ಬೆಂಗಳೂರು: ಚುನಾವಣೆಯ ದಿನ (Karnataka Elections) ಸನ್ನಿಹಿತವಾಗುತ್ತಿರುವಂತೆಯೇ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ಮೇಲೆ, ಅಭ್ಯರ್ಥಿಗಳ ಮೇಲೆ ಐಟಿ, ಇಡಿ ದಾಳಿಗಳು ಹೆಚ್ಚಾಗಲಿವೆ ಎಂದು ಕಾಂಗ್ರೆಸ್ ಮುಖಂಡರು ಮಂಗಳವಾರ ರಾತ್ರಿ ದೆಹಲಿಯಲ್ಲಿ ಆರೋಪ ಮಾಡಿದ ಬೆನ್ನಿಗೇ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೊಬ್ಬರ ಮೇಲೆ ಬೆಂಗಳೂರಿನಲ್ಲಿ ದಾಳಿ ನಡೆದಿದೆ. ಈ ನಡುವೆ ರಾಜ್ಯಾದ್ಯಂತ ಅಧಿಕಾರಿಗಳು ನಡೆಸುತ್ತಿರುವ ತಪಾಸಣೆ ಮತ್ತು ದಾಳಿಯಿಂದ ಒಂದೇ ದಿನ 2.6 ಕೋಟಿ ರೂ. ಹಣ ಸಿಕ್ಕಿದೆ.
ರಾಜ್ಯದಲ್ಲಿ ಚುನಾವಣಾಧಿಕಾರಿಗಳು ಎಲ್ಲ ಕಡೆ ನಿಗಾ ಇಟ್ಟಿದ್ದಾರೆ, ಪೊಲೀಸರು, ಆರ್‌ಟಿಒ ಅಧಿಕಾರಿಗಳು ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಅದರ ಜತೆಗೆ ಈಗ ಐಟಿ ಮತ್ತು ಇ.ಡಿ ಕೂಡಾ ಪ್ರವೇಶ ಮಾಡಿರುವುದು ನಿಜವಾಗಿದೆ.
ಬುಧವಾರ (ಏಪ್ರಿಲ್ 5) ಬೆಳಗ್ಗೆ ಬೆಂಗಳೂರಿನ ಕಾಂಗ್ರೆಸ್ ಮುಖಂಡ, ಪದ್ಮನಾಭ ನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೂ ಆಗಿರುವ ಗುರಪ್ಪ ನಾಯ್ಡು ಅವರ ಮೇಲೆ ಬೆಳಗ್ಗೆ 7 ಗಂಟೆ ಸುಮಾರಿಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೂರು ವಾಹನಗಳಲ್ಲಿ ಬನಶಂಕರಿ 2ನೇ ಹಂತಕ್ಕೆ ಬಂದ ಐಟಿ ಅಧಿಕಾರಿಗಳು ಗುರಪ್ಪನಾಯ್ಡು ನಿವಾಸ ಹಾಗೂ ಕಚೇರಿ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ರಾಜ್ಯಾದ್ಯಂತ ಮುಂದುವರಿದ ದಾಳಿ
ಹಿರೇಬಾಗೇವಾಡಿ ಟೋಲ್‌ನಲ್ಲಿ 2 ಕೋಟಿ ರೂ. ಪತ್ತೆ
ಬೆಳಗಾವಿ: ತಾಲೂಕಿನ ಹಿರೇಬಾಗೇವಾಡಿ ಟೋಲ್‌ನಲ್ಲಿ ದಾಖಲೆ ಇಲ್ಲದ 2 ಕೋಟಿ ರೂಪಾಯಿ ಹಣ ವಶವಾಗಿದೆ. ಮುಂಬೈನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ಸನ್ನು ತಪಾಸಣೆ ಮಾಡಿದಾಗ ಹಣ ಪತ್ತೆಯಾಗಿದ್ದು, ಅದರ ಬಗ್ಗೆ ಯಾವುದೇ ದಾಖಲೆ ನೀಡಲು ಅದರ ಮಾಲೀಕರು ವಿಫಲರಾದರು.
ಬೆಳಗಾವಿಯಲ್ಲಿ ಚಿನ್ನ ಬೆಳ್ಳಿ, ಮನೆಯಲ್ಲಿ ಶೇಖರಿಸಿಟ್ಟಿದ್ದ ಮದ್ಯ ವಶ
ಬೆಳಗಾವಿ: ಬೆಳಗಾವಿ ಜಿಲ್ಲೆಯ ಜಿಲ್ಲೆಯ ಗೋಕಾಕ್ ತಾಲೂಕಿನ ಖನಗಾಂವ ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 202 ಬಾಕ್ಸ್ ನಲ್ಲಿದ್ದ 1745 ಲೀಟರ್ ಮದ್ಯವನ್ನು ಅಬಕಾರಿ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ ಸುಮಾರು 7.7 ಲಕ್ಷ ರೂ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಲಿಂಗನಮಠ ಚೆಕ್ ಪೋಸ್ಟ್‌ನಲ್ಲಿ ದೊಡ್ಡ ಪ್ರಮಾಣದ ಚಿನ್ನ ಮತ್ತು ಬೆಳ್ಳಿ ವಶವಾಗಿದೆ. 21 ಲಕ್ಷ ಮೌಲ್ಯದ 398 ಗ್ರಾಂ ಚಿನ್ನ, 19 ಲಕ್ಷ ರೂ. ಮೌಲ್ಯದ 28 ಕೆಜಿ ಬೆಳ್ಳಿ, 13 ಲಕ್ಷ ರೂ. ಮೌಲ್ಯದ ಕಾರು ಜಪ್ತಿಯಾಗಿದೆ. ಕಾರು ಸೇರಿ 53 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಧರ್ಮರಾಜ್ ಕುಟ್ರೆ ಎಂಬುವವರು ಹಳಿಯಾಳದಿಂದ ಖಾನಾಪುರಕ್ಕೆ ಇದನ್ನು ಸಾಗಿಸುತ್ತಿದ್ದರು.
ಗದಗ ದುಂದೂರು ಚೆಕ್‌ಪೋಸ್ಟ್‌ನಲ್ಲಿ 50 ಲಕ್ಷ ರೂ.
ಗದಗ: ಗದಗ ತಾಲೂಕಿನ ದುಂದೂರು ಚೆಕ್ ಪೋಸ್ಟ್ ನಲ್ಲಿ ಪೊಲೀಸರು ತಪಾಸಣೆ ನಡೆಸುವ ವೇಳೆ ಟ್ರಂಕ್‌ನಲ್ಲಿ ತುಂಬಿ ಸಾಗಿಸುತ್ತಿದ್ದ ದಾಖಲೆ ಇಲ್ಲದ 50 ಲಕ್ಷ ನಗದು ಹಣ ಜಪ್ತಿಯಾಗಿದೆ. ಹುಬ್ಬಳ್ಳಿಯಿಂದ ಗದಗ ನಗರಕ್ಕೆ ಬರುತ್ತಿದ್ದ ಅಕ್ರಮ ಹಣ ಇದಾಗಿದೆ. ಗದಗ ಎಸ್ಪಿ ಬಿ.ಎಸ್.ನೇಮಗೌಡ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ.
ದುಂದೂರು ಚೆಕ್‌ಪೋಸ್ಟ್‌ನಲ್ಲಿ ನಡೆದ ಇನ್ನೊಂದು ಕಾರ್ಯಾಚರಣೆಯಲ್ಲಿ 1.68 ಲಕ್ಷ ರೂ. ಮೌಲ್ಯದ 561 ಸೀರೆಗಳು, ಗದಗ ಬೆಟಗೇರಿ ದಂಡಿನ ದುರ್ಗಮ್ಮ ಬಳಿ ಚೆಕ್ ಪೋಸ್ಟನಲ್ಲಿ 95 ಲಕ್ಷ ರೂ. ಹಣ ಸಿಕ್ಕಿದೆ
ಇದೇ ವೇಳೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಸಾಪೂರ ಗ್ರಾಮದಲ್ಲಿ ಅಬಕಾರಿ ಅಧಿಕಾರಿಗಳು ನಡೆಸಿರುವ ಕಾರ್ಯಾಚರಣೆಯಲ್ಲಿ 33,724 ರೂ. ಮೌಲ್ಯದ 10 ಬಾಕ್ಸ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ಕುಶಾಲನಗರ ಚೆಕ್ ಪೋಸ್ಟ್‌ನಲ್ಲಿ 3.6 ಲಕ್ಷ ನಗದು ವಶ
ಮಡಿಕೇರಿ: ಕೊಡಗಿನ ಕುಶಾಲನಗರ ಚೆಕ್ ಪೋಸ್ಟ್ ನಲ್ಲಿ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದ 3.6 ಲಕ್ಷ ರೂ. ನಗದು ವಶವಾಗಿದೆ. ಮೈಸೂರು ಕಡೆಯಿಂದ ಕುಶಾಲನಗರಕ್ಕೆ ಬರುತ್ತಿದ್ದ ವಾಹನ ಇದಾಗಿದ್ದು, ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸುವಾಗ ಸಿಕ್ಕಿಬಿದ್ದಿದ್ದಾರೆ.
ಶಿವಮೊಗ್ಗದ ಕೋಟೆ ಪ್ರದೇಶದಲ್ಲಿ ಅಕ್ಕಿ ವಶ
ಶಿವಮೊಗ್ಗ: ಜಿಲ್ಲೆಯ ಎಲ್ಲ ಚೆಕ್ ಪೋಸ್ಟ್‌ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲೆ ಇಲ್ಲದ ಸಾಗಿಸುತ್ತಿದ್ದ 7 ಲಕ್ಷ ರೂ. ಮೌಲ್ಯದ 119 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದ್ದರೆ, ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಗೇಜ್ ವಾಹನದಲ್ಲಿ ಸಾಗಿಸುತ್ತಿದ್ದ 1.40 ಲಕ್ಷ ರೂ. ಮೌಲ್ಯದ 50 ಗ್ಯಾಸ್ ಸ್ಟವ್ ವಶವಾಗಿದೆ.
ಇದನ್ನೂ ಓದಿ : Inside Story : ಕಿಚ್ಚ ಸುದೀಪ್ ರಾಜಕೀಯ ಎಂಟ್ರಿ; ಜಾರಕಿಹೊಳಿ, ರಾಮುಲು ಕಕ್ಕಾಬಿಕ್ಕಿಯಾಗಿದ್ದು ಏಕೆ?