ಮಂಗಳೂರು/ಮೈಸೂರು: ಪುತ್ತೂರು ವಿಧಾನಸಭಾ ಕ್ಷೇತ್ರದ (Karnataka Election 2023) ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕೆ. ಅಶೋಕ್ ರೈ (K Ashok Rai) ಅವರ ಸೋದರ ಸುಬ್ರಹ್ಮಣ್ಯ ರೈ ಅವರಿಗೆ ಸೇರಿದ ಮೈಸೂರಿನ ಮನೆಗೆ ಐಟಿ ಅಧಿಕಾರಿಗಳು ಇತ್ತೀಚೆಗೆ ಐಟಿ ಅಧಿಕಾರಿಗಳು ದಾಳಿ (IT Raid) ನಡೆಸಿದ್ದಾರೆ. ಈ ವೇಳೆ ಮನೆಯ ಆವರಣದಲ್ಲಿರುವ ಮರದಲ್ಲಿ ಅಡಗಿಸಿಟ್ಟಿದ್ದ ಒಂದು ಕೋಟಿ ರೂ. ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಇದೇ ವೇಳೆ ಅಶೋಕ್ ಕುಮಾರ್ ರೈ ಅವರ ಬೆಂಗಳೂರಿನ ಮನೆಗೂ ಬುಧವಾರ ಬೆಳಗ್ಗೆ ಐಟಿ ದಾಳಿ ನಡೆದಿದೆ.
ಮೈಸೂರಿನಲ್ಲಿರುವ ಕೆ. ಸುಬ್ರಹ್ಮಣ್ಯ ರೈ ಎಂಬವರ ಮನೆಗೆ ಕೆಲವು ದಿನಗಳ ಹಿಂದೆ ಐಟಿ ದಾಳಿ ನಡೆದಿತ್ತು. ಈ ವೇಳೆ ಮನೆಯೊಳಗೆ ಹುಡುಕಾಡಿದ ಅಧಿಕಾರಿಗಳು ಬಳಿಕ ಮನೆಯ ಅಂಗಳದಲ್ಲಿ ಗಾರ್ಡನ್ ನಡುವೆ ಇರುವ ಅಲಂಕಾರಿಕ ಮರವೊಂದನ್ನು ಶೋಧಿಸಿದ್ದಾರೆ. ತುಂಬಾ ಒತ್ತೊತ್ತಾಗಿ ಎಲೆಗಳನ್ನು ಹೊಂದಿರುವ ಈ ಮರದ ಒಳಗಡೆ ಬ್ಯಾಗ್‌ಗಳಲ್ಲಿ ತುಂಬಿಸಿಟ್ಟಿದ್ದ ಹಣವನ್ನು ವಶಕ್ಕೆ ಪಡೆದಿದ್ದರು. ಹಣವನ್ನು ಚೆನ್ನಾಗಿ ಪ್ಯಾಕ್ ಮಾಡಿ ಅದನ್ನು ಬ್ಯಾಗ್‌ಗಳಲ್ಲಿ ತುಂಬಿ ಆ ಬ್ಯಾಗ್‌ಗಳನ್ನು ಒತ್ತೊತ್ತಾಗಿರುವ ಗೆಲ್ಲುಗಳ ನಡುವೆ ಪೇರಿಸಿ ಇಡಲಾಗಿತ್ತು.
ಸುಬ್ರಹ್ಮಣ್ಯ ರೈ ಅವರು ಅವರು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಸೋದರ ಎಂದು ತಿಳಿದ ನಂತರ ಇದಕ್ಕೆ ರಾಜಕೀಯ ಆಯಾಮವೂ ದೊರಕಿತು. ಇದೆಲ್ಲವೂ ಅಶೋಕ್ ಕುಮಾರ್ ರೈ ಅವರಿಗೆ ಸೇರಿದ ಹಣವಾಗಿರಬಹುದು, ಇಲ್ಲಿ ಅಡಗಿಸಿಡಲಾಗಿದೆ ಎಂದೆಲ್ಲ ಸುದ್ದಿ ಹರಡಿತ್ತು.
ಅಶೋಕ್ ಕುಮಾರ್ ರೈ ನಿರಾಕರಣೆ
ಮೈಸೂರಿನಲ್ಲಿರುವ ಸೋದರನ ಮನೆ ಮೇಲೆ ನಡೆದ ಐಟಿ ದಾಳಿ ಮತ್ತು ಅಲ್ಲಿ ಸಿಕ್ಕಿದ ಹಣದ ವಿಚಾರಕ್ಕೆ ಸಂಬಂಧಿಸಿ ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಅವರು ಪ್ರತಿಕ್ರಿಯಿಸಿದ್ದು, ʻʻನನ್ನ ಅಣ್ಣನ ಮನೆಗೆ ಐಟಿ ದಾಳಿ ಆಗಿರುವುದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ಸಹೋದರ ಒಳ್ಳೆಯ ಬಿಝಿನೆಸ್ ಮ್ಯಾನ್, ಹಾಗೆಯೇ ಒಳ್ಳೆಯ ಟ್ಯಾಕ್ಸ್ ಪೇಯರ್. ಅವನ ಮನೆ ಮೇಲಿನ ದಾಳಿಗೂ ನನಗೂ ಯಾವುದೇ ಸಂಬಂಧವಿಲ್ಲʼʼ ಎಂದು ಹೇಳಿದ್ದಾರೆ.
ಅಶೋಕ್ ಕುಮಾರ್ ರೈ ಮನೆಗೂ ಐಟಿ ದಾಳಿ
ಈ ನಡುವೆ ಬೆಂಗಳೂರಿನಲ್ಲಿರುವ ಅಶೋಕ್ ಕುಮಾರ್ ರೈ ಅವರ ಮನೆಗೂ ಐಟಿ ದಾಳಿ ನಡೆದಿದೆ. ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಶೋಕ್ ಕುಮಾರ್ ರೈ ಅವರು, ʻʻನನ್ನ ಮನೆ ಮೇಲೂ ದಾಳಿ ಮಾಡಿಸಿದ್ದಾರೆ. ಆದರೆ ಐಟಿ ರೈಡ್ ಆದರೂ ನನ್ನ ಮನೆಯಲ್ಲಿ ಅಧಿಕಾರಿಗಳಿಗೆ ಏನೂ ಸಿಕ್ಕಿಲ್ಲ. ನಾನು ಉದ್ಯಮಿ. ನಾನು ವರ್ಷಕ್ಕೆ ಎಷ್ಟೋ ಕೋಟಿ ರೂ. ತೆರಿಗೆ ಕಟ್ಟುತ್ತಿದ್ದೇನೆʼʼ ಎಂದು ಹೇಳಿದರು.
ನಾನು ಹಿಂದು, ಹಿಂದುತ್ವ ಒಪ್ಪಿಕೊಂಡನು
ಪುತ್ತೂರು ಕಾಂಗ್ರೆಸ್ ಅಭ್ಯರ್ಥಿಯಾಗಿ ಭರದ ಪ್ರಚಾರದಲ್ಲಿರುವ ಅಶೋಕ್ ಕುಮಾರ್ ರೈ ಅವರು, ಬಿಜೆಪಿಯವರು ಐದು ವರ್ಷದಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ. ನಾವು ಅವರ ಅಭಿವೃದ್ಧಿಯ ಬಗ್ಗೆ ಪ್ರಶ್ನೆ ಮಾಡುವಾಗ ಅವರು ನಾವು ಮಾಡಿರುವ ಭಾಷಣವನ್ನು ತಿರುಚುತ್ತಾರೆ ಎಂದು ಹೇಳಿದರು. ʻʻನಾನು ಬಿಜೆಪಿ ಪಕ್ಷಕ್ಕೆ ಆಗಲಿ, ಕಾರ್ಯಕರ್ತರಿಗೆ ಆಗಲಿ ಅಥವಾ ಹಿಂದುತ್ವಕ್ಕೆ ಬುದ್ಧಿ ಕಲಿಸ್ತೇನೆ ಅಂತ ಹೇಳಿಲ್ಲʼʼ ಎಂದು ಅಶೋಕ್ ಕುಮಾರ್ ರೈ ಹೇಳಿದರು.
ʻʻನಾನೂ ಕೂಡ ಹಿಂದು, ಹಿಂದುತ್ವವನ್ನು ಒಪ್ಪಿಕೊಂಡವನು. ನಾನು ನನ್ನ ಧರ್ಮವನ್ನು ಪ್ರೀತಿಸ್ತೇನೆ, ಇನ್ನೊಂದು ಧರ್ಮವನ್ನು ಗೌರವಿಸುತ್ತೇನೆ. ಎಲ್ಲಾ ಧರ್ಮವನ್ನು ಸಮಾನವಾಗಿ ನೋಡುವವ ನಾನು. ಹಾಗಾಗಿ ಬೇರೆ ಯಾವುದೇ ಆಯುಧಗಳಿಲ್ಲದೆ ಬಿಜೆಪಿ ಸೋಲನ್ನೊಪ್ಪಿಕೊಂಡಿದೆʼʼ ಎಂದು ಅಶೋಕ್ ಕುಮಾರ್ ರೈ ಹೇಳಿದರು.
ಡಿವಿಎಸ್ ಜತೆ ಮಿತ್ರ-ಶತ್ರು ಸಂಬಂಧ
ʻʻಅಶೋಕ್ ರೈ ನನ್ನ ಮಿತ್ರರಾಗಿದ್ದರು. ಈಗ ಶತ್ರುʼʼ ಎಂಬ ಡಿ.ವಿ. ಸದಾನಂದ ಗೌಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ʻʻನಾನು ರಾಜಕೀಯದಲ್ಲಿ ಸಣ್ಣ ವ್ಯಕ್ತಿ. ಆದರೆ ಡಿ.ವಿ. ಸದಾನಂದ ಗೌಡರು ದೇಶದ, ರಾಜ್ಯದ ದೊಡ್ಡ ದೊಡ್ಡ ಹುದ್ದೆ ಅಲಂಕರಿಸಿದವರು. ಅವರ ಬಗ್ಗೆ ಮಾತಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ನನ್ನ ಬಗ್ಗೆ ಹೆಚ್ಚೇನೂ ಅವರೂ ಮಾತಾಡಿಲ್ಲ. ನನ್ನ ಮಿತ್ರನಲ್ಲ, ಶತ್ರು ಅಂತ ಹೇಳಿದ್ದಾರೆ. ಆದರೆ ನಾನು ಅವರಿಗೆ ಯಾವತ್ತೂ ಕೂಡ ಶತ್ರುವಲ್ಲ, ಅವರ ಮಿತ್ರನೇ. ನನಗೆ ಯಾರೂ ಶತ್ರುಗಳಿಲ್ಲ, ಎಲ್ಲರೂ ಮಿತ್ರರೇ. ಆ ಮಹಾಲಿಂಗೇಶ್ವರ ದೇವರು ಎಲ್ಲರಿಗೂ ಒಳ್ಳೆ ಬುದ್ಧಿ ಕೊಡಲಿʼʼ ಎಂದು ಹೇಳಿದರು.
ಇದನ್ನೂ ಓದಿ : Karnataka Election: ಬಜರಂಗದಳಕ್ಕೂ, ಆಂಜನೇಯನಿಗೂ ಏನು ಸಂಬಂಧ; ಡಿ.ಕೆ.ಶಿವಕುಮಾರ್ ಪ್ರಶ್ನೆ