| ಹನುಮಂತ ದುರ್ಗದ್, ಬೆಂಗಳೂರು
ಸದ್ಯ ದೇಶದ ರಾಜಕಾರಣದಲ್ಲಿ ಕರ್ನಾಟಕವೇ ಕೇಂದ್ರಬಿಂದುವಾಗಿದೆ. ಕಾರಣ, ಕಾಂಗ್ರೆಸ್ ಪಕ್ಷದ ಅತ್ಯುನ್ನತವಾದ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ಮಾಡಿರುವುದು. ಶಶಿತರೂರ್, ಖರ್ಗೆ ಮಧ್ಯೆ ನೇರಾನೇರ ಹಣಾಹಣಿ ನಡೆದರೂ ಕೂಡ ಬಹುತೇಕ ಮತಗಳೂ ಮಲ್ಲಿಕಾರ್ಜುನ ಖರ್ಗೆ ಪರ ಚಲಾವಣೆಯಾಗಿವೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆಯಿಂದಾಗಿ ಒಂದಷ್ಟು ಚರ್ಚೆಗಳು ಶುರುವಾಗಿವೆ.
ಹೌದು, ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ಮಾಡಿದ್ದಾರೆ. ಸೋಮವಾರ ಮತದಾನ ಪ್ರಕ್ರಿಯೆ ಮುಗಿದ ಬಳಿಕ ಖರ್ಗೆಯವರೇ ಬಹುತೇಕ ಎಐಸಿಸಿ ಅಧ್ಯಕ್ಷರಾಗುತ್ತಾರೆ ಎಂಬ ಮಾತುಗಳು ಕೇಳಿಬಂದಿವೆ. ಅದರಲ್ಲೂ ಕೂಡ ಖರ್ಗೆ ಸ್ಪರ್ಧೆ ರಾಜ್ಯರಾಜಕಾರಣದಲ್ಲಿ ಸಾಕಷ್ಟು ಪ್ರಭಾವ ಬೀರಲಿದೆ ಎಂಬ ಟಾಕ್ ಜೋರಾಗಿದೆ.
ಈಗಾಗಲೇ ರಾಜ್ಯ ಕಾಂಗ್ರೆಸ್‌ನಲ್ಲಿ ಆ್ಯಕ್ಟಿವ್ ಆಗಿರುವಂತಹ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಣದವರಿಗೆ ಆತಂಕ ಶುರುವಾಗಿದೆ.
ಇದನ್ನೂ ಓದಿ | Bharat Jodo | ಯಾತ್ರೆ ಮುಗಿದ ಮೇಲೆ ಜೋಡೆತ್ತುಗಳು ಒಂದಾಗಿ ಉಳಿಯಲಿವೆಯೇ?
ಇದೇ ಸಮಯದಲ್ಲಿ ಮಲ್ಲಿಕಾರ್ಜುನ ಬಣದಲ್ಲಿ ಗುರುತಿಸಿಕೊಂಡಿರುವ ಹಲವು ನಾಯಕರು ಫುಲ್ ಖುಷ್ ಆಗಿದ್ದಾರೆ. ಯಾಕೆಂದರೇ ಇಷ್ಟು ದಿನಗಳ ರಾಜ್ಯ ಕಾಂಗ್ರೆಸ್‌ನಲ್ಲಿ ಡಿಕೆಶಿ, ಸಿದ್ದು ನಿರ್ಣಯಗಳೇ ಅಂತಿಮವಾಗಿದ್ದವು. ಹೀಗಾಗಿ ಖರ್ಗೆ ಅಧ್ಯಕ್ಷರಾದರೇ ತಮ್ಮ ಅಭಿಪ್ರಾಯಗಳಿಗೂ ಮನ್ನಣೆ ಸಿಗುತ್ತವೆ ಎಂಬ ಲೆಕ್ಕಚಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ಆಪ್ತವಲಯದ ನಾಯಕರು ಇದ್ದಾರೆ.
2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೇ ಸಿಎಂ ಗಾದಿಗೆ ಏರಲು ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ನೇರಾನೇರ ಫೈಟ್ ಇದೆ. ಹಾಗಾಗಿ ಈ ಎರಡು ಬಣಗಳಲ್ಲಿ ಗುರುತಿಸಿಕೊಂಡವರು ತಮ್ಮ ತಮ್ಮ ಗಾಡ್ ಫಾದರ್‌ಗಳ ಬೆನ್ನುಬಿದ್ದಿದ್ದರು. ಇದೀಗ ಇಷ್ಟುದಿನ ಮೌನಕ್ಕೆ ಶರಣಾಗಿದ್ದ ಖರ್ಗೆ ಟೀಮ್ ಆ್ಯಕ್ಟಿವ್ ಆಗಿದೆ. ಮುಂಬರುವ ಚುನಾವಣಾ ಸಂದರ್ಭದಲ್ಲಿ ಖರ್ಗೆ ಆಶೀರ್ವಾದದಿಂದ ತಾವು ಟಿಕೆಟ್ ಗಿಟ್ಟಿಸಿಕೊಳ್ಳಬಹುದು ಎಂಬ ತವಕದಲ್ಲಿದ್ದಾರೆ.
ಡಿ.ಕೆ ಶಿವಕುಮಾರ್ ಪಕ್ಷದ ಸಾರಥ್ಯ ವಹಿಸಿದ ಬಳಿಕ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಬಣಗಳ ಜಿದ್ದಾಜಿದ್ದಿ ನಡೆಯುತ್ತಿದೆ. ಈ ಇಬ್ಬರ ನಾಯಕರ ಭಿನ್ನಾಭಿಪ್ರಾಯಗಳಿಂದ ಕೆಲ ಶಾಸಕರು ಬೇಸತ್ತಿದ್ದರು. ಅನಿವಾರ್ಯ ಕಾರಣಗಳಿಂದ ಎರಡು ದೋಣಿಗಳ ಮೇಲೆ ಕಾಲಿಡುವ ಪರಿಸ್ಥಿತಿ ಎದುರಿಸುತ್ತಿದ್ದರು. ನಾನು ಪಕ್ಷದ ಅಧ್ಯಕ್ಷ ನಾನೇ ಬಿ ಫಾರ್ಮ್ ಕೊಡುವುದು, ನಾನೇ ಅಲ್ಟಿಮೇಟ್ ಎಂಬ ರೀತಿಯಲ್ಲಿ ಡಿ.ಕೆ.ಶಿವಕುಮಾರ್ ವರ್ತನೆ ತೋರಿದರೆ ಶಾಸಕರ ಬೆಂಬಲ ನನಗಿದೆ. ನಾನೇ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ ಎಂಬ ಗತ್ತಿನಲ್ಲಿ ಸಿದ್ದರಾಮಯ್ಯ ಇದ್ದರು. ಖರ್ಗೆ ಆಯ್ಕೆಯಿಂದ ಈ ನಡವಳಿಕೆಗೆ ಸ್ವಲ್ಪಮಟ್ಟಿನ ಬ್ರೇಕ್ ಬೀಳುವ ಸಾಧ್ಯತೆಯಿದೆ.
ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಿಂದ ರಾಜ್ಯದಲ್ಲಿ ಮೂರು ಪವರ್ ಸೆಂಟರ್‌ಗಳು ನಿರ್ಮಾಣವಾಗಿವೆ. ಏಕೆಂದರೆ ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿ ಫೈನಲ್ ಮಾಡುವ ಅಧಿಕಾರ ಎಐಸಿಸಿ ಅಧ್ಯಕ್ಷರಿಗೆ ಇರುತ್ತದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ರಾಜ್ಯದಿಂದ ಪಟ್ಟಿ ಕಳುಹಿಸಿದರೂ ತಮ್ಮ ರಾಜ್ಯ ರಾಜಕೀಯ ಅನುಭವದ ಆಧಾರದ ಮೇಲೆ ಕೆಲವೊಂದು ತೀರ್ಮಾನ ಖರ್ಗೆ ಕೈಗೊಳ್ಳಬಹುದು. ಜತೆಗೆ ಸಿಎಂ ಗಾದಿಗೆ ಫೈಟ್ ನಡೆಯುತ್ತಿರುವ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗುತ್ತಿರುವುದು ಸಿದ್ದು, ಡಿಕೆಶಿ ಬಣಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಒಟ್ಟಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗುವುದರಿಂದ ಎರಡು ಬಣಗಳಿಗೆ ಆತಂಕ ಶುರುವಾದರೆ, ಖರ್ಗೆ ಬಣ ಒಂದಷ್ಟು ಬಲಬಂದಂತಾಗಿದೆ.
ಇದನ್ನೂ ಓದಿ | Election 2023 | ವರುಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧೆ ಫಿಕ್ಸ್?