ಮೈಸೂರು: ಏರ್‌ಪೋರ್ಟ್‌ನಲ್ಲಿ ಯಾರಿಗೂ ಪ್ರವೇಶ ಇರೋದಿಲ್ಲ. ಮಾಧ್ಯಮದವರಿಗೂ ಫೋಟೋ, ವಿಡಿಯೋ ತೆಗೆಯಲು ಅವಕಾಶ ಇಲ್ಲ. ಹೀಗಿದ್ದರೂ ಆ ಫೋಟೋ ಮಾರ್ಕೆಟ್‌ಗೆ ಬಿಟ್ಟಿರುವ ಉದ್ದೇಶವೇನು? ಇದು ಸೋಮವಾರ ಬಹಿರಂಗವಾದ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ನಡುವಿನ ಫೋಟೊ ಕುರಿತು ಸಾರ್ವಜನಿಕರು ಆಡುತ್ತಿರುವ ಮಾತಲ್ಲ. ಸ್ವತಃ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರ ಪ್ರಶ್ನೆ.
ಯಡಿಯೂರಪ್ಪ ಬೆಳಗಾವಿ ಪ್ರವಾಸ ಕೈಗೊಳ್ಳಲು ಆಗಮಿಸಿದ್ದರು, ಸಿದ್ದರಾಮಯ್ಯ ಹುಬ್ಬಳ್ಳಿಗೆ ತೆರಳಲು ಬಂದಿದ್ದರು. ಈ ಸಂದರ್ಭದಲ್ಲಿ ಉಭಯ ನಾಯಕರೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೇಟಿ ಮಾಡಿದ್ದರು. ಇದು ಆಕಸ್ಮಿಕ ಭೇಟಿಯೋ ಅಥವಾ ಉದ್ದೇಶಪೂರ್ವಕವಾಗಿ ನಡೆದಿರುವ ಭೇಟಿಯೋ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ಫೋಟೊಗಳನ್ನು ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಅವರ ಮಾಧ್ಯಮ ವಿಭಾಗಗಳಿಂದಲೇ ಅಧಿಕೃತವಾಗಿ ಬಿಡುಗಡೆ ಮಾಡಲಾಗಿತ್ತು. ಬೇರೆಬೇರೆ ಸ್ಥಳಗಳಿಗೆ ತೆರಳುತ್ತಿದ್ದ ಇಬ್ಬರೂ ನಾಯಕರು ಸೌಹಾರ್ದ ಭೇಟಿ ಮಾಡಿದರು ಎಂದಷ್ಟೇ ತಿಳಿಸಲಾಗಿತ್ತು.
ಈಗಾಗಲೆ ರಾಜ್ಯಸಭೆ ಚುನಾವಣೆ ಕುರಿತಂತೆ ಅನೇಕ ಊಹಾಪೋಹಗಳಿವೆ. ಜೆಡಿಎಸ್ ತನ್ನ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ಕಾಂಗ್ರೆಸ್‌ನ ಹೆಚ್ಚುವರಿ ಮತಗಳನ್ನು ಪಡೆಯುವ ಯೋಚನೆಯಲ್ಲಿತ್ತು. ಈ ಕುರಿತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕುರಿತು ಸ್ವತಃ ಎಚ್.ಡಿ. ದೇವೇಗೌಡರು ಮಾತನಾಡಿದ್ದರು. ಆದರೆ ಅಷ್ಟರ ವೇಳೆಗೆ ಸಿದ್ದರಾಮಯ್ಯ ಒತ್ತಾಯಕ್ಕೆ ಮಣಿದ ಕಾಂಗ್ರೆಸ್ ಹೈಕಮಾಂಡ್, ಮನ್ಸೂರ್ ಖಾನ್ ಅವರನ್ನು ಕಣಕ್ಕಿಳಿಸಿತ್ತು.
ತಮ್ಮ ಪಕ್ಷದ ಅಭ್ಯರ್ಥಿ ಸೋಲುತ್ತಾರೆ ಎನ್ನುವುದು ತಿಳಿದಿದ್ದರೂ ಸಿದ್ದರಾಮಯ್ಯ ಒತ್ತಡ ಹೇರಿದ್ದಕ್ಕೂ ಯಡಿಯೂರಪ್ಪ ಅವರೊಂದಿಗಿನ ಬಾಂಧವ್ಯಕ್ಕೂ ಸಂಪರ್ಕ ಕಲ್ಪಿಸಲಾಗಿತ್ತು. ಬಿಜೆಪಿ ಕಣಕ್ಕಿಳಿಸಿರುವ ಲೆಹರ್‌ಸಿಂಗ್ ಸಿರೋಯಾ ಅವರು ಈ ಹಿಂದಿನಿಂದಲೂ ಯಡಿಯೂರಪ್ಪ ಆಪ್ತರು ಎಂದೇ ಗುರುತಿಸಿಕೊಂಡವರು. ಅವರು ಜಯಗಳಿಸಬೇಕು ಎಂದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಒಟ್ಟಾಗಬಾರದು. ಈ ಕಾರಣಕ್ಕೆ ಸಿದ್ದರಾಮಯ್ಯ ಮೂಲಕ ಯಡಿಯೂರಪ್ಪ ಅವರೇ ಕಾಂಗ್ರೆಸ್‌ನ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾರಣರಾಗಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದ್ದವು.
ಈ ಎಲ್ಲ ಊಹಾಪೋಹಗಳಿಗೂ ಅಧಿಕೃತ ಮುದ್ರೆ ಒತ್ತುವಂತೆ ಸೋಮವಾರದ ಫೋಟೊ ಹರಿದಾಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಯಡಿಯೂರಪ್ಪ, ನಮ್ಮ ಮಧ್ಯೆ ಸೌಹಾರ್ದಯುತ ಮಾತು ಮಾತ್ರ ನಡೆದಿದೆ. ರಾಝಕೀಯ ವಾಘಿ ನನ್ನ ದಾರಿ ನನಗೆ, ಅವರ ದಾರಿ ಅವರಿಗೆ ಎಂದಿದ್ದಾರೆ.
ಆದರೆ ಕುಮಾರಸ್ವಾಮಿ ಈ ಮಾತನ್ನು ಒಪ್ಪಲು ತಯಾರಿಲ್ಲ. ಆತ್ಮಸಾಕ್ಷಿ ತೋರಿಸುವ ಸಲುವಾಗಿ ಫೋಟೋ ಹೊರಗೆ ಬಿಟ್ಟಿದ್ದೀರಾ? ಆತ್ಮಸಾಕ್ಷಿ ಮತಗಳನ್ನು ಬಿಜೆಪಿಯಿಂದ ಪಡೆಯಲು ಪ್ರಯತ್ನ ಮಾಡುತ್ತಿದ್ದೀರಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ | ಮನವಿ ಕೊಡಲು ಬಂದವರು ಮುತ್ತಿಗೆ ಹಾಕಲ್ಲ: HD ಕುಮಾರಸ್ವಾಮಿ ಆಕ್ರೋಶ