ಶಿರಸಿ: ಸುಮಾರು 40 ವರ್ಷದ ಬಿಜೆಪಿಯೊಂದಿಗಿನ ಸಖ್ಯಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬೇಸರಿಂದ ಹೊರನಡೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಆರು ಬಾರಿ ಶಾಸಕರಾಗಿ, ರಾಜ್ಯ ಬಿಜೆಪಿ ಅಧ್ಯಕ್ಷರಾಗಿ, ಮುಖ್ಯಮಂತ್ರಿಯಾಗಿಯೂ ಕಾರ್ಯನಿರ್ವಹಿಸಿರುವ ಶೆಟ್ಟರ್‌ಗೆ ಟಿಕೆಟ್ ತಪ್ಪಿದ್ದು ಇದೀಗ ಪಕ್ಷ ಬಿಡಲು ಕಾರಣವಾಗಿದೆ. ಟಿಕೆಟ್ ಘೊಷಣೆಯಾದಾಗ ಮಾತನಾಡಿದ್ದ ಶೆಟ್ಟರ್, ಟಿಕೆಟ್ ತಪ್ಪಿದ್ದು ಬೇಸರವಲ್ಲ. ಈ ಬಗ್ಗೆ ಎರಡು ಮೂರು ತಿಂಗಳ ಹಿಂದೆಯೇ ತಿಳಿಸಿದ್ದರೆ ಮಾನಸಿಕವಾಗಿ ಸಿದ್ಧವಾಗುತ್ತಿದ್ದೆ ಎಂದು ಬೇಸರ ವ್ಯಕ್ತಪಡಿಸಿದ್ದರು.
ರಾಜೀನಾಮೆ ನೀಡುವುದಕ್ಕೂ ಮೊದಲು ಮಾತನಾಡಿದ್ದ ಜಗದೀಶ್ ಶೆಟ್ಟರ್, ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನಂತರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ. ಆನಂತರದಲ್ಲಿ ಆಯ್ಕೆಗಳನ್ನು ನೋಡುತ್ತೇನೆ. ಸ್ವತಂತ್ರವಾಗಿ ಸ್ಪರ್ಧಿಸಬೇಕೆ ಅಥವಾ ಪಕ್ಷದಿಂದ ಸ್ಪರ್ಧೆ ಮಾಡಬೇಕೆ ಎಂಬ ಕುರಿತು ಶಿರಸಿಯಿಂದ ವಾಪಸಾದ ನಂತರ ನಿರ್ಧಾರ ಮಾಡುತ್ತೇನೆ ಎಂದಿದ್ದರು.
ಶೆಟ್ಟರ್ ರಾಜೀನಾಮೆ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಎಲ್ಲ ಹಿರಿಯರೂ ಮಾತುಕತೆ ನಡೆಸಿದ್ದರು. ಎಲ್ಲ ಹಂತದ ಮಾತುಕತೆಗಳನ್ನೂ ಶೆಟ್ಟರ್ ಜತೆ ನಡೆಸಿದ್ದರು. ಮಾತುಕತೆ ನಡೆಸಿದರೂ ಅವರು ಹೋಗ್ತಿದಾರೆ. ಅವರ ಮನವೊಲಿಸುವ ಕೆಲಸವನ್ನು ಎಲ್ಲ ಹಿರಿಯರೂ ಮಾಡಿದ್ದಾರೆ.
ಶೆಟ್ಟರ್‌ಗೆ ಎಲ್ಲ ಗೌರವ ಕೊಟ್ಟಿತ್ತು ಪಕ್ಷ. ಎಲ್ಲ ಜವಾಬ್ದಾರಿಗಳನ್ನು ಕೊಟ್ಟಿತ್ತು. ಅವರು ನಮ್ಮಲ್ಲೇ ಉಳ್ಕೋತಾರೆ ಅಂತ ವಿಶ್ವಾಸ ಇತ್ತು. ಶೆಟ್ಟರ್ ಪಕ್ಷ ಬಿಡ್ತಿರೋದರಿಂದ ಪಕ್ಷಕ್ಕೆ ಹಿನ್ನಡೆ ಆಗಿಲ್ಲ ಎಂದರು.
ಎಸ್. ಸುರೇಶ್ ಕುಮಾರ್ ಹಾಗೂ ಜಗದೀಶ್ ಶೆಟ್ಟರ್ ಒಂದೇ ವಯಸ್ಸಿನವರಾಗಿದ್ದರೂ ಒಬ್ಬರಿಗೆ ಟಿಕೆಟ್ ನೀಡಿ ಇನ್ನೊಬ್ಬರಿಗೆ ತಪ್ಪಲು ಕಾರಣ ಏನು ಎಂಬ ಪ್ರಶ್ನೆಗೆ ಉತ್ತರಿಸಿ, ನಮ್ಮಲ್ಲಿ ಸಮುದಾಯದ ಪ್ರಶ್ನೆ ಬರಲ್ಲ. ಎಲ್ಲ ಸಮುದಾಯ ಗುರುತಿಸಿ ಟಿಕೆಟ್ ಕೊಡಲಾಗಿದೆ. ಎಲ್ಲ ಸಮುದಾಯಗಳಿಗೂ ಸಾಮಾಜಿಕ ನ್ಯಾಯದಡಿ ಸ್ಥಾನಮಾನ ಕೊಡಲಾಗಿದೆ. ಲಿಂಗಾಯತರನ್ನು ಗುರುತಿಸಿ ಸಿಎಂ ಮಾಡಿದ್ದು ನಮ್ಮ ಪಕ್ಷ ಮಾತ್ರವೆ ಎಂದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಂದಾಯ ಸಚಿವ ಆರ್. ಅಶೋಕ್, ಪಕ್ಷದಲ್ಲಿರುವ ಎಲ್ಲ ಪೋಸ್ಟ್‌ಗಳನ್ನು ಶೆಟ್ಟರ್ ನೋಡಿದ್ದಾರೆ. ಜಗದೀಶ್ ಶೆಟ್ಟರ್ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಿದ್ದೆವು. ಬಿಜೆಪಿ ಅಧ್ಯಕ್ಷ, ಸಿಎಂ ಆಗಿಯೂ ಮಾಡಲಾಗಿತ್ತು. ಶೆಟ್ಟರ್‌ರವರು ತಾಳ್ಮೆಯಿಂದ ಬಿಜೆಪಿ ಹೈಕಮಾಂಡ್ ಜೊತೆ ಮಾತನಾಡಬೇಕಿತ್ತು.
ಶೆಟ್ಟರ್ ಅವರಿಗೆ ಎಲ್ಲಾ ಪೋಸ್ಡ್ ಮುಗಿದಿದೆ. ತಾಳ್ಮೆಯಿಂದ ಇದ್ದಿದ್ರೆ ಇನ್ನೂ ಒಳ್ಳೆಯ ಅವಕಾಶ ಸಿಗುತ್ತಿತ್ತು. ಇನ್ನೂ ಕಾಲ ಮಿಂಚಿಲ್ಲ. ತಾಳ್ಮೆ ಪ್ರದರ್ಶನ ಮಾಡಿ ರಾಷ್ಟ್ರೀಯ ನಾಯಕರ ಜೊತೆ ಮಾತನಾಡಿ ಮುಂದೆ ಬರುವ ಅವಕಾಶಕ್ಕೆ ಕಾಯಬೇಕು ಅನ್ನೋದು ನನ್ನ ಅಭಿಪ್ರಾಯ ಎಂದಿದ್ದಾರೆ.
ಇದನ್ನೂ ಓದಿ: Karnataka Election 2023: ಜಗದೀಶ್ ಶೆಟ್ಟರ್ ಅಂತಹ ದೊಡ್ಡ ನಾಯಕರು ನಮ್ಮ ಪಕ್ಷಕ್ಕೆ ಬೇಡ: ಎಚ್.ಡಿ. ಕುಮಾರಸ್ವಾಮಿ