ಬೆಂಗಳೂರು: ಚಿಕ್ಕಬಳ್ಳಾಪುರದ ಅವಲಗುರ್ಕಿ ಬಳಿ ನಿರ್ಮಾಣ ಆಗುತ್ತಿರುವ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ (Isha Foundation) ಸ್ಥಳದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಆದೇಶ ನೀಡಿದೆಯಾದರೂ ಜನವರಿ ೧೫ರಂದು ಆಯೋಜನೆಯಾಗಿರುವ ಲೋಕಾರ್ಪಣೆ ಕಾರ್ಯಕ್ರಮ ನಡೆಸಬಹುದು ಎಂದು ಹೇಳಿದೆ.
ಈಗಾಗಲೇ ಪ್ರತಿಮೆ ನಿರ್ಮಾಣ ಆಗಿದ್ದು ಜನವರಿ 1೫ರಂದು ಪ್ರತಿಮೆ ಲೋಕಾರ್ಪಣೆಗೆ ಸಿದ್ಧವಾಗಿತ್ತು. ಅದರ ನಡುವೆ ಜಮೀನು ತಗಾದೆ ವಿಚಾರದಲ್ಲಿ ಇಷಾ ಫೌಂಡೇಷನ್ ವಿರುದ್ಧ ರೈತರು ಹೈಕೋರ್ಟ್ ಮೆಟ್ಟಿಲೇರಿದ್ದರು. ಖ್ಯಾತಪ್ಪ, ಶ್ರೀಧರ್, ನಾರಾಯಣಸ್ವಾಮಿ, ಎನ್. ನಾರಾಯಣ ಸ್ವಾಮಿ ಅವರ ದೂರನ್ನು ಆಲಿಸಿದ ನ್ಯಾಯಾಲಯ, ಯಾವುದೇ ಅಭಿವೃದ್ಧಿ ಕಾರ್ಯ ನಡೆಸದಂತೆ ತಡೆಯಾಜ್ಞೆ ನೀಡಿತ್ತು.
ಹೈಕೋರ್ಟ್ ಸ್ಥಳದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದ್ದರಿಂದ ಜನವರಿ ೧೫ರ ಕಾರ್ಯಕ್ರಮ ಏನಾಗುತ್ತದೆ ಎಂಬ ಬಗ್ಗೆ ಕುತೂಹಲವಿತ್ತು. ಇದೀಗ ಹೈಕೋರ್ಟ್ ಆದಿಯೋಗಿ ಪ್ರತಿಮೆ ಸ್ಥಾಪನೆ ಕಾರ್ಯಕ್ರಮ ಮಾಡಬಹುದು ಎಂದು ಹೇಳಿದೆ.
ಈ ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಸಮಾರಂಭಕ್ಕೆ ಆಗಮಿಸುತ್ತಿದ್ದಾರೆ. ಪಿಐಎಲ್ ದಾಖಲಾಗುವ ಮುನ್ನವೇ ಕಾರ್ಯಕ್ರಮ ನಿಗದಿಯಾಗಿದೆ. ಹೀಗಾಗಿ ಕಾರ್ಯಕ್ರಮಕ್ಕೆ ಅನ್ವಯವಾಗುವಂತೆ ಹೈಕೋರ್ಟ್ ಅನುಮತಿ ನೀಡಿದೆ.
ಆದರೆ, ಈ ಕಾರ್ಯಕ್ರಮದ ಹೆಸರಿನಲ್ಲಿ ಯಾವುದೇ ಮರ ಕಡಿಯಬಾರದು, ಬೇರೆಲ್ಲ ವಿಚಾರಗಳನ್ನೂ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಹೈಕೋರ್ಟ್ ಸೂಚಿಸಿದೆ.
ಇದನ್ನೂ ಓದಿ | Isha Foundation | ಚಿಕ್ಕಬಳ್ಳಾಪುರದ ಬಳಿ ಈಶ ಫೌಂಡೇಷನ್ ಕಾರ್ಯಕ್ಕೆ ಹೈಕೋರ್ಟ್ ತಡೆ