Site icon Vistara News

Intolerance? | ನಾ. ಡಿಸೋಜ ಅವರಿಗೂ 2 ಬೆದರಿಕೆ ಪತ್ರ; ಸತ್ಯ ಬರೆಯುವ ಸ್ವಾತಂತ್ರ್ಯವಿಲ್ಲ ಎಂದ ಖ್ಯಾತ ಸಾಹಿತಿ

Na dsouza

ಸಾಗರ: ʻʻಈಗಿನ ಸನ್ನಿವೇಶದಲ್ಲಿ ನಿರ್ಭಯವಾಗಿ, ಕಂಡಿದ್ದನ್ನು ಬರೆಯುವ ಸ್ವಾತಂತ್ರ್ಯ ಉಳಿದಿಲ್ಲ. ಸತ್ಯವನ್ನು ಬರೆಯುವವರಿಗೆ ಬೆದರಿಕೆ ಪತ್ರಗಳು ಬರುತ್ತಿದೆ. ನನಗೂ ಎರಡು ಬೆದರಿಕೆ ಪತ್ರ ಬಂದಿದ್ದು ಅದನ್ನು ಎತ್ತಿಟ್ಟಿದ್ದೇನೆʼʼ ಎಂದು ಸಾಹಿತಿ ಡಾ. ನಾ.ಡಿಸೋಜ ಹೇಳಿದರು. ಇಲ್ಲಿನ ಸಾಹಿತ್ಯ ಭವನದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಶಾಖೆ ವತಿಯಿಂದ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ʻʻನನ್ನ ಸ್ನೇಹಿತರೊಬ್ಬರು ಸಾಹಿತಿಯಾಗಿದ್ದು ಅವರಿಗೆ ʻನಿಮ್ಮನ್ನು ತೆಗೆಯುತ್ತೇವೆʼ ಎಂಬ ಬೆದರಿಕೆ ಪತ್ರ ಬಂದಿದೆ. ಅದರ ಹಿಂದೆಯೇ ನನಗೂ ಎರಡು ಬೆದರಿಕೆ ಪತ್ರ ಬಂದಿದೆ. ಇತ್ತೀಚಿನ ದಿನಮಾನಗಳಲ್ಲಿ ಇಂತಹ ವಿಭಿನ್ನ ಸನ್ನಿವೇಶ ಸೃಷ್ಟಿಯಾಗಿದ್ದು, ಸಾಹಿತಿಗಳು ಅನಿಸಿದ್ದನ್ನು ಬರೆಯಲು ಕಡಿವಾಣ ಹಾಕುವ ಪ್ರಯತ್ನ ನಡೆಸಲಾಗುತ್ತಿದೆʼʼ ಎಂದು ಹೇಳಿದರು.

ʻʻಇಂದಿಗೂ ಸಾಹಿತ್ಯ ಒಳ್ಳೆಯವರ ಕೈಯಲ್ಲಿ ಇದೆ ಎನ್ನುವ ವಿಶ್ವಾಸ ನನಗಿದೆ. ಸಾಹಿತಿಗಳ ಹಿಂದೆ ಜನ ಇರಬೇಕು. ಸಾಹಿತಿಗೆ ತೊಂದರೆಯಾಗಿದೆ, ಅಪಾಯದಲ್ಲಿದ್ದಾರೆ ಎಂದರೆ ಯಾರೂ ಬರುವುದಿಲ್ಲ. ಲೇಖಕನೊಬ್ಬ ಸತ್ಯವನ್ನು ಬರೆಯುತ್ತಿದ್ದಾನೆ, ಅವನ ಸಾಹಿತ್ಯ ಬರವಣಿಗೆ ಸಮಾಜಕ್ಕೆ ಪೂರಕವಾಗಿದೆ ಎಂದು ಗೊತ್ತಾದಾಗ ಅವರ ಪರವಾಗಿ ನಿಲ್ಲುವ ವಾತಾವರಣ ಸೃಷ್ಟಿಯಾಗಬೇಕು,ʼʼ ಎಂದು ಹೇಳಿದರು.


ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ಸಾಹಿತ್ಯವನ್ನು ಕಟ್ಟುವ, ಮನಸ್ಸುಗಳನ್ನು ಬೆಸೆಯುವ ಕೆಲಸ ಅನೇಕ ಆತಂಕದ ನಡುವೆಯೂ ಪರಿಷತ್ ಮಾಡಿಕೊಂಡು ಬರುತ್ತಿದೆ. ಸಾಹಿತ್ಯ ಪರಿಷತ್ ಜನರ ಮನೆಮನಕ್ಕೆ ಮುಟ್ಟುವ ನಿಟ್ಟಿನಲ್ಲಿ ಬೇರೆಬೇರೆ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ. ಹೊಸಹೊಸ ಸಾಹಿತಿಗಳನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಪರಿಷತ್ ತಾಲ್ಲೂಕು ಅಧ್ಯಕ್ಷ ವಿ.ಟಿ.ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಾನಪದ ಪರಿಷತ್ ಅಧ್ಯಕ್ಷ ಸತ್ಯನಾರಾಯಣ, ಸಾಹಿತ್ಯ ಸಾಂಸ್ಕøತಿಕ ವೇದಿಕೆ ಅಧ್ಯಕ್ಷೆ ಕಸ್ತೂರಿ ಸಾಗರ್, ಲೇಖಕ ವಿ.ಗಣೇಶ್ ಇನ್ನಿತರರು ಹಾಜರಿದ್ದರು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಅಧಿಕಾರಿಗಳ ವರ್ಗಾವಣೆ ಸಲ್ಲ: ನಾಡೋಜ ಡಾ.ಮಹೇಶ ಜೋಶಿ

Exit mobile version