ದೊಡ್ಡಬಳ್ಳಾಪುರ: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಬಳಿಕ, “ನನಗೆ ಟಿಕೆಟ್ (Karnataka Election 2023) ತಪ್ಪಲು ಬಿ.ಎಲ್.ಸಂತೋಷ್ ಕಾರಣ” ಎಂದು ಜಗದೀಶ್ ಶೆಟ್ಟರ್ ನೀಡಿದ ಹೇಳಿಕೆಗೆ ಬಿಜೆಪಿ ನಾಯಕರು ತಿರುಗಿಬಿದ್ದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಶೆಟ್ಟರ್‌ಗೆ ತಿರುಗೇಟು ನೀಡಿದ ಬೆನ್ನಲ್ಲೇ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕೂಡ ಶೆಟ್ಟರ್ ಹೇಳಿಕೆಯನ್ನು ಖಂಡಿಸಿದ್ದಾರೆ. “ಬಿ.ಎಲ್.ಸಂತೋಷ್ ಅವರ ಬಗ್ಗೆ ಮಾತನಾಡುವ ನೈತಿಕತೆ ಜಗದೀಶ್ ಶೆಟ್ಟರ್ ಅವರಿಗಿಲ್ಲ” ಎಂದು ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ಅವರು ನಾಮಪತ್ರ ಸಲ್ಲಿಸಲು ಸಾಥ್ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಶೋಭಾ ಕರಂದ್ಲಾಜೆ ಮಾತನಾಡಿದರು. ಇದೇ ವೇಳೆ ಅವರು ಜಗದೀಶ್ ಶೆಟ್ಟರ್ ಅವರಿಗೆ ತಿರುಗೇಟು ನೀಡಿದರು. “ಜಗದೀಶ್ ಶೆಟ್ಟರ್ ಅವರು ಹೆತ್ತ ತಾಯಿಯನ್ನೇ ತುಳಿದು ಹೋಗಿದ್ದಾರೆ. ಬಿಜೆಪಿಯಲ್ಲಿ ಹಿರಿಯರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಶೆಟ್ಟರ್ ಅವರಿಗೆ ಬಿಜೆಪಿ ಏನು ಕಡಿಮೆ ಮಾಡಿತ್ತು? ಶೆಟ್ಟರ್ ಅವರಿಗೆ ಬಿಜೆಪಿಯು ಶಾಸಕ, ಸಚಿವ, ಮುಖ್ಯಮಂತ್ರಿ ಸ್ಥಾನ ನೀಡಿತ್ತು. ಆದರೆ, ಈಗ ಕಾಂಗ್ರೆಸ್ ಸೇರಿದ ಬಳಿಕ ಅವರು ನೀಡುವ ಹೇಳಿಕೆಗಳನ್ನು ಗಮನಿಸಿದರೆ, ಅವರು ನಿಜವಾಗಿಯೂ ಬಿಜೆಪಿಗೆ ಬದ್ಧರಾಗಿದ್ದರಾ ಎಂಬ ಪ್ರಶ್ನೆ ಮೂಡುತ್ತದೆ” ಎಂದರು.
ಶೋಭಾ ಕರಂದ್ಲಾಜೆ ತಿರುಗೇಟು
“ಬಿ.ಎಲ್.ಸಂತೋಷ್ ಅವರು ಚುನಾವಣೆ ರಾಜಕೀಯಕ್ಕೆ ಬಂದವರಲ್ಲ, ಅವರು ಪಕ್ಷ ಸಂಘಟನೆಗಾಗಿ ಬಂದವರು. ಅವರು ನಾನು ಶಾಸಕನಾಗುತ್ತೇನೆ, ಮಂತ್ರಿಯಾಗುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಅಂತಹವರ ಬಗ್ಗೆ ಮಾತನಾಡುವ ಮೂಲಕ ಜಗದೀಶ್ ಶೆಟ್ಟರ್ ಅವರು ತಮ್ಮ ಘನತೆ, ಸ್ಥಾನ ಎಂತಹದ್ದು ಎಂಬುದನ್ನು ತೋರಿಸಿದ್ದಾರೆ” ಎಂದು ಟೀಕಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಶೋಭಾ ಕರಂದ್ಲಾಜೆ ಅವರು ಅಭ್ಯರ್ಥಿ ಧೀರಜ್ ಮುನಿರಾಜು ಜತೆಗೂಡಿ ನಗರದಲ್ಲಿ ರೋಡ್ ಶೋ ನಡೆಸಿದರು. ರೋಡ್ ಶೋನಲ್ಲಿ 10 ಸಾವಿರಕ್ಕೂ ಅಧಿಕ ಜನ ಭಾಗವಹಿಸಿದ್ದರು.
ಏಪ್ರಿಲ್ 30ರ ನಂತರ ಮೋದಿ ರಾಜ್ಯ ಪ್ರವಾಸ
“ಏಪ್ರಿಲ್ 30ರ ನಂತರ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರ‍್ಯಾಲಿ ನಡೆಸಲಿದ್ದಾರೆ” ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. “ರಾಜ್ಯದಲ್ಲಿ ಈಗಾಗಲೇ ಜೆ.ಪಿ.ನಡ್ಡಾ ಅವರು ಪ್ರವಾಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮೋದಿ ಅವರ ಜತೆಗೆ ಯೋಗಿ ಆದಿತ್ಯನಾಥ್, ಅಮಿತ್ ಶಾ ಸೇರಿ ಹಲವು ನಾಯಕರು ಆಗಮಿಸಿ ಪ್ರಚಾರ ನಡೆಸಲಿದ್ದಾರೆ” ಎಂದು ತಿಳಿಸಿದರು. ತಾಲೂಕು ಕಚೇರಿಗೆ ತೆರಳಿ ಧೀರಜ್ ಮುನಿರಾಜು ನಾಮಪತ್ರ ಸಲ್ಲಿಸಿದರು. ಇವರಿಗೆ ಶೋಭಾ ಕರಂದ್ಲಾಜೆ, ಬಿಜೆಪಿ ಮುಖಂಡರಾದ ಹನುಮಂತರಾಯಪ್ಪ, ಬಿ.ಸಿ.ಆನಂದ್ ಸಾಥ್ ನೀಡಿದರು.