ಚಿಕ್ಕಮಗಳೂರು: ಇಲ್ಲಿನ ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಅವರ ನಿವಾಸದ ಮೇಲೆ ಮುಂಜಾನೆಯೇ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ (IT Raid on Congress leader).
ಚಿಕ್ಕಮಗಳೂರು ನಗರದ ಹೂವಿನ ಮಾರ್ಕೆಟ್ ರಸ್ತೆಯಲ್ಲಿರುವ ನಿವಾಸಕ್ಕೆ ಹತ್ತಕ್ಕೂ ಹೆಚ್ಚು ವಾಹನಗಳಲ್ಲಿ ಆಗಮಿಸಿ ದಾಳಿ ಇಡಲಾಗಿದೆ. ಜತೆಗೆ ಬೇಲೂರಿನಲ್ಲಿರುವ ಅವರ ಅಳಿಯನ ನಿವಾಸದ ಮೇಲೂ ಅಧಿಕಾರಿಗಳು ಲಗ್ಗೆ ಇಟ್ಟಿದ್ದಾರೆ.
ದಾಳಿಯ ವೇಳೆ ಗಾಯತ್ರಿ ಶಾಂತೇಗೌಡ ಅವರು ಮನೆಯಲ್ಲೇ ಇದ್ದರು ಎನ್ನಲಾಗಿದೆ. ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದು, ಇದು ಸಂಜೆಯವರೆಗೂ ಮುಂದುವರಿಯುವ ಸಾಧ್ಯತೆ ಇದೆ.
ಮದುವೆ ದಿಬ್ಬಣದಂತೆ ಬಂದರು!
ಬೆಳಗ್ಗೆ ಬೆಳಗ್ಗೆ ಮನೆ ಮುಂದೆ ಹತ್ತಾರು ವಾಹನಗಳು ಯಾಕೆ ನಿಂತಿವೆ ಎನ್ನುವ ಬಗ್ಗೆ ಸಂಶಯ ಬಾರದಿರಲಿ ಎಂದು ಅಧಿಕಾರಿಗಳು ಕಾರಿನ ಮುಂಭಾಗಕ್ಕೆ ಮದುವೆ ಬೋರ್ಡ್ ಹಾಕಿಕೊಂಡು ಬಂದಿದ್ದರು. ಅಭಿನವ್ ವೆಡ್ಸ್ ದೀಪಿಕಾ ಎಂದು ಬೋರ್ಡ್‌ನಲ್ಲಿ ಬರೆಯಲಾಗಿತ್ತು.
ಗಾಯತ್ರಿ ಶಾಂತೇ ಗೌಡ ಅವರು ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ (ಸ್ಥಳೀಯ ಸಂಸ್ಥೆಗಳಿಂದ ಆಯ್ಕೆ) ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಬಿಜೆಪಿಯ ಎಂ.ಕೆ. ಪ್ರಾಣೇಶ್ ವಿರುದ್ಧ ತೀವ್ರ ಹೋರಾಟ ನೀಡಿದ ಅವರು ಮೂರು ಮತಗಳಿಂದ ಸೋಲೊಪ್ಪಿಕೊಂಡಿದ್ದರು. ಗಾಯತ್ರಿ ಅವರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ.
ಹಾಸನದಲ್ಲಿ ಅಳಿಯನ ಮನೆ ಮೇಲೆ ದಾಳಿ
ಗಾಯತ್ರಿ ಶಾಂತೇಗೌಡ ಅವರ ಅಳಿಯನ ಸಂತೋಷ್ ಅವರಿಗೆ ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿರುವ ಮನೆಯಲ್ಲೂ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ.
ಬೇಲೂರು ಪಟ್ಟಣದ ಚನ್ನಕೇಶವಗೌಡ್ರು ಬೀದಿಯಲ್ಲಿರುವ ಸಂತೋಷ್ ನಿವಾಸ ಮತ್ತು ಅವರಿಗೆ ಸೇರಿದ ಕಲ್ಯಾಣಮಂಟಪದ ಮೇಲೂ ದಾಳಿ ನಡೆದಿದೆ. ಐಟಿ ಅಧಿಕಾರಿಗಳು ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | IT Raid | ಶಿಕ್ಷಣ ಸಂಸ್ಥೆ ಮೇಲಿನ ಐಟಿ ದಾಳಿ ನಾನ್ ಸ್ಟಾಪ್