ಹಾಸನ: ಹಾಸನ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (DCC Bank) ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ(IT Raid) ನಡೆಸಿದ್ದಾರೆ. ಜೆಡಿಎಸ್ (JDS Party) ಹಿಡಿತದಲ್ಲಿರುವ ಬ್ಯಾಂಕ್ ಮೇಲೆ ನಡೆದಿರುವ ದಾಳಿಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರಿ ಕುತೂಹಲ ಮತ್ತು ಆತಂಕ ನೆಲೆ ಮಾಡಿದೆ.
ಶುಕ್ರವಾರ ಬೆಳಗ್ಗೆ ಐಟಿ ಅಧಿಕಾರಿಗಳು ಬ್ಯಾಂಕ್ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದು, ಎರಡನೇ ದಿನವೂ ಕಡತಗಳ ಪರಿಶೀಲನೆ ಮುಂದುವರಿದಿದೆ. ಬ್ಯಾಂಕ್‌ಗೆ ಕಳೆದ ಎರಡು ದಿನಗಳಿಂದ ಸಾರ್ವಜನಿಕರು ಮತ್ತು ಗ್ರಾಹಕರ ಭೇಟಿಯನ್ನು ನಿರ್ಬಂಧಿಸಿ ಪರಿಶೀಲನೆ ನಡೆಸಲಾಗುತ್ತಿದೆ.
ಕಾರಿನಲ್ಲಿ ಬಂದಿರುವ ಐವರು ಅಧಿಕಾರಿಗಳ ತಂಡ ಬ್ಯಾಂಕ್‌ನ ಎಲ್ಲಾ ಕಡತಗಳ ಪರಿಶೀಲನೆ ನಡೆಸುತ್ತಿದೆ. ಬ್ಯಾಂಕ್‌ನ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದಲೂ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.
ಚುನಾವಣೆಯ ಹೊಸ್ತಿಲಲ್ಲೂ, ಅದರಲ್ಲೂ ಜೆಡಿಎಸ್ ಸಾರಥ್ಯ ಇರುವ ಬ್ಯಾಂಕ್‌ಗೆ ಈ ರೀತಿ ಐಟಿ ದಾಳಿ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಬ್ಯಾಂಕ್‌ನಲ್ಲಿ ಯಾರೆಲ್ಲ ಠೇವಣಿ ಇಟ್ಟಿದ್ದರು. ಬ್ಯಾಂಕ್‌ನಲ್ಲಿ ಗಣ್ಯ ವ್ಯಕ್ತಿಗಳ ಖಾತೆಯಲ್ಲಿನ ವ್ಯವಹಾರದ ವಿವರಗಳು, ಠೇವಣಿ ಹಿಂದೆಗೆತ ಮತ್ತಿತರ ವಿಚಾರಗಳನ್ನು ತಂಡ ಪರಿಶೀಲಿಸುತ್ತಿದೆ ಎಂದು ಹೇಳಲಾಗಿದೆ.
ಬೆಳಗಾವಿಯಲ್ಲೂ ಚೆನ್ನಮ್ಮ ಸೌಹಾರ್ದ ಬ್ಯಾಂಕ್ ಮೇಲೂ ದಾಳಿ
ಬೆಳಗಾವಿ: ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಕ್ರೆಡಿಟ್ ಮೇಲೂ ಐಟಿ ದಾಳಿ ನಡೆದಿದೆ.
ಶನಿವಾರ ಬೆಳಗ್ಗೆ ಬ್ಯಾಂಕ್‌ಗೆ ಭೇಟಿ ನೀಡಿದ ಅಧಿಕಾರಿಗಳ ತಂಡ ಕಳೆದ ಎರಡು ಗಂಟೆಗಳಿಂದ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ. ಗೋವಾದಿಂದ ಬಂದಿರುವ ಅಧಿಕಾರಿಗಳು ಬ್ಯಾಂಕ್ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ವಿ.ಎಸ್. ಸಾಧುನವರ, ಪುತ್ರ ಕಿರಣ್ ಸಾಧುನವರ ಅವರನ್ನು ವಿಚಾರಣೆಗೆ ಒಳಪಡಿಸಿದೆ.
ಇಲ್ಲಿ ಅಧಿಕಾರಿಗಳು ಪ್ರಮುಖವಾಗಿ 262 ಗ್ರಾಹಕರ ಹೆಸರಿನಲ್ಲಿರುವ ಬ್ಯಾಂಕ್ ಲಾಕರ್‌ಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ. ಶನಿವಾರ ಸಂಜೆವರೆಗೂ ಐಟಿ ಅಧಿಕಾರಿಗಳು ವಿಚಾರಣೆ ನಡೆಸುವ ಸಾಧ್ಯತೆ ಇದ್ದು, ಇದರ ಮೂಲ ಉದ್ದೇಶವೇನು? ಚುನಾವಣೆಗೂ ಇದಕ್ಕೂ ಸಂಬಂಧವಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.
ಇದನ್ನೂ ಓದಿ : Karnataka Election 2023: ಚುನಾವಣೆ ಹಿನ್ನೆಲೆ ಹಣದ ಹೊಳೆ, ದಾಖಲೆ ಇಲ್ಲದ 6 ಕೋಟಿ ರೂ., 17 ಕೆಜಿ ಚಿನ್ನ, ಬೆಳ್ಳಿ ವಶ