ಶಶಿಧರ್ ಮೇಟಿ, ಬಳ್ಳಾರಿ
ಇಲ್ಲೊಂದು ತುಂಬು ಕುಟುಂಬ, ಒಂದೇ ಒಂದು ಸೆಂಟ್ ತೋಟವಿಲ್ಲ, ಕಳೆದ 15 ವರ್ಷದಿಂದ ಒಂದು ಹಣ್ಣನ್ನು ಖರೀದಿ ಮಾಡಿಲ್ಲ. ಆದರೆ ಋತುಮಾನಕ್ಕೆ ಅನುಸಾರವಾಗಿ ಹಣ್ಣಿಗೆ ಮಾತ್ರ ಇವರ ಮನೆಯಲ್ಲಿ ಬರವಿಲ್ಲ. ಕೊರೊನಾ ಅವಧಿಯಲ್ಲಿ ಪ್ರತಿಯೊಬ್ಬರಿಗೂ ಹಣ್ಣುಗಳು, ದಿನಸಿ ವಸ್ತುಗಳು ಕೊರತೆ ಬಹುವಾಗಿ ಕಾಡಿದರೆ, ಆದರೆ ಇವರು ಬಯಸಿದ ಹಣ್ಣುಗಳು ಕ್ಷಣಾರ್ಧದಲ್ಲಿಯೇ ಇವರ ಕೈಯಲ್ಲಿರುತ್ತಿತ್ತು. ಹಣ್ಣು ಬೆಳೆಯಲು ತೋಟವೇ ಇರಬೇಕೆಂದಿಲ್ಲ, ಬೆಳೆಯುವ ಮನಸ್ಸಿದ್ದರೆ ಎಲ್ಲಿಯಾದರೂ ಬೆಳೆಯಬಹುದು ಎಂಬುದಕ್ಕೆ ಕಂಪ್ಲಿಯ 67 ವರ್ಷದ ಕಾರೇಮಂಗಿ ತಿಪ್ಪೇಸ್ವಾಮಿಯವರೇ ಸಾಕ್ಷಿ.
ಗಣಿಜಿಲ್ಲೆಯ ಕಾರೇಮಂಗಿ ತಿಪ್ಪೇಸ್ವಾಮಿ ಅವರು ಕಂಪ್ಲಿ ಪಟ್ಟಣದಲ್ಲಿರುವ ತಮ್ಮ 60-80 ಅಳತೆಯ ಜಾಗದಲ್ಲಿಯೇ ಮನೆ ಕಟ್ಟಿಕೊಳ್ಳುವ ಜೊತೆಗೆ ಮನೆಯ ಹಿಂದೆ-ಮುಂದೆ ಹಣ್ಣಿನ ಕೈತೋಟ ಮಾಡಿದ್ದಾರೆ. ಅವರ ಮನೆಗೆ ಹೋದರೆ ಹಣ್ಣುಗಳು ಸಮೃದ್ಧಿ ಮನಸ್ಸಿಗೆ ಮುದನೀಡುತ್ತದೆ. ಸಣ್ಣ ಜಾಗದಲ್ಲಿ ಮನೆ ಕಟ್ಟುವ ಜೊತೆಗೆ ಹತ್ತಾರು ಹಣ್ಣುಗಳ ಮರಗಳನ್ನು ಬೆಳೆಸಿದ್ದಾರೆ.
ಅತಿಥಿಗಳಿಗೆ ಹಣ್ಣಿನ ಆತಿಥ್ಯ
ಇವರ ಮನೆಗೆ ಅತಿಥಿಗಳು ಹೋದರೆ ಟೀ, ಕಾಫಿಗಿಂತ ತಾಜಾ ಹಣ್ಣುಗಳ ಆತಿಥ್ಯ ಸಿಗುತ್ತದೆ. ಮನೆಯ ಮುಂದುಗಡೆ ಹಣ್ಣಿನ ರಾಜ ಮಾವಿನಹಣ್ಣಿನಿಂದ ಹಿಡಿದು, ಒಂದು ಸೀತಾಫಲ, ಒಂದು ರಾಮಫಲ, 2 ದಾಳಿಂಬೆ, 1 ಮೂಸಂಬಿ, 2 ಪಪ್ಪಾಯಿ, 1 ಸಫೋಟಾ, 2 ಪೇರಲೆ, 2 ನೇರಳೆ, 1 ನಿಂಬೆ, 1 ಹತ್ತಿಹಣ್ಣು, 1 ಬಾಳೆ ಹಣ್ಣು, 1 ಗಜನಿಂಬೆ, 2 ತೆಂಗು, 1 ದಡ್ಲಿಕಾಯಿ, 1 ಅಡಕೆ, 2 ಕರಬೇವು ಸೇರಿದಂತೆ ತರಹೇವಾರಿ ಹಣ್ಣು ಮತ್ತು ಸೇರಿದಂತೆ ಇತರ ದಿನಬಳಕೆಯ ವಸ್ತುಗಳ ಗಿಡ ಮರಗಳಿವೆ. ವಿವಿಧ ತಳಿಯ ಮೂರು ಮಾವಿನ ಮರಗಳು ಇವರ ಮಾವಿನ ಬಯಕೆಯನ್ನು ಪ್ರತಿವರ್ಷವು ತೀರಿಸುತ್ತವೆ.
ಸಾವಯವ ತಾಜಾ ಹಣ್ಣುಗಳು
ಕಂಪ್ಲಿ ಪಟ್ಟಣದಲ್ಲಿದ್ದರೂ, ಇವರು ಸ್ವಚ್ಛಂದವಾದ ಹಳ್ಳಿಯ ಜೀವನ ನಡೆಸುತ್ತಿದ್ದಾರೆ, ಮನೆಯ ಹಿಂದೆ-ಮುಂದೆ ಹಣ್ಣಿನ ಬೆಳೆಯಲು ಇವರು ನಡೆಸುತ್ತಿರುವ ಹೈನುಗಾರಿಕೆ ಸಹಕಾರಿಯಾಗಿದೆ. ನಾಲ್ಕು ಹಸುಗಳನ್ನು ಸಾಕುತ್ತಿದ್ದು, ಪ್ರತಿದಿನ ಹಾಲು ಮಾರುವುದರ ಜತೆಗೆ ಹಸುಗಳ ಸಗಣಿಯ ಸಾವಯವ ಗೊಬ್ಬರ ಹಣ್ಣಿನ ಗಿಡಗಳಿಗೆ ಆಹಾರವಾಗಿದೆ. ಯಾವುದೇ ರಾಸಾಯನಿಕ ಬಳಕೆ ಇಲ್ಲದೆ, ಸಾವಯವ ಗೊಬ್ಬರದಿಂದಲೇ ಗಿಡಗಳ ಬೆಳೆದಿವೆ.
ಇವರಲ್ಲಿದೆ ಮಲ್ಟಿ ಸ್ಕಿಲ್, ನಾಯಿಗಳ ಮಾರಾಟಕ್ಕೂ ಸೈ
ಮುಧೋಳ್ ಸೇರಿದಂತೆ ಇತರ ತಳಿಯ ನಾಯಿಗಳನ್ನು ತಂದು ಸಾಕುವ ಜೊತೆಗೆ ಮರಿಗಳನ್ನು ಮಾರಾಟ ಮಾಡವ ಕೆಲಸವನ್ನು ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಸುಮಾರು 40ಕ್ಕೂ ಹೆಚ್ಚು ನಾಯಿಗಳನ್ನು ಮಾರಾಟ ಮಾಡಿದ್ದಾರೆ. ಮನಸ್ಸಿದ್ದರೆ ಮಾರ್ಗ ಎನ್ನುವಂತೆ ತಿಪ್ಪೇಸ್ವಾಮಿ ಮತ್ತು ಅವರ ಮಕ್ಕಳು ಸ್ವ ಉದ್ಯೋಗದಲ್ಲಿಯೇ ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ಈ ಹಿಂದೆ ಮೊಲ ಸೇರಿದಂತೆ ಇತರ ಪ್ರಾಣಿಗಳನ್ನು ಸಾಕುತ್ತಿದ್ದರು. ಈಗ ಕೇವಲ ನಾಯಿಯನ್ನು ಸಾಕುತ್ತಿದ್ದಾರೆ.
2002ರಲ್ಲಿ ಮನೆ ಕಟ್ಟಿದ ಮೇಲೆ ಸಸಿಗಳನ್ನು ತಂದಿಟ್ಟಿದ್ದೇವೆ, ಎಲ್ಲಾ ರೀತಿಯ ಹಣ್ಣಿನ ಗಿಡ ಬೆಳೆಸಿದ್ದೇವೆ. ಹೊರಗಡೆ ಹಣ್ಣುಗಳನ್ನು ಖರೀದಿ ಮಾಡುವುದಿಲ್ಲ. ಇನ್ನು ಬೇರೆ ಬೇರೆ ತಳಿಯ ನಾಯಿಗಳನ್ನು ಸಾಕುತ್ತೇವೆ, ಮರಿ ಹಾಕಿದಾಕ್ಷಣ ಮೊಬೈಲ್‌ನಲ್ಲಿ ಮಾಹಿತಿ ಶೇರ್ ಮಾಡುತ್ತೇವೆ, ಆಗ ಆಸಕ್ತರು ಬಂದು ನಾಯಿ ಮರಿಗಳನ್ನು ಖರೀದಿ ಮಾಡುತ್ತಾರೆ ಎನ್ನುತ್ತಾರೆ ಕಾರೇಮಂಗಿ ತಿಪ್ಪೇಸ್ವಾಮಿ ಅವರು.
ಇದನ್ನೂ ಓದಿ| ಸಾವಯವ ಜೇನುತುಪ್ಪ ಮಾರಿ ಗೆದ್ದ ಉತ್ತರ ಪ್ರದೇಶದ ಜೇನು ಕೃಷಿಕ ನಿಮಿತ್ ಸಿಂಗ್