Site icon Vistara News

Invest Karnataka 2022 | ಬ್ರ್ಯಾಂಡ್‌ ಬೆಂಗಳೂರು ಈಗ ಜಾಗತಿಕ ಬ್ರ್ಯಾಂಡ್‌ ಎಂದು ಹಾಡಿ ಹೊಗಳಿದ ಮೋದಿ

ಬೆಂಗಳೂರು: ಬ್ರ್ಯಾಂಡ್‌ ಬೆಂಗಳೂರು ಎನ್ನುವುದು ಈಗ ಕೇವಲ ಭಾರತೀಯ ಪರಿಕಲ್ಪನೆಯಲ್ಲ. ಇಡೀ ಜಗತ್ತಿನಲ್ಲಿ ಜನಪ್ರಿಯವಾಗಿದೆ. ಪ್ರಪಂಚದಾದ್ಯಂತದ ಔದ್ಯಮಿಕ ಕಂಪನಿಗಳು ಈಗ ಹೂಡಿಕೆಗಾಗಿ ಬೆಂಗಳೂರಿನತ್ತ ನೋಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಡಿ ಹೊಗಳಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಬುಧವಾರ ಆರಂಭಗೊಂಡ ಮೂರು ದಿನಗಳ ಇನ್ವೆಸ್ಟ್‌ ಕರ್ನಾಟಕ- invest karnataka 2022 ಸಮಾವೇಶದಲ್ಲಿ ವರ್ಚುವಲ್‌ ಆಗಿ ಭಾಗವಹಿಸಿ ಅವರು ಮಾತನಾಡಿದರು. ಪ್ರತಿಭೆ ಮತ್ತು ತಂತ್ರಜ್ಞಾನ (Talent and technology) ವಿಷಯ ಬಂದಾಗ ನನಗೆ ಮೊದಲು ನೆನಪಾಗುವ ಹೆಸರೇ ಬ್ರ್ಯಾಂಡ್‌ ಬೆಂಗಳೂರು ಎಂದರು ಪ್ರಧಾನಿ ಮೋದಿ.

ನಮ್ಮ ಬೆಂಗಳೂರಿಗೆ ಸ್ವಾಗತ ಎಂದೇ ಮಾತು ಆರಂಭಿಸಿದ ಪ್ರಧಾನಿ ಅವರು, ʻʻಕರ್ನಾಟಕವು ನಿನ್ನೆಯಷ್ಟೇ ರಾಜ್ಯೋತ್ಸವವನ್ನು ಆಚರಿಸಿದೆ. ಇಡೀ ದೇಶದ ಜನರನ್ನು ತಮ್ಮ ಜೀವನದ ಭಾಗವಾಗಿಸಿಕೊಂಡಿರುವ ಕರ್ನಾಟಕದ ಜನತೆಗೆ ಅಭಿನಂದನೆʼʼ ಎಂದು ಹೇಳಿದರು.

ಕರ್ನಾಟಕದ ಜನಜೀವನ, ತಾಂತ್ರಿಕ ಶಕ್ತಿ, ಔದ್ಯಮಿಕ ಬೆಳವಣಿಗೆಯ ವೇಗ ಮತ್ತು ಎಲ್ಲ ವಿಭಾಗಗಳಲ್ಲೂ ಸಾಧಿಸಿರುವ ಪ್ರಗತಿಯನ್ನು ಕೊಂಡಾಡಿದ ಮೋದಿ ಅವರು, ಇಲ್ಲಿ ಟ್ರೆಡಿಷನ್‌ ಮತ್ತು ಟೆಕ್ನಾಲಜಿ (ಸಂಪ್ರದಾಯ ಮತ್ತು ತಂತ್ರಜ್ಞಾನ) ಜತೆಗೂಡಿದೆ. ನೇಚರ್‌ ಮತ್ತು ಕಲ್ಚರ್‌ (ಪ್ರಕೃತಿ ಮತ್ತು ಸಂಸ್ಕೃತಿ)ಗಳ ಸಂಗಮವಾಗಿದೆ. ಒಂದು ಕಡೆ ಅದ್ಭುತ ಶಿಲ್ಪಕಲೆ (ಆರ್ಕಿಟೆಕ್ಚರ್‌) ಇದ್ದರೆ, ಇನ್ನೊಂದು ಕಡೆಯಲ್ಲಿ ಸ್ಟಾರ್ಟಪ್‌ ಇದೆ ಎಂದರು.

ಕನ್ನಡ ನಾಡು ಎನ್ನುವುದು ಅಪೂರ್ವ ಸೌಂದರ್ಯದ ನೆಲೆವೀಡು ಎಂದು ಬಣ್ಣಿಸಿದ ಅವರು, ಮೃದು ಭಾಷೆಯಾದ ಕನ್ನಡ, ಅತ್ಯಂತ ಸಮೃದ್ಧವಾದ ಇಲ್ಲಿನ ಸಂಸ್ಕೃತಿ, ಮತ್ತು ಜನರ ನಡವಳಿಕೆ ಎಲ್ಲರ ಮನ ಗೆಲ್ಲುತ್ತದೆ ಎಂದು ಹೇಳಿದರು. ಇಲ್ಲಿನ ಎಲ್ಲ ವ್ಯವಸ್ಥೆಗಳು ಒಂದು ಕಡೆಯಲ್ಲಿ ಸ್ಪರ್ಧಾತ್ಮಕ (ಕಾಂಪಿಟಿಟಿವ್‌) ಆಗಿದ್ದರೆ ಅದೇ ಹೊತ್ತಿಗೆ ಪರಸ್ಪರ ಸಹಕಾರಿ (ಕೋ-ಆಪರೇಟಿವ್‌) ಆಗಿವೆ ಎಂದು ಹೇಳಿದದು ಮೋದಿ.

ಡಬಲ್‌ ಎಂಜಿನ್‌ ಪವರ್‌
ಕರ್ನಾಟಕದ ಅಭಿವೃದ್ಧಿಗೆ ಇಷ್ಟೊಂದು ವೇಗ ಸಿಕ್ಕಿರುವುದಕ್ಕೆ ಕಾರಣ ಡಬಲ್‌ ಎಂಜಿನ್‌ ಪವರ್‌ ಎಂದು ಮೋದಿ ಉಲ್ಲೇಖಿಸಿದರು. ʻʻಕರ್ನಾಟಕದಲ್ಲಿ ಡಬಲ್‌ ಎಂಜಿನ್‌ ಪವರ್‌ ಇದೆ. ಎರಡೂ ಕಡೆ ಒಂದೇ ಪಕ್ಷದ ಸರಕಾರವಿದೆ. ಹೀಗಾಗಿ ಅಭಿವೃದ್ಧಿಗೆ ಪೂರಕವಾಗಿದೆʼʼ ಎಂದರು. ಈಸ್‌ ಆಫ್‌ ಡೂಯಿಂಗ್‌ ಬಿಸಿನೆಸ್‌ನಲ್ಲಿ ಕರ್ನಾಟಕ ದೇಶದಲ್ಲೇ ಉನ್ನತ ಶ್ರೇಣಿಯ ರಾಜ್ಯಗಳಲ್ಲಿ ಒಂದಾಗಿದೆ. ವಿದೇಶಿ ನೇರಹ ಹೂಡಿಕೆಯಲ್ಲೂ ಅತಿ ಹೆಚ್ಚು ಹೂಡಿಕೆ ಪಡೆಯುತ್ತಿರು ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಇದೆ. ದೇಶದಲ್ಲಿರುವ ೧೦೦ ಯುನಿಕಾರ್ನ್‌ಗಳಲ್ಲಿ ೪೦ ಕರ್ನಾಟಕದವು ಎಂದರು ಮೋದಿ.

ಸಿಂಟೆಕ್ಸ್‌ನಿಂದ ಸೆಮಿಕಂಡಕ್ಟರ್‌ವರೆಗೆ
ಕರ್ನಾಟಕದಲ್ಲಿ ಈಗ ಎಲ್ಲ ರೀತಿಯ ಉದ್ಯಮಗಳೂ ಇವೆ. ಸಿಂಟೆಕ್ಸ್‌ನಿಂದ ಸೆಮಿ ಕಂಡಕ್ಟರ್‌ವರೆಗೆ ಎಲ್ಲವನ್ನೂ ರೂಪಿಸಲಾಗುತ್ತಿದೆ. ಭಾರತ ಈಗ ನ್ಯಾಷನಲ್‌ ಸೆಮಿ ಕಂಡಕ್ಟರ್‌ ನೀತಿಯನ್ನು ಪ್ರಕಟಿಸಿದ್ದು ಇದರಲ್ಲಿ ಕರ್ನಾಟಕದ ಪಾತ್ರ ದೊಡ್ಡದು ಎಂದರು. ರಾಜ್ಯದಲ್ಲಿ ಸೆಮಿ ಕಂಡಕ್ಟರ್‌ ಉದ್ಯಮ ಸ್ಥಾಪನೆಯ ಸುಳಿವು ನೀಡಿದರು.

ಇನ್ವೆಸ್ಟ್‌ ಕರ್ನಾಟಕ ಉದ್ಘಾಟನೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಅವರು ಈ ಬೃಹತ್‌ ಸಮಾವೇಶವನ್ನು ಉದ್ಘಾಟಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಬೊಮ್ಮಾಯಿ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ,ಸಚಿವ ಅಶ್ವತ್ ನಾರಯಣ್‌, ಎಂಟಿಬಿ ನಾಗರಾಜ್,ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್,ಕೇಂದ್ರ ಸಚಿವ ಪಿಯೂಶ್ ಗೋಯಲ್, ರಾಜೀವ್ ಚಂದ್ರಶೇಖರ್, ರಾಜಮಾತೆ ಪ್ರಮೋದಾ ದೇವಿ‌ ಉಪಸ್ಥಿತರಿದ್ದರು.

ಇದನ್ನೂ ಓದಿ Invest Karnataka-2022 | ಹೂಡಿಕೆಗೆ ನಮ್ಮಲ್ಲೀಗ ಕೆಂಪು ಹಾಸು ಮಾತ್ರ, ಕೆಂಪು ಪಟ್ಟಿ ಇಲ್ಲ ಎಂದ ಪ್ರಧಾನಿ ಮೋದಿ

Exit mobile version