ಬೆಂಗಳೂರು: ಒಂದು ವಾರದ ಹಿಂದೆ ಚಿನ್ನದ ಅಂಗಡಿಗಳ (Jewelry shop) ಮಾಲಿಕರ ಮನೆ, ಕಚೇರಿ ಅಂಗಡಿಗಳ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ (Income tax department) ಅಧಿಕಾರಿಗಳು, ಇಂದು ಮುಂಜಾನೆ ಹಲವಾರು ಅಧಿಕಾರಿಗಳು ಸೇರಿದಂತೆ 50ಕ್ಕೂ ಹೆಚ್ಚು ಕಡೆ ದಾಳಿ (IT Raid) ನಡೆಸಿ ಶಾಕ್ ಕೊಟ್ಟಿದ್ದಾರೆ. ಬೆನ್ನು ಬೆನ್ನಿಗೆ ನಡೆದ ಈ ದಾಳಿಗೂ ಪಂಚರಾಜ್ಯ ಚುನಾವಣೆಯ ಫಂಡಿಂಗ್‌ಗೂ ಸಂಬಂಧ ಕಲ್ಪಿಸಲಾಗುತ್ತಿದೆ.
ಬೆಂಗಳೂರಿನ ಹಲವೆಡೆ ಐಟಿ ಅಧಿಕಾರಿಗಳಿಂದ ಏಕಕಾಲದಲ್ಲಿ ರೈಡ್ ನಡೆದಿದೆ. ಆರ್‌ಎಂವಿಎಕ್ಸ್ ಸ್ಟೇಷನ್, ಮಲ್ಲೇಶ್ವರ, ಡಾಲರ್ಸ್ ಕಾಲೋನಿ, ಬಿಎಲ್ ಸರ್ಕಲ್ ಸೇರಿದಂತೆ ಹಲವು ಕಡೆ ದಾಳಿ ನಡೆಸಲಾಗಿದೆ.
ಕಾಫಿ ಬೋರ್ಡ್ ನಿರ್ದೇಶಕ ಚಂದ್ರಶೇಖರ್ ಮನೆ ಮೇಲೆ ಐಟಿ ಅಧಿಕಾರಿಗಳು ರೈಡ್ ಮಾಡಿದ್ದಾರೆ. ಆರ್‌ವಿಎಕ್ಸ್ ಸ್ಟೇಷನ್‌ನಲ್ಲಿರುವ ಚಂದ್ರಶೇಖರ್ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಮುಂಜಾನೆಯಿಂದ ದಾಖಲೆಗಳು ಹಾಗೂ ಚರಾಸ್ತಿಗಳ ಪರಿಶೀಲನೆ ಮಾಡುತ್ತಿದ್ದಾರೆ.
ಒಟ್ಟು 120ಕ್ಕೂ ಹೆಚ್ಚು ಕಾರುಗಳಲ್ಲಿ ತೆರಳಿರುವ ಐಟಿ ಅಧಿಕಾರಿಗಳು ನಾನಾ ಕಡೆ ಬೆಳ್ಳಂಬೆಳಗ್ಗೆಯೇ ಏಕಕಾಲಕ್ಕೆ ದಾಳಿ ಮಾಡಿದರು. ಭ್ರಷ್ಟಚಾರದ ಆರೋಪ ಬಂದಿರುವ ಅಧಿಕಾರಿಗಳ ಬೇಟೆಗೆ ಐಟಿ ತಂಡಗಳು ಇಳಿದಿವೆ. ಜತೆಗೆ ಚಿನ್ನದಂಗಡಿ ಮಾಲಿಕರ ಮನೆ ಮೇಲೆ ಮತ್ತೆ ರೈಡ್ ಆಗಿದೆ.
ಮಲ್ಲೇಶ್ವರಂ, ಸದಾಶಿವನಗರ, ಡಾಲರ್ಸ್ ಕಾಲೋನಿ, ಮತ್ತಿಕೆರೆ, ಸರ್ಜಾಪುರ ರಸ್ತೆ ಸೇರಿದಂತೆ 10ಕ್ಕೂ ಹೆಚ್ಚು ಕಡೆ ಚಿನ್ನದ ವ್ಯಾಪಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು ದಾಖಲೆ ಪತ್ರವನ್ನು ಪರಿಶೀಲನೆ ನಡೆಸಿದ್ದಾರೆ. ತೆರಿಗೆ ವಂಚನೆ ಸಂಬಂಧ ಕಳೆದ ವಾರವೂ ಚಿನ್ನದ ವ್ಯಾಪಾರಿಗಳ ಮೇಲೆ ದಾಳಿ ನಡೆದಿತ್ತು. ದಾಳಿ ವೇಳೆ ಪತ್ತೆಯಾದ ಹಲವಾರು ದಾಖಲಾತಿ ಆಧಾರದ ಮೇಲೆ ಐಟಿ ಅಧಿಕಾರಿಗಳು ಮತ್ತೆ ದಾಳಿ ಮಾಡಿದ್ದಾರೆ.
ಕಳೆದ ಒಂದು ವಾರದಿಂದ ನಿರಂತರವಾಗಿ ಐಟಿ ರೈಡ್ ಮಾಡಲಾಗುತ್ತಿದೆ. ಅಕ್ಟೋಬರ್ 06ರಂದು ಬೆಂಗಳೂರಿನ 10ಕ್ಕೂ ಹೆಚ್ಚು ಕಡೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. 15ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡಗಳು ರಾತ್ರೋರಾತ್ರಿ ಚೆನ್ನೈ, ದೆಹಲಿಯಿಂದ ಬಂದಿದ್ದ ತಂಡ ಬೆಂಗಳೂರಿನ ಹಲವೆಡೆ ಖಾಸಗಿ ಕಂಪನಿಗಳು, ಅದರ ಮಾಲೀಕರು ಹಾಗೂ ಚಿನ್ನದ ವ್ಯಾಪಾರಿಗಳ ಮನೆಗಳ ಮೇಲೆ ದಾಳಿ ಮಾಡಿತ್ತು.
ತೆರಿಗೆ ವಂಚನೆ ಆರೋಪಡಿ ಅಕ್ಟೋಬರ್ 10ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಬಿರಿಯಾನಿ ಸೆಂಟರ್ಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದರು. ದಾಳಿ ವೇಳೆ ಬಿರಿಯಾನಿ ಸೆಂಟರ್ಗಳ 30ಕ್ಕೂ ಅಧಿಕ ಯುಪಿಐ ವಿವಿಧ ಖಾತೆಗಳು, ಅನಧಿಕೃತ ಹಣ, ಪತ್ತೆಯಾಗಿದ್ದು, ಮಾಲೀಕರ ಮನೆಯಿಂದ 1.47 ಕೋಟಿ ರೂಪಾಯಿ ನಗದು ಸಿಕ್ಕಿತ್ತು.
ಇದನ್ನೂ ಓದಿ: Bitcoin Scam : ಬಿಟ್ ಕಾಯಿನ್ ತನಿಖೆ ನಡೆಸಿದ್ದ ಇನ್ಸ್‌ಪೆಕ್ಟರ್‌ಗಳ ಮನೆಗೆ ಎಸ್‌ಐಟಿ ದಾಳಿ
ಪಂಚರಾಜ್ಯ ಫಂಡಿಂಗ್ ಅಡ್ಡೆ ಆಯ್ತಾ ಬೆಂಗಳೂರು?
ರಾಜ್ಯದಲ್ಲಿ ನಡೆದ ಐಟಿ ದಾಳಿಗೂ ಪಂಚರಾಜ್ಯ ಚುನಾವಣೆಗೂ ಸಂಬಂಧವಿದೆ ಎನ್ನಲಾಗಿದೆ. ರಾಜಧಾನಿಯಿಂದ ರಾಜಸ್ಥಾನಕ್ಕೆ ಹಣ ರವಾನೆ ಮಾಡುತ್ತಿದ್ದ ಸಂಶಯದ ಮೇಲೆ ಈ ದಾಳಿ ನಡೆದಿದೆ ಎನ್ನಲಾಗಿದೆ. ರಾಜ್ಯದಿಂದ ಪಂಚ ರಾಜ್ಯಗಳ ಚುನಾವಣೆಗೆ ಫಂಡಿಂಗ್ ನಡೆಯುತ್ತಿದೆಯಾ ಎಂಬ ಸಂಶಯ ಮೂಡಿದೆ.