Site icon Vistara News

87ನೇ ಕನ್ನಡ ಸಾಹಿತ್ಯ ಸಮ್ಮೇಳನ: ಅರ್ಥಪೂರ್ಣ ಧ್ಯೇಯವಾಕ್ಯ, ಲಾಂಛನ ರಚಿಸಿಕೊಡಿ!

Kannada Sahitya Parishat

ಬೆಂಗಳೂರು: ಮಂಡ್ಯದಲ್ಲಿ ಇದೇ ಡಿಸೆಂಬರ್‌ನಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಲಾಂಛನ ಹಾಗೂ ಧ್ಯೇಯವಾಕ್ಯ ರಚಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತನ್ನು ಜನ ಸಾಮಾನ್ಯರ ಪರಿಷತ್ತಾಗಿಸುವ ನಿಟ್ಟಿಲ್ಲಿ ಸಾರ್ವಜನಿಕರು ಉತ್ಸಾಹದಿಂದ ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವುದು ಇದರ ಉದ್ದೇಶವಾಗಿದೆ. ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಸಾರ್ವಜನಿಕರ ಸಹಕಾರ ಹಾಗೂ ಸಹಯೋಗದೊಂದಿಗೆ ಅಭೂತಪೂರ್ವ ಯಶಸ್ಸು ಕಂಡಿದೆ. ಆದರೂ ಕೆಲವು ಅಚಾತುರ್ಯಗಳು ನಡೆದಿರುವುದು ಕಂಡು ಬಂದಿದೆ. 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಯಾವುದೇ ಅಚಾತುರ್ಯಕ್ಕೆ ಅವಕಾಶ ನೀಡಬಾರದು ಎನ್ನುವ ಆಶಯದೊಂದಿಗೆ ಸಿದ್ಧತೆಗಳನ್ನು ಆರಂಭಿಸಲಾಗುತ್ತಿದೆ. ಮಂಡ್ಯದಲ್ಲಿ ನಡೆಯಲಿರುವ ಸಮ್ಮೇಳನವು ಸಮಸ್ತ ಕನ್ನಡಿಗರ ಅಕ್ಷರ ಪರಂಪರೆಯ ಹಬ್ಬವಾಗಬೇಕು. ಪ್ರತಿಯೊಬ್ಬ ಕನ್ನಡಿಗನೂ ಈ ನುಡಿ ಜಾತ್ರೆಯ ಭಾಗವಾಗಬೇಕು ಎನ್ನುವುದು ಕನ್ನಡ ಸಾಹಿತ್ಯ ಪರಿಷತ್ತಿನ ಆಶಯವಾಗಿದೆ ಎಂದು ಮಹೇಶ ಜೋಶಿ ಹೇಳಿದರು.

ಮಂಡ್ಯದ ಸಾಹಿತ್ಯ ಸಮ್ಮೇಳನದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಬೇಕು, ಕನ್ನಡಿಗರೇ ಮುಂದೆ ನಿಂತು ನಡೆಸಿಕೊಡಬೇಕಾದ ಸಮ್ಮೇಳನ ಇದಾಗಬೇಕು ಎನ್ನುವುದು ಕನ್ನಡ ಸಾಹಿತ್ಯ ಪರಿಷತ್ತಿನ ಧ್ಯೇಯವಾಗಿದೆ. ಅದಕ್ಕಾಗಿ ಮಂಡ್ಯದಲ್ಲಿ ನಡೆಯುವ ನುಡಿಜಾತ್ರೆಗೆ ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ, ಕಲೆ ಬಿಂಬಿಸುವುದರೊಂದಿಗೆ ಮಂಡ್ಯದ ಜಿಲ್ಲೆಯ ಮಹತ್ವವನ್ನು ಸಾರುವ ಲಾಂಛನ ಮತ್ತು ಅರ್ಥಪೂರ್ಣ ಧ್ಯೇಯವಾಕ್ಯವನ್ನು ಸಿದ್ಧಪಡಿಸವ ಅವಕಾಶವನ್ನು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ.

87ನೆಯ ಅಕ್ಷರ ಜಾತ್ರೆಯನ್ನು ಕೇವಲ ಕನ್ನಡ ಸಾಹಿತ್ಯ ಪರಿಷತ್ತು ಅಥವಾ ಸರ್ಕಾರ ಮಾತ್ರ ನಡೆಸುವ ಬದಲು, ಇದು ಪ್ರತಿಯೊಬ್ಬ ಕನ್ನಡಿಗರು, ಕನ್ನಡ ನಾಡಿನ ಸಂಘ ಸಂಸ್ಥೆಗಳು ಸೇರಿದಂತೆ ಎಲ್ಲರೂ ಆಚರಿಸುವ ಕನ್ನಡದ ಹಬ್ಬವಾಗಬೇಕಿದೆ. ಹೀಗಾಗಿ ಕನ್ನಡದ ಮನಸ್ಸನ್ನು ಹೊಂದಿರುವ ಎಲ್ಲರನ್ನು ಈ ಕನ್ನಡದ ಹಬ್ಬಕ್ಕಾಗಿ ತೊಡಗಿಸಿಕೊಳ್ಳಲು ನಿರ್ಧಾರ ಮಾಡಲಾಗಿದೆ. ಅದರ ಮೊದಲ ಹಂತವಾಗಿ ಸಾಹಿತ್ಯ ಸಮ್ಮೇಳನಕ್ಕಾಗಿ ಅರ್ಥಪೂರ್ಣವಾದ ಮತ್ತು ಕಲಾತ್ಮಕವಾದ ಲಾಂಛನ ಹಾಗೂ ಧ್ಯೇಯವಾಕ್ಯವನ್ನು ರಚಿಸಿ ಮೇ 31ರೊಳಗಾಗಿ ʻಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು 560018ʼ ಇವರಿಗೆ ಕಳಿಸಲು ಕೋರಲಾಗಿದೆ.

ನಾಡು, ನುಡಿ, ಪರಂಪರೆ, ಸಾಹಿತ್ಯ, ಕಲೆ, ಸಂಸ್ಕೃತಿ, ಸಾಧನೆಗಳು, ನೆಲ, ಮೂಲಗಳನ್ನು ಸಾರುವ ಮತ್ತು ಇತಿಹಾಸವನ್ನು ಬಿಂಬಿಸಬಲ್ಲ ಅರ್ಥಪೂರ್ಣವಾಗಿ ಕಲಾವಂತಿಕೆಯಿಂದ ಸಿದ್ಧಪಡಿಸಲಾದ ಲಾಂಛನ ಹಾಗೂ ಧ್ಯೇಯವಾಕ್ಯವನ್ನು ಸಮ್ಮೇಳನದ ಅಧಿಕೃತ ಲಾಂಛನ ಹಾಗೂ ಧ್ಯೇಯವಾಕ್ಯವಾಗಿ ಬಳಸಲಾಗುವುದು. ಜೊತೆಗೆ ಅದನ್ನು ರಚಿಸಿದವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಮ್ಮೇಳನದಲ್ಲಿ ಗೌರವ ಸಲ್ಲಿಸಲಾಗುವುದು ಎಂದು ಜೋಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Kannada Sahitya Parishat: ಕಸಾಪದಿಂದ ಡಾ. ಎಚ್‌.ವಿಶ್ವನಾಥ್‌, ಇಂದಿರಾ ದತ್ತಿ ಪ್ರಶಸ್ತಿಗಾಗಿ ಪುಸ್ತಕಗಳ ಆಹ್ವಾನ; ಫೆ. 28 ಕೊನೆಯ ದಿನ

Exit mobile version