Site icon Vistara News

Karnataka Election 2023: ಶೆಟ್ಟರ್‌ ಹೇಳಿಕೆ ಅವರಿಗೆ ಗೌರವ ತರಲ್ಲ; ಸಂತೋಷ್‌ ಕುರಿತ ಹೇಳಿಕೆಗೆ ಬೆಲ್ಲದ ತಿರುಗೇಟು

Jagadish Shettar Should Maintain Some Dignity; Says Arvind Bellad

Jagadish Shettar Should Maintain Some Dignity; Says Arvind Bellad

ಧಾರವಾಡ: “ನನಗೆ ಟಿಕೆಟ್‌ (Karnataka Election 2023) ತಪ್ಪಲು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ ಅವರೇ ಕಾರಣ” ಎಂದು ಜಗದೀಶ್‌ ಶೆಟ್ಟರ್‌ ನೀಡಿದ ಹೇಳಿಕೆಗೆ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ತಿರುಗೇಟು ನೀಡಿದ್ದಾರೆ. “ಪಕ್ಷದಲ್ಲಿ ಎಲ್ಲ ಅಧಿಕಾರ ಅನುಭವಿಸಿ ಕಾಂಗ್ರೆಸ್‌ ಸೇರಿರುವ ಜಗದೀಶ್‌ ಶೆಟ್ಟರ್‌ ಅವರಿಗೆ ಪಕ್ಷದ ಕುರಿತು ಶ್ರದ್ಧೆ, ನಿಷ್ಠೆ ಇರಬೇಕಿತ್ತು. ಆದರೆ, ಈಗ ಅವರು ವಿನಾಕಾರಣ ಯಾರದ್ದೋ ಹೆಸರು ಹೇಳಿಕೊಂಡು ತಿರುಗಾಡುತ್ತಿರುವುದು ಅವರಿಗೆ ಶೋಭೆ ತರುವುದಿಲ್ಲ” ಎಂದು ಹೇಳಿದರು.

ಧಾರವಾಡ ನಗರ ಪಾಲಿಕೆಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಬೆಲ್ಲದ, “ಜಗದೀಶ್ ಶಟ್ಟರ್ ಅವರು 30 ವರ್ಷದ ಹಿಂದೆ ಸಾಮಾನ್ಯ ಕಾರ್ಯಕರ್ತ ಆಗಿದ್ದರು. ವಕೀಲ ವೃತ್ತಿ ಮಾಡುವವರನ್ನು ಬಿಜೆಪಿ ಕರೆದುಕೊಂಡು ಬಂದು ಟಿಕೆಟ್ ಕೊಟ್ಟಿತ್ತು. ಪಕ್ಷದ ತತ್ವ-ಸಿದ್ಧಾಂತಗಳಿಂದ ಅವರು ದೊಡ್ಡ‌ ನಾಯಕರಾಗಿ ಬೆಳೆಯುವಂತೆ ಆಯಿತು. ಇವತ್ತು‌ ದೊಡ್ಡ ನಾಯಕರಾದ ಶೆಟ್ಟರ್ ಬೇರೆ ನಾಯಕರನ್ನ ಬೆಳೆಸುವುದು ಅವರ ಜವಾಬ್ದಾರಿ. ಬೇರೆ ನಾಯಕರನ್ನು ಶೆಟ್ಟರ್‌ ಅವರು ಬೆಳೆಸಬೇಕಿತ್ತು” ಎಂದು ತಿಳಿಸಿದರು.

“ಪಕ್ಷದಲ್ಲಿ ಶೆಟ್ಟರ್‌ ಅವರು 30 ವರ್ಷ ಹಲವು ಹುದ್ದೆಗಳನ್ನು ಅನುಭವಿಸಿದ್ದಾರೆ. ಬೇರೆ ನಾಯಕರು ಬೆಳೆಯಬೇಕು ಎಂಬ ಕಾರಣದಿಂದ ಶೆಟ್ಟರ್‌ ಅವರಿಗೆ ರಾಜ್ಯಸಭೆಗೆ ಹೋಗಲು ಸೂಚಿಸಲಾಗಿತ್ತು. ಉನ್ನತ ಹುದ್ದೆಯನ್ನೇ ನೀಡಲು ಹೈಕಮಾಂಡ್‌ ತಿಳಿಸಿತ್ತು. ಅವರ ಸಹೋದರ ಕೂಡ ವಿಧಾನ ಪರಿಷತ್‌ ಸದಸ್ಯರಾಗಿದ್ದಾರೆ. ಇದನ್ನು ಶೆಟ್ಟರ್‌ ಅವರು ನೆನಪಿನಲ್ಲಿ ಇಟ್ಟುಕೊಳ್ಳಬೇಕಿತ್ತು” ಎಂದರು.

“ಬಿಜೆಪಿಯ ಗೆಲುವಿಗೆ ಇಲ್ಲಿಯ ಕಾರ್ಯಕರ್ತರು ಬೆವರಷ್ಟೇ ಸುರಿಸಿಲ್ಲ, ರಕ್ತವನ್ನೇ ಸುರಿಸಿದ್ದಾರೆ. ಕಾರ್ಯಕರ್ತರು ಜೀವ ಕೊಟ್ಟಿದ್ದಾರೆ, ಗುಂಡಿಗೆ ಬಲಿಯಾಗಿದ್ದಾರೆ. ಇದರಿಂದಾಗಿ ಬಿಜೆಪಿ ಹಾಗೂ ಜಗದೀಶ್‌ ಶೆಟ್ಟರ್‌ ಅವರು ಬೆಳೆದಿದ್ದಾರೆ. ಲಿಂಗಾಯತ ನಾಯಕರನ್ನು, ಶಾಸಕರನ್ನು ಬಿಜೆಪಿ ಹುಟ್ಟು ಹಾಕಿದೆ. ಹಿಂದೆಯೂ ಲಿಂಗಾಯತರು ಮುಖ್ಯಮಂತ್ರಿ ಆಗಿದ್ದರು, ಮುಂದೆಯೂ ಅವರೇ ಆಗಲಿದ್ದಾರೆ ಎಂದು ನಮ್ಮ ರಾಜ್ಯಾಧ್ಯಕ್ಷರು ಹೇಳಿದ್ದಾರೆ. ಆದರೆ, ಸುಖಾಸುಮ್ಮನೆ ವದಂತಿ ಹರಡಿಸಲಾಗುತ್ತಿದೆ” ಎಂದು ಪ್ರತಿಪಕ್ಷಗಳ ನಾಯಕರಿಗೆ ಪ್ರತ್ಯುತ್ತರ ನೀಡಿದರು.

ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಧಾರವಾಡ ಪಾಲಿಕೆಯಲ್ಲಿ ಅರವಿಂದ ಬೆಲ್ಲದ ನಾಮಪತ್ರ ಸಲ್ಲಿಸಿದರು. ಬೃಹತ್‌ ಮೆರವಣಿಗೆ ಮೂಲಕ ಆಗಮಿಸಿದ ಅವರು ಬಲ ಪ್ರದರ್ಶಿಸಿದರು. ಬೆಲ್ಲದ ಅವರಿಗೆ ಪತ್ನಿ ಹಾಗೂ ಪುತ್ರ ಸಾಥ್‌ ನೀಡಿದರು.

ಇದನ್ನೂ ಓದಿ: BJP Karnataka: ಬಿ.ಎಲ್‌. ಸಂತೋಷ್‌ ವಿರುದ್ಧ ಮಾತನಾಡಿದ್ದು ಶೆಟ್ಟರ್‌ಗೆ ಶೋಭೆಯಲ್ಲ: ಬಿ.ಎಸ್‌. ಯಡಿಯೂರಪ್ಪ

Exit mobile version