Site icon Vistara News

Madrasa | ಉ.ಪ್ರದೇಶದಂತೆ ರಾಜ್ಯದಲ್ಲೂ ಮದ್ರಸಾ ಬಂದ್‌? ಚಟುವಟಿಕೆಗಳ ಅಧ್ಯಯನಕ್ಕೆ ಶಿಕ್ಷಣ ಇಲಾಖೆ ಸಮಿತಿ ರಚನೆ

madrasa

ಬೆಂಗಳೂರು: ರಾಜ್ಯದಲ್ಲಿ ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಗಳ ಮೇಲೆ ನಡೆದ ದಾಳಿ ಇಲ್ಲಿಗೇ ಮುಕ್ತಾಯವಾಗುವಂತೆ ಕಾಣುತ್ತಿಲ್ಲ. ಈ ಸಂಘಟನೆಗಳು ಮುಸ್ಲಿಂ ಸಮಾಜದ ನಾನಾ ವಲಯಗಳಲ್ಲಿ ಬೀರಿರುವ ಪರಿಣಾಮಗಳ ಅಧ್ಯಯನ ನಡೆಯುತ್ತಿದೆ. ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳನ್ನು ದುರ್ಬಳಕೆ ಮಾಡಿಕೊಳ್ಳುವ ಬಗ್ಗೆ ಸಾಕಷ್ಟು ದೂರುಗಳಿದ್ದು, ಇದು ಅಂತಿಮವಾಗಿ ಮುಸ್ಲಿಂ ಮಕ್ಕಳಿಗೆ ಅರೆಬಿಕ್‌ ಶಿಕ್ಷಣ ನೀಡುವ ಮದರಸಾಗಳನ್ನು ಮುಚ್ಚುವ ಹಂತದವರೆಗೂ ಹೋಗಲಿದೆಯಾ ಎಂಬ ಪ್ರಶ್ನೆ ತಲೆ ಎತ್ತಿದೆ. ಈಗಾಗಲೇ ಮದ್ರಸಾಗಳ ಚಟುವಟಿಕೆಗಳ ಅಧ್ಯಯನಕ್ಕೆ ಶಿಕ್ಷಣ ಇಲಾಖೆ ಸಮಿತಿ ರಚಿಸಿದ್ದು, ಇದರ ವರದಿಯ ಮೇಲೆ ರಾಜ್ಯದಲ್ಲಿ ಮದ್ರಸಾಗಳ ಭವಿಷ್ಯ ನಿಂತಿದೆ.

ಇಡೀ ದೇಶಾದ್ಯಂತ ಮದ್ರಸಾಗಳ ಕಾರ್ಯಾಚರಣೆಯ ಬಗ್ಗೆ ಸಾಕಷ್ಟು ಸಂಶಯಗಳಿವೆ. ಇವುಗಳಲ್ಲಿ ಕೆಲವು ತಿಳಿವಳಿಕೆ ಕೊರತೆಯಿಂದ ಹುಟ್ಟಿದ್ದೂ ಇರಬಹುದು. ಆದರೆ, ಇತ್ತೀಚಿನ ದಿನಗಳಲ್ಲಿ ಕೇಳಿಬರುತ್ತಿರುವ ಕೆಲವು ಆರೋಪಗಳು, ಧಾರ್ಮಿಕ ಮೂಲಭೂತವಾದಿ ನಡೆಗಳು, ಅಲ್ಲಿನ ಶಿಕ್ಷಕರೇ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿ ಸಿಕ್ಕಿಬೀಳುತ್ತಿರುವ ವಿದ್ಯಮಾನಗಳು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು ಮದ್ರಸಾದ ಮೇಲೆ ಕರಿನೆರಳು ಬೀಳುವಂತೆ ಮಾಡಿದೆ.

ಅದರಲ್ಲೂ ಮುಖ್ಯವಾಗಿ ಅಲ್‌ಖೈದಾ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಬೆಂಗಳೂರಿನ ಮದ್ರಸಾದ ಗುರು ಮೌಲಾನಾ ಅಂಝರ್ ಶಾ ಬಂಧನದ ಬಳಿಕ ಇದಕ್ಕೊಂದು ಹೊಸ ತಿರುವು ಸಿಕ್ಕಿದೆ.

ಹಿಂದೂ ಸಂಘಟನೆಗಳಿಂದ ಮನವಿ
ರಾಜ್ಯದಲ್ಲಿ ಕೆಲವೊಂದು ಮದ್ರಸಾಗಳೂ ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಹೊಂದಿರುವ ಆಪಾದನೆಗಳಿದ್ದು, ಅವುಗಳನ್ನು ನಿಷೇಧಿಸಬೇಕು ಎಂದು ಇತ್ತೀಚೆಗೆ ಹಿಂದೂ ಸಂಘಟನೆಗಳ ಮುಖಂಡರು ರಾಜ್ಯದ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದ್ದರು.
ಉತ್ತರ ಪ್ರದೇಶ ಮತ್ತು ಅಸ್ಸಾಂಗಳಲ್ಲಿ ಈಗಾಗಲೇ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಮದ್ರಸಾಗಳನ್ನು ಮುಚ್ಚಲಾಗಿದೆ. ಜತೆಗೆ ಕಟ್ಟಡಗಳನ್ನೇ ಒಡೆದು ಹಾಕಲಾಗಿದೆ. ಇದೇ ದಿಟ್ಟ ಕ್ರಮಗಳನ್ನು ರಾಜ್ಯದಲ್ಲೂ ಅನುಸರಿಸಬೇಕು ಎಂದು ಸಂಘಟನೆಗಳು ಮನವಿಯಲ್ಲಿ ಒತ್ತಾಯಿಸಿದೆ.

ಒಟ್ಟಾರೆಯಾಗಿ ಮದ್ರಸಾ ಶಿಕ್ಷಣ ವ್ಯವಸ್ಥೆಯ ಬಗ್ಗೆ ಹಿಂದೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಇಲ್ಲಿನ ಶಿಕ್ಷಕರಿಗೆ ಸರಿಯಾದ ಬೋಧನಾ ಅರ್ಹತೆ ಇರುವುದಿಲ್ಲ. ಮದ್ರಸಾಗಳಲ್ಲಿ ಕಲಿತ ಮಕ್ಕಳಿಗೆ ಗಣಿತ, ಇತಿಹಾಸ, ಭಾಷೆಗಳ ಪರಿಚಯವೇ ಇರುವುದಿಲ್ಲ. ಹೀಗಾಗಿ ಇಂಥ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಿ ಅಲ್ಲಿರುವ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಶಿಕ್ಷಣ ಇಲಾಖೆಯಿಂದ ಸಮಿತಿ ರಚನೆ
ಹಿಂದಿನಿಂದಲೇ ಕೇಳಿಬರುತ್ತಿರುವ ದೂರು ಮತ್ತು ಹಿಂದೂ ಸಂಘಟನೆಗಳ ಮನವಿಯ ಆಧಾರದಲ್ಲಿ ರಾಜ್ಯದ ಮದ್ರಸಾಗಳ ಚಟುವಟಿಕೆ ಅಧ್ಯಯನಕ್ಕೆ ಶಿಕ್ಷಣ ಇಲಾಖೆ ಒಂದು ಸಮಿತಿಯನ್ನು ರಚಿಸಿದೆ. ಧಾರವಾಡದ ಡಿಡಿಪಿಐ ನೇತೃತ್ವದಲ್ಲಿ ಸಮಿತಿ ರಚನೆಯಾಗಿದ್ದು ಈ ಸಮಿತಿ ಮದ್ರಸಾಗಳ ಸಮಗ್ರ ಚಟುವಟಿಕೆ ಕುರಿತು ವರದಿ ನೀಡಲಿದೆ. ಈ ವರದಿ ಬಂದ ಬಳಿಕ ಸರಕಾರ ಸೂಕ್ತ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆಗಳಿವೆ.

ಇದನ್ನೂ ಓದಿ | EYE ON PFI | ಬಂಧಿತ ಪಿಎಫ್‌ಐ ನಾಯಕರ ಮನೆಯಲ್ಲಿ ಸಿಕ್ಕಿದ್ದೇನು? 40 ಲಕ್ಷ ಹಣ, ಹಿಂದು ವಿರೋಧಿ ಬರಹ, ಮೊಬೈಲ್ಸ್‌

Exit mobile version