ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ಮೇಲೆ ಐಟಿ ಸೇರಿದಂತೆ ನಾನಾ ಸಂಸ್ಥೆಗಳ ಮೂಲಕ ದಾಳಿ ನಡೆಸಲು ಸಂಚು ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ನಡೆಯಬಹುದು, ಇದನ್ನು ನಾವು ಎದುರಿಸಲು ಸಜ್ಜಾಗಿದ್ದೇವೆ ಎಂಬ ಕಾಂಗ್ರೆಸ್ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai) ಪ್ರತಿಕ್ರಿಯಿಸಿದ್ದಾರೆ. ಕಳ್ಳರಿಗೆ ಐಟಿ ಭಯ ಇರುವುದು ಸಹಜ. ಹಾಗಂತ ಬಿಜೆಪಿಯೇನೂ ದಾಳಿ ಮಾಡಿಸುತ್ತಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ನಾಯಕರಾದ ರಣದೀಪ್ ಸುರ್ಜೇವಾಲ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ರಾತ್ರಿ ದಿಲ್ಲಿಯಲ್ಲಿ ಮಾತನಾಡಿ, ʻʻಬಿಜೆಪಿ ಕಾಂಗ್ರೆಸ್ ಮತ್ತು ಬೇರೆ ಪಕ್ಷಗಳಿಂದ ಬಿಟ್ಟು ಬರುವವರ ಮೇಲೆ ಐಟಿ, ಇಡಿ ದಾಳಿ ಮಾಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. 100ಕ್ಕೂ ಹೆಚ್ಚು ಅಧಿಕಾರಿಗಳನ್ನು ಛೂ ಬಿಡಲು ತಯಾರಿ ನಡೆಸಿದೆʼʼ ಎಂದು ಆರೋಪಿಸಿದ್ದರು. ʻʻನಾಳೆಯಿಂದಲೇ ಕಾಂಗ್ರೆಸ್‌ನವರ ಮೇಲೆ ದಾಳಿಯಾಗಬಹುದು.
ಬಿಜೆಪಿ ನಾಯಕರ ಮನೆ ಮೇಲೆ ಯಾವುದೇ ದಾಳಿಯಾಗಲ್ಲʼʼ ಎಂದಿದ್ದ ನಾಯಕರು, ಐಟಿ, ಇಡಿ ದಾಳಿಗಳಿಗೆ ಕಾಂಗ್ರೆಸ್ ಹೆದರುವ ಪ್ರಶ್ನೆಯೇ ಇಲ್ಲ ಎಂದಿದ್ದರು.
ಬುಧವಾರ ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಐಟಿ ಮತ್ತು ಇಡಿ ದಾಳಿಗಳಿಗೂ ನಮಗೂ ಯಾವುದೇ ಸಂಬಂಧ ಇಲ್ಲ. ಕಾಂಗ್ರೆಸ್ ಸೋಲುವುದು ನಿಶ್ಚಿತ. ನಮಗೆ ಗೆಲ್ಲುವ ವಿಶ್ವಾಸವಿದೆ. ಕಳ್ಳನ ಮನಸು ಹುಳ್ಳಹುಳ್ಳಗೆ ಅಂತಾರಲ್ಲ. ಹಾಗೇ ಕಾಂಗ್ರೆಸ್ ಅವರು ಕಳ್ಳತನ ಮಾಡಿದ್ದಾರೆ. ಅದಕ್ಕೆ ಈ ರೀತಿ ಭಯ ಬೀಳುತ್ತಿದ್ದಾರೆʼʼ ಎಂದರು.
ʻʻಈಗ ಎಲ್ಲವೂ ನಡೆಯುವುದು ಚುನಾವಣೆ ಆಯೋಗದ ಅಧೀನದಲ್ಲಿ. ಅವರೇ ಎಲ್ಲವನ್ನೂ ಮಾನಿಟರ್ ಮಾಡುತ್ತಿದ್ದಾರೆ. ಈಗಾಗಲೇ ಅಧಿಕೃತವಾಗಿ ಐಟಿ ಅಧಿಕಾರಿಗಳು ಪ್ರತಿ ಜಿಲ್ಲೆಯಲ್ಲಿ ಇದ್ದಾರೆ. ಚುನಾವಣಾ ಆಯೋಗ ಕೂಡಾ ದಾಳಿ ಮಾಡುತ್ತಿದೆ. ಎಲ್ಲಾ ಪಕ್ಷಗಳ ವಸ್ತುಗಳನ್ನು ಸೀಜ್ ಮಾಡುತ್ತಿದ್ದಾರೆ. ಚುನಾವಣಾ ಆಯೋಗ ಒಂದು ಸ್ವಾಯತ್ತ ಸಂಸ್ಥೆ. ಅದರ ಕೆಲಸ ಅದು ಮಾಡುತ್ತದೆ. ಐಟಿ ದಾಳಿ ಆಗುತ್ತಿರುವುದಕ್ಕೆ ಕಾಂಗ್ರೆಸ್‌ಗೆ ಭಯ ಶುರುವಾಗಿದೆʼʼ ಎಂದು ಹೇಳಿದರು.
ʻʻಇಷ್ಟು ವರ್ಷ ಕಾಂಗ್ರೆಸ್ ಸಾಕಷ್ಟು ಹಣ ಮಾಡಿದೆ. ಕಾಂಗ್ರೆಸ್‌ನವರಿಗೆ ಕಪ್ಪು ಹಣ ಹೊರಬರುತ್ತದೆ ಎನ್ನುವ ಭಯ. ಕಾಂಗ್ರೆಸ್‌ನವರು ದಾಳಿ ಮಾಡುತ್ತಾರೆ ಎಂದು ಮುಂಚಿತವಾಗಿ ಹೇಳಿ ದಾಳಿಯ ತೀವ್ರತೆ ಕಡಿಮೆ ಮಾಡುವ ಉಪಾಯ ಮಾಡುತ್ತಿದ್ದಾರೆ. ಅಧಿಕಾರಿಗಳ ಮೇಲೆ ಒತ್ತಡ ಹಾಕಲು ಹೀಗೆ ಮಾಡುತ್ತಿದ್ದಾರೆ. ಇವೆಲ್ಲ ನಡೆಯುವುದಿಲ್ಲ. ಯಾರು ಕಳ್ಳರಿದ್ದಾರೋ ಅವರು ಸಿಕ್ಕಿಹಾಕಿಕೊಳ್ಳುತ್ತಾರೆʼʼ ಎಂದು ಹೇಳಿದರು ಬೊಮ್ಮಾಯಿ.
ಇದನ್ನೂ ಓದಿ : Karnataka Election: ಕಾಂಗ್ರೆಸ್ ನಾಯಕರ ಮೇಲೆ ಐಟಿ, ಇಡಿ ದಾಳಿಗೆ ಮೋದಿ ಸರ್ಕಾರ ಸಿದ್ಧತೆ: ಸುರ್ಜೇವಾಲ ಆರೋಪ