Site icon Vistara News

Police Vs Police| ಇನ್ಸ್‌ಪೆಕ್ಟರ್‌ ಮತ್ತು ಟ್ರಾಫಿಕ್‌ ಎಎಸ್‌ಐ ನಡುವೆ ʻತೋರಿಸ್ತೀನಿʼ ಫೈಟ್‌, ಜಗಳ ಫುಲ್‌ ವೈರಲ್‌!

police fight
https://vistaranews.com/wp-content/uploads/2022/10/AUD-20221028-WA0004.mp3
ಏರ್‌ಪೋರ್ಟ್‌ ಠಾಣೆ ಇನ್ಸ್‌ಪೆಕ್ಟರ್‌ ಮುತ್ತುರಾಜ್‌ ಮತ್ತು ಟ್ರಾಫಿಕ್‌ ಎಎಸ್‌ಐ ವೆಂಕಟೇಶ್‌ ನಡುವಿನ ಸಂಭಾಷಣೆ ಇಲ್ಲಿ ಕೇಳಿ

ಬೆಂಗಳೂರು: ಬೀದಿ ಬದಿಯಲ್ಲಿ ನಿಂತು ಕೆಲವರು ಜಗಳ ಮಾಡೋದನ್ನು ನೋಡಿದ್ದೀವಿ… ʻಬಾ ತೋರಿಸ್ತೀನಿ, ನಾನ್ಯಾರು ಗೊತ್ತಾ?, ಇದೆ ನಿಂಗೆ ಅನ್ನೋʼ ದಾಟಿಯಲ್ಲಿ ಬೆದರಿಕೆ ಹಾಕೋದು ಕೇಳಿದ್ದೀವಿ. ಆದರೆ, ಇಲ್ಲಿ ಇಬ್ಬರು ಪೊಲೀಸರು ಬೈದಾಡಿಕೊಂಡಿದ್ದಾರೆ. ಒಬ್ಬರು ನಾನ್ಯಾರು ಅಂತ ತೋರಿಸ್ತೀನಿ ನಿಂಗೆ ಅಂದರೆ, ಆಯ್ತು ಸ್ವಾಮಿ ತೋರಿಸಿ, ನಾನೂ ನೋಡ್ಕೋತೀನಿ ಅನ್ನೋ ಧಾಟಿಯಲ್ಲಿ ಇನ್ನೊಬ್ಬರು ಮಾತನಾಡಿದ್ದಾರೆ. ಒಟ್ಟಿನಲ್ಲಿ ಇಬ್ಬರು ಆಡಿಕೊಂಡಿರುವ ಜಗಳ ವೈರಲ್‌ ಆಗಿದೆ.

ಇನ್ಸ್‌ಪೆಕ್ಟರ್‌ ಮುತ್ತುರಾಜ್‌

ಇದು ಒಂಥರಾ ಲಾ ಆ್ಯಂಡ್ ಆರ್ಡರ್ ಪೊಲೀಸ್ V/S ಟ್ರಾಫಿಕ್ ಪೊಲೀಸ್ ಅನ್ನೋ ಥರ ಮಾತಾಗಿದೆ. ಯಾಕೆಂದರೆ ಇಲ್ಲಿ ಮಾತನಾಡಿರೋದು ಲಾ ಆ್ಯಂಡ್ ಆರ್ಡರ್ ಇನ್‌ಸ್ಪೆಕ್ಟರ್‌ ಮತ್ತು ಟ್ರಾಫಿಕ್ ಎಎಸ್‌ಐ. ಏರ್‌ಪೋರ್ಟ್‌ ಇನ್ಸ್‌ಪೆಕ್ಟರ್‌ ಮುತ್ತುರಾಜ್‌ ಮತ್ತು ಟ್ರಾಫಿಕ್‌ ಎಎಸ್ಐ ವೆಂಕಟೇಶ್ ನಡುವಿನ ಜಟಾಪಟಿ ಇದು.

ವೈರಲ್‌ ಆಗಿರುವ ಇಬ್ಬರು ಪೊಲೀಸ್ ಅಧಿಕಾರಿಗಳ ನಡುವೆ ನಡೆದ ಸಂಭಾಷಣೆ ಆಡಿಯೊದಲ್ಲಿ ಇನ್ಸ್‌ಪೆಕ್ಟರ್‌ ಮುತ್ತುರಾಜ್‌ ಸ್ವಲ್ಪ ಜೋರಾಗಿಯೇ ಆವಾಜ್‌ ಹಾಕ್ತಾರೆ. ಇದು ಮಾತಿನ ಸರಣಿಯ ಎರಡನೇ ವಿಡಿಯೊ ಅನ್ನೋ ತರ ಇದೆ. ಕರೆ ಮಾಡಿದ ಕೂಡಲೇ ಮುತ್ತುರಾಜ್‌ ಅವರು, ʻʻಇನ್‌ಸ್ಪೆಕ್ಟರ್‌ ಫೋನ್‌ ಮಾಡಿದ್ರೆ ಫೋನ್ ರಿಸೀವ್‌ ಮಾಡಲ್ವಾ ನೀನು. ನಾನು ಯಾರು ಅಂತಾ ಗೊತ್ತಿಲ್ವಾ ನಿಂಗೆ..ʼʼ ಅಂತ ದಬಾಯಿಸುತ್ತಾರೆ. ವೆಂಕಟೇಶ್‌ ಅವರು ಗೊತ್ತಾಗಲಿಲ್ಲ ನಂಗೆ ಅಂತ ಹೇಳುತ್ತಾರೆ. ಮುತ್ತುರಾಜ್‌ ಅವರು, ʻʻನಾನು ಇನ್ಸ್‌ಪೆಕ್ಟರ್‌ ಅಂತ ಮೊದಲೇ ಹೇಳಿದ್ದರೂ ನಿಂಗೆ ಗೊತ್ತಾಗಿಲ್ವಾ ಅಲ್ವಾ? ನಿನಗೆ ಕೇಸ್ ಎಲ್ಲಿ ಹೇಳಬೇಕು ಅಲ್ಲಿ ಹೇಳ್ತೀನಿ ಅವಾಗ ಗೊತ್ತಾಗುತ್ತದೆʼʼ ಎನ್ನುತ್ತಾರೆ

ʻʻನಾನು ಯಾರು ಅಂತ ತೋರ್ಸ್ತೀನಿ ನಿಂಗೆ..ʼʼ ಅಂತ ಮುತ್ತುರಾಜ್‌ ಹೇಳಿದಾಗ ವೆಂಕಟೇಶ್‌ಗೂ ಸಿಟ್ಟು ಏರುತ್ತದೆ. ಅದುವರೆಗೆ ಕೂಲ್‌ ಆಗಿದ್ದವರು ಬಿಸಿಯಾಗ್ತಾರೆ. ʻʻಆಯ್ತು ತೋರಿಸಿ ಸರ್.. ಬೆದರಿಕೆ ಹಾಕಬೇಡಿ ಸರ್ʼ ಅಂತ ಎಎಸ್ಐ ಕೌಂಟರ್ ಕೊಡುತ್ತಾರೆ.

ಮುತ್ತುರಾಜ್‌ ಅವರು ಏಕವಚನ ಪ್ರಯೋಗ ಮಾಡಿದ್ದಕ್ಕೆ ವೆಂಕಟೇಶ್‌ ಸಿಟ್ಟಿಗೇಳುತ್ತಾರೆ. ಆಗ ಮುತ್ತುರಾಜ್‌ ʻನಿಂಗೆಂಥ ಮರ್ಯಾದೆʼ ಅಂತ ಕೆಣಕುತ್ತಾರೆ. ʻನಿನ್ನ ಸೀನಿಯರ್‌ ಆಫೀಸರ್‌ಗಳ ಜತೆ ಆಡಿದಂಗಲ್ಲ ಇದುʼ ಎಂದೂ ಹೇಳುತ್ತಾರೆ. ಕೊನೆಗೆ ನೋಡ್ಕೋತೀನಿ.. ನಾನೂ ನೋಡ್ತೀನಿ.. ತೋರಿಸ್ತೀನಿ,, ತೋರಿಸಿ ಅಂತ ಸವಾಲಿಗೆ ಸವಾಲು ಹಾಕುತ್ತಾ ಫೋನ್‌ ಕಟ್ಟಾಗುತ್ತದೆ.

ಯಾವ ಪ್ರಕರಣ ಇದು?
ಇದು ಯಾವ ಪ್ರಕರಣ ಎಂದು ನಿರ್ದಿಷ್ಟವಾಗಿ ತಿಳಿದುಬಂದಿಲ್ಲ. ಆದರೆ, ನಡುವೆ ʻʻವಾಹನದ ಮೇಲೆ 41,500 ರೂ.ಫೈನ್‌ ಇತ್ತು ಸರ್ʼ ಅಂತ ಟ್ರಾಫಿಕ್‌ ಎಎಸ್‌ಐ ವೆಂಕಟೇಶ್‌ ಹೇಳುತ್ತಾರೆ. ಹಾಗಾಗಿ ಅದು ಯಾವುದೋ ವೆಹಿಕಲ್‌ ಸೀಜ್‌ ಪ್ರಕರಣ, ಅದನ್ನು ರಾಜಿಯಲ್ಲಿ ಇತ್ಯರ್ಥ ಮಾಡಿ ಬಿಟ್ಟುಬಿಡುವ ವಿಚಾರದಲ್ಲಿ ಏರ್‌ಪೋರ್ಟ್‌ ಇನ್ಸ್‌ಪೆಕ್ಟರ್‌ ಮಧ್ಯ ಪ್ರವೇಶ ಮಾಡಿದ್ದಾರೆ ಅನಿಸುತ್ತದೆ. ಆದರೆ, ಅದು ಒಮ್ಮೆಗೇ ಕಾವೇರಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿದೆ!

Exit mobile version