ಮಂಗಳೂರು: ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಉಗ್ರರು (ISIS) ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಹೊಣೆ ಹೊತ್ತಿದ್ದಾರೆ. ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆ ಹತ್ತಾರು ವರ್ಷಗಳಿಂದ ನಡೆಯುತ್ತಾ ಇದೆ. ಇಸ್ಲಾಮಿಕ್ ರಾಷ್ಟ್ರ ಮಾಡಬೇಕೆನ್ನುವ ನಿಟ್ಟಿನಲ್ಲಿ ಈ ಪ್ರಯತ್ನ ನಡೆಯುತ್ತಾ ಬಂದಿದೆ. ಆದರೆ, ಎನ್ಐಎ ಬಂಧಿಸಿದ ಉಗ್ರನನ್ನೇ ಕಾಂಗ್ರೆಸ್ ನಾಯಕರು ಅಮಾಯಕ ಎನ್ನುತ್ತಿದ್ದಾರೆ. ಈ ಪ್ರಕರಣದಲ್ಲಿ ಉಡುಪಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಗನನ್ನೇ ಎನ್‌ಐಎ ಬಂಧಿಸಿದೆ. ಇವತ್ತಿನವರೆಗೆ ಕಾಂಗ್ರೆಸ್ ಅವನನ್ನು ಪಕ್ಷದಿಂದ ಉಚ್ಚಾಟನೆ ಮಾಡಿದೆಯೇ? ಎಂದು ಪ್ರಶ್ನೆ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಅವನನ್ನು ಇನ್ನೂ ಪಕ್ಷದಲ್ಲಿ ಇಟ್ಟುಕೊಂಡಿದೆ ಎಂದಾದರೆ ಕಾಂಗ್ರೆಸ್‌ನಲ್ಲಿ ಭಯೋತ್ಪಾದಕರು ಇದ್ದಾರೆ ಅನ್ನೋದು ಸ್ಪಷ್ಟ ಎಂದು ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಈ ಷಡ್ಯಂತ್ರವನ್ನು ನಿಲ್ಲಿಸುವ ಕೆಲಸ ಆಗಿದೆ. ಇಂದು ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆ ಕಡಿಮೆ ಆಗಿದೆ. ಎಲ್ಲಿಯೋ ಅಲ್ಲಿ, ಇಲ್ಲಿ ಎಂಬಂತೆ ನಡೆಯುತ್ತಾ ಇದೆ. ಈಗ ಮಂಗಳೂರು ಬ್ಲಾಸ್ಟ್ ಘಟನೆಯ ಹೊಣೆ ಹೊತ್ತಿರುವ ಐಸಿಸ್‌ನ ಸಹ ಸಂಸ್ಥೆಯಾದ ಖೊರಾಸನ್ ಪ್ರಾಂತ್ಯದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯು (ಐಎಸ್‌ಕೆಪಿ) ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುವುದಾಗಿ ಹೇಳಿಕೊಂಡಿದೆ ಎಂದು ಕಟೀಲ್ ಹೇಳಿದರು.
ಇದನ್ನೂ ಓದಿ: BJP Karnataka: ದೇಶದ ಅಭಿವೃದ್ಧಿಯ ಪಯಣದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು: ಬಿ.ವೈ. ವಿಜಯೇಂದ್ರ
ಈಗ ನನ್ನ ಪ್ರಶ್ನೆ ಇರುವುದು ಇಲ್ಲಿನ ಕಾಂಗ್ರೆಸ್ ಬಗ್ಗೆಯಾಗಿದೆ. ಕಾಂಗ್ರೆಸ್ ಇಂಥ ಘಟನೆಯಾದಾಗ ಅವರ ಪರ ನಿಲ್ಲುತ್ತದೆ. ಹಾಗಾದರೆ ಕಾಂಗ್ರೆಸ್ ಭಯೋತ್ಪಾದನಾ ಚಟುವಟಿಕೆಗೆ ಬೆಂಬಲ ಕೊಡುವ ಪಕ್ಷವಾ? ಕುಕ್ಕರ್ ಬ್ಲಾಸ್ಟ್‌ನಲ್ಲಿ ಗಾಯಗೊಂಡ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅಮಾಯಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಪರಿಹಾರವನ್ನು ನೀಡುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಈಚೆಗೆ ಮಂಗಳೂರು ಕುಕ್ಕರ್ ಬ್ಲಾಸ್ಟ್ ಸೇರಿದಂತೆ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉಡುಪಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಗನನ್ನೇ ಎನ್‌ಐಎ ಬಂಧಿಸಿದೆ. ಆದರೆ, ಇಂದಿನವರೆಗೂ ಕಾಂಗ್ರೆಸ್ ಅವನನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದನ್ನು ಯಾರಾದರೂ ನೋಡಿದ್ದೀರಾ? ಅವನನ್ನು ಇನ್ನೂ ಪಕ್ಷದಲ್ಲಿ ಇಟ್ಟುಕೊಂಡಿದೆ ಎಂದಾದರೆ ಭಯೋತ್ಪಾದಕರು ಕಾಂಗ್ರೆಸ್‌ನಲ್ಲಿ ಇದ್ದಾರೆ ಎನ್ನುವುದು ಸ್ಪಷ್ಟ. ಕಾಂಗ್ರೆಸ್‌ನ ತುಷ್ಟೀಕರಣದ ನೀತಿಯಿಂದ ಭಯೋತ್ಪಾದನಾ ಚಟುವಟಿಕೆ ಹಳ್ಳಿಗಳಿಗೂ ವ್ಯಾಪಿಸಿದೆ ಎಂದು ಕಟೀಲ್ ಹೇಳಿದರು.
ಪುರುಷೋತ್ತಮ್‌ಗೆ ಪರಿಹಾರ ವಿತರಣೆ
ಕುಕ್ಕರ್ ಬಾಂಬ್ ಸ್ಫೋಟದ ಸಂತ್ರಸ್ತ, ಆಟೋ ಚಾಲಕ ಪುರುಷೋತ್ತಮ ಪೂಜಾರಿ ಅವರಿಗೆ ಹೊಸ ಆಟೋ ರಿಕ್ಷಾ ಹಾಗೂ ಐದು ಲಕ್ಷ ರೂಪಾಯಿ ಪರಿಹಾರಧನದ ಚೆಕ್ ಅನ್ನು ಭಾನುವಾರ (ಮಾ. 5) ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿತರಣೆ ಮಾಡಿದರು.
ಮಂಗಳೂರಿನ ಉಜ್ಜೋಡಿಯ ಪುರುಷೋತ್ತಮ ನಿವಾಸಕ್ಕೆ ತೆರಳಿದ ನಳಿನ್ ಕುಮಾರ್ ಕಟೀಲ್, ದಾಖಲೆ ಪತ್ರಗಳ ಸಹಿತ ಹೊಸ ಆಟೋ ರಿಕ್ಷಾವನ್ನು ಹಸ್ತಾಂತರ ಮಾಡಿದರು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹಾಗೂ ಸ್ಥಳೀಯ ನಾಯಕರು ಸಾಥ್ ನೀಡಿದರು.