ರಾಯಚೂರು: ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ (ಕೆಒಎಫ್) ನೇಮಕಾತಿ ಪರೀಕ್ಷೆಯಲ್ಲಿ ಗೋಲ್ ಮಾಲ್ ನಡೆದ ಆರೋಪ ಕೇಳಿಬಂದಿದೆ. ನಗರದ ವೇದಾಂತ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯ (KOF Raichur) ಕೊನೆಯ 15 ನಿಮಿಷದಲ್ಲಿ 5 ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದಕ್ಕೆ ಉಳಿದ ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಿಬ್ಬಂದಿ ಹಾಗೂ ಅಭ್ಯರ್ಥಿಗಳ ನಡುವೆ ವಾಗ್ವಾದ ನಡೆಯಿತು.
ಪರೀಕ್ಷೆಯ ಕಡೆಯ 15 ನಿಮಿಷಗಳಲ್ಲಿ ಬಂದ ಐವರು, ಒಎಂಆರ್ ಶೀಟ್‌ನಲ್ಲಿ 200 ಪ್ರಶ್ನೆಗಳ ಪೈಕಿ ಕೇವಲ 5 ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಉಳಿದ ಪ್ರಶ್ನೆಗಳಿಗೆ ಒಳಗೊಳಗೆ ಉತ್ತರವನ್ನು ಹೇಳಿಕೊಟ್ಟು ಬರೆಸುವ ಯತ್ನ ಮಾಡಲಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ಆ ಐದು ಅಭ್ಯರ್ಥಿಗಳು ಘಟನಾ ಸ್ಥಳದಿಂದ ಓಡಿಹೋಗಿದ್ದಾರೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.
ಓಡಿ ಹೋದ ಅಭ್ಯರ್ಥಿಗಳನ್ನು ಮರಳಿ ಕರೆಸಿ ಒಎಂಆರ್ ಶೀಟ್ ಪರಿಶೀಲಿಸುವಂತೆ ಅಭ್ಯರ್ತಿಗಳು ಆಗ್ರಹಿಸಿದ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಇದನ್ನೂ ಓದಿ | Fire Accident : ಹೋಟೆಲ್‌ನಲ್ಲಿ ಸ್ಟೀಮರ್ ಸ್ಫೋಟ; ಮೂವರು ಕಾರ್ಮಿಕರಿಗೆ ಗಾಯ
ಪರೀಕ್ಷೆ ರದ್ದು ಪಡಿಸಲು ಒತ್ತಾಯ
ಪರೀಕ್ಷಾರ್ಥಿ ಎಂ.ವಿರೂಪಾಕ್ಷಿ ಪ್ರತಿಕ್ರಿಯಿಸಿ, ಪಿಎಸ್‌ಐ ಪರೀಕ್ಷಾ ಅಕ್ರಮದ ರೀತಿ ಇದೊಂದು ದೊಡ್ಡ ಗೋಲ್ ಮಾಲ್ ಆಗಿದೆ. ಕೆಒಎಫ್ ಮಾರ್ಚ್‌ನಲ್ಲಿ ನೋಟಿಫಿಕೇಶನ್ ಹೊರಡಿಸಲಾಗಿತ್ತು. ಆ ಪ್ರಕಾರ ವೇದಾಂತ ಕಾಲೇಜ್‌ನಲ್ಲಿ ಪರೀಕ್ಷೆ ನಡೆಯಿತು. ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದನ್ನು ಕಣ್ಣಾರೆ ಕಂಡಿದ್ದೇವೆ. ಪರೀಕ್ಷೆಯ ಕೊನೆಯ 15 ನಿಮಿಷ ಇರುವಾಗ ಪರೀಕ್ಷೆ ಬರೆಯಲು ಬಿಟ್ಟಿದ್ದಾರೆ. 200 ಅಂಕದ ಪರೀಕ್ಷೆಯಲ್ಲಿ 5 ಪ್ರಶ್ನೆಗೆ ಉತ್ತರಿಸಿದ್ದಾರೆ. ಆ ಐವರನ್ನು ಬೇರೆ ರೂಮ್‌ನಿಂದ ಪರೀಕ್ಷಾ ಕೊಠಡಿಗೆ ಕರೆ ತಂದಿದ್ದಾರೆ. ಆ ಮೇಲೆ ಅಭ್ಯರ್ಥಿಗಳು ಓಡಿ ಹೋಗಿದ್ದಾರೆ. ಹೀಗಾಗಿ ಕೂಡಲೇ ಪರೀಕ್ಷೆ ರದ್ದು ಪಡಿಸಲಿ ಎಂದು ಒತ್ತಾಯಿಸಿದರು.
ಮತ್ತೊಬ್ಬ ಪರೀಕ್ಷಾರ್ಥಿ ಶಿವಬಸವ ಮಾತನಾಡಿ, ರೂಮ್ ನಂಬರ್ 3ರಲ್ಲಿ ಐದು ಜನರನ್ನು ರೂಮ್ ಬದಲಿಸಿ ಪರೀಕ್ಷೆ ಬರೆಸಿದ್ದಾರೆ. 200 ಮಾರ್ಕ್ಸ್ ಪರೀಕ್ಷೆ 150 ಮಾರ್ಕ್ಸ್ ಟಿಕ್ ಮಾಡಬೇಕು. ಆದರೆ, ಅವರು ಹೆಸರು ಬರೆದು 5 ಮಾರ್ಕ್ಸ್ ಟಿಕ್ ಮಾಡಿದ್ದಾರೆ. ಕ್ಯಾಂಡಿಡೇಟ್ ಎಕ್ಸಾಮ್ ಬರದು ಪೇಪರ್ ಕೊಟ್ಟು ಹೋಗ್ತಾರೆ. ಯುನಿವರ್ಸಿಟಿಗೆ ಸಬ್ಮಿಟ್ ಮಾಡಲು ಸಾಯಂಕಾಲದವರೆಗೂ ಟೈಮ್ ಇರುತ್ತದೆ. ಆ ವೇಳೆ ಪೇಪರ್ ತಿದ್ದಿ ಕಳುಹಿಸುತ್ತಾರೆ. ಇದರಿಂದ ಕಷ್ಟಪಟ್ಟು ಓದಿದ ಬಡ ಮಕ್ಕಳಿಗೆ ಅನ್ಯಾಯವಾಗುತ್ತದೆ. ಇದರ ಬಗ್ಗೆ ಕೇಳಿದರೆ ಯಾರು ಕೂಡ ಮಾತನಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ | Murder Attempt: JDS ನಾಯಕನ ಹತ್ಯೆ ತಡೆದಿದ್ದು ಒಬ್ಬ ಪೊಲೀಸ್ ಕಾನ್‌ಸ್ಟೆಬಲ್! ದುಷ್ಕರ್ಮಿಗಳನ್ನು ಬೆನ್ನಟ್ಟಿ ಹಿಡಿದ ಸಾಹಸಿ!
ವಿವಿ ಬಳಿ ವಿವರಣೆ ಕೇಳುತ್ತೇವೆ ಎಂದ ಕೆಒಎಪ್ ಎಂಡಿ
ಕೆಒಎಪ್ ಎಂಡಿ ನಿಂಗಪ್ಪ ಪ್ರತಿಕ್ರಿಯಿಸಿ, 16 ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ನಡೆಸಲಾಗಿದೆ. ಪಾರದರ್ಶಕವಾಗಿ ಪರೀಕ್ಷೆ ನಡೆಸಲು ತೀರ್ಮಾನ ಮಾಡಿದ್ದೆವು. ಪರೀಕ್ಷೆ ನಡೆಸಲು ರಾಯಚೂರು ವಿಶ್ವವಿದ್ಯಾಲಯಕ್ಕೆ ಜವಾಬ್ದಾರಿ ಕೊಟ್ಟಿದ್ದೆವು. ಈ ಘಟನೆ ನಡೆದಿರುವುದು ದುರಾದೃಷ್ಟವೋ ಗೊತ್ತಿಲ್ಲ. ಏನೇ ಇದ್ದರೂ ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಕೆಮಿಸ್ಟ್ ಪೇಪರ್ ಅನ್ನು ಈಗಲೇ ರದ್ದುಪಡಿಸುತ್ತೇವೆ. ಇನ್ನೊಂದು ಬಾರಿ ಕೆಮಿಸ್ಟ್ ಪೋಸ್ಟ್ ನೇಮಕಾತಿ ಕರೆಯಲು ಸಿದ್ಧರಿದ್ದೇವೆ. ಅಕ್ರಮದ ಬಗ್ಗೆ ವಿವಿ ಬಳಿ ವಿವರಣೆ ಕೇಳುತ್ತೇವೆ. ಅಭ್ಯರ್ಥಿಗಳು ದಾಖಲೆಗಳೊಂದಿಗೆ ದೂರು ಕೊಡಲಿ. ಯೂನಿವರ್ಸಿಟಿ ಬಳಿ ಸಿಸಿಟಿವಿ ಫೂಟೇಜ್ ಕೇಳುತ್ತೇವೆ. ವಿವಿಗೆ ಪರೀಕ್ಷಾ ಜವಾಬ್ದಾರಿ ಕೊಟ್ಟರೆ ಏನೇ ಆದರೂ ಅವರೇ ಹೊಣೆ. ಏನೇ ಸಮಸ್ಯೆ ಬಂದರೂ ಅವರೇ ಕ್ಲಿಯರ್ ಮಾಡಬೇಕು ಎಂದು ತಿಳಿಸಿದರು.