ಬೆಂಗಳೂರು: ʻʻಜಾಗತಿಕ ಉದ್ದಿಮೆಗಳಿಗೆ ಬೆಂಗಳೂರೇ ಗಮ್ಯವಾಗಿದೆ. ಎಲ್ಲಾ ಜಾಗತಿಕ ಉದ್ದಿಮೆಗಳ ಹಾದಿಗಳು ಬೆಂಗಳೂರಿಗೆ ಬಂದು ಸೇರುತ್ತಿವೆ. ನವೆಂಬರ್ ೨ರಿಂದ ಪ್ರಾರಂಭವಾಗುವ ಮೂರು ದಿನಗಳ ಇನ್ವೆಸ್ಟ್ ಕರ್ನಾಟಕ (Invest Karnataka) ಸಮ್ಮೇಳನ ಅತ್ಯಂತ ಯಶಸ್ವಿಯಾಗಲಿದೆʼʼ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರಿನ ಅರಮನೆ ಮೈದಾನದ ಆವರಣದಲ್ಲಿ ನಡೆಯಲಿರುವ ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆಗಳ ಪರಿಶೀಲನೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮುಂದಿನ 5 ವರ್ಷಗಳ ಬೆಳವಣಿಗೆಗೆ ಭದ್ರ ಬುನಾದಿ
ʻʻಇನ್ವೆಸ್ಟ್ ಕರ್ನಾಟಕ ಇಡೀ ಜಗತ್ತಿನ ಗಮನವನ್ನು ಸೆಳೆಯಲಿದೆ. ಕರ್ನಾಟಕದಲ್ಲಿ ಒಳ್ಳೆಯ ವಾತಾವರಣ ಇದೆ. ಮುಂದಿನ 5 ವರ್ಷಗಳ ಬೆಳವಣಿಗೆಗೆ ಒಂದು ಭದ್ರ ಬುನಾದಿಯನ್ನು ಹಾಕಲಿದೆ. ಇದೊಂದು ಬಹಳ ಮಹತ್ವದ ಸಮ್ಮೇಳನ. ಎಲ್ಲಾ ಜಾಗತಿಕ ಹಾಗೂ ದೇಶದ ಎಲ್ಲ ಬಂಡವಾಳ ಹೂಡಿಕೆದಾರರಿಗೆ, ಶಿಕ್ಷಣ ಸಂಸ್ಥೆಗಳು, ತಂತ್ರಜ್ಞಾನ ಹಾಗೂ ಐ.ಟಿ ಬಿಟಿ ಪರಿಣಿತರು, ಸ್ಟಾರ್ಟಪ್‌ಗಳು, ಹಾಗೂ ಯುವ ಎಂಜಿನಿಯರ್‌ಗಳು, ತಂತ್ರಜ್ಞರು ಇದರಲ್ಲಿ ಭಾಗವಹಿಸುವಂತೆ ವಿನಂತಿಸುತ್ತೇನೆʼʼ ಎಂದು ಬೊಮ್ಮಾಯಿ ಹೇಳಿದರು.
ಕರ್ನಾಟಕ ಹಾಗೂ ಹೂಡಿಕೆದಾರರ ಬದ್ಧತೆ
ʻʻಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮದಲ್ಲಿ ೫ ಲಕ್ಷ ಕೋಟಿಗಿಂತ ಹೆಚ್ಚಿನ ಬಂಡವಾಳ ಹೂಡಿಕೆ ನಿರೀಕ್ಷೆ ಇದೆ. ಈ ಪೈಕಿ ಈಗಾಗಲೇ 2.8. ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ರಾಜ್ಯ ಉನ್ನತ ಮಟ್ಟದ ಸಮಿತಿಯಲ್ಲಿ ಅನುಮೋದನೆ ನೀಡಲಾಗಿದೆ. ಇದು ನಮ್ಮ ರಾಜ್ಯದ ಹಾಗೂ ಹೂಡಿಕೆದಾರರ ಬದ್ಧತೆ. ಸಮಾವೇಶದಲ್ಲಿ ಅವರಿಗೆ ಹೂಡಿಕೆಯ ಪ್ರಮಾಣ ಪತ್ರ ನೀಡುತ್ತಿದ್ದು, ಹೊಸದಾಗಿ ಬಂಡವಾಳ ಹೂಡಿಕೆದಾರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತೇವೆʼʼ ಎಂದು ಬೊಮ್ಮಾಯಿ ತಿಳಿಸಿದರು.
ಬಿಯಾಂಡ್ ಬೆಂಗಳೂರು ಕನಸು ನನಸು
ʻʻಬೆಂಗಳೂರಿನಾಚೆ ಹೂಡಿಕೆಗೆ ಬಹಳಷ್ಟು ಹೂಡಿಕೆದಾರರು ಆಸಕ್ತಿ ತೋರಿದ್ದು, ರಾಮನಗರ, ಹುಬ್ಬಳ್ಳಿ- ಧಾರವಾಡ, ಬಳ್ಳಾರಿ, ಕಲಬುರ್ಗಿ, ಮೈಸೂರು ಎಲ್ಲ ಕಡೆ ಕೈಗಾರಿಕೆಗಳು ಬರುತ್ತಿವೆ. ಪ್ರಾದೇಶಿಕ ಅಡೆತಡೆಗಳನ್ನು ದಾಟಿ ಇಂದು ಕೈಗಾರಿಕೆಗಳು ಬರುತ್ತಿವೆ. ಬಿಯಾಂಡ್ ಬೆಂಗಳೂರು ಕನಸು ನನಸಾಗುತ್ತಿದೆ. ಸಮಗ್ರ ಕರ್ನಾಟಕದಲ್ಲಿ ಸಮಗ್ರ ಕೈಗಾರಿಕಾ ಅಭಿವೃದ್ಧಿಯನ್ನು ಕೈಗೊಳ್ಳಲಾಗಿದೆʼʼ ಎಂದು ಬೊಮ್ಮಾಯಿ ವಿವರಿಸಿದರು.
ಅ. 28ರಂದು ಹುಬ್ಬಳ್ಳಿಯಲ್ಲಿ ಎಫ್ಎಂಸಿಜಿ ಕ್ಲಸ್ಟರ್ ಉದ್ಘಾಟಿಸಿದ್ದು, ಧಾರವಾಡದಲ್ಲೂ ಹೊಸ ಕ್ಲಸ್ಟರ್ ಬರಲಿದೆ. ಸುಮಾರು 10 ಸಾವಿರ ಕೋಟಿ ರೂ. ಹೂಡಿಕೆಯಾಗಿ ಒಂದು ಲಕ್ಷ ಜನರಿಗೆ ಉದ್ಯೋಗ ನೀಡುವ ಅವಕಾಶವಿದೆ. ಕಲಬುರ್ಗಿ, ಬಿಜಾಪುರ, ರಾಯಚೂರು ಜಿಲ್ಲೆಗಳಲ್ಲಿ ಜವಳಿ ಪಾರ್ಕ್ , ಯಾದಗಿರಿಯಲ್ಲಿ ಫಾರ್ಮಾ ಪಾರ್ಕ್, ಮೈಸೂರಿನಲ್ಲಿ ಎಲೆಕ್ಟ್ರಾನಿಕ್ , ತುಮಕೂರಿನಲ್ಲಿ ರಕ್ಷಣಾ ಉತ್ಪಾದನೆ ಘಟಕ ಬರಲಿವೆ ಎಂದರು.
ಮುಂಚೂಣಿಯಲ್ಲಿ ಕರ್ನಾಟಕ
ಇಡೀ ದೇಶದಲ್ಲೇ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಉದ್ಯಮ ಪರ ಇಕೋ ಸಿಸ್ಟಮ್ ಇದೆ. ಚೀನಾ ದೇಶದಲ್ಲಿ ಇರುವಂಥ ವಾತಾವರಣ ಇದೆ. ದ್ವಿತೀಯ ವಲಯದ ಉತ್ಪಾದನೆಯಲ್ಲಿ ಕರ್ನಾಟಕ ದೊಡ್ಡ ಮಟ್ಟದ ಸಾಧನೆ ಮಾಡಿದೆ. ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಇಂಧನ ವಲಯ, ಕಬ್ಬಿಣ ಮತ್ತು ಉಕ್ಕು ಹೀಗೆ ಎಲ್ಲಾ ವಲಯಗಳಲ್ಲಿ ಕರ್ನಾಟಕ ಮುಂದಿದೆ ಎಂದು ಬೊಮ್ಮಾಯಿ ತಿಳಿಸಿದರು.
ಕೃತಕ ಬುದ್ಧಿಮತ್ತೆಯಲ್ಲೂ ರಾಜ್ಯ ಮುಂದೆ
ʻʻಎಲೆಕ್ಟ್ರಾನಿಕ್, ಕೃತಕ ಬುದ್ಧಿಮತ್ತೆ ವಿಚಾರದಲ್ಲೂ ರಾಜ್ಯ ಮುಂಚೂಣಿಯಲ್ಲಿದೆ. ಐಟಿ ಬಿಟಿಯಲ್ಲಿ ಕಳೆದ ಎರಡು ದಶಕಗಳಿಂದ ನಾವು ಸಾಕಷ್ಟು ಮುಂದಿದ್ದೇವೆ. ದೇಶದ ಶೇ. 4೦ರಷ್ಟು ಐಟಿ ಬಿಟಿ ವಲಯದ ರಪ್ತು ಕರ್ನಾಟಕದಿಂದ ಆಗುತ್ತಿದೆ. ಅತಿ ಹೆಚ್ಚು ಐಟಿ ಬಿಟಿ ಉದ್ಯೋಗ ಸೃಷ್ಟಿಯಾಗಿರುವುದು ಕರ್ನಾಟಕದಲ್ಲಿ. ದೊಡ್ಡ ಪ್ರಮಾಣದ ಹೂಡಿಕೆ ಕರ್ನಾಟಕದಲ್ಲಿ ಆಗುತ್ತಿದೆ. ಈಸ್ ಆಫ್ ಡೂಯಿಂಗ್ ಬಿಸಿನೆಸ್, ಕೈಗಾರಿಕಾ ನೀತಿಗಳಿಂದಾಗಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆಗಳನ್ನು ಆಕರ್ಷಿಸಲು ಸಾಧ್ಯವಾಗಿದೆ. ವಿದೇಶಿ ಬಂಡವಾಳದ ಪ್ರಮುಖವಾದ ಮಾನದಂಡ. ಕಳೆದ 4 ತ್ರೈಮಾಸಿಕಗಳಿಂದ ಕರ್ನಾಟಕಕ್ಕೆ ಶೇ. 38ರಷ್ಟು ವಿದೇಶಿ ನೇರ ಬಂಡವಾಳದ ಹರಿದು ಬರುತ್ತಿದೆ. ಅದು ಮುಂದುವರೆಯುತ್ತಿದೆ. ಕಳೆದ 3 ವರ್ಷಗಳಿಂದ ನಾವೀನ್ಯತಾ ಸೂಚ್ಯಂಕದಲ್ಲಿ ರಾಜ್ಯ ನಂಬರ್ ಒನ್ ಸ್ಥಾನದಲ್ಲಿದೆʼʼ ಎಂದು ವಿವರಿಸಿದರು.
ಇದನ್ನೂ ಓದಿ Invest Karnataka 2022 | ಆರು ಲಕ್ಷ ಕೋಟಿ ರೂ. ಹೂಡಿಕೆ ನಿರೀಕ್ಷೆ