ಬೆಂಗಳೂರು: ಚುನಾವಣೆ ಆಗೋವರೆಗೂ ಮತದಾರನೇ ಪ್ರಭು. ಚುನಾವಣೆ ನಂತರ ರಾಜಕಾರಣಿಯೇ ಪ್ರಭು. ಇದು ಎಲ್ಲ ಕಡೆ ಚಾಲ್ತಿಯಲ್ಲಿರೋ ವಾಸ್ತವ ಸಂಗತಿ. ಜನರಿಗೆ ಮೋಸ ಮಾಡೋದು, ದಾರಿ ತಪ್ಪಿಸೋದನ್ನು ರಾಜಕಾರಣಿಗಳು ಕರಗತ ಮಾಡಿಕೊಂಡಿದಾರೆ. ಆದರೆ ಈಗ ದೇವರಿಗೂ ಮೋಸ ಮಾಡೋ ಮಟ್ಟಕ್ಕೆ ಅಪ್ ಡೇಟ್ ಆಗಿದ್ದಾರೆ.
ಚುನಾವಣೆಯಲ್ಲಿ ಯಾವುದೇ ಪಕ್ಷ ಗೆಲ್ಲೋದಕ್ಕೆ ಜನ ಬೆಂಬಲ ಬೇಕು ಎನ್ನೋದು ಥಿಯರಿ. ನಿಜವಾಗಿ ಜಾತಿ ಬೇಕು, ಹಣ ಬೇಕು. ಎಲ್ಲಕ್ಕಿಂತ ಹೆಚ್ಚಾಗಿ ತಾನು ಸ್ಪರ್ಧಿಸೋ ಕ್ಷೇತ್ರದ ಇತರೆ ಟಿಕೆಟ್ ಆಕಾಂಕ್ಷಿಗಳು ತಮ್ಮನ್ನೇ ಸೋಲಿಸಲು ಒಳಗೊಳಗೇ ಸಂಚು ರೂಪಿಸಬಾರದು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಬಹಳಷ್ಟು ಕ್ಷೇತ್ರದಲ್ಲಿ ಮಣ್ಣು ಮುಕ್ಕಲು ಒಳಗಿನ ಬಂಡಾಯವೇ ಕಾರಣ ಎನ್ನುವುದು ಜಗಜ್ಜಾಹೀರು.
ಈ ಬಾರಿಯೂ ಹಾಗೆ ಆಗಬಾರದು ಅಂತ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ದೇವರ ಮೊರೆ ಹೋಗಿದ್ದವು. ಈ ಸಾರಿ ಯಾರಿಗೇ ಟಿಕೆಟ್ ಸಿಕ್ಕರೂ ನಾವು ಬಂಡಾಯ ಏಳುವುದಿಲ್ಲ. ಪಕ್ಷದ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುತ್ತೇವೆ ಎಂದು ಪ್ರಮಾಣ ಮಾಡಿಸಿಕೊಂಡರು. ಆದರೆ ಇಲ್ಲಿ ನೋಡಿ ಬಾಗಲಕೋಟೆಯ ಮುಧೋಳದ ಆಕಾಂಕ್ಷಿಗಳ ನಡುವೆ ಜಟಾಪಟಿ ಇತ್ತು.
ಸಚಿವ ಗೋವಿಂದ ಕಾರಜೋಳ ಬಿಜೆಪಿಯಿಂದ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿತ್ತು. ಕಾಂಗ್ರೆಸ್ ನಿಂದ ಮಾಜಿ ಸಚಿವ ಆರ್. ಬಿ. ತಿಮ್ಮಾಪುರ ಹಾಗೂ ಸತೀಶ್ ಬಂಡಿವಡ್ಡರ್ ಆಕಾಂಕ್ಷಿಗಳಾಗಿದ್ದರು. ಈ ಹಿಂದಿನಿಂದಲೂ ಈ ಇಬ್ಬರ ಜಗಳದ ಕಾರಣಕ್ಕೇ ಪಕ್ಷ ಸೋಲುತ್ತ ಬಂದಿದೆ ಎಂದು ಅರಿತ ಕಾಂಗ್ರೆಸ್ ಹಿರಿಯರು, ಫೆಬ್ರವರಿಯಲ್ಲೇ ಇಬ್ಬರನ್ನೂ ಬಾಗಲಕೋಟೆಯ ಲೋಕೇಶ್ವರ ದೇವಸ್ಥಾನಕ್ಕೆ ಕರೆದುಕೊಂಡು ಹೋದರು. ಯಾರನ್ನೇ ಅಭ್ಯರ್ಥಿಯಾಗಿ ಘೊಷಿಸಿದರೂ ಮುಧೋಳದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಕೆಲಸ ಮಾಡುತ್ತೇನೆ ಎಂದು ಶ್ರೀ ಲೋಕೇಶ್ವರನ ಸಾಕ್ಷಿಯಾಗಿ, ನನ್ನ ಆತ್ಮಸಾಕ್ಷಿಯಾಗಿ ಪ್ರಮಾಣ ಮಾಡುತ್ತೇನೆ ಎಂದು ಎಲ್ಲರೂ ಹೇಳಿದ್ದರು. ದುರ್ಗಾದೇವಿ ಎದುರಿಗೂ ಬಂದು, ನೇರವಾಗಿ ಹಾಗೂ ಪರೋಕ್ಷವಾಗಿಯೂ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವುದಿಲ್ಲ ಎಂದು ಪ್ರಮಾಣ ಮಾಡಿಸಿದ್ದರು.
ಇದೆಲ್ಲ ಆಗಿ ಎರಡು ತಿಂಗಳ ನಂತರ ಕಾಂಗ್ರೆಸ್ ನಿಂದ ಆರ್. ಬಿ. ತಿಮ್ಮಾಪುರಗೆ ಟಿಕೆಟ್ ಘೋಷಿಸಲಾಯಿತು. ಆಗಲೇ ಆಣೆ ಮಾಡಿದ್ದರಿಂದ ಯಾವುದೇ ಬಂಡಾಯ ಆಗುವುದಿಲ್ಲ ಎಂದುಕೊಂಡಿದ್ದವರಿಗೆ ಶಾಕ್. ಸತೀಶ್ ಬಂಡಿವಡ್ಡರ್ ಪಕ್ಷೇತರರಾಗಿ ಕಣದಲ್ಲಿದ್ದಾರೆ. ಈ ಸಮಯದಲ್ಲಿ ಸುದ್ದಿವಾಹಿನಿಯೊಂದರ ಸಂದರ್ಶನದಲ್ಲಿ ಈ ಪ್ರಶ್ನೆ ಕೇಳಲಾಯಿತು.
2018ರಲ್ಲಿ ನನಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಾಗ ತಿಮ್ಮಾಪುರ ಅವರು ಅನ್ಯಾಯ ಮಾಡಿದ್ದರು. ಅವರಿಂದ ಪಕ್ಷಕ್ಕೆ ಅನ್ಯಾಯ ಆಗಬಾರದು ಎಂದೇ ಈಗ ಆಣೆ ಪ್ರಮಾಣ ಮಾಡಿಸಿದ್ದು. ಪಕ್ಷದ ಒಳಗಿದ್ದುಕೊಂಡು ನಾನು ದ್ರೋಹ ಮಾಡಲ್ಲ ಎಂದು ಆಣೆ ಪ್ರಮಾಣ ಮಾಡಿದ್ದೆ. ಈಗ ಪಕ್ಷವನ್ನೇ ಬಿಟ್ಟು ಬಂದಿದ್ದೇನೆ. ಹಿಂದಿನಿಂದ ಚೂರಿ ಹಾಕುವ ಕೆಲಸ ಮಾಡಲ್ಲ, ನೇರವಾಗಿ ಚುನಾವಣೆ ಎದುರಿಸುತ್ತೇನೆ. ಪಕ್ಷದಲ್ಲಿ ಇದ್ದಿದ್ದರೆ ಮಾತ್ರ ಆಣೆ ಪ್ರಮಾಣ ಅನ್ವಯ ಆಗುತ್ತದೆ ಎಂದಾಗ ಶಾಕ್ ಆಗುವ ಸರದಿ ಸ್ವತಃ ಲೋಕೇಶ್ವರ ಮತ್ತು ದುರ್ಗಾದೇವಿಯದ್ದು!
ಬೆಂಗಳೂರಿನ ಬ್ಯಾಟರಾಯನಪುರದ ಕಥೆಯೂ ಇಷ್ಟೆ. ಈ ಕ್ಷೇತ್ರದಲ್ಲಿ ಮೂರು ಬಾರಿ ಸ್ಪರ್ಧಿಸಿದ್ದ ಎ.ರವಿ, ಬಿಬಿಎಂಪಿ ಕಾರ್ಪೊರೇಟರ್ ಆಗಿದ್ದ ಮುನೀಂದ್ರ ಕುಮಾರ್ ಹಾಗೂ ಕರ್ನಾಟಕ ವಿದ್ಯುತ್ ಕಂಪನಿ ಮಾಜಿ ನಿರ್ದೇಶಕ ತಮ್ಮೇಶ್ ಗೌಡ ಆಕಾಂಕ್ಷಿಗಳಾಗಿದ್ದರು. ಮೂವರೂ ತಂತಮ್ಮ ನೆಲೆಯಲ್ಲಿ ಭರ್ಜರಿಯಾಗಿಯೇ ಪ್ರಚಾರ ಮಾಡುತ್ತಿದ್ದರು. ಕಳೆದ ಬಾರಿ ಕಡಿಮೆ ಅಂತರದಿಂದ ಸೋತಿದ್ದರಿಂದ ಈ ಬಾರಿ ಟಿಕೆಟ್ ಸಿಗುತ್ತದೆ ಎಂದು ರವಿ ನಂಬಿದ್ದರು. ಮುನೀಂದ್ರ ಕುಮಾರ್ ಭರ್ಜರಿ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರನ್ನೇ ಆಹ್ವಾನಿಸಿದ್ದರು. ತಮ್ಮೇಶ್ ಗೌಡ ಕೇಸರಿ ಫೌಂಡೇಷನ್ ಮೂಲಕ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಬಿ.ಎಸ್. ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ ಅವರನ್ನು ಕರೆಸಿದ್ದರು.
ಇಲ್ಯಾಕೊ ಬಂಡಾಯ ಏಳುವುದು ಖಚಿತ ಎಂದು ತಿಳಿದ ಬಿಜೆಪಿ ವರಿಷ್ಠರು ಸಂಸದ ಡಿ.ವಿ. ಸದಾನಂದ ಗೌಡ, ಶಾಸಕ ಎಸ್. ಆರ್. ವಿಶ್ವನಾಥ್ ಎದುರು ಸಂಧಾನ ಸಭೆ ನಡೆಸಿದರು. ಬಹಿರಂಗವಾಗಿಯೇ ನಡೆದ ಸಭೆಯಲ್ಲಿ ಈ ಮೂವರ ಜತೆಗೆ ಮತ್ತೆ ಕೆಲವು ಆಕಾಂಕ್ಷಿಗಳೂ ಸೇರಿ, ನಾವೆಲ್ಲರೂ ಒಗ್ಗಟ್ಟಾಗಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವುದಾಗಿ ಪ್ರತಿಜ್ಞೆ ಮಾಡಿದರು. ತ್ರಿಮೂರ್ತಿಗಳು ಒಂದಾಗಿ ಚಾಮುಂಡೇಶ್ವರಿಗೆ ಶಕ್ತಿ ನೀಡಿ ಮಹಿಷಾಸುರನನ್ನು ಸಂಹಾರ ಮಾಡಿದಂತೆಯೇ, ಯಾರಿಗೇ ಟಿಕೆಟ್ ಸಿಕ್ಕರೂ ಎಲ್ಲರೂ ಒಟ್ಟಿಗೆ ಹೋರಾಡುತ್ತೇವೆ ಎಂದು ಕೈ ಕೈ ಹಿಡಿದು ಮೇಲೆತ್ತಿದರು, ಜನ ಚಪ್ಪಾಳೆ ತಟ್ಟಿದರು.
ಈಗ ನೋಡಿದರೆ ಬ್ಯಾಟರಾಯನಪುರದಲ್ಲಿ ಬಂಡಾಯ ಶಮನವಾಗುವ ಲಕ್ಷಣವೇ ಕಾಣುತ್ತಿಲ್ಲ. ದಿನಬೆಳಗಾದರೆ ಆಕಾಂಕ್ಷಿಗಳ ಬೆಂಬಲಿಗರ ನಡುವೆ ಮಾತಿನ ಚಕಮಕಿ, ಸಾಮಾಜಿಕ ಜಾಲತಾಣದಲ್ಲಿ ಒಬ್ಬರ ಬಗ್ಗೆ ಮತ್ತೊಬ್ಬರ ಬೆಂಬಲಿಗರು ವಾಗ್ದಾಳಿ, ಕಾರ್ಯಕ್ರಮಗಳಿಗೆ ಅನುಪಸ್ಥಿತಿ ಮುಂದುವರಿದಿದೆ.
ಇವು ಕೆಲವು ಕ್ಷೇತ್ರದ ಉದಾಹರಣೆ ಅಷ್ಟೆ. ಈಗ ರಾಜ್ಯದಲ್ಲಿ ಬಂಡಾಯ ಹೊಗೆಯೆದ್ದಿರುವ ಬಹುತೇಕ ಕಡೆಗಳಲ್ಲಿ ಇದೇ ಪ್ರಾಬ್ಲಂ. ದೇವರ ಎದುರೇ ಆಣೆ ಪ್ರಮಾಣ ಮಾಡಿ ಈಗ ಮಾತು ತಿರುಗಿಸೋ ರಾಜಕಾರಣಿಗಳು, ಜನರಿಗೆ ನಿಷ್ಠರಾಗಿರುತ್ತಾರೆ ಎಂದು ನಂಬುವುದು ಹೇಗೆ?
ಇದನ್ನೂ ಓದಿ: Inside Story: ಬಿಜೆಪಿ ಅಧಿಕಾರಕ್ಕೆ ಬಂದರೆ ಲಿಂಗಾಯತ ಸಿಎಂ ಎಂಬ ವಾಗ್ದಾನ: ಹಾಗಾದರೆ ಮುಖ್ಯಮಂತ್ರಿ ಆಗುವವರು ಯಾರು?