ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು(ಸೋಮವಾರ) ನಡೆಯುವ ಆರ್‌ಸಿಬಿ(Royal Challengers Bangalore) ಮತ್ತು ಲಕ್ನೋ ಸೂಪರ್ಜೈಂಟ್ಸ್(Lucknow Super Giants) ವಿರುದ್ಧದ ಹೈ ವೋಲ್ಟೇಜ್ ಪಂದ್ಯ ನೋಡಲು ಅಭಿಮಾನಿಗಳು ವಿವಿದೆಡೆಯಿಂದ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಜೆ 4 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ವಾಹನ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ.
ಆರ್‌ಸಿಬಿ ಸೋಮವಾರ ರಾತ್ರಿ ತವರಿನ ಅಂಗಳದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮಹತ್ವದ ಪಂದ್ಯವಾಡಲಿದೆ. ಲಕ್ನೋ ನಾಯಕ ಕೆ.ಎಲ್. ರಾಹುಲ್ ಅವರಿಗೆ ಇದು “ತವರು ಪಂದ್ಯ” ಈ ಹಿನ್ನೆಲೆಯಲ್ಲಿ ಪಂದ್ಯಕ್ಕೆ ರಾಜ್ಯಾದ್ಯಂತ ಹೆಚ್ಚಿನ ಕ್ರೀಡಾಭಿಮಾನಿಗಳು ಪಂದ್ಯ ವೀಕ್ಷಣೆಗೆ ಆಗಮಿಸಲಿದ್ದಾರೆ. ಆದ್ದರಿಂದ ಪಂದ್ಯ ವೀಕ್ಷಣೆಗೆ ಬರುವ ಅಭಿಮಾನಿಗಳು ಮೈದಾನದೊಳಗೆ ಹೋಗಲು ಅನುಕೂಲ ಆಗುವಂತೆ ವಾಹನ ಸಂಚಾರ ಮಾರ್ಗವನ್ನು ಬದಲಿಸಿ ಬೆಂಗಳೂರು ಸಂಚಾರಿ ಪೊಲೀಸರು ಆದೇಶಿದ್ದಾರೆ.
ಸಂಜೆ 4 ರಿಂದ ರಾತ್ರಿ 10ರವರೆಗೆ ನಿರ್ಬಂಧ
ಈ ರಸೆಯಲ್ಲಿ ಪಂದ್ಯ ನೋಡಲು ವಿವಿದೆಡೆಯಿಂದ ಜನರು ಬರುವುದರಿಂದ ಸಾರ್ವಜನಿಕರ ಸಾಮಾನ್ಯ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಲಿದೆ. ಆದ್ದರಿಂದ ಚಿನ್ನಸ್ವಾಮಿ ಮೈದಾನದ ಸುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಬದಲಿ ಮಾರ್ಗದಲ್ಲಿ ಸಂಚಾರ ಮಾಡಲು ಅನುಕೂಲ ಮಾಡಲಾಗಿದೆ. ಮಾರ್ಗ ಬದಲಾವಣೆಯು ಸಂಜೆ 4 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಇರಲಿದೆ. ಪಂದ್ಯ ಮುಕ್ತಾಯದ ನಂತರ ಎಂದಿನಂತೆ ಎಲ್ಲ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ಮುಕ್ತ ಅವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ IPL Fake Tickets: ನಕಲಿ ಟಿಕೆಟ್ ದಂಧೆ ಬಯಲು; ಬ್ಲ್ಯಾಕ್‌ನಲ್ಲಿ ಐಪಿಎಲ್ ಟಿಕೆಟ್ ಖರೀದಿಸುವವರೇ ಎಚ್ಚರ
ಈ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ
ಕ್ವೀನ್ಸ್ ರೋಡ್, ಎಂಜಿ ರೋಡ್ನಿಂದ ಕಬ್ಬನ್ ರೋಡ್, ಎಂ.ಜಿ ರೋಡ್, ರಾಜಭವನ ರಸ್ತೆ, ಸೆಂಟ್ರಲ್ ಸ್ಟ್ರೀಟ್ ರೋಡ್, ಕಬ್ಬನ್ ರೋಡ್, ಸೆಂಟ್ ಮಾರ್ಕ್ಸ್ ರೋಡ್, ಮ್ಯೂಸಿಯಂ ರೋಡ್, ಕಸ್ತುರ ಬಾ ರಸ್ತೆ, ಅಂಬೇಡ್ಕರ್ ವೀದಿ ರಸ್ತೆ, ಟ್ರಿನಿಟಿ ಸರ್ಕಲ್, ಲ್ಯಾವೆಲ್ಲೆ ರೋಡ್, ವಿಠಲ್ ಮಲ್ಯ ರೋಡ್, ನೃತತುಂಗ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಈ ರಸ್ತೆಗಳಲ್ಲಿ ಸಂಚಾರ ಮಾಡುವ ಎಲ್ಲ ವಾಹನ ಸವಾರರು ಪಂದ್ಯ ನಡೆಯುವ ವೇಳೆ ಬದಲಿ ಮಾರ್ಗಗಳಲ್ಲಿ ಸಂಚಾರಿಸ ಬೇಕು ಎಂದು ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ತಿಳಿಸಿದೆ.
ಇದನ್ನೂ ಓದಿ IPL 2023 : ಟಿ20 ಮಾದರಿಯಲ್ಲಿ ನಾಲ್ಕನೇ ಹ್ಯಾಟ್ರಿಕ್ ವಿಕೆಟ್ ವಿಶ್ವ ದಾಖಲೆ ಸೃಷ್ಟಿಸಿದ ರಶೀದ್ ಖಾನ್
ಪಾರ್ಕಿಂಗ್‌ಗೆ ವ್ಯವಸ್ಥೆ
ಚಿನ್ನಸ್ವಾಮಿ ಮೈದಾನದ ಸುತ್ತಲಿನ ಪ್ರದೇಶಗಳಲ್ಲಿ ವಾಹನ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಕಿಂಗ್ಸ್ ರಸ್ತೆ, ಬಿಆರ್ಬಿ ಮೈದಾನ, ಕಂಠೀರವ ಕ್ರೀಡಾಂಗಣ, ಯುಬಿ ಸಿಟಿ, ಶಿವಾಜಿನಗರ ಬಿಎಂಟಿಸಿ ಬಸ್ ನಿಲ್ದಾಣದ ಮೊದಲ ಮಹಡಿ, ಹಳೆಯ ಕೆಜಿಯುಡಿ ಕಟ್ಟಡ ಸಮೀಪ ವಾಹನಗಳನ್ನು ಪಾರ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಬೇರೆಡೆ ವಾಹನ ನಿಲುಗಡೆಯನ್ನು ಸಂಪೂರ್ಣ ನಿಷೇಧ ಮಾಡಲಾಗಿದೆ. ಒಂದೊಮ್ಮೆ ಸಂಚಾರಿ ನಿಯಮವನ್ನು ಉಲ್ಲಂಘಿಸಿ ಬೇರೆ ಕಡೆ ವಾಹನ ಪಾರ್ಕಿಂಗ್ ಮಾಡಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಂಚಾರ ಪೊಲೀಸ್ ಇಲಾಖೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.