Site icon Vistara News

Karnataka Election 2023: ಶಿವಮೊಗ್ಗ ಟಿಕೆಟ್‌ ಅನೌನ್ಸ್‌ ಆಯ್ತಾ? ಅಭಿಮಾನಿಗಳಿಗೆ ಬಿಎಸ್‌ವೈ ಕೇಳಿದ್ದೇಕೆ?

Is Shivamogga BJP Ticket Announced: why did BS Yediyurappa ask his supporters

Is Shivamogga BJP Ticket Announced: why did BS Yediyurappa ask his supporters

ಶಿವಮೊಗ್ಗ: ಅಬ್ಬರದ ಚುನಾವಣೆ ಪ್ರಚಾರದಲ್ಲಿ ತೊಡಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಶಿವಮೊಗ್ಗ ನಗರ ವಿಧಾನಸಭೆ (Karnataka Election 2023) ಕ್ಷೇತ್ರದ ಟಿಕೆಟ್‌ ಬಗ್ಗೆಯೇ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ಹೆಲಿಕಾಪ್ಟರ್‌ ಮೂಲಕ ಶಿವಮೊಗ್ಗಕ್ಕೆ ತೆರಳಿದ ಬಿಎಸ್‌ವೈ, ಹೆಲಿಕಾಪ್ಟರ್‌ ಇಳಿಯುವ ಮೊದಲೇ, ಶಿವಮೊಗ್ಗ ಕ್ಷೇತ್ರದ ಟಿಕೆಟ್‌ ಅನೌನ್ಸ್‌ ಆಯ್ತಾ ಎಂದು ಅಭಿಮಾನಿಗಳಿಗೆ ಕೇಳಿದ್ದಾರೆ.

ಬುಧವಾರ (ಏಪ್ರಿಲ್‌ 19) ಬಿ.ವೈ.ವಿಜಯೇಂದ್ರ ಅವರು ಶಿಕಾರಿಪುರದಲ್ಲಿ ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್‌ನಲ್ಲಿ ಬಿಎಸ್‌ವೈ ಶಿವಮೊಗ್ಗಕ್ಕೆ ಆಗಮಿಸಿದರು. ನಗರದ ಪ್ರವಾಸಿ ಮಂದಿರದ ಹೆಲಿಪ್ಯಾಡ್‌ನಲ್ಲಿ ಇಳಿಯುವ ಮೊದಲೇ ಶಿವಮೊಗ್ಗದ ಟಿಕೆಟ್‌ ಅನೌನ್ಸ್‌ ಆಯ್ತಾ ಎಂದು ಅಭಿಮಾನಿಗಳಿಗೆ ಕೇಳಿದ್ದಾರೆ. ಬಿರುಸಿನ ಚುನಾವಣೆ ಪ್ರಚಾರ, ಭಿನ್ನಮತ ಶಮನ ಸೇರಿ ಹಲವು ಚಟುವಟಿಕೆಗಳಲ್ಲಿ ತೊಡಗಿದರೂ ಅವರಿಗೆ ಶಿವಮೊಗ್ಗ ಕ್ಷೇತ್ರದ ಟಿಕೆಟ್‌ ಬಗ್ಗೆಯೇ ಯೋಚನೆ ಇರುವುದು ದೃಢವಾಗಿದೆ.

ಮಂಗಳವಾರ ರಾತ್ರಿಯೊಳಗೆ ಟಿಕೆಟ್

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ವೈ, ರಾಜ್ಯದ 222 ವಿಧಾನಸಭೆ ಕ್ಷೇತ್ರಗಳಿಗೆ ಟಿಕೆಟ್‌ ಘೋಷಿಸಿ, ಬಾಕಿ ಉಳಿಸಿಕೊಂಡಿರುವ ಎರಡು ಕ್ಷೇತ್ರಗಳಿಗೆ ಮಂಗಳವಾರ ರಾತ್ರಿಯೊಳಗೆ ಬಿಜೆಪಿ ಟಿಕೆಟ್‌ (Karnataka Election 2023) ಘೋಷಿಸಲಿದೆ ಎಂದು ತಿಳಿಸಿದರು. ಮಂಗಳವಾರ ರಾತ್ರಿಯೊಳಗೆ ಬಾಕಿ ಇರುವ ಶಿವಮೊಗ್ಗ ಹಾಗೂ ಮಾನ್ವಿ ಕ್ಷೇತ್ರದಲ್ಲಿ ಟಿಕೆಟ್‌ ಘೋಷಣೆ ಮಾಡಲಾಗುತ್ತದೆ ಎಂದರು. ‌

ಇದನ್ನೂ ಓದಿ: Karnataka Election 2023: ಬಿಎಸ್‌ವೈ, ಕಟ್ಟಾ, ಆನಂದ್‌ ಸಿಂಗ್‌ ಪುತ್ರರಿಗೆ ಟಿಕೆಟ್‌ ಇದೆ; ಈಶ್ವರಪ್ಪ ಪುತ್ರನಿಗೇಕಿಲ್ಲ: ಅಭಿಮಾನಿಗಳ ಪ್ರಶ್ನೆ

ಜಗದೀಶ್‌ ಶೆಟ್ಟರ್‌ ಹಾಗೂ ಲಕ್ಷ್ಮಣ ಸವದಿ ಅವರು ಕಾಂಗ್ರೆಸ್‌ ಸೇರಿದ ಕುರಿತು ಪ್ರತಿಕ್ರಿಯಿಸಿದ ಅವರು, “ಶೆಟ್ಟರ್‌ ಹಾಗೂ ಸವದಿ ಅವರು ಕಾಂಗ್ರೆಸ್‌ ಸೇರಿದರೂ ನಮ್ಮ ಪಕ್ಷದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಯಾರ ಸಹಾಯವೂ ಇಲ್ಲದೆ ಬಿಜೆಪಿಯು 125 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಶೆಟ್ಟರ್‌ ಹಾಗೂ ಅವರ ಪತ್ನಿಯನ್ನು ರಾಜ್ಯಸಭೆಗೆ ಕಳುಹಿಸಲಾಗುವುದು ಎಂದು ಹೈಕಮಾಂಡ್‌ ಹೇಳಿದರೂ ಅವರು ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಆದರೆ, ಇದು ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ” ಎಂದು ಹೇಳಿದರು.

ಶಿವಮೊಗ್ಗಕ್ಕೆ ತೆರಳುವ ಮೊದಲು ಕೂಡ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜ್ಯದಲ್ಲಿ ಬಿಜೆಪಿಯು ಅಧಿಕಾರಕ್ಕೆ ಬರುವುದು ಖಚಿತ. ಯಾರು ಪಕ್ಷ ತೊರೆದರೂ ರಾಜ್ಯದ ಜನ ಬಿಜೆಪಿಯನ್ನು ಗೆಲ್ಲಿಸಲು ತೀರ್ಮಾನಿಸಿದ್ದಾರೆ. ಬಿ.ಎಲ್‌.ಸಂತೋಷ್‌ ಅವರ ಬಗ್ಗೆ ಶೆಟ್ಟರ್‌ ನೀಡಿದ ಹೇಳಿಕೆಯು ಅವರಿಗೆ ಶೋಭೆ ತರುವುದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

Exit mobile version