Site icon Vistara News

Teachers Recruitment: ಶಿಕ್ಷಕರ ನೇಮಕಾತಿಯಲ್ಲೂ ಅಕ್ರಮದ ವಾಸನೆ‌?

appointment of teachers

ಕಲಬುರಗಿ: ಕೆಇಎ ಪರೀಕ್ಷಾ ಅಕ್ರಮ ಪ್ರಕರಣ ಬಳಿಕ‌ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. ಅಂತಿಮ‌ ಆಯ್ಕೆ‌ ಪಟ್ಟಿಯಲ್ಲಿ ಹೆಸರು ಇದ್ದರೂ ಕೌನ್ಸಲಿಂಗ್‌ಗೆ ಶಿಕ್ಷಣ ಇಲಾಖೆ ಕರೆಯದ ಹಿನ್ನೆಲೆಯಲ್ಲಿ ಶಿಕ್ಷಕರ ನೇಮಕಾತಿಯಲ್ಲೂ ಅಕ್ರಮ (Teachers Recruitment) ನಡೆದಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಅಧಿಕ ಪರ್ಸೆಂಟೇಜ್‌ ಇದ್ದವರನ್ನು ಬಿಟ್ಟು ಮೆರಿಟ್‌ ಲಿಸ್ಟ್‌ನಲ್ಲಿ ಕೊನೆಯಲ್ಲಿ ಇದ್ದವರನ್ನು ಪದವೀಧರ ಪ್ರಾಥಮಿಕ‌ ಶಿಕ್ಷಕ ನೇಮಕಾತಿ ಕೌನ್ಸೆಲಿಂಗ್‌ಗೆ ಶಿಕ್ಷಣ ಇಲಾಖೆ ಕರೆದಿದೆ. ಇದರಿಂದ ಹಲವರಿಗೆ ಅನ್ಯಾಯವಾಗಿದೆ ಎಂದು ಹುದ್ದೆ ಆಕಾಂಕ್ಷಿಗಳು ಆರೋಪ ಮಾಡಿದ್ದಾರೆ.

ರಾಜ್ಯಾದ್ಯಂತ 13 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಕಲಬುರಗಿ ಸಾರ್ವಜನಿಕ‌ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲೂ ಪ್ರಕ್ರಿಯೆ ನಡೆದಿದೆ. ಆದರೆ, ಅರ್ಹತಾ ಆಯ್ಕೆ ಪಟ್ಟಿಯಲ್ಲಿದ್ದ ಹೆಸರುಗಳೇ ಕೌನ್ಸಲಿಂಗ್ ಪಟ್ಟಿಯಲ್ಲಿ ನಾಪತ್ತೆಯಾಗಿವೆ. ಅಂದಾಜು 80ಕ್ಕೂ ಹೆಚ್ಚು ಅಭ್ಯರ್ಥಿಗಳ ಹೆಸರುನ್ನು ಇಲಾಖೆ ಕೈಬಿಟ್ಟಿದೆ ಎಂದು ಅಭ್ಯರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ | BJP Karnataka : ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಸೆ ಪಟ್ಟಿದ್ದೆ; ಸಿಗಲ್ಲ ಎಂದು ಗೊತ್ತಾಗಿ ಹಿಂದೆ ಸರಿದೆ ಎಂದ ಶ್ರೀರಾಮುಲು

ಡಿಡಿಪಿಐ ಕಚೇರಿ ಎದುರು ಪ್ರತಿಭಟನೆ

ಶಿಕ್ಷಕರ ನೇಮಕಾತಿ ಅಕ್ರಮ ಆರೋಪಿಸಿ ಕಲಬುರಗಿಯ ಡಿಡಿಪಿಐ ಕಚೇರಿಯೆದುರು ಅಭ್ಯರ್ಥಿಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ನೇಮಕಾತಿ ಅಂತಿಮ ಆಯ್ಕೆಪಟ್ಟಿಯಲ್ಲಿ ತಮ್ಮ ಹೆಸರಿದ್ದರೂ ಕೌನ್ಸೆಲಿಂಗ್‌ನಿಂದ ಹೆಸರು ಕೈಬಿಟ್ಟಿದಕ್ಕೆ ಅಸಮಾಧಾನ ಹೊರಹಾಕಿದರು. ಸೂಕ್ತ ಕಾರಣ ಹೇಳದೆ ಏಕಾಏಕಿ ಪಟ್ಟಿಯಿಂದ ಶಿಕ್ಷಣ ಇಲಾಖೆ ಹೆಸರು ಕೈ ಬಿಟ್ಟಿರುವುದಕ್ಕೆ ಕಾರಣ ತಿಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬಿಗಿ ತಪಾಸಣೆಯೊಂದಿಗೆ ಎಫ್‌ಡಿಎ ಪರೀಕ್ಷೆ

ಯಾದಗಿರಿ: ಎಫ್‌ಡಿಎ ಪರೀಕ್ಷೆ ಅಕ್ರಮದ ನಂತರ ಯಾದಗಿರಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ಪರೀಕ್ಷಾ ಆರಂಭಕ್ಕೂ ಬಿಗಿ ತಪಾಸಣೆ ನಡೆಸುವ ಮೂಲಕ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರದೊಳಗೆ ಒಳಗೆ ಬಿಡಲಾಯಿತು. ಇದಕ್ಕಾಗಿ ಹೆಚ್ಚಿನ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ಕಟ್ಟುನಿಟ್ಟಿನ ತಪಾಸಣೆ ಮೂಲಕ ಪರೀಕ್ಷಾರ್ಥಿಗಳನ್ನ ಒಳಗೆ ಬಿಡ್ತಿರುವ ಪೊಲೀಸರು

ಪರೀಕ್ಷಾ ಸಮಯದ ಒಂದೂವರೆ ಗಂಟೆ ಮೊದಲೇ ಪೊಲೀಸರು ತಪಾಸಣೆ ನಡೆಸಿದ್ದು, ಮಹಿಳಾ ಪರೀಕ್ಷಾರ್ಥಿಗಳ ಕಿವಿ ಓಲೆ, ಚೈನ್, ಕಾಲುಂಗುರ ತೆಗೆಸಿದ್ದು, ಒಬ್ಬ ಪರೀಕ್ಷಾರ್ಥಿಯನ್ನ ನಾಲ್ಕು ಭಾರಿ ತಪಾಸಣೆ ಮಾಡಲಾಗಿದೆ. ಒಟ್ಟು ಐದು ಪರೀಕ್ಷಾ ಕೇಂದ್ರದಲ್ಲಿ ನಡೆದ ಪರೀಕ್ಷೆಗೆ ಭದ್ರತೆಗೆಗಾಗಿ 1 ಡಿವೈಎಸ್ಪಿ,2 ಸಿಪಿಐ, 6 ಪಿಎಸ್ಐ ಸೇರಿ ನೂರಕ್ಕೂ ಅಧಿಕ ಪೊಲೀಸ್ ಪೇದೆಗಳ ನಿಯೋಜನೆ ಮಾಡಲಾಗಿತ್ತು.

ಕೆಪಿಎಸ್‌ಸಿ ಗ್ರೂಪ್ ಸಿ ಪರೀಕ್ಷೆಯ ಕನ್ನಡ ಭಾಷೆ ವಿಷಯಕ್ಕೆ ಯಾದಗಿರಿ ನಗರದ ಐದು ಕೇಂದ್ರಗಳಲ್ಲಿ ನೋಂದಣಿಯಾದ 1659 ಅಭ್ಯರ್ಥಿಗಳ ಪೈಕಿ, 763 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಪರೀಕ್ಷೆಗೆ 896 ಅಭ್ಯರ್ಥಿಗಳು ಗೈರಾಗಿದ್ದರು. FDA ಪರೀಕ್ಷೆಯಲ್ಲಿ ಅಕ್ರಮ ಬೆಳಕಿಗೆ ಬಂದ ನಂತರ ನಡೆದ ಹಿನ್ನೆಲೆಯಲ್ಲಿ ಪರೀಕ್ಷೆಗೆ ಗೈರಾದವರ ಸಂಖ್ಯೆ ಹೆಚ್ಚಳವಾಗಿರುವುದು ಕಂಡುಬಂದಿದೆ. ಇದು ಕೂಡ ಹಲವು ಅನುಮಾನಗಳಿಗೆ ಕಾರಣವಾಗಿದೆ.

Exit mobile version