ಶಿವಮೊಗ್ಗ: ಸೊರಬ ಬಿಜೆಪಿಯಲ್ಲಿ ಮೂಲ ಮತ್ತು ವಲಸಿಗರ ನಡುವೆ ಭಿನ್ನಮತ ಸ್ಫೋಟಗೊಂಡು ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಶಾಸಕ ಕುಮಾರ್ ಬಂಗಾರಪ್ಪ ವಿರುದ್ಧ ನಮೋ ಸೊರಬ ವೇದಿಕೆ ಸ್ಥಾಪನೆಗೊಂಡಿದ್ದು, ಬಿಜೆಪಿ ಬಣಗಳ ಸಂಘರ್ಷ ಮತ್ತಷ್ಟು ತಾರಕಕ್ಕೇರಿದೆ.
ಕುಮಾರ್ ಬಂಗಾರಪ್ಪ ಬಣ ಮತ್ತು ಮೂಲ ಬಿಜೆಪಿಗರಿಂದ ಪರಸ್ಪರ ಟೀಕೆ, ಸುದ್ದಿಗೋಷ್ಠಿ, ವಾಗ್ದಾಳಿ ನಡೆದಿದ್ದು, ಸುದ್ದಿಗೋಷ್ಠಿಯಲ್ಲಿನ ವಿವಾದಾತ್ಮಕ ಹೇಳಿಕೆಗಳನ್ನು ಖಂಡಿಸಿ ಠಾಣೆಗೆ ದೂರು ನೀಡಲಾಗಿದೆ.
ಶಾಸಕ ಕುಮಾರ್ ಬಂಗಾರಪ್ಪ ನಡೆಯ ವಿರುದ್ಧ ಅದೇ ಪಕ್ಷದ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದು, ಶಾಸಕರಾಗಿ ಕುಮಾರ್ ಬಂಗಾರಪ್ಪ ಆಯ್ಕೆಯಾದಾಗಿನಿಂದಲೂ ಮೂಲ-ವಲಸಿಗರ ಸಂಘರ್ಷ ನಡೆಯುತ್ತಲೇ ಇದೆ. ಈ ಎರಡು ಬಣಗಳ ನಡುವಿನ ಅಂತರ ಈಗ ಮತ್ತಷ್ಟು ಹೆಚ್ಚಾಗಿದೆ.
ಹೊಸದಾಗಿ ಹುಟ್ಟಿದ ವೇದಿಕೆ
ಪ್ರಧಾನಿ ನರೇಂದ್ರ ಮೋದಿ ಅವರ ಜನುಮದಿನವಾದ ಸೆಪ್ಟೆಂಬರ್ ೧೭ರಂದು ನರೇಂದ್ರ ಮೋದಿ ಹೆಸರಲ್ಲಿ ʻನಮೋ ವೇದಿಕೆʼ ಆರಂಭವಾಗಿದೆ. ಇದನ್ನು ಸ್ಥಾಪಿಸಿದವರು ಕುಮಾರ್ ಬಂಗಾರಪ್ಪ ಅವರ ವಿರೋಧಿ ಗುಂಪಿನಲ್ಲಿ ಕಾಣಿಸಿಕೊಂಡಿರುವ ಅಂದರೆ ತಾವೇ ಮೂಲ ಬಿಜೆಪಿಗರು ಎಂದು ಹೇಳುತ್ತಾ ಶಾಸಕರ ವಿರುದ್ಧ ತೊಡೆ ತಟ್ಟಿದವರು ಆರಂಭಿಸಿದ ವೇದಿಕೆ ಇದಾಗಿದೆ.
ಶಾಸಕರ ಬೆಂಬಲಿಗರನ್ನು ಕೆರಳಿಸಿದ ಹೇಳಿಕೆ
ಶಾಸಕ ಕುಮಾರ ಬಂಗಾರಪ್ಪ ಅವರ ವಿರುದ್ಧ ಬೇರೆ ಬೇರೆ ವೈಮನಸ್ಸುಗಳ ಕಾರಣಕ್ಕೆ ನಡೆಸುವ ದಾಳಿ ಒಂದೆಡೆಯಾದರೆ, ವೈಯಕ್ತಿವಾಗಿಯೂ ದಾಳಿ ನಡೆದಿದೆ. ಹೆತ್ತ ತಂದೆ-ತಾಯಿಗೆ ಅನ್ನ ಹಾಕದೇ ರಾತ್ರೋರಾತ್ರಿ ಮನೆಯಿಂದ ಹೊರ ಹಾಕಿದ ಶಾಸಕರು ಕಾರ್ಯಕರ್ತರನ್ನು ಸರಿಯಾಗಿ ನಡೆಸಿಕೊಳ್ಳುತ್ತಾರಾ..? ಇಂತಹವರಿಗೆ ಟಿಕೆಟ್ ನೀಡಿ ಬಿಜೆಪಿ ತಪ್ಪು ಮಾಡಿದೆ ಎಂದು ಎಂಎಡಿಬಿ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಹಿರಿಯ ಮುಖಂಡ ಎ. ಪದ್ಮನಾಭ ಭಟ್ ಹೇಳಿದ್ದರು.
ನಮೋ ವೇದಿಕೆ ಉದ್ಘಾಟನೆ ವೇಳೆ ಪದ್ಮನಾಭ ಭಟ್ ನೀಡಿದ್ದ ಈ ಹೇಳಿಕೆ ಶಾಸಕರ ಬೆಂಬಲಿಗರನ್ನು ಕೆರಳಿಸಿತ್ತು. ಈ ಹೇಳಿಕೆ ವಿರುದ್ಧ ಖಾರವಾಗಿ ಪ್ರತಿಕ್ರಿಯಿಸಿದ್ದ ಶಾಸಕರ ಬೆಂಬಲಿಗ, ಸೊರಬ ಪುರಸಭೆ ಸದಸ್ಯ ಎಂ.ಡಿ.ಉಮೇಶ್. ಕುಮಾರ ಬಂಗಾರಪ್ಪ ತಮ್ಮ ತಂದೆ ತಾಯಿಯನ್ನು ಹೊರ ಹಾಕಿದ್ದನ್ನು ಅದ್ಯಾವಾಗ ನೋಡಿದ್ದರು? ಮೊದಲು ಅವರು ತಮ್ಮ ಹುಳುಕನ್ನು ಸರಿ ಮಾಡಿಕೊಳ್ಳಲಿ ಎಂದಿದ್ದರು.
ಶಾಸಕರ ಕಡೆಯಿಂದಲೂ ಆಕ್ಷೇಪಾರ್ಹ ಹೇಳಿಕೆ
ಕುಮಾರ್ ಬಂಗಾರಪ್ಪರವರ ಇನ್ನೊಬ್ಬ ಅಭಿಮಾನಿ ಕನಕದಾಸ್ ಕಲ್ಲಂಬಿ ಕೂಡ ಆಕ್ರೋಶ ಹೊರಹಾಕಿ, ʻʻತಾಲೂಕಿನ ನಮೋ ವೇದಿಕೆ ಒಂದು ಕಳ್ಳರ ಗುಂಪು. ನಮಗೆ ಇಷ್ಟೆಲ್ಲಾ ಮಾತನಾಡಿದ್ದು ಗೊತ್ತಾಗಿರಲಿಲ್ಲ. ಗೊತ್ತಾಗಿದ್ದರೆ ಪದ್ಮನಾಭ್ ಭಟ್ ಊರಿಗೆ ಹೋಗುತ್ತಿರಲಿಲ್ಲʼʼ ಎಂದಿದ್ದರು. ಇವರಿಬ್ಬರ ಆಕ್ಷೇಪಾರ್ಹ ಹೇಳಿಕೆ ವಿರುದ್ಧ ಮೂಲ ಬಿಜೆಪಿಗರು ಠಾಣೆ ಮೆಟ್ಟಿಲೇರಿದ್ದಾರೆ. ಮೂಲ ಬಿಜೆಪಿಗ ಪಾಣಿ ರಾಜಪ್ಪ ಅವರಿಂದ ಶಾಸಕರ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಕೊರಕೋಡು ರಮೇಶ್, ಎಂ.ಡಿ.ಉಮೇಶ್, ಕಲ್ಲಂಬಿ ಕನಕದಾಸ್ ಹಾಗೂ ಪ್ರಭು ಮೇಸ್ತ್ರಿ ವಿರುದ್ಧ ದೂರು ಸಲ್ಲಿಕೆಯಾಗಿದ್ದು, ಸೊರಬದಲ್ಲಿ ಮೂಲ- ವಲಸಿಗರ ನಡುವಿನ ಸಂಘರ್ಷ ಮತ್ತಷ್ಟು ಬಿಗಡಾಯಿಸಿದಂತಾಗಿದೆ.
ಶಾಸಕರ ಬಣದಿಂದಲೂ ಎರಡು ದೂರು ಸಲ್ಲಿಕೆ
ಮೂಲ ಬಿಜೆಪಿ ಬಣದ ವಿರುದ್ಧ ಕುಮಾರ್ ಬಂಗಾರಪ್ಪ ಬಣದ ಕನಕದಾಸ್ ಕಲ್ಲಂಬಿ ಎಂಬುವವರು, ಬೆನವಪ್ಪ, ಸಂಜೀವ ಆಚಾರ್, ಮಂಚಿ ವಿಶ್ವನಾಥ್, ಮೋಹನ್ ವಿರುದ್ಧ ದೂರು ನೀಡಿದ್ದಾರೆ. ಸೊರಬ ಪಟ್ಟಣದ ರಂಗನಾಥ ಸ್ವಾಮಿ ದೇವಸ್ಥಾನ ಬಳಿ ನಾಲ್ವರು ಆರೋಪಿತರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಮೈ ಕೈ ಮುಟ್ಟಿ ತಳ್ಳಾಡಿ, ಜೀವ ಬೆದರಿಕೆ ಹಾಕಿದ ಆರೋಪಿಸಲಾಗಿದೆ. ಈ ಘಟನೆಗೆ ಪಾಣಿ ರಾಜಪ್ಪ, ಪದ್ಮನಾಭ ಭಟ್, ಗಜಾನನ ರಾವ್ ನೀಡಿದ ಪ್ರಚೋದನೆ ಕಾರಣ ಎಂದೂ ಆರೋಪಿಸಲಾಗಿದೆ.
ಶಾಸಕ ಬಣದ ಮಂಜುನಾಥ್ ಕರಡಿಗರ ಎಂಬುವವರಿಂದ ಮತ್ತೊಂದು ದೂರು ದಾಖಲಾಗಿದ್ದು, ಮುಖಂಡ ಪದ್ಮನಾಭ ಭಟ್ ಅವರು ಶಾಸಕ ಕುಮಾರ್ ಬಂಗಾರಪ್ಪ ಅವರಿಗೆ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ | ಮುಂಬೈನಲ್ಲಿ ನಾಲ್ಕು ಹಂತದ ಕಟ್ಟಡ ಕುಸಿತ, ಮೂವರ ಸಾವು, 13 ಮಂದಿಗೆ ಗಂಭೀರ ಗಾಯ