ಬೆಂಗಳೂರು: ಕಳಪೆ ರಸ್ತೆಗಳು, ಇನ್ನಿತರ ಮೂಲಸೌಕರ್ಯ ಸಮಸ್ಯೆಯಿಂದ ಬಳಲಿರುವ ಬೆಂಗಳೂರಿನ ಉದ್ಯಮಿಗಳು ಹಾಗೂ ಐಟಿ ಕಂಪನಿಗಳು ತೆಲಂಗಾಣಕ್ಕೆ ಬರಬೇಕು, ನಾವು ಉತ್ತಮ ಮೂಲಸೌಕರ್ಯ ಹೊಂದಿದ್ದೇವೆ ಎಂದು ಈ ಹಿಂದೆ ಟ್ವೀಟ್ ಮಾಡಿದ್ದ ತೆಲಂಗಾಣ ಸಚಿವ ಕಲ್ವಕುಂಟ್ಲ ತಾರಕ ರಾಮಾರಾವ್(ಕೆಟಿಆರ್)ಗೆ ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.
ಮಳೆಹಾನಿ, ಪ್ರವಾಹ ಸ್ಥಿತಿಯಿಂದ ಬ್ರ್ಯಾಂಡ್ ಬೆಂಗಳೂರು ಹೆಸರಿಗೆ ಧಕ್ಕೆಯಾಗಿದೆ ಎಂದು ಕಾಂಗ್ರೆಸ್ ನಾಯಕರು ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಿದಾಗ ಮಾತನಾಡಿದ ಅವರು, ಬ್ರ್ಯಾಂಡ್ ಬೆಂಗಳೂರು ಆಗಲು ಬಸ್ ಡ್ರೈವರ್‌ನಿಂದ ಹಿಡಿದು ಎಲ್ಲರ ಕಾಣಿಕೆಯೂ ಇದೆ. ತೆಲಂಗಾಣ ಸಚಿವ ಇಲ್ಲಿನ ಉದ್ಯಮಿಗಳನ್ನು ಹೈದರಾಬಾದ್‌ಗೆ ಬರಲು ಆಹ್ವಾನ ನೀಡಿದ್ದಾರೆ, ಅವರು ತಲೆ ಕೆಟ್ಟು ಹಾಗೆ ಹೇಳಿರಬಹುದು. ಹೈದರಾಬಾದ್ ಸೇರಿ ತೆಲಂಗಾಣದ ವಿವಿಧ ಭಾಗಗಳಿಂದ ಬೆಂಗಳೂರಿಗೆ ಬರುವವರು ಹಲವರು ಇದ್ದಾರೆ, ಆದರೆ ಬೆಂಗಳೂರಿಂದ ತೆಲಂಗಾಣಕ್ಕೆ ಹೋಗುವವರು ಯಾರು ಇಲ್ಲ ಎಂದು ಕೆಟಿಆರ್ ಟ್ವೀಟ್ ಬಗ್ಗೆ ಕಿಡಿ ಕಾರಿದರು.
ಇದನ್ನೂ ಓದಿ | ಪಂಚಮಸಾಲಿ 2ಎ ಮೀಸಲಾತಿಗಾಗಿ ಶಿಗ್ಗಾಂವಿ ಸಿಎಂ ಮನೆ ಮುಂದೆ ಸೆ.20ರಂದು ಧರಣಿ: ಬಸವ ಜಯಮೃತ್ಯುಂಜಯ ಸ್ವಾಮೀಜಿ
ಈ ವೇಳೆ ಅಭಿವೃದ್ಧಿ ಬಗ್ಗೆ ಮಾತನಾಡಿ ಎಂದರೆ ಕೆಟಿಆರ್ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ಶಾಸಕ ಕೃಷ್ಣಭೈರೇಗೌಡ ಆಕ್ಷೇಪ ವ್ಯಕ್ತಪಡಿಸಿದಾಗ ಪ್ರತಿಕ್ರಿಯಿಸಿದ ಅಶೋಕ್, ಅಧ್ಯಕ್ಷರೇ ಐದು ದಿನಗಳ ಕಾಲ ಕಾಂಗ್ರೆಸ್‌ನವರು ಸರ್ಕಾರದ ನಡೆ ಟೀಕೆ ಮಾಡಿದ್ದಾರೆ. ಅದನ್ನು ನಾವು ಕೇಳಿಸಿಕೊಂಡಿದ್ದೇವೆ. ಬೆಂಗಳೂರು ಅವ್ಯವಸ್ಥೆ ಯಾರ ಕರ್ಮದ ಫಲ, ನಾವು ಒಂಬತ್ತು ವರ್ಷ ಬಿಟ್ಟರೆ 75 ವರ್ಷಗಳ ಕಾಲ ಕಾಂಗ್ರೆಸ್ ಆಡಳಿತ ಮಾಡಿದೆ. ಅವರೇ ಬೆಂಗಳೂರಿನ ಇಂದಿನ ಮಳೆ ಅವ್ಯವಸ್ಥೆಗೆ ಪ್ರಮುಖ ಕಾರಣ ಎಂದು ಟೀಕಿಸಿದರು.
ಇಲ್ಲಿಂದ ಯಾರೂ ಹೋಗುವುದಿಲ್ಲ ಎಂದ ಸಿಎಂ
ಬೆಂಗಳೂರಿನ ಅಭಿವೃದ್ಧಿಗೆ ಐಟಿ ಕಂಪನಿಯವರೂ ಕೊಡುಗೆ ಕೊಟ್ಟಿದ್ದಾರೆ, ಐಟಿ ಬೆಳವಣಿಗೆಗೆ ಕರ್ನಾಟಕದ ಜನರ ಕೊಡುಗೆ ಕೂಡ ಅಷ್ಟೇ ಇದೆ. ಕರ್ನಾಟಕದಿಂದ ಐಟಿ ಉದ್ಯಮವನ್ನು ಅಷ್ಟು ಸುಲಭವಾಗಿ ಇಲ್ಲಿಂದ ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ. ಇಲ್ಲಿಂದ ಯಾರೂ ಹೋಗುವುದಿಲ್ಲ, ಅವರನ್ನು ಉಳಿಸಿಕೊಳ್ಳುವುದೂ ನಮ್ಮ ಜವಾಬ್ದಾರಿ ಎಂದರು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರು ಅತಿವೃಷ್ಟಿ ಬಗ್ಗೆ ಅಧಿವೇಶನದಲ್ಲಿ ಮಾತನಾಡಿದ ಅವರು, ರಾಜಧಾನಿ ಅಭಿವೃದ್ಧಿಗೆ ಮೈಸೂರು ಮಹಾರಾಜರು, ಕೇಂದ್ರ ಸರ್ಕಾರದ ವಿವಿಧ ಸಂಸ್ಥೆಗಳು ಹಾಗೂ ಸ್ಥಳೀಯ ಜನರ ಕೊಡುಗೆ ಇದೆ. ಮಳೆಹಾನಿಯಿಂದ ಬ್ರ್ಯಾಂಡ್ ಬೆಂಗಳೂರು ಹೆಸರಿಗೆ ಯಾವುದೇ ಧಕ್ಕೆಯಾಗುವುದಿಲ್ಲ. ಬೆಂಗಳೂರಿನಲ್ಲಿ ಇರುವ ಹೆಚ್ಚಿನ ಐಟಿ ಕಂಪನಿಗಳು ಸ್ವಂತ ಸ್ವಂತ ಕಟ್ಟಡ ಹೊಂದಿಲ್ಲ. ಹೀಗಾಗಿ ರಾಜಕಾಲುವೆ, ಕೆರೆಗಳನ್ನು ಒತ್ತುವರಿ ಮಾಡಿರುವ ವಿರುದ್ಧ ಕ್ರಮ ಜರುಗಿಸಿ, ಅತಿಕ್ರಮಣ ಆಗಿರುವುದನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದರು.
ಇದನ್ನೂ ಓದಿ | 40 Percent | ಬಿಜೆಪಿ ಸರ್ಕಾರದಿಂದ ವಿಧಾನಸೌಧ ವ್ಯಾಪಾರ ಸೌಧವಾಗಿದೆ; ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ