Site icon Vistara News

Invest Karnataka 2022 | Industry4.0 ಗೆ ಭಾರತ ಫುಲ್‌ ರೆಡಿ, ಯುವಜನತೆಗೆ ಭರ್ಜರಿ ಅವಕಾಶ ಎಂದ ಮೋದಿ

ಬೆಂಗಳೂರು: ನಾಲ್ಕನೇ ಕೈಗಾರಿಕಾ ಕ್ರಾಂತಿಗೆ (Industry4.0) ಭಾರತ ಸರ್ವ ರೀತಿಯಲ್ಲೂ ಸಜ್ಜಾಗಿದೆ. ಈ ಜಾಗತಿಕ ವಿದ್ಯಮಾನದಲ್ಲಿ ಭಾರತದ ಪಾತ್ರ ಅತ್ಯಂತ ಮಹತ್ವದಾಗಿದ್ದು, ಇದು ದೇಶದ ಯುವಜನತೆಗೆ ಅವಕಾಶಗಳ ಹೆಬ್ಬಾಗಿಲನ್ನೇ ತೆರೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಬುಧವಾರ ಆರಂಭಗೊಂಡ ಮೂರು ದಿನಗಳ ಇನ್ವೆಸ್ಟ್‌ ಕರ್ನಾಟಕ-೨೦೨೨ (invest karnataka 2022) ಕಾರ್ಯಕ್ರಮದಲ್ಲಿ ವರ್ಚ್ಯುವಲ್‌ ಆಗಿ ಭಾಗವಹಿಸಿ ಮಾತನಾಡಿದ ಮೋದಿ ಅವರು, ಇಂಡಸ್ಟ್ರಿ ೪.೦ಗೆ ಭಾರತ ಹೇಗೆ ಸಿದ್ಧಗೊಳ್ಳುತ್ತಿದೆ ಎಂದು ಎಳೆಎಳೆಯಾಗಿ ವಿವರಿಸಿದರು.

ಇಂಡಸ್ಟ್ರಿ ೪.೦ನಲ್ಲಿ ಯುವಜನರಿಗೆ ಅತ್ಯಧಿಕ ಅವಕಾಶ ಸಿಗಲಿದೆ. ೧೦೦ಕ್ಕೂ ಅಧಿಕ ಸ್ಟಾರ್ಟಪ್‌ಗಳು ಯುನಿಕಾರ್ನ್‌ಗಳಾಗಿವೆ. ೮೦೦೦೦ಕ್ಕೂ ಹೆಚ್ಚು ಸ್ಟಾರ್ಟಪ್‌ಗಳು ಕಾರ್ಯಾಚರಿಸುತ್ತಿವೆ. ಇದು ಯುವಕರಿಗೆ ಅತಿ ಹೆಚ್ಚು ಆವಕಾಶಗಳನ್ನು ಒದಗಿಸಿದೆ. ಜತೆಗೆ ಭಾರತದ ಯುವಕರ ಶಕ್ತಿಯನ್ನು ಹೆಚ್ಚಿಸಲು ಶಿಕ್ಷಣ ಕ್ಷೇತ್ರದಲ್ಲೂ ಭಾರಿ ಬದಲಾವಣೆ ಮಾಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಮುಕ್ತ ವ್ಯಾಪಾರದ ಮೂಲಕ ಸಿದ್ಧತೆ
ಕಳೆದ ಕೆಲವು ತಿಂಗಳಲ್ಲಿ ಹಲವು ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಾಗಿದೆ. ಜಾಗತಿಕವಾಗಿ ಹಲವು ದೇಶಗಳ ಜತೆಗೆ ಒಡಂಬಡಿಕೆ ಮಾಡಿಕೊಂಡಿರುವುದು ಇಂಡಸ್ಟ್ರಿ ೪.೦ಗೆ ನಮ್ಮ ಸಿದ್ಧತೆಯನ್ನು ತೋರಿಸಿದೆ. ಇದನ್ನು ಜಗತ್ತು ಗಮನಿಸಿದೆ ಎಂದರು.

ಮೂಲಭೂತ ಸೌಕರ್ಯ ವರ್ಧನೆ
ಒಂದು ಕಡೆ ಬಾಹ್ಯವಾಗಿ ಈ ರೀತಿ ಸಿದ್ಧತೆಗಳನ್ನು ನಡೆಸುತ್ತಿದ್ದರೆ ದೇಶದಲ್ಲಿ ಆಂತರಿಕವಾಗಿಯೂ ದೊಡ್ಡ ಮಟ್ಟದಲ್ಲಿ ವ್ಯವಸ್ಥೆಗಳು ನಡೆಯುತ್ತಿವೆ. ಪಿಎಂ ಗತಿಶಕ್ತಿ ಯೋಜನೆಯಡಿ ಮೂಲಭೂತ ಸೌಲಭ್ಯವನ್ನು ಹೆಚ್ಚಿಸಲಾಗಿದೆ. ಇಲ್ಲಿ ಮೂಲಭೂತ ಸೌಕರ್ಯ ವ್ಯವಸ್ಥೆಯನ್ನು ಮೂರು ಆಯಾಮಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ. ಒಂದು ಅಭಿವೃದ್ಧಿ ಮೂಲಸೌಕರ್ಯ, ಎರಡನೆಯದು ಒಂದಕ್ಕೊಂದು ಪೂರಕವಾಗಿರುವ ಹೊಂದಾಣಿಕೆಯ ಮೂಲ ಸೌಕರ್ಯ, ಮೂರನೆಯದು ವಿಶ್ವ ದರ್ಜೆಯ ಮೂಲ ಸೌಕರ್ಯ ಎಂದು ಅವರು ವಿವರಿಸಿದರು. ದೇಶದಲ್ಲಿ ಲಾಜಿಸ್ಟಿಕ್ಸ್‌ ವ್ಯವಸ್ಥೆಗಾಗಿಯೇ ಹೊಸ ನಿಯಮ ರೂಪಿಸಿದ್ದನ್ನು ನೆನಪಿಸಿದರು.

ಇದನ್ನೂ ಓದಿ | Invest Karnataka 2022 | ಉದ್ಯೋಗ ಸೃಷ್ಟಿಯಲ್ಲಿ ಮುಂಚೂಣಿಯಲ್ಲಿ ಕರ್ನಾಟಕ: ಕೇಂದ್ರ ವಿತ್ತ ಸಚಿವೆ ನಿರ್ಮಲಾ

ಯಾವುದೆಲ್ಲ ಬದಲಾವಣೆ?
ಹೂಡಿಕೆ ಮತ್ತು ಮಾನವ ಸಂಪನ್ಮೂಲದ ಅಭಿವೃದ್ಧಿಯನ್ನು ಜತೆಜತೆಯಾಗಿ ನಡೆಸಲು ನಾವು ಬದ್ಧರಾಗಿದ್ದೇವೆ. ಆರೋಗ್ಯ ಮತ್ತು ಶಿಕ್ಷಣದ ಮೇಲೂ ನಾವು ಗಮನ ಹರಿಸಿದ್ದೇವೆ. ಒಂದು ಕಡೆ ನಮ್ಮಲ್ಲಿ ಎಫ್‌ಡಿಐ ಹೆಚ್ಚಾಗುತ್ತಿದೆ, ಆಸ್ಪತ್ರೆಗಳನ್ನೂ ಹೆಚ್ಚಿಸುತ್ತಿದ್ದೇವೆ. ವೆಲ್‌ನೆಸ್‌ ಸೆಂಟರ್‌ಗಳನ್ನು ಹೆಚ್ಚಿಸಿದ್ದೇವೆ ಎಂದರು.

ಮೆಟ್ರೋ ರೈಲುಗಳ ಸಂಚಾರ ಐದರಿಂದ ೨೦ಕ್ಕೇರಿದೆ. ಒಂದು ಕಡೆ ಹೆದ್ದಾರಿಗಳನ್ನೂ ನಿರ್ಮನಿಸುತ್ತಿದ್ದೇವೆ, ಇನ್ನೊಂದು ಕಡೆ ಸಾರ್ವಜನಿಕರಿಗೆ ಶೌಚಾಲಯ ಮತ್ತು ನೀರಿನ ವ್ಯವಸ್ಥೆ ಮಾಡಿದ್ದೇವೆ. ಒಂದು ಕಡೆದ ಮೆಟ್ರೋ ಸಂಪರ್ಕಗಳು ಹೆಚ್ಚಿದ್ದರೆ, ಇನ್ನೊಂದು ಕಡೆ ಸ್ಮಾರ್ಟ್‌ ಸ್ಕೂಲ್‌ಗಳನ್ನೂ ಸಜ್ಜುಗೊಳಿಸಿದ್ದೇವೆ ಎಂದರು.

ಭಾರತ ಈಗ ಔಷಧ ಮತ್ತು ಲಸಿಕೆ ಪೂರೈಕೆಯಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಿದೆ. ಭಾರತದ ಅರ್ಥ ವ್ಯವಸ್ಥೆ ತುಂಬ ಬಲಶಾಲಿಯಾಗುತ್ತಿದೆ ಎಂದು ಅವರು ಹೇಳಿದರು.

ಕೆಂಪು ಪಟ್ಟಿಯಿಂದ ಕೆಂಪು ಹಾಸಿನವರೆಗೆ
ದೇಶದಲ್ಲಿ ಈಗ ಔದ್ಯಮಿಕ ಕ್ಷೇತ್ರದ ಹೂಡಿಕೆಗೆ ಸಂಬಂಧಿಸಿ ಕೆಂಪು ಪಟ್ಟಿ ಎಂಬ ಮಾತೇ ಇಲ್ಲ. ನಾವು ಕೆಂಪು ಹಾಸನ್ನು ಹಾಸಿದ್ದೇವೆ. ದೇಶವನ್ನು ನಾನಾ ಆಯಾಮಗಳಲ್ಲಿ ಹೂಡಿಕೆಗೆ ಸಜ್ಜುಗೊಳಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಔದ್ಯಮಿಕ ಅಭಿವೃದ್ಧಿಗೆ ಇರುವ ಎಲ್ಲ ಅಡೆತಡೆಗಳನ್ನು ನಿವಾರಿಸಿದ್ದೇವೆ ಎಂದು ಹೇಳಿದರು.

ಹೂಡಿಕೆಯ ಹಾದಿಗೆ ಕಾಯಕಲ್ಪ
ʻʻದೇಶವನ್ನು ನಾವು ಹೂಡಿಕೆಗಾಗಿ ಸಿದ್ಧಗೊಳಿಸಿದ್ದೇವೆ. ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಗಟ್ಟಿಗೊಳಿಸಿದ್ದೇವೆ, ಡಿಜಿಟಲ್‌ ಕ್ರಾಂತಿಗೆ ವ್ಯವಸ್ಥೆ ಮಾಡಿದ್ದೇವೆ. ೧೫ಕ್ಕೂ ಅಧಿಕ ಅನಗತ್ಯ ಕಾನೂನುಗಳನ್ನು ರದ್ದುಗೊಳಿಸಿದ್ದೇವೆ. ಕಾರ್ಪೊರೇಟ್‌ ತೆರಿಗೆಯನ್ನು ಕಡಿಮೆ ಮಾಡಿದೆವು. ಪಾರದರ್ಶಕತೆಯನ್ನು ಹೆಚ್ಚಿಸಿದೆವು, ಹೊಸ ಹೊಸ ಸೆಕ್ಟರ್‌ಗಳನ್ನು ತೆರೆದೆವು. ಮೂಲ ಸೌಕರ್ಯ ಕ್ಷೇತ್ರದಲ್ಲಿ ಸಾಕಷ್ಟು ವ್ಯವಸ್ಥೆ ಮಾಡಿದೆವು. ಈ ಮೂಲಕ ಹೂಡಿಕೆಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಸಜ್ಜುಗೊಳಿಸಿದ್ದೇವೆʼʼ ಎಂದು ಮೋದಿ ಹೇಳಿದರು.

೮೪ ಬಿಲಿಯನ್‌ ಡಾಲರ್‌ ನೇರ ವಿದೇಶಿ ಹೂಡಿಕೆ
ʻʻ೨೧ನೇ ಶತಮಾನದಲ್ಲಿ ದೇಶದ ಅಭಿವೃದ್ಧಿಯ ಗತಿಯೇ ಬದಲಾಗಿದೆ. ನಾವು ಶರವೇಗದಲ್ಲಿ ಮುಂದಕ್ಕೆ ಸಾಗುತ್ತಲೇ ಇದ್ದೇವೆ. ಕಳೆದ ವರ್ಷ ದೇಶದಲ್ಲಿ ೮೪ ಬಿಲಿಯನ್‌ ಡಾಲರ್‌ ನೇರ ವಿದೇಶಿ ಹೂಡಿಕೆ ಆಗಿದೆ. ಇದೊಂದು ದಾಖಲೆ. ಇಡೀ ವಿಶ್ವವೇ ಹಲವು ಸಂಕಷ್ಟಗಳಲ್ಲಿ ಬಳಲುತ್ತಿದ್ದರೆ ಭಾರತ ಭದ್ರವಾಗಿದೆʼʼ ಎಂದು ಮೋದಿ ಹೆಮ್ಮೆಯಿಂದ ಹೇಳಿದರು.

ʻʻಕೋವಿಡ್‌, ಯುದ್ಧದಲ್ಲಿ ಇಡೀ ವಿಶ್ವ ಸಿಕ್ಕಿಬಿದ್ದಿದೆ. ಎಲ್ಲ ಕಡೆ ಹಲವಾರು ರೀತಿಯ ಅತಂತ್ರ ಸ್ಥಿತಿ ಇದೆ. ಭಾರತದಲ್ಲೂ ಯುದ್ಧ, ಕೊರೊನಾದ ಪ್ರಭಾವ ಇತ್ತು. ಇಷ್ಟಿದ್ದರೂ ನಾವು ಎಲ್ಲವನ್ನೂ ಮೆಟ್ಟಿನಿಲ್ಲಲು ಶಕ್ತರಾದೆವು. ಹೀಗಾಗಿ ಇಡೀ ಜಗತ್ತು ನಮ್ಮ ಕಡೆಗೆ ಆಸೆ ಕಣ್ಣುಗಳಿಂದ ನೋಡುತ್ತಿದೆ. ಇದಕ್ಕೆಲ್ಲ ಕಾರಣ ಭಾರತೀಯ ಅರ್ಥ ವ್ಯವಸ್ಥೆ ಮೂಲ ನೆಲೆಗಟ್ಟು ಗಟ್ಟಿಯಾಗಿದೆ ಎಂದು ಜಗತ್ತಿಗೆ ಗೊತ್ತಿದೆ. ಜಗತ್ತಿನೊಂದಿಗೆ ಸೇರಿಕೊಂಡು ಮತ್ತು ಜಗತ್ತಿನ ಅಭಿವೃದ್ಧಿಗಾಗಿ ಶ್ರಮಿಸುವವರು ನಾವು ಎನ್ನುವುದು ಎಲ್ಲರಿಗೂ ಅರ್ಥವಾಗಿದೆʼʼ ಎಂದು ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಓದಿ Invest Karnataka 2022 | ಓ ಮೈ ಗಾಡ್‌, ಕಾಂತಾರ ಯಶಸ್ಸು ಅದ್ಭುತ ಎಂದು ಹಾಡಿ ಹೊಗಳಿದ ಸಚಿವ ಪಿಯೂಷ್‌ ಗೋಯೆಲ್

Exit mobile version