Site icon Vistara News

Jagadish Shettar : ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವ, MLC ಸ್ಥಾನಕ್ಕೆ ಶೆಟ್ಟರ್‌ ರಾಜೀನಾಮೆ

Jagadish Shettar Joins BJP

ನವದೆಹಲಿ: ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ (Jagadish Shettar) ಅವರು ಒಂಬತ್ತು ತಿಂಗಳ ಬಳಿಕ ಮರಳಿ ಬಿಜೆಪಿ (Shettar Returns to BJP) ಸೇರಿದ್ದಾರೆ. ಅದರೊಂದಿಗೆ ಅವರು ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವ (Shettar Resigns to Congress) ಮತ್ತು ವಿಧಾನ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ (Shettar Resigns to MLC Seat) ನೀಡಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಟಿಕೆಟ್‌ ನಿರಾಕರಿಸಲ್ಪಟ್ಟ ಅವರು ಆಕ್ರೋಶದಿಂದ ಕಾಂಗ್ರೆಸ್‌ ಸೇರಿದ್ದರು. ಕಾಂಗ್ರೆಸ್‌ ಅವರಿಗೆ ಟಿಕೆಟ್‌ ನೀಡಿತ್ತು. ಅವರು ಚುನಾವಣೆಯಲ್ಲಿ ಧಾರವಾಡ ದಕ್ಷಿಣ ಕ್ಷೇತ್ರದಿಂದ ಸೋಲು ಕಂಡಿದ್ದರಾದರೂ ಕಾಂಗ್ರೆಸ್‌ ಅವರನ್ನು ವಿಧಾನ ಪರಿಷತ್‌ ಸ್ಥಾನ ನೀಡಿ ಗೌರವಿಸಿತ್ತು.

ಈ ನಡುವೆ ನಡೆದ ಬೆಳವಣಿಗೆಯಲ್ಲಿ ಜಗದೀಶ್‌ ಶೆಟ್ಟರ್‌ ಅವರನ್ನು ಬಿಜೆಪಿ ಘರ್‌ ವಾಪ್ಸಿಗೆ ಪ್ರಯತ್ನ ಆರಂಭಿಸಿತ್ತು. ಅದು ಈಗ ಸಫಲವಾಗಿದೆ. ಗುರುವಾರ ದಿಲ್ಲಿಗೆ ಆಗಮಿಸಿದ ಜಗದೀಶ್‌ ಶೆಟ್ಟರ್‌ ಅವರು ಮೊದಲು ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾದರು. ಬಳಿಕ ಕೆಲವೇ ನಿಮಿಷದಲ್ಲಿ ಅವರು ಮರಳಿ ಬಿಜೆಪಿ ಸೇರಿದ್ದನ್ನು ಅಧಿಕೃತವಾಗಿ ಪ್ರಕಟಿಸಲಾಯಿತು.

ಬಹಳ ಸಂತೋಷದ ದಿನ ಎಂದ ಜಗದೀಶ್‌ ಶೆಟ್ಟರ್‌

ಬಿಜೆಪಿಯನ್ನು ಮರಳಿ ಸೇರಿದ ಬೆನ್ನಿಗೇ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಜಗದೀಶ್‌ ಶೆಟ್ಟರ್‌ ಅವರು, ಇವತ್ತು ಬಹಳ ಸಂತೋಷದ ದಿನ. ಕಳೆದ ಅಸೆಂಬ್ಲಿ ಚುನಾವಣೆಯ ವೇಳೆ ಕಾಂಗ್ರೆಸ್‌ ಪಕ್ಷ ಸೇರಿದ್ದೆ. ಕಳೆದ ಒಂಬತ್ತು ತಿಂಗಳಲ್ಲಿ ಬಿಜೆಪಿ ಕಾರ್ಯಕರ್ತರು, ನಾಯಕರು, ಹೈಕಮಾಂಡ್‌ ಶಾಸಕರು ಮರಳಿ ಬಿಜೆಪಿಗೆ ಬನ್ನಿ ಎಂದು ಆಶಯ ವ್ಯಕ್ತಪಡಿಸಿದ್ದರು. ಅದರಂತೆ ಬಿಜೆಪಿಯನ್ನು ಸೇರಿದ್ದೇನೆʼʼ ಎಂದು ಹೇಳಿದರು.

ಅಮಿತ್‌ ಶಾ ಅವರು ಮತ್ತು ಇತರ ನಾಯಕರು ಅತ್ಯಂತ ಪ್ರೀತಿ ಮತ್ತು ಗೌರವದಿಂದ ಕರೆಸಿಕೊಂಡಿದ್ದಾರೆ. ಹೀಗಾಗಿ ಪ್ರೀತಿಯಿಂದ ಬಿಜೆಪಿ ಸೇರಿದ್ದೇನೆ ಎಂದು ಜಗದೀಶ್‌ ಶೆಟ್ಟರ್‌ ಹೇಳಿದರು.

ಇದನ್ನೂ ಓದಿ: Jagadish Shetter: ಜಗದೀಶ್‌ ಶೆಟ್ಟರ್ ಬಿಜೆಪಿ ಸೇರ್ಪಡೆ; ನವ ದೆಹಲಿಯಲ್ಲಿ ಅಧಿಕೃತ ಘೋಷಣೆ

ಕಾಂಗ್ರೆಸ್‌, ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ

ಕಾಂಗ್ರೆಸ್‌ ನನ್ನನ್ನು ವಿಧಾನ ಪರಿಷತ್‌ ಸ್ಥಾನವನ್ನು ನೀಡಿದೆ. ಈಗ ಬಿಜೆಪಿ ಸೇರಿದ್ದರಿಂದ ವಿಧಾನ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಮೇಲ್ಮನೆ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರ ಜತೆ ಮಾತನಾಡಿದ್ದೇನೆ. ಈ ಮೇಲ್‌ ಮೂಲಕ ರಾಜೀನಾಮೆ ಪತ್ರ ಕಳುಹಿಸಿದ್ದೇನೆ ಎಂದು ಜಗದೀಶ್‌ ಶೆಟ್ಟರ್‌ ಹೇಳಿದರು.

ಈ ನಡುವೆ, ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೆ ಈಮೇಲ್‌ ಕಳುಹಿಸಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾಗಿ ಹೇಳಿದ್ದಾರೆ.

ಕಾರ್ಯಕರ್ತರ ಇಚ್ಛೆಯಂತೆ ಸೇರಿದ್ದೇನೆ ಪಕ್ಷಕ್ಕೆ ನಿಷ್ಠನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ ಜಗದೀಶ್‌ ಶೆಟ್ಟರ್‌,

ದೇಶದ ರಕ್ಷಣೆ ಹಿತರಕ್ಷಣೆ, ದೇಶವನ್ನು ಒಗ್ಗೂಡಿಸುವುದು ಮೊದಲಾದ ವಿಚಾರಗಳು ಈಗಿನ ಹಂತದಲ್ಲಿ ಅತ್ಯಂತ ಪ್ರಮುಖ. ಕೆಲಸವನ್ನು ಕಳೆದ ಹಲವು ವರ್ಷಗಳಿಂದ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಲ ತುಂಬುವುದಕ್ಕಾಗಿ ಬಿಜೆಪಿ ಸೇರಿದ್ದೇನೆ ಎಂದು ಜಗದೀಶ್ ಶೆಟ್ಟರ್‌ ಹೇಳಿದರು.

ಒಂಬತ್ತು ತಿಂಗಳ ಹಿಂದೆ ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿದಾಗ ತುಂಬ ಗೌರವದಿಂದ ನಡೆಸಿಕೊಂಡಿದೆ ಎಂದು ಕೂಡಾ ಜಗದೀಶ್‌ ಶೆಟ್ಟರ್‌ ಹೇಳಿದರು.

Exit mobile version