Site icon Vistara News

DK Shivakumar | ಕಾಂಗ್ರೆಸ್‌ ಭಯೋತ್ಪಾದಕರ ಪರವೋ, ದೇಶಭಕ್ತರ ಪರವೋ? ಸ್ಪಷ್ಟಪಡಿಸಲಿ ಎಂದ ಬೊಮ್ಮಾಯಿ

Basavaraj Bommai

ಬೆಂಗಳೂರು/ಮಂಡ್ಯ: ಕಾಂಗ್ರೆಸ್ ಪಕ್ಷ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರು ದೇಶದಲ್ಲಿ ಅಶಾಂತಿ ಉಂಟುಮಾಡುವ ಭಯೋತ್ಪಾದಕರ ಪರವೋ ಅಥವಾ ದೇಶವನ್ನು ಉಳಿಸುವ ದೇಶಭಕ್ತರ ಪರವೋ ಎನ್ನುವುದನ್ನು ಸ್ಪಷ್ಟಪಡಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಅವರು ಶನಿವಾರ ವಿಜಯ ದಿವಸ್ ಕಾರ್ಯಕ್ರಮದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಜತೆಗೆ ಮಂಡ್ಯದಲ್ಲೂ ಇದೇ ಮಾತು ಹೇಳಿದರು.
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಕೆಪಿಸಿಸಿ ಅಧ್ಯಕ್ಷರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರತಿ ಬಾರಿ ದೇಶದ ನೈತಿಕ ಬಲ, ಪೊಲೀಸ್ ಇಲಾಖೆಯ ನೈತಿಕ ಬಲ ಕಡಿಮೆ ಮಾಡುವಂತೆ ಮಾತನಾಡುವುದು ದೇಶಭಕ್ತರ ಕೆಲಸವಲ್ಲ. ಇದನ್ನು ಸ್ಪಷ್ಟವಾಗಿ ಹೇಳಿದರೆ ಜನ ತೀರ್ಮಾನ ಮಾಡುತ್ತಾರೆ. ಭಯೋತ್ಪಾದಕರು ಸಾಕ್ಷಿ ಸಮೇತ ಸಿಕ್ಕಾಗ ಅದರ ಪ್ರಕ್ರಿಯೆ ಹಾಗೂ ತನಿಖೆಯನ್ನೇ ಪ್ರಶ್ನೆ ಮಾಡುವುದು ಭಯೋತ್ಪಾದಕ ಸಂಘಟನೆಗಳಿಗೆ ನೈತಿಕ ಬಲ ತಂದುಕೊಡುತ್ತದೆ ಎಂದರು.

ಶೋಭೆ ತರುವಂಥದ್ದಲ್ಲ
ಕುಕ್ಕರ್ ಬಾಂಬ್‌ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ, ಒಬ್ಬ ವ್ಯಕ್ತಿ ಬಾಂಬ್‌ಗೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನು ಕುಕ್ಕರ್‌ನಲ್ಲಿ ಹಾಕಿಕೊಂಡು ಹೋಗುವಾಗ ಸ್ಫೋಟವಾಗಿದೆ. ಅದನ್ನು ಮಂಗಳೂರಿನಲ್ಲಿ ಸ್ಫೋಟಗೊಳಿಸುವ ಉದ್ದೇಶವಿತ್ತು ಎನ್ನುವುದು ಸ್ಪಷ್ಟವಾಗಿದೆ. ಆತ ತನ್ನ ಗುರುತನ್ನು ಮರೆಮಾಚಿ ಈಗಾಗಲೇ 2-3 ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಂಡಿದ್ದು, ಭಯೋತ್ಪಾದಕ ಎಂದ ಮೇಲೆ ದೇಶದ ಹೊರಗೂ ಸಂಪರ್ಕವಿತ್ತು ಎನ್ನುವುದು ಕೂಡ ಸ್ಪಷ್ಟವಾಗಿದೆ. ಕಾಂಗ್ರೆಸ್‌ನವರಿಗೆ ಇನ್ನೇನು ಬೇಕು ಎಂದು ಅವರು ಪ್ರಶ್ನಿಸಿದರು.

ತುಷ್ಟೀಕರಣದ ರಾಜಕಾರಣ ಇನ್ನು ನಡೆಯಲ್ಲ
ʻʻಕೆಪಿಸಿಸಿ ಅಧ್ಯಕ್ಷರು ಅದು ಆಕಸ್ಮಿಕ, ಪ್ರಕರಣ ಮುಚ್ಚಿಹಾಕಲು ಮಾಡಿದ್ದಾರೆ ಎನ್ನುವುದು ನಿಜಕ್ಕೂ ಅವರಿಗೆ ಶೋಭೆ ತರುವಂಥದ್ದಲ್ಲ. ಕಾಂಗ್ರೆಸ್‌ನ ನೀತಿಯೇ ಹೀಗೆ ಇದೆ. ಭಯೋತ್ಪಾದಕ ಚಟುವಟಿಕೆಗಳನ್ನು ಕ್ಷುಲ್ಲಕವಾಗಿ ಕಾಣುವುದು, ಭಯೋತ್ಪಾದಕರಿಗೆ ಬೆಂಬಲ ನೀಡುವುದು, ಗಲ್ಲಿಗೇರಿಸಿದಾಗ ಟೀಕೆ ಮಾಡುವ ಅವರ ಪ್ರವೃತ್ತಿ, ಚುನಾವಣೆಯ ತುಷ್ಟೀಕರಣದ ತಂತ್ರ. ಈ ರೀತಿ ಮಾತನಾಡಿದರೆ ಅಲ್ಪಸಂಖ್ಯಾತರ ಮತಗಳು ದೊರಕಬಹುದೆಂಬ ಹಳೇ ತಂತ್ರ. ಅದನ್ನೇ ಬಳಕೆ ಮಾಡಿದ್ದಾರೆ. ಆದರೆ ಜನ ಜಾಗೃತರಾಗಿದ್ದು, ಇದೆಲ್ಲಾ ನಡೆಯೋಲ್ಲʼʼ ಎಂದರು.

ಕಾನೂನುಬಾಹಿರವಾಗಿ ಮತ ಹಾಕಿಸುವ ಪ್ರವೃತ್ತಿ
ಕಾನೂನುಬಾಹಿರ ಮತಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿ, ಡಿ.ಕೆ.ಶಿವಕುಮಾರ್ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, 2017ರಲ್ಲಿ ಆ ಸಂಸ್ಥೆಗೆ ವರ್ಕ್‌ ಆರ್ಡರ್‌ ಕೊಟ್ಟಿದ್ದೇ ಕಾಂಗ್ರೆಸ್ ಎನ್ನುವುದನ್ನು ಡಿ.ಕೆ.ಶಿವಕುಮಾರ್ ಮರೆಯಬಾರದು. ಕಾನೂನು ಬಾಹಿರವಾಗಿ ಮತ ಹಾಕಿಸುವ ಪ್ರವೃತ್ತಿ ಕಾಂಗ್ರೆಸ್ಸಿಗಿದೆ. ನಾವು ತನಿಖೆ ಮಾಡಿಸಿ ಬಂಧನವೂ ಆಗಿದೆ. ಯಾವ ಕ್ಷೇತ್ರಗಳಲ್ಲಿ ಯಾವ ಪ್ರದೇಶಗಳಿಂದ ಬಂದಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. ಚುನಾವಣೆ ಆಯೋಗ ಹೊಸ ತಾಂತ್ರಿಕ ವಿಧಾನವನ್ನು ಅಳವಡಿಸಿದ್ದು, ಫೋಟೋ ಮೂಲಕವೇ ಬೇರೆಡೆ ಮತದಾರರ ಚೀಟಿ ಹೊಂದಿದ್ದಾರೆ ಗುರುತಿಸಿ ತೆಗೆದುಹಾಕಲಾಗುವುದು ಎಂದರು.

ʻʻಎಲ್ಲಾ ಭಯೋತ್ಪಾದಕ ಸಂದರ್ಭದಲ್ಲೂ ಕಾಂಗ್ರೆಸ್ ಇದೇ ರೀತಿ ವರ್ತನೆ ಮಾಡುತ್ತಿದೆ. ಇದು ಅವರ ಮನಸ್ಥಿತಿ. ಅವನು ಭಯೋತ್ಪಾದಕನಾಗದೇ ಇದ್ದರೆ ಎನ್‌ಐಎ ಈ ಪ್ರಕರಣವನ್ನು ತನಿಖೆಗೆ ಹೇಗೆ ಸ್ವೀಕರಿಸುತ್ತಿತ್ತು ಎನ್ನುವ ಕನಿಷ್ಠ ವಿಚಾರವಾದರೂ ತಿಳಿದಿರಬೇಕುʼʼ ಎಂದು ಹೇಳಿದರು ಬೊಮ್ಮಾಯಿ.

ಇದನ್ನೂ ಓದಿ | DK Shivakumar | ಯಾವ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ: ಭಯೋತ್ಪಾದಕ ಹೇಳಿಕೆಗೆ ಡಿಕೆಶಿ ಸಮರ್ಥನೆ

Exit mobile version