Site icon Vistara News

IT Raid: ಗುತ್ತಿಗೆದಾರನ ಫ್ಲ್ಯಾಟ್‌ನಲ್ಲಿ ಸಿಕ್ತು 42 ಕೋಟಿ ರೂ.! ರಾಜಸ್ಥಾನ ಚುನಾವಣೆಗೆ ರಾಜ್ಯದಿಂದಲೇ ಫಂಡಿಂಗ್!

it raid 42 crores

ಬೆಂಗಳೂರು: ನಿನ್ನೆ ಆದಾಯ ತೆರಿಗೆ ಇಲಾಖೆ (income tax department) ಅಧಿಕಾರಿಗಳು ನಡೆಸಿದ ದಾಳಿಯ (IT Raid) ವೇಳೆ ಫ್ಲ್ಯಾಟ್‌ ಒಂದರಲ್ಲಿ 42 ಕೋಟಿ ರೂ. ಮೊತ್ತದ ನಗದು ದೊರೆತಿದೆ. ಐಟಿ ಮೆಗಾ ರೈಡ್‌ನ ರಹಸ್ಯ ಇದೀಗ ಬಯಲಾಗಿದ್ದು, ರಾಜಸ್ಥಾನದ ವಿಧಾನಸಭೆ ಚುನಾವಣೆಗೆ (Rajastha assembly election) ಇಲ್ಲಿಂದಲೇ ಹಣ ಪೂರೈಕೆಯಾಗುತ್ತಿದೆ ಎಂಬ ಅನುಮಾನಕ್ಕೆ ಪುಷ್ಟಿ ದೊರೆತಿದೆ.

ಬೆಂಗಳೂರಿನಲ್ಲಿ ನಿನ್ನೆ ಮುಂಜಾನೆ ಹಾಗೂ ರಾತ್ರಿ ಐಟಿ ಅಧಿಕಾರಿಗಳು ಮೆಗಾ ರೈಡ್‌ ನಡೆಸಿದ್ದರು. ಈ ವೇಳೆ ಒಂದು ಫ್ಲ್ಯಾಟ್‌ನಲ್ಲಿ ಅಪಾರ ಪ್ರಮಾಣದ ಹಣ ಪತ್ತೆಯಾಗಿತ್ತು. ಒಂದಲ್ಲ ಎರಡಲ್ಲ, ಬರೋಬ್ಬರಿ 23 ರಟ್ಟಿನ ಬಾಕ್ಸ್‌ಗಳಲ್ಲಿ ಕಂತೆ ಕಂತೆ ಹಣ ಲಭ್ಯವಾಗಿತ್ತು. ಎಲ್ಲವೂ ಐನೂರು ಮುಖಬೆಲೆಯ ನೋಟಿನ ಕಂತೆಗಳಾಗಿದ್ದು, ಕಾರಿನಲ್ಲಿ ಹಣ ಸಾಗಾಟ ಮಾಡಲು ತಯಾರಾಗಿತ್ತು. ಲಾಕ್‌ ಮಾಡಿ ಇಟ್ಟಿದ್ದ ರೂಮಿನಲ್ಲಿದ್ದ ಮಂಚದ ಅಡಿಯಲ್ಲಿ ಈ ನಗದು ಇಡಲಾಗಿತ್ತು.

ಈ ಮನೆಯನ್ನು ಯಾರೂ ಬಳಸುತ್ತಿರಲಿಲ್ಲ. ಆದರೆ ಈ ಮನೆ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷರಾಗಿರುವ ಅಂಬಿಕಾಪತಿ ಅವರ ಪತ್ನಿ, ಮಾಜಿ ಕಾರ್ಪೊರೇಟರ್ ಅಶ್ವಥಮ್ಮ ಅವರ ಸಂಬಂಧಿಯೊಬ್ಬರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಹಣಕ್ಕೆ ಸಂಬಂಧಿಸಿದಂತೆ ಹಲವರ ವಿಚಾರಣೆ ನಡೆದಿದೆ. ರಾಜ್ಯದಲ್ಲಿನ ಐಟಿ ದಾಳಿಗಳಲ್ಲಿ ಪತ್ತೆಯಾದ ಅತಿದೊಡ್ಡ ಮೊತ್ತದ ಹಣ ಇದಾಗಿದೆ. ಪಂಚರಾಜ್ಯಗಳ ಚುನಾವಣೆ ಘೋಷಣೆ ಬೆನ್ನಲ್ಲೆ ನಗರದಲ್ಲಿ ಪತ್ತೆಯಾದ ಭಾರಿ ಅಪಾರ ಪ್ರಮಾಣದ ಹಣದ ಹಿನ್ನೆಲೆಯಲ್ಲಿ, ಹಣ ಎಲ್ಲಿಗೆ ಸಾಗಾಟವಾಗ್ತಾ ಇತ್ತು, ಯಾರಿಗೆ ಸೇರಿದ್ದು, ಎಲ್ಲಿಂದ ಬಂದಿತ್ತು ಅನ್ನುವ ಬಗ್ಗೆ ಗಂಭೀರ ವಿಚಾರಣೆ ನಡೆಸಲಾಗುತ್ತಿದೆ.

ನಿನ್ನೆ ಸಂಜೆ 6 ಗಂಟೆಗೆ ಪೊಲೀಸ್ ಸಿಬ್ಬಂದಿಗಳ ಭದ್ರತೆಯಲ್ಲಿ ಐಟಿ ಅಧಿಕಾರಿಗಳು ಏಕಕಾಲದಲ್ಲಿ ಆರ್‌ಟಿ ನಗರದ ಎರಡು ಸ್ಥಳಗಳಲ್ಲಿ ಹಾಗೂ ಆತ್ಮಾನಂದ ಕಾಲೋನಿಯ ಒಂದು ಫ್ಲ್ಯಾಟ್ ಮೇಲೆ ದಾಳಿ ಮಾಡಿದ್ದರು. ಈ ದಾಳಿಯ ವೇಳೆ ಈ ಹಣ ದೊರೆತಿದೆ. ದಾಳಿ ಮಾಡಿ ವಿಚಾರಣೆ ನಡೆಸುತ್ತಿರುವ ಐಟಿ ಅಧಿಕಾರಿಗಳು ಹಣದ ದೃಶ್ಯಾವಳಿಗಳನ್ನು ದಾಖಲೆ ಮಾಡಿಕೊಂಡಿದ್ದಾರೆ. ಇದೇ ವೇಳೆ ವಾರ್ಡ್ ನಂ 95ರ ಮಾಜಿ ಕಾರ್ಪೊರೇಟರ್ ನಿವಾಸದ ಮೇಲೂ ಐಟಿ ದಾಳಿ ನಡೆದಿದೆ. ಗಣೇಶ ಬ್ಲಾಕ್‌ನ ಅಶ್ವತಮ್ಮ ಹಾಗೂ ಆರ್.ಅಂಬಿಕಾಪತಿ ದಂಪತಿಗಳ ನಿವಾಸದ ಮೇಲೂ ದಾಳಿಯಾಗಿದೆ.

ರಾಜಸ್ಥಾನಕ್ಕೆ ಇಲ್ಲಿಂದಲೇ ಫಂಡಿಂಗ್‌!

ಒಂದು ವಾರದಿಂದ ರಾಜಧಾನಿಯಲ್ಲಿ ಐಟಿ ಮೇಗಾ ರೇಡ್ ನಡೆಯುತ್ತಿರುವುದೇಕೆ? ಅದರ ಇನ್‌ಸೈಡ್‌ ಸ್ಟೋರಿ ಹೀಗಿದೆ. ಮುಂಬರಲಿರುವ ಪಂಚ ರಾಜ್ಯಗಳ ಚುನಾವಣೆಗೆ ರಾಜಧಾನಿ ಬೆಂಗಳೂರು ಫಂಡಿಂಗ್ ಅಡ್ಡೆಯಾಗಿದೆ! ಇದೇ ಮಾಹಿತಿ ಅಧರಿಸಿ ಆದಾಯ ತೆರಿಗೆ ಇಲಾಖೆ ರೇಡ್ ಶುರು ಮಾಡಿದೆ.

ಪಂಚರಾಜ್ಯಗಳ ಚುನಾವಣೆ ದಿನಾಂಕ‌ ಘೋಷಣೆಗೆ ಮೊದಲೇ ಐಟಿ ಇಲಾಖೆ ರೇಡ್ ಶುರು ಮಾಡಿದೆ. ಕಳೆದ ಬಾರಿಯ ರೇಡ್ ವೇಳೆ ಹಲವು ಮಾಹಿತಿಗಳು ಲಭ್ಯವಾಗಿದ್ದವು. ಅದನ್ನು ಅಧರಿಸಿ ಎರಡನೇ ಹಂತದ ರೇಡ್ ಶುರು ಮಾಡಿದೆ. ರಾಜಸ್ಥಾನ ಚುನಾವಣೆಗೆ ರಾಜಧಾನಿಯಿಂದ ಅತ್ಯಧಿಕ ಫಂಡಿಂಗ್ ಆಗುತ್ತಿದೆ, ಅನೇಕ ಜ್ಯುವೆಲ್ಲರಿ ಶಾಪ್ ಮಾಲೀಕರು ಚುನಾವಣೆ ಪ್ರಚಾರಕ್ಕೆ ಹಣ ಒದಗಿಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದ್ದು, ಅದನ್ನನುಸರಿಸಿ ಐಟಿ ದಾಳಿ ಮಾಡಿದೆ.

ಯಾರ ಮನೆ?

ಹಣ ಇದ್ದ ಈ ಮನೆಯ ಬಿಲ್ಡರ್‌ ಮನೆಯ ಕೀ ಕೊಡದೆ ಅಧಿಕಾರಿಗಳಿಗೆ ಆಟ ಆಡಿಸಿದ್ದ. ಡ್ರೈವರ್ ಬಳಿಯಲ್ಲಿ ಕೀ ಕೊಟ್ಟು ಬೆಂಗಳೂರು ಬಿಡಲು ಹೇಳಿದ್ದ. ಕೊನೆಗೆ ಬಿಲ್ಡರ್ ಡ್ರೈವರ್ ಅನ್ನು ವಶಕ್ಕೆ ಪಡೆದು ಅಧಿಕಾರಿಗಳು ಕೀ ತೆಗೆದುಕೊಂಡಿದ್ದಾರೆ. ಸಂಜೆ 7 ಗಂಟೆಗೆ ಮನೆಯ ಬೀಗ ತೆಗೆದು ದುಡ್ಡು ಸೀಝ್ ಮಾಡಿದ್ದಾರೆ. 42 ಕೋಟಿ ರೂ. ಹಣವನ್ನು ಸೀಝ್ ಮಾಡಿದ ಐಟಿ ಅಧಿಕಾರಿಗಳು ಹಣದ ದೃಶ್ಯಾವಳಿಯನ್ನು ಚಿತ್ರೀಕರಣ ಮಾಡಿಸುತ್ತಿದ್ದು, ಈಗಾಗಲೇ ಇಡಿ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ. ಅಕ್ರಮ ಹಣದ ವರ್ಗಾವಣೆ ಕೇಸ್‌ನಲ್ಲಿ ಪ್ರಕರಣ ದಾಖಲು ಮಾಡಲು ಇಡಿ ತಯಾರಿ ಮಾಡಿಕೊಳ್ಳುತ್ತಿದೆ. ಇದು ಯಾರಿಗೆ ಸೇರಿದ ಮನೆ ಎಂಬ ವಿವರ ಅಧಿಕಾರಿಗಳು ನೀಡಿಲ್ಲ. ಆದರೆ ಅನುಮಾನಗಳು ಅಧಿಕಾರದಲ್ಲಿರುವವರ ಆಪ್ತರ, ಗುತ್ತಿಗೆದಾರರ ಕಡೆಗೆ ಬೊಟ್ಟು ಮಾಡಿವೆ.

ಸಿಎಂ ಭೇಟಿ ಮಾಡಿದ್ದ ಗುತ್ತಿಗೆದಾರ

ಇವರಲ್ಲಿ ಆರ್.‌ ಅಂಬಿಕಾಪತಿ ಗುತ್ತಿಗೆದಾರನಾಗಿದ್ದು, ಈ ಹಿಂದೆ ಆರ್‌ಆರ್‌ ನಗರ ಶಾಸಕ ಮುನಿರತ್ನ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ. ಆಗಸ್ಟ್ 8ರಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ಅಂಬಿಕಾಪತಿ, ಗುತ್ತಿಗೆ ಕೆಲಸದ ಬಿಲ್ ಅನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ಅಂಬಿಕಾಪತಿ ವಿರುದ್ಧ ಆರ್‌ಆರ್‌ ನಗರ ಶಾಸಕ ಮುನಿರತ್ನ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಅಂಬಿಕಾಪತಿ, ಕೆಂಪಣ್ಣ ಟೀಂನಲ್ಲಿದ್ದು, ಇಬ್ಬರ ಮೇಲೂ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು.

ನಿನ್ನೆ ಬಿಬಿಎಂಪಿ ಗುತ್ತಿಗೆದಾರ ಹೇಮಂತ್ ಮನೆ ಮೇಲೂ ಐಟಿ ದಾಳಿ ನಡೆದಿದೆ. ಬಿಲ್‌ ಪಾವತಿಗೆ ಸರ್ಕಾರ ಪರ್ಸೆಂಟೇಜ್ ಪಡಿತಾಯಿದೆ ಎಂದು ಹೇಮಂತ್ ಆರೋಪ ಮಾಡಿದ್ದರು. ಇಂದು ಅಂಬಿಕಾಪತಿ ಮನೆ ಮೇಲೆ ಐಟಿ ದಾಳಿ ನಡೆದಿದೆ. ಅಂಬಿಕಾಪತಿ ಹಾಗೂ ಗುತ್ತಿಗೆದಾರರ ಹೇಮಂತ್ ಒಂದೇ ತಂಡದವರಾಗಿದ್ದಾರೆ.

ಇದನ್ನೂ ಓದಿ: IT Raid: 50ಕ್ಕೂ ಹೆಚ್ಚು ಕಡೆ ಐಟಿ ದಾಳಿ; ಪಂಚರಾಜ್ಯ ಫಂಡಿಂಗ್‌ಗೆ ಅಡ್ಡೆ ಆಯ್ತಾ ಬೆಂಗಳೂರು?

Exit mobile version