇರುತ್ತದೆ ಎಂಬ ಲೆಕ್ಕಾಚಾರ ಎಂಟಿಬಿಯವರದ್ದು. ಇದೆಲ್ಲ ಸ್ವ ಲೆಕ್ಕಾಚಾರದ ಕತೆ ಹೇಳೋದು ಬಿಟ್ಟು, ಏನೊ ಕ್ಷೇತ್ರ ತ್ಯಾಗ ಮಾಡೋ ರೀತಿಯಲ್ಲಿ ಪೋಸ್ ಕೊಡುತ್ತಿದ್ದಾರೆ ಎಂಬ ಮಾತು ಬಿಜೆಪಿ ಪಡಸಾಲೆಯಲ್ಲಿ ಕೇಳಿಬರುತ್ತಿದೆ.
ಇದನ್ನೂ ಓದಿ: Modi In Karnataka | ಯಾಕಿಷ್ಟು ಸಣಕಲಾಗಿದ್ದೀರಾ?: ಎಂಟಿಬಿ ನಾಗರಾಜ್‌ಗೆ ಮೋದಿ ಪ್ರಶ್ನೆ!