ಬೆಂಗಳೂರು: ಎಸ್‌ಸಿಎಸ್‌ಟಿ ಮೀಸಲಾತಿ (SC ST Reservation) ವಿಚಾರದಲ್ಲಿ ಬಂಜಾರ ಸಮುದಾಯದವರು ಶಿಕಾರಿಪುರದಲ್ಲಿರುವ ಬಿ.ಎಸ್. ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ತೂರಾಟ ನಡೆದಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಮನೆ ಮೇಲೆ ಕಲ್ಲು ಹೊಡೆದಿದ್ದರೆ ಅದೊಂಥರಾ ಒಕೆ ಫೈನ್, ಆದರೆ ಬಿ.ಎಸ್. ಯಡಿಯೂರಪ್ಪ ಮನೆ ಯಾಕೆ? ಎಂದಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ಯಡಿಯೂರಪ್ಪನವರು ಸರ್ಕಾರದ ಪ್ರತಿನಿಧಿಯಾಗಿ ಎಲ್ಲೂ ಭಾಗಿಯಲ್ಲ. ಮೀಸಲಾತಿ ವಿಚಾರದಲ್ಲಿ ಮುಖ್ಯಮಂತ್ರಿಗಳು ದೊಡ್ಡ ಗೊಂದಲ ಸೃಷ್ಟಿ ಮಾಡಿದ್ದಾರೆ. ಈಗ ಯಡಿಯೂರಪ್ಪ ಅವರನ್ನು ಮತ್ತೆ ಸೆಂಟರ್ ಸ್ಟೇಜ್ ಗೆ ತರಬೇಕು ಅಂತ ಕೇಂದ್ರ ಗೃಹಸಚಿವ ಅಮಿತ್ ಷಾ ಅವರು ಮನೆಗೆ ಹೋಗಿ ಭೇಟಿ ಮಾಡಿ ಬೆನ್ನು ತಟ್ಟಿ ಬಂದಿದ್ದಾರೆ. ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದೆವು, ಈಗ ಸರಿಮಾಡಿಕೊಳ್ಳುತ್ತೇವೆ ಎಂದು ಒಪ್ಪಿಕೊಂಡಿದ್ದಾರೆ.
ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ಹೊಡೆಯುತ್ತಾರೆ ಅಂದರೆ ಕಾರಣ ಏನು? ಇದು ಬಿಜೆಪಿಯ ಆಂತರಿಕ ಕುತಂತ್ರ. ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಬೇಕು ಅಂತ ಬೇಕು ಅಂತ ಕಲ್ಲು ಹೊಡೆಯುತ್ತಿದ್ದಾರೆ. ಮುಖ್ಯಮಂತ್ರಿಗಳ ಮನೆ ಮೇಲೆ ಕಲ್ಲು ಹೊಡೆದಿದ್ರೆ ಅದೊಂಥರಾ ಓಕೆ ಫೈನ್. ಅಧಿಕಾರದಲ್ಲಿರುವವರ ಮನೆ ಮೇಲೆ ಕಲ್ಲು ಹೊಡೆಯುವುದು, ಆಕ್ರೋಶ ವ್ಯಕ್ತಪಡಿಸುವುದು ಸಹಜ. ಆದರೆ ಯಡಿಯೂರಪ್ಪ ಅವರ ಮನೆ ಮೇಲೆ ಮಾಡ್ತಾರೆ ಅಂದರೆ ಇದು ಬಿಜೆಪಿಯ ಆಂತರಿಕ ಸಮಸ್ಯೆ.
ಬಿಜೆಪಿಯಲ್ಲಿ ಯಾರಿಗೂ ಒಬ್ಬರಿಗೊಬ್ಬರು ಸಮಾಧಾನ ಇಲ್ಲ. ನ್ಯಾಷನಲ್ ಲೀಡರ್‌ಗಳು ಎಲ್ಲರಿಗೂ ಕಡಿವಾಣ ಹಾಕಿ ಹೆದರಿಸಿ ಬೆದರಿಸಿದ್ದಾರೆ. ರೈಟ್‌ಗೂ ಹೋಗಬೇಡ, ಲೆಫ್ಟ್‌ಗೂ ಹೋಗಬೇಡ ಅಂತ ಫೋನ್ ಎಲ್ಲಾ ಕಿತ್ಕೊಂಡು ಅಚ್ಚುಕಟ್ಟಾಗಿ ನಡೆಸುತ್ತಿದ್ದಾರೆ ಎಂದರು.
ಕಲ್ಲು ತೂರಾಟದಲ್ಲಿ ವಿರೋಧ ಪಕ್ಷದವರ ಕೈವಾಡ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ಮಾತನಾಡೋದು ಅವರಿಗೆ ಬಿಟ್ಟ ವಿಚಾರ. ನಾನು ಪಕ್ಷದ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ, ಇದು ರಾಜ್ಯ ಅಲ್ಲ ರಾಷ್ಟ್ರದಲ್ಲೇ ಒಂದು ಗೊಂದಲ ಸೃಷ್ಟಿ ಮಾಡಿದ್ದಾರೆ. ಸುಪ್ರೀಂಕೋರ್ಟ್ ವಿರುದ್ಧವಾಗಿ ಇಬ್ಬರು ಮಂತ್ರಿಗಳು ಕೂತು ಮೀಸಲಾತಿ ಮಾಡಿದ್ದಾರೆ. ಯಾವುದೇ ವರದಿ ಇಲ್ಲ ಹಿಂದುಳಿದ ವರ್ಗಗಳ ಆಯೋಗದ ವರದಿ ಇಲ್ಲ. ಡಿಸೆಂಬರ್‌ನಲ್ಲಿ ಕೊಟ್ಟ ಮಧ್ಯಂತರ ವರದಿಯಲ್ಲಿ ತೀರ್ಮಾನ ಆಗಿಲ್ಲ. ಇದಕ್ಕೆ ಸಂವಿಧಾನ ತಿದ್ದುಪಡಿ ಮಾಡಬೇಕು. ಮೀಸಲಾತಿಯನ್ನ ಸರಿಯಾದ ಬದ್ಧತೆಯಿಂದ ಮಾಡಬೇಕು. ಈ ದೇಶದಲ್ಲಿ ಅಲ್ಪಸಂಖ್ಯಾತರು ಇಲ್ಲವೆ? ಅವರದ್ದು ಕೊಡಿ ಎಂದು ಲಿಂಗಾಯತರು, ಒಕ್ಕಲಿಗರು ಕೇಳಿಲ್ಲ. ನಮ್ಮ ಜನಸಂಖ್ಯೆಗೆ ಅನುಗುಣವಾಗಿ ನೀಡಿ ಎಂದು ಕೇಳಿದ್ದೆವು. ಈಗ 56% ಇಟ್ಟಿದ್ದೀರ, ಇನ್ನೂ ಹೆಚ್ಚು ಮಾಡಿ.
ಒಕ್ಕಲಿಗರು, ವೀರಶೈವ ಲಿಂಗಾಯತರು ಅನ್ನದಾತರು. ಅವರಿಗೆ ನ್ಯಾಯ ನೀಡುತ್ತೇವೆ. ನಮ್ಮ ಸರ್ಕಾರ 40 ದಿನದಲ್ಲಿ ಆಗುತ್ತದೆ, ಇದನ್ನೆಲ್ಲ ರದ್ದು ಮಾಡುತ್ತೇನೆ. ಜನತಾದಳದವರು ಇನ್ನೂ ಈ ಬಗ್ಗೆ ಏನೂ ಮಾತನಾಡಿಲ್ಲ. ಆದರೆ ನಾವು ಅಲ್ಪಸಂಖ್ಯಾತರ ಮೀಸಲಾತಿಯನ್ನು ಪುನಃ ಜಾರಿ ಮಾಡುತ್ತೇವೆ.
ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಬಂಧನ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ಇದು ಒಳ್ಳೆಯದು. ಕಾನೂನಿನ ಪ್ರಕಾರ ಅವರು ಮಾಡಬೇಕು ಮಾಡಿದ್ದಾರೆ ಎಂದರು. ಮಾರ್ಚ್ 30ರ ನಂತರ ಎರಡನೇ ಪಟ್ಟಿ ಬಿಡುಗಡೆ ಮಾಡುತ್ತೇವೆ. ಎಲ್ಲವನ್ನೂ ಕರೆಯುತ್ತೇವೆ. 400 ನಿಗಮ ಮಂಡಳಿ ಇದೆ, 75 ವಿಧಾನ ಪರಿಷತ್ ಇದೆ, 12 ರಾಜ್ಯಸಭೆ ಸ್ಥಾನಗಳಿವೆ, ಎಲ್ಲವನ್ನೂ ಹಂಚುತ್ತೇವೆ.
ರಾಜಾಜಿನಗರದಲ್ಲಿ ಪುಟ್ಟರಾಜು ಬಂಡಾಯ ಸ್ಪರ್ಧೆ ವಿಚಾರ ಹಾಗೂ ಬಂಡಾಯ ಕುರಿತು ಪ್ರತಿಕ್ರಿಯಿಸಿ, ನೂರು ಬಂಡಾಯ ಏಳಲಿ. ಕಾಂಗ್ರೆಸ್ ಪಾರ್ಟಿಯಲ್ಲಿ ಬೇಕಾದಷ್ಟು ಜನ ಬರ್ತಾರೆ ಬೇಕಾದಷ್ಟು ಜನ ಹೋಗ್ತಾರೆ. ಬಂಡಾಯ ಬೇಕಾದಷ್ಟು ಆಗುತ್ತೆ. ಎಲ್ಲ ಪಾರ್ಟಿಯಲ್ಲಿ ಬಂಡಾಯ ಇರುತ್ತದೆ. ಕೆಲವರೆಲ್ಲಾ ಚಟ ತೀರಿಸಿಕೊಳ್ಳುತ್ತಾರೆ ತೀರಿಸಿಕೊಳ್ಳಲಿ ಬಿಡಿ. ಅಧಿಕಾರಕ್ಕೆ ಬರ್ತಾರೆ ಅಂತಾನೆ ಆಕಾಂಕ್ಷಿಗಳು ಜಾಸ್ತಿ ಆಗಿದ್ದಾರೆ ಎಂದರು.