ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (IT Raid In Bengaluru) ಬೆಳಗ್ಗೆ ಬೆಳಗ್ಗೆಯೇ ಆದಾಯ ತೆರಿಗೆ ಇಲಾಖೆ (IT) ಅಧಿಕಾರಿಗಳು ಬಿಲ್ಡರ್‌ಗಳಿಗೆ ಶಾಕ್ ನೀಡಿದ್ದಾರೆ. ಸುಮಾರು 20ಕ್ಕೂ ಅಧಿಕ ಕಡೆ ಐಟಿ ಅಧಿಕಾರಿಗಳು ದಾಳಿ (IT Raid) ನಡೆಸಿದ್ದು, ತೀವ್ರ ಶೋಧ ನಡೆಸುತ್ತಿದ್ದಾರೆ. ಬಿಲ್ಡರ್‌ಗಳ (Builders) ಮನೆಗಳು ಹಾಗೂ ಕಚೇರಿಗಳಲ್ಲಿ ಐಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.
ಕೆ.ಆರ್. ಪುರಂ ಸಮೀಪದ ಕೊಡಿಗೇಹಳ್ಳಿಯ ನಂಜುಂಡೇಶ್ವರ ಇನ್‌ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಸೇರಿ ಹಲವು ಪ್ರಮುಖ ಬಿಲ್ಡರ್‌ಗಳು ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು, ಕಡತಗಳ ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದಾಗ್ಯೂ, ಇದುವರೆಗೂ ಯಾರನ್ನೂ ಬಂಧಿಸಿರುವ, ಹಣ ವಶಪಡಿಸಿಕೊಂಡಿರುವ ಕುರಿತು ಮಾಹಿತಿ ಲಭ್ಯವಾಗಿಲ್ಲ.
ತೆರಿಗೆ ವಂಚನೆ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಿಗೆ ಹಾಗೂ ರಾಜಕೀಯ ನಾಯಕರಿಗೆ ಫಂಡಿಂಗ್ ಮಾಡುತ್ತಿರುವ ಕುರಿತು ಐಟಿ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ನೀತಿ ಸಂಹಿತೆ ಜಾರಿಯಲ್ಲಿದ್ದರೂ ಅಕ್ರಮವಾಗಿ ಹಣದ ಸಾಗಣೆ ಕುರಿತು ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ.
ಇದನ್ನೂ ಓದಿ: Congress: ಕಾಂಗ್ರೆಸ್‌ಗೆ ಐಟಿ ಮತ್ತೊಂದು ಶಾಕ್; 1,700 ಕೋಟಿ ರೂ. ಟ್ಯಾಕ್ಸ್ ನೋಟಿಸ್ ಜಾರಿ
ಕೆಲ ತಿಂಗಳ ಹಿಂದಷ್ಟೇ ಬೆಂಗಳೂರಿನ ಹಲವೆಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ವಿಜಯನಗರ, ಬಿಟಿಎಂ ಲೇಔಟ್, ಹುಳಿಮಾವು, ಸದಾಶಿವನಗರ, ಸ್ಯಾಂಕಿ ಟ್ಯಾಂಕ್ ಸೇರಿದಂತೆ ಹಲವೆಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಐಟಿ ಅಧಿಕಾರಿಗಳ 15ಕ್ಕೂ ಹೆಚ್ಚು ತಂಡಗಳು ಮೆಗಾ ರೇಡ್‌ಗಾಗಿ ಚೆನ್ನೈ, ದೆಹಲಿಯಿಂದ ರಾತ್ರೋರಾತ್ರಿ ಬೆಂಗಳೂರಿಗೆ ಬಂದಿದ್ದವು.
ತೆರಿಗೆ ವಂಚನೆ ಮಾಡಿರುವ ಖಾಸಗಿ ಕಂಪನಿಗಳು, ಅದರ ಮಾಲೀಕರು ಹಾಗೂ ಚಿನ್ನದ ವ್ಯಾಪಾರಿಗಳ ಮನೆ ಮೇಲೆ ದಾಳಿ ನಡೆಸಿರುವ ಬಗ್ಗೆ ಮಾಹಿತಿ ದೊರೆತಿತ್ತು. ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದರು.
ದಂತವೈದ್ಯರಾದ ಡಾ. ಸಂಧ್ಯಾ ಪಾಟೀಲ್ ಎಂಬವರ ಮನೆ ಮೇಲೆ ಐಟಿ ಅಧಿಕಾರಿಗಳು ರೈಡ್ ಮಾಡಿದ್ದರು. ಪ್ರಶಾಂತ ನಗರದಲ್ಲಿರುವ ಸಂಧ್ಯಾ ಪಾಟೀಲ್ ಮನೆ ಮೇಲೆ ದಾಳಿ ಮಾಡಿ, ಸಂಧ್ಯಾ ಪಾಟೀಲ್ ಅವರನ್ನು ಹೆಚ್ಚಿನ ತನಿಖೆಗಾಗಿ ಐಟಿ ಟೀಮ್ ಕರೆದುಕೊಂಡು ಹೋಗಿದ್ದರು. ವಿಜಯ ನಗರದಲ್ಲಿ ಕ್ಲಿನಿಕ್ ಹೊಂದಿರುವ ಸಂಧ್ಯಾ ಪಾಟೀಲ್ ಮನೆ ಗೋವಿಂದರಾಜ ನಗರದ ಪ್ರಶಾಂತ ನಗರದಲ್ಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ