Site icon Vistara News

Vistara News Launch |‌ ಮಾಧ್ಯಮಗಳು ವಿಶ್ವಾಸಾರ್ಹತೆ ಉಳಿಸಿಕೊಂಡು ಜನಪರ ಕೆಲಸ ಮಾಡಲಿ: ಜಗದೀಶ್‌ ಶೆಟ್ಟರ್

Vistara News Launch

ಹುಬ್ಬಳ್ಳಿ: ವಾಣಿಜ್ಯ ನಗರ ಹುಬ್ಬಳ್ಳಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್‌ನಲ್ಲಿ ವಿಸ್ತಾರ ಕನ್ನಡ ಸಂಭ್ರಮ ಅದ್ಧೂರಿಯಾಗಿ ನೆರವೇರಿತು. ಮೂರು ಸಾವಿರ ಮಠದ ಪೀಠಾಧ್ಯಕ್ಷ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ವೇದಿಕೆ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಉದ್ಘಾಟಿಸಿದರು.

ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್ ಮಾತನಾಡಿ, ಮುದ್ರಣ ಮಾಧ್ಯಮಗಳಂತೆ ವಿವಿಧ ಚಾನೆಲ್‌ಗಳು ಅರಂಭವಾಗಿರುವುದರಿಂದ ದೃಶ್ಯ ಮಾಧ್ಯಮ ಕ್ಷೇತ್ರದಲ್ಲೂ ಪೈಪೋಟಿ ಹೆಚ್ಚಾಗಿದೆ. ಈ ಸ್ಪರ್ಧೆ ಜನಪರ, ಸಮಾಜಪರವಾಗಿದ್ದರೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯ. ಜನಪರವಾಗಿ ಕೆಲಸ ಮಾಡುತ್ತಾ ವಿಶ್ವಾಸಾರ್ಹತೆ ಉಳಿಸಿಕೊಂಡು ಹೋದಾಗ ಮಾಧ್ಯಮಕ್ಕೆ ಹೆಚ್ಚಿನ ಮಹತ್ವ ಬರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ವಿಸ್ತಾರ ನ್ಯೂಸ್‌ ಕಾರ್ಯ ನಿರ್ವಹಿಸಲಿ ಎಂದು ಆಶಿಸಿದರು.

ಇದನ್ನೂ ಓದಿ | Vistara News Launch | ಬ್ರೇಕಿಂಗ್ ನ್ಯೂಸ್ ಧಾವಂತದಲ್ಲಿ ಸಮಾಜ ಒಡೆಯುವ ಕೆಲಸ ಆಗಬಾರದು: ಸಂಸದ ಬಿ.ವೈ. ರಾಘವೇಂದ್ರ

ಪ್ರಾಮಾಣಿಕವಾಗಿ ಜನಪರ ನಿಲುವಿನೊಂದಿಗೆ ಯಾವುದೇ ಮಾಧ್ಯಮ ಕಾರ್ಯನಿರ್ವಹಿಸಿದರೆ ಯಶಸ್ವಿಯಾಗುತ್ತದೆ. ಇದೀಗ ವಿಜಯವಾಣಿ, ವಿಜಯ ಕರ್ನಾಟಕದಂತಹ ಪತ್ರಿಕೆಗಳ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿರುವ ಅನುಭವಿ ಹಿರಿಯ ಪತ್ರಕರ್ತ ಹರಿಪ್ರಕಾಶ್‌ ಕೋಣೆಮನೆ ಅವರ ನೇತೃತ್ವದಲ್ಲಿ ಆರಂಭವಾಗಿರುವ ವಿಸ್ತಾರ ನ್ಯೂಸ್‌ಗೆ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹರಿಪ್ರಕಾಶ್‌ ಕೋಣೆಮನೆ ಅವರನ್ನು ಕಳೆದ ಇಪ್ಪತ್ತು ವರ್ಷಗಳಿಂದ ನೋಡುತ್ತಿದ್ದೇನೆ. ಅವರೊಬ್ಬ ವಸ್ತುನಿಷ್ಠ ಪತ್ರಕರ್ತ. ಅವರ ನೇತೃತ್ವದಲ್ಲಿ ನೂತನ ವಿಸ್ತಾರ ಸುದ್ದಿ ವಾಹಿನಿ ಯಶಸ್ಸಿನ ಉತ್ತುಂಗಕ್ಕೆ ಏರಲಿ ಎಂದು ಹಾರೈಸಿದರು.

ಹುಬ್ಬಳ್ಳಿ – ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ, ಜೈನ್ ಸಮಾಜದ ಅಧ್ಯಕ್ಷ ಮಹೇಂದ್ರ ಸಿಂಘಿ, ಯೋಧ ಪರಶುರಾಮ್ ದಿವಾನದ್ ಅವರು ಮಾತನಾಡಿ ವಿಸ್ತಾರ್ ನ್ಯೂಸ್‌ ರಾಜ್ಯದ ಮೂಲೆಮೂಲೆಗೆ ಇನ್ನಷ್ಟು ವಿಸ್ತರಿಸಲಿ ಎಂದು ಶುಭಕೋರಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ವಿಸ್ತಾರ ನ್ಯೂಸ್‌ ಸುದ್ದಿವಾಹಿನಿಗೆ ಶುಭ ಕೋರಿದರು. ವೇದಿಕೆ ಕಾರ್ಯಕ್ರಮದ ಸಾನ್ನಿಧ್ಯವನ್ನು ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ ವಹಿಸಿದ್ದರು.

25ಕ್ಕೂ ಹೆಚ್ಚು ಕಲಾ ತಂಡಗಳ ನೂರಾರು ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಗಾನತರಂಗ ತಂಡದ ಕಲಾವಿದರು ಕನ್ನಡ ನಾಡುನುಡಿ, ಸಂಸ್ಕೃತಿಯನ್ನು ಸಾರುವ ಗೀತೆಗಳನ್ನು ಹಾಡಿದರು. ನೃತ್ಯೋದಯ ಕಲಾ ಮಂದಿರ, ಕಲಾವೈಭವ ನೃತ್ಯ ಅಕಾಡೆಮಿ, ತಕ್ಷಶಿಲಾ ಗುರುಕುಲ, ವಿದುಷಿ ಸುಹಾಸಿನಿ ನಾರಾಯಣಕರ‌ ತಂಡದ ಸದಸ್ಯರು ಭರತನಾಟ್ಯ ಮಾಡಿದರು. ರಮೇಶ ಕರಬಸಮ್ಮನವರ ಅವರ ಜನಪದ ಬಳಗ ತಂಡದಿಂದ ನಡೆದ ಕೀಚಕ ವಧಾ ಪ್ರಸಂಗದ ದೊಡ್ಡಾಟ ಗಮನ ಸೆಳೆಯಿತು.

ನಾರ್ಥ್ ಕರ್ನಾಟಕ ವುಮೆನ್ಸ್ ಫೌಂಡೇಷನ್, ಬ್ರಾಹ್ಮಣ ಸೇವಾಭಿವೃದ್ಧಿ ಸಂಘ, ದುರ್ಗಾ ಭಜನಾ ಮಂಡಳಿ, ಮಕ್ಕಳ ಸಾಹಿತ್ಯ ಪರಿಷತ್ತು, ಡಾ. ಅಂಬೇಡ್ಕರ್ ವಸತಿ ಶಾಲೆ, ಗೌರಿ ಮಹಿಳಾ ಮಂಡಳ, ಖೈಜನ್ ರೋಲರ್ ಸ್ಕೇಟಿಂಗ್ ಅಕಾಡೆಮಿ, ಹಿರಿಯ ನಾಗರಿಕರ ಮಹಿಳಾ ವೇದಿಕೆ, ಸುಜಯ್ ಸ್ಕೂಲ್ ಆಫ್ ಡ್ಯಾನ್ಸ್, ಸುಶಾಂತ್ ಡ್ಯಾನ್ಸ್ ಅಕಡೆಮಿ, ಶ್ರೀನಂದನ ಕಲಾ ಕೇಂದ್ರ ಸೇರಿದಂತೆ ವಿವಿಧ ಕಲಾತಂಡಗಳ ನೂರಾರು ಕಲಾವಿದರು ವಿಸ್ತಾರ ಕನ್ನಡ ಸಂಭ್ರಮದಲ್ಲಿ ಭಾಗವಹಿಸಿದ್ದರು.

ನುರಿತ ಕಲಾವಿದರು, ನೃತ್ಯಪಟುಗಳು, ಸಂಗೀತಗಾರರು ನಡೆಸಿಕೊಟ್ಟ ಜನಪದ ನೃತ್ಯ, ಕಂಸಾಳೆ ನೃತ್ಯ, ವಾದ್ಯ ಸಂಗೀತ, ಗೀಗಿ ಪದ, ಸಮೂಹ ಗೀತೆ, ಏಕ ಪಾತ್ರಾಭಿನಯ, ಕಿರು ನಾಟಕಗಳು ಆಕರ್ಷಕವಾಗಿ ಮೂಡಿಬಂದವು. ಸವಾಯಿ ಗಂಧರ್ವ ಹಾಲ್‌ನಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರು ಚಪ್ಪಾಳೆ, ಶಿಳ್ಳೆಗಳ ಮೂಲಕ ಕಲಾತಂಡಗಳನ್ನು ಪ್ರೋತ್ಸಾಹಿಸಿದರು.

ಇದನ್ನೂ ಓದಿ | Vistara News Launch | ಹಿರಿಯ ಸಾಹಿತಿ ಡಾ. ಎಚ್‌ ಎಸ್‌ ವೆಂಕಟೇಶಮೂರ್ತಿ ಅವರಿಗೆ ವಿಸ್ತಾರ ಕಾಯಕ ಯೋಗಿ ಪ್ರಶಸ್ತಿ ಪ್ರದಾನ

ಹುಬ್ಬಳ್ಳಿ- ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ, ಸಿದ್ಧಾರೂಢ ಮಠದ ಟ್ರಸ್ಟ್ ಕಮಿಟಿ ಮಾಜಿ ಸದಸ್ಯ ಹಾಗೂ ಜೈನ್ ಫೆಡರೇಷನ್ ಅಧ್ಯಕ್ಷ ಮಹೇಂದ್ರ ಸಿಂಘಿ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧ ಹಾಗೂ ಸಮಾಜ ಸೇವಕ, ಕುಂದಗೋಳದ ಶಿರಗುಪ್ಪಿಯ ಪರಶುರಾಮ ದಿವಾನದ, ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಚನೇಶ ಹೂಗಾರ, ಕನ್ನಡ ಸಾಹಿತ್ಯ ಪರಿಷತ್ ಧಾರವಾಡ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ, ವಿಸ್ತಾರ ನ್ಯೂಸ್‌ ಹಿರಿಯ ವರದಿಗಾರ ಪರಶುರಾಮ್ ತಹಶೀಲ್ದಾರ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಇದೇ ವೇಳೆ ಕನ್ನಡ ನಾಡು,‌ ನುಡಿ, ಸಂಸ್ಕೃತಿ,‌ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಗಣ್ಯರನ್ನು ಸನ್ಮಾನಿಸಲಾಯಿತು. ನೀಲಕಂಠ ಶಾಸ್ತ್ರಿಗಳು, ಮಂಜುನಾಥ ಲೂತಿಮಠ, ಮಾರುತಿ ಬೀಳಗಿ, ಶೇಖರಯ್ಯ ಮಠಪತಿ, ಮಹಾಂತೇಶ ತಹಸೀಲ್ದಾರ್, ಕಿರಣ ಎಚ್.ಎಸ್, ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ, ಪಾಲಿಕೆ ವಿಪಕ್ಷ ನಾಯಕ ದೊರಾಜ ಮಣಿಕುಂಟ್ಲ, ಸುಭಾಷ್ ಕಾಟ್ಕರ್, ಲಿಂಗರಾಜ ಪಾಟೀಲ್, ಮನೋಜ ತೋಟಗಾರ, ಇನ್ಸ್‌ಪೆಕ್ಟರ್ ಕಾಲಿಮಿರ್ಜಿ, ಚಿತ್ರನಟ ದೀಪಕ, ಸವಿತಾ ಶಿಂಧೆ, ಗೌರಿ, ನೇತ್ರಾವತಿ, ಶೃತಿ ಕಟ್ಟಿ, ಭಾರತಿ ಪವಾರ, ಗುರುರಾಜ ಹೂಗಾರ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮೆರಗು ತಂದ ಮುನ್ನೂರಕ್ಕೂ ಹೆಚ್ಚು ಕಲಾವಿದರಿಗೆ ವಿಸ್ತಾರ ನ್ಯೂಸ್‌ನಿಂದ ಪ್ರಮಾಣಪತ್ರ ನೀಡಿ ಪ್ರೋತ್ಸಾಹಿಸಲಾಯಿತು. ಅಭಿಮಾನದಿಂದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆ ಪ್ರೀತಿಯ ಭೋಜನ ನೀಡಿ ಬೀಳ್ಕೊಡಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಸ್ವಾಮೀಜಿಗಳು, ಜನಪ್ರತಿನಿಧಿಗಳು, ರಾಜಕೀಯ ನಾಯಕರು, ಸಾಮಾಜಿಕ ಕಾರ್ಯಕರ್ತರು, ಕನ್ನಡಪರ ಹೋರಾಟಗಾರರು ಸೇರಿ ಹಲವರು ಭಾಗವಹಿಸಿದ್ದರು.

ಇದನ್ನೂ ಓದಿ | Vistara News Launch | ವಿಸ್ತಾರ ಚಾನೆಲ್‌ ರಾಜ್ಯಾದ್ಯಂತ ಪಸರಿಸಲಿ: ಸಚಿವ ಆನಂದ್‌ ಸಿಂಗ್‌ ಶುಭ ಹಾರೈಕೆ

Exit mobile version