ಬೆಂಗಳೂರು: ಒಳ ಮೀಸಲಾತಿ ಜಾರಿಗೊಳಿಸುವ ಮೂಲಕ ಐತಿಹಾಸಿಕ ತೀರ್ಮಾನ ಕೈಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ, ಅಬಕಾರಿ ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪೂರ ನೇತೃತ್ವದ ನಿಯೋಗ ಕೃತಜ್ಞತೆ ಅರ್ಪಿಸಿತು.
ಶನಿವಾರ ಸಿಎಂ ನಿವಾಸ ಕಾವೇರಿಯಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಸಚಿವ ತಿಮ್ಮಾಪೂರರವರು ಹಾಗೂ ನೂರಾರು ದಲಿತ ಎಡ ಸಮುದಾಯದ ನಾಯಕರು, ಮೂವತ್ತು ವರ್ಷಗಳ ಬೇಡಿಕೆ ಈಡೇರಿಸಿದ್ದಕ್ಕೆ ಸಿಹಿ ತಿನ್ನಿಸಿ ಧನ್ಯವಾದ ತಿಳಿಸಿದರು.
ನಮ್ಮ ಒಳ ಮೀಸಲಾತಿ ಹೋರಾಟ 30-40 ವರ್ಷಗಳದ್ದು. ಹಲವು ಸರ್ಕಾರಗಳು, ಮುಖ್ಯಮಂತ್ರಿಗಳಿಂದ ಸಾಧ್ಯವಾಗದ ಕೆಲಸವನ್ನ ಸನ್ಮಾನ್ಯ ಸಿದ್ದರಾಮಯ್ಯರವರು ಮಾಡಿ ತೋರಿಸಿದ್ದಾರೆ. ಸಿದ್ದರಾಮಯ್ಯ ಸಾಹೇಬರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಸರ್ವ ಜನಾಂಗ ಒಪ್ಪುವಂತೆ ಮಾಡಿ, ಎಲ್ಲಾ ಕ್ಯಾಬಿನೆಟ್ ಸಚಿವರ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಮೂಲಕ ನಮ್ಮ ಸಮುದಾಯಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ನಮ್ಮ ಇಡೀ ಸಮುದಾಯ ಸಿದ್ದರಾಮಯ್ಯರನ್ನ ನೆನಪಿಟ್ಟುಕೊಳ್ಳಲಿದೆ. ಇಡೀ ಸಮುದಾಯ ಅವರಿಗೆ ಕೃತಜ್ಞರಾಗಿಲಿದೆ ಎಂದು ಸಚಿವ ತಿಮ್ಮಾಪೂರ ಅವರು ಹೇಳಿದರು.

