ಬೆಂಗಳೂರು: ಬಿಜೆಪಿ ತೊರೆದಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಪಕ್ಷದತ್ತ ಸೆಳೆಯಲು ಕಾಂಗ್ರೆಸ್ ನಾಯಕರು ನಗರದಲ್ಲಿ ಭಾನುವಾರ ರಾತ್ರಿ ಸಭೆ (Karnataka Election 2023) ನಡೆಸಿದ್ದಾರೆ. ಆದರೆ, ಸಭೆಯಲ್ಲಿ ಜಗದೀಶ್ ಶೆಟ್ಟರ್ ಅವರು, ಯಾವುದೇ ನಿರ್ಧಾರ ತಿಳಿಸಿಲ್ಲ. ಕಾಂಗ್ರೆಸ್ ಸೇರ್ಪಡೆಯಾಗಲು ಮನಸ್ಸು ಮಾಡಿದರೆ ಸೋಮವಾರವೇ ಕಾಂಗ್ರೆಸ್ ಸೇರ್ಪಡೆಯಾಗುವಂತೆ ಕೈನಾಯಕರು ಶೆಟ್ಟರ್‌ಗೆ ಆಫರ್ ನೀಡಿದ್ದಾರೆ.
ಶಾಂತಿನಗರದ ಲಿನಿಯರ್ ಸ್ಟ್ರೀಟ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಜಗದೀಶ್ ಶೆಟ್ಟರ್ ಜತೆ ಸುಮಾರು 2 ಗಂಟೆಗಳ ಕಾಲ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಎಂ.ಬಿ.ಪಾಟೀಲ್ ಮಾತುಕತೆ ನಡೆಸಿದ್ದಾರೆ. ಈ ವೇಳೆ ಕಾಂಗ್ರೆಸ್ ಪಕ್ಷ ಸೇರ್ಪಡೆ ಬಗ್ಗೆ ಶೆಟ್ಟರ್ ಯಾವುದೇ ನಿರ್ಧಾರ ತಿಳಿಸಿಲ್ಲ. ಸಭೆ ಬಳಿಕ ಕೈ ನಾಯಕರು ಯಾವುದೇ ಪ್ರತಿಕ್ರಿಯೆ ನೀಡದೆ ನಿರ್ಗಮಿಸಿದರು.
ಇದಕ್ಕೂ ಮುನ್ನಾ ಮಾತನಾಡಿದ್ದ ಜಗದೀಶ್ ಶೆಟ್ಟರ್ ಅವರು, ನಾನು ಎಲ್ಲ ಬೆಳವಣಿಗೆಗಳ ಬಗ್ಗೆ ಹುಬ್ಬಳ್ಳಿ, ಶಿರಸಿಯಲ್ಲಿ ಈಗಾಗಲೇ ಮಾತನಾಡಿದ್ದೇನೆ. ನಾವು ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದೇವೆ. ಹೀಗಾಗಿ ಟಿಕೆಟ್ ವಂಚನೆಯಿಂದ ನೋವಾಗಿದೆ. ಇನ್ನೆರಡು ದಿನಗಳಲ್ಲಿ ನನ್ನ ಅಂತಿಮ ನಿರ್ಧಾರ ತಿಳಿಸುತ್ತೇನೆ. ಧರ್ಮೆಂದ್ರ ಪ್ರಧಾನ್ ಭೇಟಿ ಮಾಡಿದ್ದರು, ಟಿಕೆಟ್ ಕೈ ತಪ್ಪಿದ ಬಗ್ಗೆ ಮತನಾಡಿದ್ದಾರೆ. ಮೊದಲು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಬೇಕು. ನಂತರ ಮುಂದಿನ ತೀರ್ಮಾನ ಘೋಷಿಸುವುದಾಗಿ ತಿಳಿಸಿದ್ದರು.
ಇದನ್ನೂ ಓದಿ | Liquor Policy Case: ಅರವಿಂದ್ ಕೇಜ್ರಿವಾಲ್‌ಗೆ ಸಿಬಿಐ 56 ಪ್ರಶ್ನೆ, 9 ಗಂಟೆ ವಿಚಾರಣೆ; ಬಳಿಕ ಸಿಎಂ ಹೇಳಿದ್ದೇನು?
ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಖಂಡ ಶ್ರೀನಿವಾಸ ಮೂರ್ತಿ
ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅಖಂಡ ಶ್ರೀನಿವಾಸಮೂರ್ತಿ, ನಾನು ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದೇನೆ. ಕಾಂಗ್ರೆಸ್‌ನ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಸೋಮವಾರ ಪಕ್ಷದ ಕಾರ್ಯಕರ್ತರ ಜತೆ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ. ಅಕ್ಕಪಕ್ಕದ ಕ್ಷೇತ್ರದ ನಾಯಕರು ಹೇಳಿದರು ಅಂತ ನನಗೆ ಟಿಕೆಟ್ ತಪ್ಪಿಸಿದ್ದಾರೆ. ನನ್ನ ತಂದೆ 40 ವರ್ಷ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಹಿರಿಯ ನಾಯಕರ ಮೇಲೆ ನನಗೆ ಇನ್ನೂ ನಂಬಿಕೆ ಇದೆ ಎಂದು ತಿಳಿಸಿದರು.
ಕೆ.ಜೆ.ಹಳ್ಳಿ ಡಿ.ಜೆ.ಹಳ್ಳಿ ಗಲಾಟೆ ಪ್ರಕರಣದ ಬಳಿಕ ಕ್ಷೇತ್ರದಲ್ಲಿ ನಾವೆಲ್ಲಾ ಅಣ್ಣ ತಮ್ಮಂದಿರಂತೆ ಇದ್ದೆವು. ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ಜೈಲಿಗೆ ಹೋಗಿಬಂದ ನಾಯಕರೇ ನನಗೆ ಟಿಕೆಟ್ ತಪ್ಪಿಸಿದರು ಎಂದು ಆರೋಪಿಸಿದರು.