Site icon Vistara News

Upper Bhadra project : ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ ಅಲ್ವಂತೆ!; ಕೇಂದ್ರದ ಮೇಲೆ ಡಿ.ಕೆ. ಶಿವಕುಮಾರ್‌ ಕೆಂಡಾಮಂಡಲ

Upper Bhadra project

ಬೆಂಗಳೂರು: ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗಳಿಗೆ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸುವ ಭದ್ರಾ ಮೇಲ್ದಂಡೆ ಯೋಜನೆಯನ್ನು (Upper Bhadra Project) ರಾಷ್ಟ್ರೀಯ ಯೋಜನೆ (National project) ಎಂದು 2023-24ನೇ ಸಾಲಿನ ಬಜೆಟ್​​ನಲ್ಲಿ ಕೇಂದ್ರ ಸರ್ಕಾರ (Central Government) ಘೋಷಿಸಿದೆ ಎಂದು ಸುದ್ದಿಯಾಗಿತ್ತು. ಆದರೆ, ಈಗ ಅದು ರಾಷ್ಟ್ರೀಯ ಯೋಜನೆ (National Project) ಅಲ್ಲ ಎನ್ನುತ್ತಿದ್ದಾರೆ ಎಂದು ರಾಜ್ಯದ ಉಪಮುಖ್ಯಮಂತ್ರಿಯಾಗಿರುವ, ಜಲಸಂಪನ್ಮೂಲ ಖಾತೆ ಸಚಿವ ಡಿ.ಕೆ. ಶಿವಕುಮಾರ್‌ (DK Shivakumar) ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರ 2023-24ನೇ ಸಾಲಿನ ಬಜೆಟ್​​ನಲ್ಲಿ ಈ ಯೋಜನೆಗೆ 5,300 ಕೋಟಿ ರೂ. ಅನುದಾನ ಮೀಸಲಿಟ್ಟಿತ್ತು. ಮತ್ತು ರಾಷ್ಟ್ರೀಯ ಯೋಜನೆಯಾಗಿ ಮಾನ್ಯ ಮಾಡಿತ್ತು ಎನ್ನಲಾಗಿದೆ. ಬಜೆಟ್‌ಗೆ ಪ್ರತಿಕ್ರಿಯೆ ನೀಡಿದ್ದ ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು, ಯಾವುದೇ ರಾಷ್ಟ್ರೀಯ ಯೋಜನೆಗೆ ಕೊಡದೆ ಇದ್ದಷ್ಟು ಅನುದಾನವನ್ನು ಈ ಯೋಜನೆಗೆ ಕೇಂದ್ರ ಸರ್ಕಾರ ನೀಡಿದೆ ಎಂದಿದ್ದರು. ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡಿದ್ದಕ್ಕೆ ಕೇಂದ್ರ ಸರ್ಕಾರವನ್ನು ಅಭಿನಂಬಿಸಿದ್ದರು.

ಸೋಮವಾರ ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ. ಶಿವಕುಮಾರ್‌ ಅವರು, ಆವತ್ತು ರಾಷ್ಟ್ರೀಯ ಯೋಜನೆ ಎಂದು ಪ್ರಚಾರ ಮಾಡಲಾಗಿತ್ತು. ಈಗ ರಾಷ್ಟ್ರೀಯ ಯೋಜನೆಯಲ್ಲ ಎನ್ನುತ್ತಿದ್ದಾರೆ ಎಂದು ಆಪಾದಿಸಿದರು. ಯೋಜನೆ ಸಂಬಂಧ ಜಲಸಂಪನ್ಮೂಲ ಇಲಾಖೆಯಲ್ಲಿ ಕೇವಲ 600 ಕೋಟಿ ರೂ. ಮಾತ್ರ ಇದೆ. ಆದರೆ 1 ಕೋಟಿ 25 ಲಕ್ಷ ರೂ. ಕೆಲಸ ಮಂಜೂರು ಆಗಿದೆ ಎಂದು ತಿಳಿಸಿದರು.

ನಿರಂತರ ಪ್ರಯತ್ನ ಎಂದ ಕೇಂದ್ರ ಸಚಿವ ನಾರಾಯಣ ಸ್ವಾಮಿ

ಈ ನಡುವೆ, ತುಮಕೂರಿನಲ್ಲಿ ಏರ್ಪಡಿಸಲಾದ ಭದ್ರಾ ಮೇಲ್ದಂಡೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆವಹಿಸಿ ಅವರು ಮಾತನಾಡಿದ ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ ಅವರು, ಶೀಘ್ರ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾಗುವಂತೆ ಮಾಡಲು ನಿರಂತರವಾಗಿ ಪ್ರಾಮಾಣಿಕ ಯತ್ನ ಕೈಗೊಳ್ಳಲಾಗುತ್ತಿದೆ ಎಂದರು.

ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ವಾಣಿ ವಿಲಾಸ ಸಾಗರ ಜಲಾಶಯಕ್ಕೆ 05 ಟಿ.ಎಂ.ಸಿ ನೀರು ಹರಿಸಲು ತೀರ್ಮಾನ ಆಗಿರುವಂತೆ, ರಾಜ್ಯ ಸಂಪುಟ ಸಭೆಯಲ್ಲಿ ತೀರ್ಮಾನಿಸಿ ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಹಾಗೂ ತುಮಕೂರು ಜಿಲ್ಲೆಗಳ ವ್ಯಾಪ್ತಿಯಲ್ಲಿನ 367 ಕೆರೆಗಳನ್ನು ಆದ್ಯತೆ ಆಧಾರದ ಮೇಳೆ ತುಂಬಿಸುವುದಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.

ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾಗುವುದು ವಿಳಂಬವಾದಲ್ಲಿ, ಕೇಂದ್ರದ ಅನುದಾನ ಪಡೆಯಲು ಇರುವ ತೊಡಕನ್ನು ನಿವಾರಿಸಲು ಕೇಂದ್ರದ ಪಾಲಿನ ಶೇಕಡಾ 60 ಹಾಗೂ ರಾಜ್ಯದ ಪಾಲಿನ ಶೇಕಡಾ 40ರ ಅನುಪಾತದಡಿ ಖರ್ಚು ಭರಿಸುವ ರೀತಿಯಲ್ಲಿಯೇ ರಾಜ್ಯ ಸರ್ಕಾರ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಆಕ್ಸಿಲರಿ ಇರಿಗೇಷನ್ ಬೆನಿಫಿಟೆಡ್ ಪ್ರೋಗ್ರಾಂನಡಿ ಹಣ ಬಿಡುಗಡೆ ಮಾಡಲು ಕೇಂದ್ರ ಸರ್ಕಾರವನ್ನು ಕೋರಲಾಗುತ್ತದೆ ಎಂದು ಅವರು ಹೇಳಿದರು.

ರಾಜ್ಯದ ಭಾರಿ ಮತ್ತು ಮಧ್ಯಮ ನೀರಾವರಿ ಸಚಿವರು ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಇಲಾಖೆಯ ಪ್ರಧಾನ ಕಾರ್ಯದರ್ಶಿ, ವಿಶ್ವೇಶ್ವರಯ್ಯ ಜಲ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಒಳಗೊಂಡ ತಾಂತ್ರಿಕ ಅಧಿಕಾರಿಗಳ ಸಭೆ ಮಾಡಿ, ತಕ್ಷಣವೇ ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಸಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವ ಎ.ನಾರಾಯಣಸ್ವಾಮಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್‌ ಅವರು ಭದ್ರಾ ಯೋಜನೆಯನ್ನು ಇನ್ನೂ ರಾಷ್ಟ್ರೀಯ ಯೋಜನೆಯಾಗಿ ಘೋಷಿಸದ ಕೇಂದ್ರ ಸರ್ಕಾರವನ್ನು ಟೀಕಿಸಿದರು.

ಇದನ್ನೂ ಓದಿ : Budget 2023 : ಮೋದಿ ಸರ್ಕಾರ ಅನುದಾನ ಘೋಷಿಸಿದ ಭದ್ರಾ ಮೇಲ್ದಂಡೆ ಯೋಜನೆ ಏನು? ಅದರಿಂದ ಯಾರಿಗೆ ಲಾಭ? ಇಲ್ಲಿದೆ ಸಂಪೂರ್ಣ ವಿವರ

Exit mobile version