Site icon Vistara News

Karnataka Election 2023: ಜಗದೀಶ್‌ ಶೆಟ್ಟರ್‌ ಕಾಂಗ್ರೆಸ್‌ಗಾ? ಜೆಡಿಎಸ್‌ಗಾ?: ಎಚ್‌ಡಿಕೆ, ಶಾಮನೂರು ಹೇಳಿದ್ದೇನು?

Jagadish Shettar join to congress or JDS What did HDK and Shamanur say Karnataka Election 2023 updates

ದಾವಣಗೆರೆ/ಶಿರಸಿ: ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಮಂಗಳವಾರ (ಏ. 11) ಬಿಜೆಪಿ ಟಿಕೆಟ್‌ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಧಾರವಾಡ ಸೆಂಟ್ರಲ್‌ ಕ್ಷೇತ್ರದ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರ ಹೆಸರು ಇಲ್ಲದೇ ಇರುವುದರಿಂದ ಬೇಸರಗೊಂಡಿರುವ ಅವರು, ಈ ಸಂಬಂಧ ನವ ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಸಹ ಭೇಟಿ ಮಾಡಿ ಬೇಡಿಕೆಯನ್ನು ಮಂಡಿಸಿದ್ದಾರೆ. ಒಂದು ವೇಳೆ ಅವರಿಗೆ ಟಿಕೆಟ್‌ ಸಿಗದೇ ಇದ್ದರೆ ಬಿಜೆಪಿ ತೊರೆದು ಕಾಂಗ್ರೆಸ್‌, ಜೆಡಿಎಸ್‌ ಇಲ್ಲವೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಾರಾ ಎಂಬ ಚರ್ಚೆಗಳು ಎದ್ದಿತ್ತು. ಈ ಸಂಬಂಧ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯೆ ನೀಡಿದ್ದು, ಶೆಟ್ಟರ್‌ ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಬರುವುದಿಲ್ಲ ಎಂದು ಷರಾ ಬರೆದಿದ್ದಾರೆ.

ನಾವು ಕರೆದರೂ ಶೆಟ್ಟರ್‌ ನಮ್ಮ ಪಕ್ಷಕ್ಕೆ ಬರುವುದಿಲ್ಲ, ಬಿಜೆಪಿಯಲ್ಲಿಯೇ ಇರಲಿದ್ದಾರೆ: ಶಾಮನೂರು

ದಾವಣಗೆರೆಯಲ್ಲಿ ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಮನೂರು ಶಿವಶಂಕರಪ್ಪ, ಜಗದೀಶ್ ಶೆಟ್ಟರ್‌ ಅವರಿಗೆ ಬಿಜೆಪಿ ಟಿಕೆಟ್‌ ಸಿಕ್ಕೇ ಸಿಗುತ್ತದೆ. ಆ ಕಾರಣಕ್ಕಾಗಿಯೇ ಅವರನ್ನು ನವ ದೆಹಲಿಗೆ ಕರೆಸಿಕೊಳ್ಳಲಾಗಿದೆ. ಅವರದ್ದೂ ಏನಾದರೂ ಬೇಡಿಕೆ ಇರಬಹುದು. ಈ ಕಾರಣಕ್ಕಾಗಿ ಟಿಕೆಟ್‌ ಘೋಷಣೆ ಮಾಡದೇ ಇರಬಹುದು. ಅದು ಬಿಟ್ಟು ಅವರಿಗೆ ಟಿಕೆಟ್‌ ನೀಡುವುದಿಲ್ಲ ಎಂಬುದು ಸುಳ್ಳು ಎಂದು ಹೇಳಿದ್ದಾರೆ.

ಇನ್ನು ಶೆಟ್ಟರ್‌ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆಯೇ? ಅವರನ್ನು ನೀವು ಆಹ್ವಾನಿಸುತ್ತೀರಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಶೆಟ್ಟರ್‌ ಅವರನ್ನು ಕಾಂಗ್ರೆಸ್‌ಗೆ ಕರೆಯುವ ಪ್ರಶ್ನೆಯೇ ಇಲ್ಲ. ನಾವು ಕರೆದರೂ ಅವರು ನಮ್ಮ ಪಕ್ಷಕ್ಕೆ ಬರುವುದಿಲ್ಲ. ಅವರು ಬಿಜೆಪಿಯಲ್ಲಿಯೇ ಇರಲಿದ್ದಾರೆ ಎಂದು ಹೇಳಿದರು. ಟಿಕೆಟ್ ಸಿಗದೆ ಇದ್ದರೆ ಶೆಟ್ಟರ್ ಸ್ವತಂತ್ರವಾಗಿ ಸ್ಪರ್ಧಿಸುತ್ತಾರೆಯೇ ಎಂಬ ಪ್ರಶ್ನೆಗೆ, ಅದಕ್ಕೆ ನೀವು ಅವರನ್ನೇ ಕೇಳಬೇಕು. ಆದರೆ, ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: BJP Karnataka: ಬ್ಯಾಟರಾಯನಪುರದಲ್ಲಿ ತಮ್ಮೇಶ್‌ ಗೌಡ ಗೆಲುವು ನನ್ನ ಮರ್ಯಾದೆ ಪ್ರಶ್ನೆ: ಬಿ.ಎಸ್‌. ಯಡಿಯೂರಪ್ಪ

ಶೆಟ್ಟರ್‌ ಪಕ್ಷ ಬಿಡುತ್ತಾರೆ ಎಂದರೆ ಯಾರೂ ನಂಬಲ್ಲ- ಎಚ್‌.ಡಿ. ಕುಮಾರಸ್ವಾಮಿ

ಬಿಜೆಪಿಯ ಮೊದಲ ಪಟ್ಟಿಯಲ್ಲಿ ಟಿಕೆಟ್ ಸಿಗದೇ ಇರುವ ಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಜೆಡಿಎಸ್‌ಗೆ ಸೇರ್ಪಡೆಯಾಗಲಿದ್ದಾರೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಎಚ್.ಡಿ. ಕುಮಾರಸ್ವಾಮಿ, ಶೆಟ್ಟರ್‌ ಪಕ್ಕಾ ಬಿಜೆಪಿ‌ಯವರಾಗಿದ್ದಾರೆ. ಅವರು ಮೂಲತಃ ಆರ್‌ಎಸ್‌ಎಸ್‌ಗೆ ಸಂಬಂಧಪಟ್ಟವರು. ಹೀಗಾಗಿ ಅವರು ಪಕ್ಷ ಬಿಡುತ್ತಾರೆ ಎನ್ನುವುದನ್ನೇ ಯಾರೂ ನಂಬುವುದಿಲ್ಲ. ಅವರು ನಮ್ಮ ಪಕ್ಷಕ್ಕೆ ಬರುವ ಕುರಿತು ಯಾವುದೇ ಮಾತುಕತೆ ನಡೆದಿಲ್ಲ, ಮುಂದೆ ನೋಡೋಣ ಎಂದು ಪ್ರತಿಕ್ರಿಯೆ ನೀಡಿದರು.

Exit mobile version