ಬೆಂಗಳೂರು: ಬಿಜೆಪಿಯ ಹಲವಾರು ಶಾಸಕರು ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ: ಹೀಗೊಂದು ಬಾಂಬ್ ಹಾಕಿದ್ದಾರೆ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರಲ್ಲಿ ಒಬ್ಬರಾದ ಈಶ್ವರ ಖಂಡ್ರೆ. ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಲು ಬಯಸುವ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬೇಕು ಎಂಬ ನಿಯಮ ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲವೊಂದು ಬೇರೆ ಪಕ್ಷದವರೂ ಅರ್ಜಿ ಸಲ್ಲಿಸಿದ್ದಾರೆ ಎಂದು ಖಂಡ್ರೆ ಹೇಳಿದ್ದಾರೆ. ಆದರೆ, ಅರ್ಜಿ ಹಾಕಿದವರು ಯಾರು ಎನ್ನುವುದನ್ನು ಅವರು ಬಾಯಿ ಬಿಟ್ಟಿಲ್ಲ. ಅದು ರಾಜಕೀಯದ ವಿಚಾರವಾಗಿರುವುದರಿಂದ ಹೇಳಲಾಗುವುದಿಲ್ಲ ಎಂದಿದ್ದಾರೆ.
ಖರ್ಗೆ ಅವರ ಈ ಮಾತಿನ ನಡುವೆ ಮೂಡಿಸಿರುವ ಕುತೂಹಲವೆಂದರೆ ಕಳೆದ ಬಾರಿ ಕಾಂಗ್ರೆಸ್‌ನಿಂದ ಜಿಗಿದು ಬಿಜೆಪಿ ಸೇರಿ ಮಂತ್ರಿಗಳಾದವರಲ್ಲಿ ಕೆಲವರು ಮತ್ತೆ ಕಾಂಗ್ರೆಸ್‌ನತ್ತ ಸಾಗುತ್ತಿದ್ದಾರಾ ಎನ್ನುವುದು. ಹೊಸಕೋಟೆ ಮಾಜಿ ಶಾಸಕ ಎಂಟಿಬಿ ನಾಗರಾಜ್ ಅವರು ಕೆಲವೇ ದಿನಗಳ ಹಿಂದೆ ತಾವು ಕಾಂಗ್ರೆಸ್ ಬಿಟ್ಟು ಬಂದು ತಪ್ಪು ಮಾಡಿದ್ದಾಗಿ ಹೇಳಿಕೊಂಡಿದ್ದರು. ಇದೇ ಅಭಿಪ್ರಾಯ ಇನ್ನೂ ಕೆಲವು ಸಚಿವರಿಗೆ ಇದೆಯಾ ಎನ್ನುವ ಚರ್ಚೆಯೂ ನಡೆಯುತ್ತಿದೆ. ಹೀಗಾಗಿ ಬಾಂಬೇ ಬಾಯ್ಸ್ ಎಂದು ಹೆಸರಾದ ಈ ನಾಯಕರಲ್ಲಿ ಕೆಲವರು ಕಾಂಗ್ರೆಸ್ ಟಿಕೆಟ್‌ಗೆ ಗುಪ್ತವಾಗಿ ಅರ್ಜಿ ಸಲ್ಲಿಸಿರಬಹುದಾ ಎಂಬ ಪ್ರಶ್ನೆ ಕಾಡಿದೆ.
ಆದರೆ, ಈಶ್ವರ ಖಂಡ್ರೆ ಈ ಯಾವ ಪ್ರಶ್ನೆಗೂ ಉತ್ತರ ಕೊಟ್ಟಿಲ್ಲ. ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ ಬಿಜೆಪಿ ಹಾಲಿ ಶಾಸಕರ ಪಟ್ಟಿ ಹೈಕಮಾಂಡ್ ಅಂಗಳದಲ್ಲಿದೆ ಎಂದು ಹೇಳಿದ್ದಾರೆ. ಆದರೆ, ಪಕ್ಷದಿಂದ ಹೋದವರು ಮರಳಿ ಬರುತ್ತೇವೆ ಎಂದು ಹೇಳಿದ್ದಾರೆ ಎಂಬ ಅಂಶವನ್ನು ಬಿಟ್ಟು ಕೊಟ್ಟಿದ್ದಾರೆ!
ನಮ್ಮಿಂದ ಯಾರೂ ಬಿಜೆಪಿಗೆ ಹೋಗುವುದಿಲ್ಲ
ʻʻಕಾಂಗ್ರೆಸ್‌ನಿಂದ ಯಾರೂ ಬಿಜೆಪಿಗೆ ಹೋಗುವುದಿಲ್ಲ. ಬಿಜೆಪಿ ಮುಳುಗುವ ಹಡಗು, ಅಲ್ಲಿಗೆ ಯಾಕೆ ಹೋಗ್ತಾರೆ? ಈಗ ಬಿಜೆಪಿ ಗೆ ಸೇರ್ಪಡೆ ಆಗಿ ಯಾರಾದ್ರೂ ಸುಸೈಡ್ ಮಾಡ್ಕೋತಾರಾ?ʼʼ ಎಂದು ಕಾಂಗ್ರೆಸ್‌ನಿಂದ ಹಲವರು ಬಿಜೆಪಿಗೆ ಬರುತ್ತಾರೆ ಎಂಬ ಕೆಲವು ಸಚಿವರ ಮಾತಿಗೆ ಪ್ರತಿಕ್ರಿಯಿಸಿದರು.
ರೌಡಿಗಳ ಸೇರ್ಪಡೆ ಬಿಜೆಪಿಗೆ ಅನಿವಾರ್ಯ!
ʻʻಚುನಾವಣೆಯಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿಯಲಿದೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಹೀಗಾಗಿ ಅವರು ಆತಂಕದಲ್ಲಿದ್ದಾರೆ. ಅದಕ್ಕಾಗಿ ರೌಡಿಗಳನ್ನು ಸಮಾಜ ಘಾತುಕ ಶಕ್ತಿಗಳನ್ನು ಸೇರ್ಪಡೆ ಮಾಡಿಕೊಳ್ತಿದ್ದಾರೆʼʼ ಎಂದು ಹೇಳಿದ ಖಂಡ್ರೆ, ʻʻಕರ್ನಾಟಕ ಈಗ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಎನ್ನುವಂತಾಗಿದೆ. ಬಿಜೆಪಿಯಲ್ಲಿ ಇರುವವರೆಲ್ಲ ಮೋಸಗಾರರು, ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದವರು. ಅವರು ಅಧಿಕಾರಕ್ಕಾಗಿ ಯಾವ ಕೆಳ ಹಂತಕ್ಕೆ ಬೇಕಾದರೂ ಹೋಗ್ತಾರೆʼʼ ಎಂದರು.
ಬಿಜೆಪಿಯ ಟೆಂಗಿನಕಾಯಿ ತಿರುಗೇಟು
ಬಿಜೆಪಿ ಶಾಸಕರು ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಈಶ್ವರ್ ಖಂಡ್ರೆ ಮಾತಿಗೆ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ತಿರುಗೇಟು ನೀಡಿದ್ದಾರೆ. ʻʻಕಾಂಗ್ರೆಸ್‌ನ ಹಲವು ಶಾಸಕರು ಬಿಜೆಪಿಗೆ ಬರಲು ರೆಡಿ ಇದ್ದಾರೆ. ಹಲವು ಶಾಸಕರು ನಮ್ಮ ಸಿಎಂ ಮತ್ತು ರಾಜ್ಯಾಧ್ಯಕ್ಷರ ಸಂಪರ್ಕದಲ್ಲಿ ಇದ್ದಾರೆ. ಸಮಯ ಬಂದಾಗ ನಾವು ಅವರ ಹೆಸರು ಬಹಿರಂಗಪಡಿಸುತ್ತೇವೆ. ಕಾಂಗ್ರೆಸ್ ಟಿಕೆಟ್ ಗೆ ಅರ್ಜಿ ಹಾಕಿದ ನಮ್ಮ ಶಾಸಕ ಯಾರು ಅಂತ ಖಂಡ್ರೆ ಹೇಳಲಿ. ಮೊದಲು ಅವರು ಹೇಳಲಿ ನಂತರ ನಾವು ಹೇಳ್ತೀವಿʼʼ ಎಂದು ಸವಾಲು ಹಾಕಿದರು.
ಇದನ್ನೂ ಓದಿ | Criminal politics | ಕೈಗೆ ಸಿಕ್ಕಾಗ ಬಿಟ್ಟುಬಿಟ್ರು, ಈಗ ಪೊಲೀಸರು ಕೇಳಿದ್ರೆ ಕಾನೂನು ಮಾತಾಡ್ತಾ ಇದಾನೆ ಸೈಲೆಂಟ್ ಸುನಿಲ!