ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (bs yediyurappa) ಅವರು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭೆ ಕ್ಷೇತ್ರದಲ್ಲಿ (Karnataka Election 2023) ಬೀಡುಬಿಟ್ಟಿದ್ದು, ಜಗದೀಶ್ ಶೆಟ್ಟರ್ (Jagadish Shettar) ಅವರನ್ನು ಸೋಲಿಸಲು ಪಣತೊಟ್ಟಿದ್ದಾರೆ. ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಪರ ಪ್ರಚಾರ ಮಾಡಿದ ಅವರು, ಇದೇ ವೇಳೆ ಜಗದೀಶ್ ಶೆಟ್ಟರ್ (Jagadish Shettar) ಹಾಗೂ ಲಕ್ಷ್ಮಣ ಸವದಿ ವಿರುದ್ಧ ವಾಗ್ದಾಳಿ ನಡೆಸಿದರು. “ಬಿಜೆಪಿಗೆ ದ್ರೋಹ ಮಾಡಿದ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಸೋತು ಮನೆಗೆ ಹೋಗುವುದು ನಿಶ್ಚಿತ” ಎಂದರು.
“ಜಗದೀಶ್ ಶೆಟ್ಟರ್ (Jagadish Shettar) ಅವರು ನಂಬಿಕೆ ಹಾಗೂ ವಿಶ್ವಾಸ ದ್ರೋಹ ಮಾಡಿದ್ದಾರೆ. ಅಮಿತ್ ಶಾ ಅವರೇ ಮಾತನಾಡಿದರೂ ವಿಶ್ವಾಸ ದ್ರೋಹ ಮಾಡಿ ಹೋಗಿದ್ದಾರೆ. ಆದರೆ, ಶೆಟ್ಟರ್ ಅವರು ಜೀವನದಲ್ಲಿಯೇ ಮರೆಯಲಾರದಂತಹ ಸೋಲು ಅನುಭವಿಸುತ್ತಾರೆ. ಜಗದೀಶ್ ಶೆಟ್ಟರ್ ದ್ರೋಹ ಮಾಡಿರುವ ದ್ರೋಹದ ಬಗ್ಗೆ ಕಾರ್ಯಕರ್ತರು ಜನರಿಗೆ ತಿಳಿಸಬೇಕು. ಇನ್ನೂ ಹತ್ತು-ಹನ್ನೆರಡೂ ದಿನ ಶೆಟ್ಟರ್ ಬೆನ್ನಿಗೆ ಚೂರಿ ಹಾಕಿದ್ದರ ಬಗ್ಗೆ ಜನರಿಗೆ ಮನವರಿಕೆ ಮಾಡಬೇಕು. ಅವರನ್ನು ಈ ಬಾರಿ ಮನೆಗೆ ಕಳುಹಿಸಬೇಕು. ನಮ್ಮ ಪಕ್ಷದ ಅಭ್ಯರ್ಥಿ 25-30 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು” ಎಂದು ಪಕ್ಷದ ಕಾರ್ಯಕರ್ತರು ಕರೆ ನೀಡಿದರು.
“ಇಷ್ಟು ದೊಡ್ಡ ಮಟ್ಟದಲ್ಲಿ ಜನ ಸೇರಿರುವುದು ನನ್ನ ವಿಶ್ವಾಸ ಹೆಚ್ಚಿಸಿದೆ. ನಮಗೆ ದ್ರೋಹ ಮಾಡಿದ ಶೆಟ್ಟರ್ ಹಾಗೂ ಸವದಿ ಮನೆಗೆ ಹೋಗುತ್ತಾರೆ” ಎಂದರು. “ವಿಧಾನಸಭೆ ಚುನಾವಣೆಯಲ್ಲಿ ಸೋತ ಲಕ್ಷ್ಮಣ ಸವದಿ ಅವರನ್ನು ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡಿದೆ. ಉಪ ಮುಖ್ಯಮಂತ್ರಿಯಾಗಿ ಮಾಡಿದ್ದೂ ನಾನೇ. ಆದರೆ, ಅವನು ನನಗೆ ದ್ರೋಹ ಮಾಡಿದ್ದಾನೆ” ಎಂದು ಏಕವಚನದಲ್ಲಿ ಕುಟುಕಿದರು.
ಕಾಂಗ್ರೆಸ್ ಪಕ್ಷಕ್ಕೆ ನಾಯಕ ಯಾರು?
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಯಡಿಯೂರಪ್ಪ, “ಕಾಂಗ್ರೆಸ್ ಮುಳುಗುತ್ತಿರುವ ಪಕ್ಷ. ಆ ಪಕ್ಷಕ್ಕೆ ನಾಯಕ ಯಾರು? ಕಾಂಗ್ರೆಸ್‌ನವರು ತಬ್ಬಲಿಗಳಾಗಿದ್ದಾರೆ. ನರೇಂದ್ರ ಮೋದಿ, ಅಮಿತ್ ಶಾ ಎದುರು ಯಂಕ, ಶೀನ, ನಾಣಿ ಏನು ಮಾಡಲು ಆಗುತ್ತದೆ? ಜಗದೀಶ್ ಶೆಟ್ಟರ್ ಮನೆಗೆ ಹೋಗುತ್ತಾರೆ. ಮಹೇಶ್ ಟೆಂಗಿನಕಾಯಿ ಗೆದ್ದು ನಿಮ್ಮ ಸೇವೆ ಮಾಡುತ್ತಾರೆ. ನಾನೂ ನರೇಂದ್ರ ಮೋದಿ ಮತ್ತು ಅಮಿತ್ ಶಾ ಮಾತು ಕೊಟ್ಟು ಬಂದಿದ್ದೇನೆ. 150 ಸ್ಥಾನದಲ್ಲಿ ಗೆದ್ದು ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ ಎಂದು ಮಾತು ಕೊಟ್ಟಿದ್ದೇನೆ. ಹಾಗಾಗಿ, ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬನ್ನಿ ಎಂದು ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ. ಚುನಾವಣೆ ಮುಗಿದ ಬಳಿಕ ಇದೇ ಜಾಗದಲ್ಲಿ ಜಗದೀಶ್ ಶೆಟ್ಟರ್ ಸಮ್ಮುಖದಲ್ಲಿಯೇ 1 ಲಕ್ಷ ಜನರನ್ನು ಸೇರಿಸಿ ವಿಜಯೋತ್ಸವ ಆಚರಿಸೋಣ” ಎಂದರು.
ಇದನ್ನೂ ಓದಿ: Jagadish Shettar: ಬಿಜೆಪಿಯ ಏಳು ಜನ ಮಂತ್ರಿಗಳ ಸಿಡಿ ಇವೆ; ಸ್ಟೇ ತಂದಿದ್ದು ಯಾಕೆಂದು ಅವರನ್ನೇ ಕೇಳಿ ಎಂದ ಜಗದೀಶ್ ಶೆಟ್ಟರ್