Site icon Vistara News

Invest Karnataka 2022 | ಹೂಡಿಕೆ ಒಪ್ಪಂದದ ಯೋಜನೆಗಳಿಗೆ 3 ತಿಂಗಳೊಳಗೆ ಅನುಮತಿ ಎಂದ ಸಿಎಂ

Invest Karnataka CM

ಬೆಂಗಳೂರು: ಇನ್ವೆಸ್ಟ್ ಕರ್ನಾಟಕ 2022ರ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಸಹಿ ಹಾಕಲಾಗಿರುವ ಎಲ್ಲ ಬಂಡವಾಳ ಹೂಡಿಕೆಯ ಒಪ್ಪಂದಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಯೋಜನೆಗಳು ವಾಸ್ತವದಲ್ಲಿ ಕಾರ್ಯಗತಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ಎಲ್ಲ ಅನುಮತಿಗಳನ್ನು ಹಾಗೂ ಸಹಕಾರವನ್ನು ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಬೆಂಗಳೂರಿನ ಅರಮನೆ ಮೈದಾನದ ಆವರಣದಲ್ಲಿ ಇನ್ವೆಸ್ಟ್ ಕರ್ನಾಟಕ ʻಬಿಲ್ಡ್ ಫಾರ್ ದ ವರ್ಲ್ಡ್-2022ʼ (Invest karnataka 2022) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಕೈಗಾರಿಕಾ ಸ್ನೇಹಿ ವಾತಾವರಣವನ್ನು ಸರ್ಕಾರ ನಿರ್ಮಿಸಲಿದೆ. ದಕ್ಷ ಹಾಗೂ ಉತ್ತಮ ಗುಣಮಟ್ಟದ ಉತ್ಪಾದಕತೆ ರಾಜ್ಯದಲ್ಲಿ ಆಗಬೇಕಿದೆ. ಆರ್ಥಿಕತೆಯಲ್ಲಿ ಪರಿಣಾಮ ಮಾತ್ರ ಮಹತ್ವದ ಪಾತ್ರ ವಹಿಸುತ್ತದೆ. ಈ ಬಂಡವಾಳಗಳು ವಾಸ್ತವವಾಗಿ ಬದಲಾಯಿಸುವುದೇ ಸರ್ಕಾರದ ಮುಂದಿನ ಗುರಿಯಾಗಿದೆ. ಈಗ ಕಾಗದದ ಮೇಲಿರುವ ಬಂಡವಾಳ, ವಾಸ್ತವವಾಗಬೇಕು. 2.80 ಲಕ್ಷ ಕೋಟಿಗೂ ಹೆಚ್ಚಿನ ಬಂಡವಾಳ ಯೋಜನೆಗಳಿಗೆ ಈಗಾಗಲೇ ಅನುಮೋದನೆಯನ್ನು ಸರ್ಕಾರ ನೀಡಿದೆ. ಮುಂದಿನ ಮೂರು ತಿಂಗಳೊಳಗೆ ಮುಂದಿನ ಬಂಡವಾಳ ಹೂಡಿಕೆಯ ಯೋಜನೆಗಳ ಬಗ್ಗೆ ಸರ್ಕಾರ ಅನುಮೋದನೆ ನೀಡಲು ಕ್ರಮ ಕೈಗೊಳ್ಳಲಿದೆ. ರಾಜ್ಯ ಸರ್ಕಾರ ಬಂಡವಾಳ ಹೂಡಿಕೆಯ ಬಗ್ಗೆ ಬಹಳ ಗಂಭೀರವಾಗಿದ್ದು, ಹೂಡಿಕೆದಾರರೂ ಸಹ ಇದೇ ಗಂಭೀರತೆಯನ್ನು ಹೊಂದಬೇಕಾಗುತ್ತದೆ ಎಂದರು.

ರಾಜ್ಯದ ಕೈಗಾರಿಕೆಗಳು ವಿಶ್ವ ಮಟ್ಟಕ್ಕೆ ಬೆಳೆಯಬೇಕು
ಕರ್ನಾಟಕ ಏರೋಸ್ಪೇಸ್, ಬಯೋಟೆಕ್, ನವೀಕರಿಸಬಹುದಾದ ಇಂಧನ ಸೇರಿದಂತೆ ಹಲವು ರಂಗಗಳಲ್ಲಿ ಮುಂಚೂಣಿಯಲ್ಲಿದೆ. ರಾಜ್ಯ ಸ್ಟಾರ್ಟಪ್‌ ಹಾಗೂ ಯೂನಿಕಾರ್ನ್ ಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಭಾರತದ ಸುಮಾರು 105 ಯೂನಿಕಾರ್ನ್ ಗಳಲ್ಲಿ ಸುಮಾರು 35 ಯೂನಿಕಾರ್ನ್‌ಗಳು ಕರ್ನಾಟಕದಲ್ಲಿವೆ. ದೇಶದ 4 ಡೆಕಾಕಾರ್ನ್‌ಗಳಲ್ಲಿ 3 ಕರ್ನಾಟಕಲ್ಲಿದೆ. ಉತ್ಪಾದನಾ ವಲಯ, ಸೇವಾ ವಲಯ, ಐಟಿಬಿಟಿ ವಲಯ, ಸ್ಟಾರ್ಟ್ ಅಪ್ ವಲಯದಲ್ಲಿ ಕರ್ನಾಟಕ ಬಲಿಷ್ಠವಾಗಿದೆ. ಕರ್ನಾಟಕದಲ್ಲಿ ಈಗಾಗಲೇ ಸ್ಥಾಪಿತವಾಗಿರುವ ಪ್ರತಿಷ್ಠಿತ ಕೈಗಾರಿಕೆಗಳು ರಾಜ್ಯದಲ್ಲಿಯೇ ಇನ್ನಷ್ಟು ವಿಸ್ತರಣೆಯಾಗುತ್ತಿವೆ. ವಿಶ್ವ ಮಟ್ಟಕ್ಕೆ ಕರ್ನಾಟಕದಲ್ಲಿ ಕೈಗಾರಿಕೆಗಳು ಬೆಳೆಯಬೇಕು ಹಾಗೂ ವಿಶ್ವದ ಅಭಿವೃದ್ಧಿಯ ಸಂಕಲ್ಪವನ್ನು ಒಟ್ಟಾಗಿ ಕೈಗೊಳ್ಳೊಣ ಎಂದರು.

ವಿಶ್ವಮಟ್ಟದ ಸಂಶೋಧನಾ ಕೇಂದ್ರಗಳು
ಸಂಶೋಧನೆಗಳಿಗಾಗಿ ಆರ್ ಎಂಡ್ ಡಿ ನೀತಿಯನ್ನು ತಂದ ಮೊದಲ ರಾಜ್ಯ ಕರ್ನಾಟಕ. ಸಣ್ಣ ಗ್ಯಾರೇಜ್‌ನಿಂದ ಹಿಡಿದು ದೊಡ್ಡ ಸಂಸ್ಥೆಯವರೆಗೆ ಸಂಶೋಧನೆಗೆ ಒತ್ತು ನೀಡಲಾಗುವುದು. ಐಐಟಿ, ಐಐಎಂ, ಐಐಎಸ್ಸಿ, ಡಿಆರ್‌ಡಿಒ ಸೇರಿದಂತೆ ಪ್ರಮುಖ ಸಂಸ್ಥೆಗಳು ರಾಜ್ಯದಲ್ಲಿವೆ. 400 ಅಂತಾರಾಷ್ಟ್ರೀಯ ಗುಣಮಟ್ಟದ ಸಂಶೋಧನಾ ಕೇಂದ್ರಗಳು ಬೆಂಗಳೂರಿನಲ್ಲಿವೆ. ಪ್ರಪಂಚದಾದ್ಯಂತ ಸುಮಾರು 10 ಸಾವಿರ ಎಂಜಿನಿಯರ್‌ಗಳು ಬೆಂಗಳೂರಿನಲ್ಲಿ ಸ್ಥಾಪಿತವಾಗಿರುವ ಕಂಪನಿಗಳಲ್ಲಿ ಸಂಶೋಧನಾ ಕಾರ್ಯ ಕೈಗೊಂಡಿದ್ದಾರೆ. ಜಿನೋಮ್ಯಾಟಿಕ್ಸ್ ನಿಂದ ಏರೋಸ್ಪೇಸ್ ವಲಯದಲ್ಲಿ ಸಂಶೋಧನೆಗಳು ನಡೆಯುತ್ತವೆ. ಕೇವಲ ಕರ್ನಾಟಕ, ಭಾರತ, ವಿಶ್ವವಲ್ಲದೇ, ಇಡೀ ಮಾನವ ಕುಲದ ಅಭಿವೃದ್ಧಿಯೇ ಕರ್ನಾಟಕದಲ್ಲಾಗುತ್ತದೆ. ಕೇಂದ್ರ ನೀತಿ ಆಯೋಗದ ಸೂಚ್ಯಂಕದಂತೆ ಆವಿಷ್ಕಾರದಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.

7 ಲಕ್ಷ ಕೋಟಿ ಬಂಡವಾಳ ಹೂಡಿಕೆ
ಕೋವಿಡ್ ನಂತರ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಆಯೋಜಿಸಿರುವ ಮೊದಲ ರಾಜ್ಯ ಕರ್ನಾಟಕ. 7 ಲಕ್ಷ ಕೋಟಿಗಿಂತ ಹೆಚ್ಚು ಬಂಡವಾಳ ಹರಿದುಬರಲು ಕರ್ನಾಟಕ ಶಕ್ತಿ, ಪರಂಪರೆ ಮತ್ತು ಕೈಗಾರಿಕಾ ಸ್ನೇಹಿ ವಾತಾವರಣದಿಂದ ಸಾಧ್ಯವಾಗಿದೆ. ಮೊದಲು ನಮ್ಮ ಮೇಲೆ ನಮಗೆ ವಿಶ್ವಾಸವಿರಬೇಕು. ನಮ್ಮ ಶಕ್ತಿ, ಸಾಮರ್ಥ್ಯದ ಮೇಲೆ ನಮಗೆ ವಿಶ್ವಾಸವಿರಬೇಕು. ಕರ್ನಾಟಕದಲ್ಲಿ ಕೋವಿಡ್ ತಂದೊಡ್ಡಿದ ಸವಾಲುಗಳನ್ನು ಅವಕಾಶಗಳನ್ನಾಗಿ ಮಾಡಿಕೊಳ್ಳಲಾಯಿತು. ಕೋವಿಡ್ ನ್ನು ಸಮರ್ಥವಾಗಿ ನಿರ್ವಹಿಸುವುದರ ಜೊತೆಗೆ ಕೋವಿಡ್ ನಂತರದ ಕರ್ನಾಟಕದ ಅಭಿವೃದ್ಧಿಗಾಗಿ ಸಜ್ಜುಗೊಂಡಿತು. ಕೋವಿಡ್ ನಂತರ ಪ್ರಪಂಚದ ಆರ್ಥಿಕತೆಯ ಸನ್ನವೇಶಗಳು ಬದಲಾಗುತ್ತಿದ್ದು, ಈ ಬದಲಾವಣೆಗೆ ಕರ್ನಾಟಕ ಸಿದ್ಧಗೊಂಡಿತ್ತು. ಆರ್ಥಿಕತೆಯ ಚೇತರಿಕೆಯಲ್ಲಿ ದೇಶದಲ್ಲಿ ಮುಂಚೂಣಿಯಲ್ಲಿದ್ದ ರಾಜ್ಯ ಕರ್ನಾಟಕ. ರಾಜ್ಯವೇ ಸ್ವತ: ಈ ಕಾರ್ಯಕ್ಕೆ ಮುಂದಾಯಿತು. ರಾಜ್ಯವೇ ಬದಲಾವಣೆಗೆ ನಾಯಕತ್ವ ವಹಿಸಿ ಇಡೀ ದೇಶಕ್ಕೆ ಉತ್ತಮ ಉದಾಹರಣೆಯಾಯಿತು ಎಂದರು.

ಹೆಚ್ಚಿನ ಉದ್ಯೋಗಾವಕಾಶಗಳನ್ನು ನೀಡುವ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ
ಕರ್ನಾಟಕದಲ್ಲಿ ಉದ್ಯೋಗ ನೀತಿಯೂ ಇದೆ. ಕರ್ನಾಟಕದ ಜನ ಶ್ರೀಮಂತರಾಗುವ ಮೂಲಕ ರಾಜ್ಯ ಶ್ರೀಮಂತವಾಗಬೇಕು. ಇದು ಪರಿಶ್ರಮ ಹಾಗೂ ಉದ್ಯೋಗಾವಕಾಶಗಳಿಂದ ಮಾತ್ರ ಸಾಧ್ಯ. ಈ ಸದುದ್ದೇಶದಿಂದ ಕರ್ನಾಟದಲ್ಲಿ ಉದ್ಯೋಗ ನೀತಿಯನ್ನು ಜಾರಿಗೆ ತರಲಾಗಿದೆ. ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗಳಿಗೆ ಎಲ್ಲ ರೀತಿಯ ಪ್ರೋತ್ಸಾಹಗಳನ್ನು ನೀಡಲಾಗುವುದು.ಹೆಚ್ಚಿನ ಉದ್ಯೋಗಾವಕಾಶಗಳನ್ನು ನೀಡುವ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹಗಳನ್ನು ನೀಡಲಾಗುವುದು ಎಂದು ಸಿಎಂ ತಿಳಿಸಿದರು.

ಸಮಾರಂಭದಲ್ಲಿ ರಾಜ್ಯಪಾಲರಾದ ಥಾವರ್ ಚಂದ ಗೆಲ್ಹೊತ್, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಲ್ಹಾದ್ ಜೋಶಿ, ರಾಜೀವ್ ಚಂದ್ರಶೇಖರ್, ಪಿಯೂಷ್ ಗೋಯಲ್, ಸಚಿವರಾದ ಡಾ. ಅಶ್ವತ್ಥ್ ನಾರಾಯಣ, ಮುರುಗೇಶ್ ನಿರಾಣಿ, ಎಂಟಿಬಿ ನಾಗರಾಜ್, ಮೈಸೂರು ರಾಜ ವಂಶಸ್ಥರಾದ ರಾಣಿ ಪ್ರಮೋದಾದೇವಿ, ಉದ್ಯಮಿಗಳಾದ ಸಜ್ಜನ್ ಜಿಂದಾಲ್ , ವಿಕ್ರಮ ಕಿರ್ಲೊಸ್ಕರ್, ರಿಷಬ್ ಪ್ರೇಮ್ ಜಿ , ಪ್ರತಿಕ್ ಅಗರವಾಲ್, ರಾಜನ್ ಮಿತ್ತಲ್, ಕರಣ್ ಅದಾನಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಹಾಗೂ ಮತ್ತಿತರರು ಹಾಜರಿದ್ದರು.

ಇದನ್ನೂ ಓದಿ | Invest Karnataka 2022 | ಬ್ರ್ಯಾಂಡ್‌ ಬೆಂಗಳೂರು ಈಗ ಜಾಗತಿಕ ಬ್ರ್ಯಾಂಡ್‌ ಎಂದು ಹಾಡಿ ಹೊಗಳಿದ ಮೋದಿ

Exit mobile version