ಬೆಂಗಳೂರು: ದೇಶ, ದೇಶಾಂತರಗಳಲ್ಲಿ ಸದ್ದು ಮಾಡುತ್ತಿರುವ ರಿಷಬ್ ಶೆಟ್ಟಿ ನಿರ್ದೇಶನದ ʻಕಾಂತಾರʼ ಸಿನಿಮಾದ ಯಶಸ್ಸನ್ನು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಹಾಡಿ ಹೊಗಳಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಆರಂಭಗೊಂಡಿರುವ ಮೂರು ದಿನಗಳ ಇನ್ವೆಸ್ಟ್ ಕರ್ನಾಟಕ (Invest Karnataka 2022) ಸಮಾವೇಶದಲ್ಲಿ ಮಾತನಾಡಿದ ಅವರು ಕಾಂತಾರ ಸಿನಿಮಾ ಮತ್ತು ಬಿಸಿನೆಸ್ ಲಾಭದ ವ್ಯಾಖ್ಯಾನ ಮಾಡಿದರು.
ʻʻಭಾರತದ ಜನಪದ ಸಂಸ್ಕೃತಿಯನ್ನು ಬಿಂಬಿಸಿರುವ ಕಾಂತಾರ ಸಿನಿಮಾ ಕೇವಲ 8-10 ಕೋಟಿ ರೂ. ಬಂಡವಾಳ ಹೂಡಿ ತೆಗೆದ ಸಿನಿಮಾವಾದರೂ, 200 ಕೋಟಿ ರೂ.ಗೂ ಹೆಚ್ಚು ಗಳಿಸಿದೆ. ಇದು ಸೃಜನಶೀಲತೆಯ ಆವಿಷ್ಕಾರವಾಗಿದೆ. ಇಲ್ಲಿನವರು ಎಷ್ಟು ಪ್ರತಿಭಾವಂತರು ಎಂಬುದನ್ನು ಜಗತ್ತಿಗೆ ತೋರಿಸಿದೆʼʼ ಎಂದು ಪ್ರಶಂಸಿಸಿದರು. ಜತೆಗೆ ಔದ್ಯಮಿಕ ಹೂಡಿಕೆಯಲ್ಲೂ ಇಂಥಹುದೇ ಯಶಸ್ಸಿನ ಸೃಜನಶೀಲ ಸೂತ್ರಗಳ ಹುಡುಕಾಟ ಮಾಡಬೇಕಾಗಿದೆ ಎಂದರು.
ಕರ್ನಾಟಕ ಬುದ್ಧಿವಂತ ಹೂಡಿಕೆದಾರರ ತಾಣ
ಕರ್ನಾಟಕ ಬುದ್ಧಿವಂತ ಹೂಡಿಕೆದಾರರ ನೆಚ್ಚಿನ ತಾಣವಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ಗೋಯೆಲ್ ಬಣ್ಣಿಸಿದರು.
ಕರ್ನಾಟಕದಲ್ಲಿ ಯಾವುದೇ ಬಗೆಯ ಉದ್ದಿಮೆಯ ಸಮಗ್ರ ಬೆಳವಣಿಗೆಗೆ ವಿಫುಲ ಅವಕಾಶ ಇದೆ. ಲಾಜಿಸ್ಟಿಕ್ಸ್, ಮೂಲಸೌಕರ್ಯ, ಮಾಹಿತಿ ತಂತ್ರಜ್ಞಾನ, ರಿಟೇಲ್, ಉತ್ಪಾದನೆ, ಸ್ಟಾರ್ಟಪ್, ಇಂಟರ್ ನೆಟ್ ಆಫ್ ಥಿಂಗ್ಸ್, ಕೃತಕ ಬುದ್ಧಿಮತ್ತೆ ಹೀಗೆ ಎಲ್ಲ ಆಯಾಮಗಳಲ್ಲಿ ಕೂಡ ಹೂಡಿಕೆಗೆ ಕರ್ನಾಟಕ ಅತ್ಯಂತ ಪ್ರಶಸ್ತ ತಾಣವಾಗಿ ಹೊರಹೊಮ್ಮಿದೆ. ಹೀಗಾಗಿ ಬುದ್ಧಿವಂತ ಹೂಡಿಕೆದಾರರು ರಾಜ್ಯದಲ್ಲಿ ಹೂಡಿಕೆಯನ್ನು ಬಯಸುತ್ತಿದ್ದಾರೆ ಎಂದರು.