ಚಿಕ್ಕಬಳ್ಳಾಪುರ: ʻʻನಾನು ಕಾಂಗ್ರೆಸ್ ಬಿಟ್ಟು ಒಂದು ತಪ್ಪು ಮಾಡಿಬಿಟ್ಟೆʼʼ- ಹೀಗೆಂದು ನೇರಾನೇರವಾಗಿ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್ (MTB Nagaraj) ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲ್ಲೂಕಿನ ಜರಬಂಡಹಳ್ಳಿಯಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಮತ್ತು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರ ಸಮ್ಮುಖದಲ್ಲೇ ಈ ಮಾತು ಹೇಳುವ ಮೂಲಕ ಅಚ್ಚರಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ತಾವು ಹೊಸಕೋಟೆ ಕ್ಷೇತ್ರದ ಉಪಚುನಾವಣೆಯಲ್ಲಿ ಸೋಲು ಅನುಭವಿಸಿದ ನೋವನ್ನು ನೆನಪು ಮಾಡಿಕೊಂಡ ಉಸ್ತುವಾರಿ ಸಚಿವರೂ ಆಗಿರುವ ಎಂ.ಟಿ.ಬಿ. ನಾಗರಾಜ್, ʻʻಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿದ್ದಕ್ಕೆ ಜನರು ನನ್ನನ್ನು ಸೋಲಿಸಿ ಬಿಟ್ರುʼʼ ಎಂದು ಬೇಸರಿಸಿದರು.
ʻʻನನಗೆ ಏನು ಬೇಕಾಗಿಲ್ಲ, ನನಗೆ ಬಡವರ ಸೇವೆ ಮಾತ್ರ ಬೇಕು. ದೇವರು ನನಗೆ ಎಲ್ಲವನ್ನು ಕೊಟ್ಟಿದ್ದಾನೆ. ನಾನು ಸೋತ ಕಾರಣ ಕ್ಷೇತ್ರದ ಅಭಿವೃದ್ದಿಗೆ ಹಿನ್ನಡೆ ಆಯಿತುʼʼ ಎಂದು ವೇದನೆಯಿಂದಲೇ ಹೇಳಿಕೊಂಡ ಅವರು, ʻʻಜನ ಚುನಾವಣೆ ಬಂದಾಗ ಒಳ್ಳೆಯ ಕೆಲಸವನ್ನು ಮರೆಯುತ್ತಾರೆ. ಜನ ನಿದ್ದೆ ಮಂಪರಿನಲ್ಲಿ ಇದ್ದಂತೆ ಮತ ಹಾಕುತ್ತಾರೆʼʼ ಎಂದು ಹೇಳಿದರು.
ಕಾಂಗ್ರೆಸ್‌ನಿಂದ ಬಿಜೆಪಿಗೆ ಜಿಗಿದಿದ್ದ ಎಂ.ಟಿ.ಬಿ. ನಾಗರಾಜ್
2019ರ ಜುಲೈ ತಿಂಗಳಲ್ಲಿ ಕರ್ನಾಟಕ ರಾಜಕೀಯದಲ್ಲಿ ನಡೆದ ಅತಿ ದೊಡ್ಡ ಬೆಳವಣಿಗೆಯಲ್ಲಿ ೧೪ ಮಂದಿ ಕಾಂಗ್ರೆಸ್ ಶಾಸಕರು ಮತ್ತು ಮೂವರು ಜೆಡಿಎಸ್ ಶಾಸಕರು ಪಕ್ಷ ಬಿಟ್ಟು ಬಿಜೆಪಿ ಸೇರಿದ್ದರು. ಕಾಂಗ್ರೆಸ್ ಶಾಸಕರಲ್ಲಿ ಹೊಸಕೋಟೆ ಕ್ಷೇತ್ರದ ಶಾಸಕರಾಗಿದ್ದ ಎಂಟಿಬಿ ನಾಗರಾಜ್ ಕೂಡಾ ಒಬ್ಬರು.
ಬಾಂಬೇ ಬಾಯ್ಸ್ ಎಂದೇ ಹೆಸರಾದ ೧೭ ಮಂದಿಯಲ್ಲಿ ೧೬ ಮಂದಿ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅವರ ಪೈಕಿ ಸೋಲು ಕಂಡಿದ್ದು ಎಂ.ಟಿ.ಬಿ ಒಬ್ಬರೇ. ಹೊಸಕೋಟೆಯಲ್ಲಿ ಎಂ.ಟಿ.ಬಿ. ನಾಗರಾಜ್ ಮತ್ತು ಸಂಸದ ಬಿ.ಎಂ. ಬಚ್ಚೇಗೌಡ ಅವರು ಬದ್ಧ ಪ್ರತಿಸ್ಪರ್ಧಿಗಳು. ಅದರಲ್ಲೂ ಶಾಸಕರಾಗುವ ಆಸಕ್ತಿ ಹೊಂದಿದ್ದ ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡ ಅವರಂತೂ ಎಂ.ಟಿ.ಬಿ. ನಾಗರಾಜ್ ಅವರು ಬಿಜೆಪಿಗೆ ಬರುವುದನ್ನು ವಿರೋಧಿಸಿದ್ದರು. ಉಪಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡಬಾರದು ಎಂಬ ಬೇಡಿಕೆಯನ್ನೂ ಮುಂದುಟ್ಟಿದ್ದರು. ಆದರೆ, ಪಕ್ಷ ನಾಗರಾಜ್ ಅವರಿಗೇ ಮಣೆ ಹಾಕಿದ್ದರಿಂದ ಸಿಟ್ಟುಗೊಂಡ ಶರತ್ ಬಚ್ಚೇಗೌಡ ಅವರು ಬಿಜೆಪಿ ಬಿಟ್ಟು ಪಕ್ಷೇತರನಾಗಿ ಕಣಕ್ಕಿಳಿದು ಎಂ.ಟಿ.ಬಿ ನಾಗರಾಜ್ ವಿರುದ್ಧವೇ ಸ್ಪರ್ಧಿಸಿ ಗೆದ್ದುಬಂದರು. ಬಳಿಕ ಕಾಂಗ್ರೆಸ್ ಸೇರಿದರು.
ಈ ನಡುವೆ, ಎಂ.ಟಿ.ಬಿ. ನಾಗರಾಜ್ ಉಪಚುನಾವಣೆಯಲ್ಲಿ ಸೋತರೂ ಅವರನ್ನು ಮೇಲ್ಮನೆ ಸದಸ್ಯರನ್ನಾಗಿ ಮಾಡಿ ಸಚಿವರನ್ನಾಗಿ ಮಾಡುವ ಮೂಲಕ ಬಿಜೆಪಿ ಋಣ ಸಂದಾಯ ಮಾಡಿತು. ಆದರೆ, ಎಂಟಿಬಿ ನಾಗರಾಜ್ ಅವರು ಇನ್ನೂ ಬಿಜೆಪಿಯಲ್ಲಿ ಅತಂತ್ರ ಸ್ಥಿತಿಯಲ್ಲೇ ಇದ್ದಾರೆ ಎಂದು ಹೇಳಲಾಗುತ್ತಿದೆ.
೭೦-೮೦ ಲಕ್ಷ ರೂ. ಹೇಳಿಕೆಯ ವಿವಾದ
ಈ ನಡುವೆ, ಇತ್ತೀಚೆಗೆ ಇನ್ಸ್‌ಪೆಕ್ಟರ್ ನಂದೀಶ್ ಅವರು ಹೃದಯಾಘಾತದಿಂದ ನಿಧನರಾದಾಗ ವಿವಾದಾತ್ಮಕ ಮಾತು ಆಡಿ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದ್ದರು. ೭೦-೮೦ ಲಕ್ಷ ರೂ. ಕೊಟ್ಟು ಟ್ರಾನ್ಸ್‌ಫರ್ ಮಾಡಿಕೊಂಡು ಬಂದವರಿಗೆ ಹೀಗಾದರೆ ಹೃದಯಾಘಾತವಾಗದೆ ಇನ್ನೇನಾಗುತ್ತದೆ ಎಂದು ಹೇಳಿದ್ದರು. ಇದನ್ನೇ ಹಿಡಿದುಕೊಂಡು ಕಾಂಗ್ರೆಸ್ ನಾಯಕರು ಬಿಜೆಪಿಯನ್ನು ಗೇಲಿ ಮಾಡಿದ್ದರು. ಇದಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಎಂ.ಟಿ.ಬಿ ನಾಗರಾಜ್ ಅವರನ್ನು ಕರೆಸಿ ತರಾಟೆಗೆ ತೆಗೆದುಕೊಂಡಿದ್ದರು.
ಸಚಿವರ ಎದುರೇ ನೋವಿನ ದನಿ
ಶುಕ್ರವಾರ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಸಚಿವ ಆರ್. ಅಶೋಕ್ ಮತ್ತು ಸುಧಾಕರ್ ಅವರ ಮಧ್ಯೆ ನಿಂತೇ ನೋವಿನಿಂದ ಮಾತನಾಡಿದರು ಎಂಟಿಬಿ ನಾಗರಾಜ್. ಇದರ ನಡುವೆ ಅಶೋಕ್ ಅವರು ಸಾಕು ಎಂದೆಲ್ಲ ಸೂಚನೆ ನೀಡಿದರೂ ನಾಗರಾಜ್ ಮಾತ್ರ ಹೇಳುವುದನ್ನು ಹೇಳಿಯೇ ನಿಲ್ಲಿಸಿದರು.
ಹಾಗಿದ್ದರೆ ಈಗ ಉದ್ಭವವಾಗುವ ಪ್ರಶ್ನೆ, ಎಂಟಿಬಿ ನಾಗರಾಜ್ ಅವರು ಮತ್ತೆ ಕಾಂಗ್ರೆಸ್ ಪಾಳಯವನ್ನು ಸೇರುತ್ತಾರಾ ಎನ್ನುವುದು. ಸಾವಿರ ಕೋಟಿ ಕುಳವಾಗಿರುವ ಎಂ.ಟಿ.ಬಿ ನಾಗರಾಜ್ ಅವರು ಈಗಲೂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಹಿರಿಯ ನಾಯಕರ ಜತೆ ಉತ್ತಮ ಸಂಬಂಧವನ್ನೇ ಹೊಂದಿದ್ದಾರೆ ಎನ್ನಲಾಗುತ್ತಿದೆ. ಅವರು ಮರಳಿ ಕಾಂಗ್ರೆಸ್ ಸೇರಲು ನಾಯಕರ ಮಟ್ಟದಲ್ಲಿ ದೊಡ್ಡ ಅಡ್ಡಿಯೇನೂ ಆಗುವ ಸಾಧ್ಯತೆ ಇಲ್ಲ. ಆದರೆ, ಈಗ ಕಾಂಗ್ರೆಸ್‌ನಲ್ಲಿರುವ ಶರತ್ ಬಚ್ಚೇಗೌಡ ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ. ಹಾಗಿದ್ದರೆ ಶರತ್ ಬಚ್ಚೇಗೌಡ ಅವರು ತಮ್ಮ ಮೂಲ ನೆಲೆಯಾದ ಬಿಜೆಪಿಗೆ ಹೋಗಬಹುದಾ ಎನ್ನುವಲ್ಲಿಗೆ ಚರ್ಚೆ ಮತ್ತೊಂದು ಆಯಾಮವನ್ನು ಪಡೆಯುತ್ತದೆ.