ಮೈಸೂರು: ನಾಡಹಬ್ಬ ದಸರಾ ಉದ್ಘಾಟನೆ ಸಮಾರಂಭ ಸೆ.26ರಂದು ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಕೊವಿಡ್ 19 ಕಾರಣದಿಂದ ಕಳೆದ ಎರಡು ವರ್ಷಗಳಿಂದಲೂ ಸರಳವಾಗಿ ನಡೆದಿದ್ದ ದಸರಾ ಈ ಸಲ ಅದ್ದೂರಿಯಾಗಿಯೇ ನಡೆಯಲಿದೆ. ಹಾಗೇ, ಪೊಲೀಸ್ ಬಿಗಿ ಭದ್ರತೆಯನ್ನೂ ಕಲ್ಪಿಸಲಾಗಿದೆ.
ಇನ್ನು ಈ ಸಲ ದಸರಾ ಉದ್ಘಾಟನೆ ವೇಳೆ ಕೇವಲ 9 ಗಣ್ಯರಿಗೆ ಮಾತ್ರ ವೇದಿಕೆ ಮೇಲೆ ಅವಕಾಶವಿದೆ ಎನ್ನಲಾಗಿದೆ.
ಸಾಮಾನ್ಯವಾಗಿ ದಸರಾ ಉದ್ಘಾಟನೆ ವೇಳೆ ವೇದಿಕೆ ಮೇಲೆ ಹಲವು ಗಣ್ಯರು ಇರುತ್ತಾರೆ. ಆದರೆ ಈ ಸಲ ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಜ್ಯಪಾಲ ಥಾವರ್ ಚಂದ್ರ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಮಾತ್ರ ವೇದಿಕೆ ಮೇಲೆ ಉಪಸ್ಥಿತರಿರುತ್ತಾರೆ ಎಂದು ಹೇಳಲಾಗಿದೆ. ಆದರೆ ಎಸ್.ಟಿ.ಸೋಮಶೇಖರ್ ಅವರು ದಸರಾ ಬಗ್ಗೆ ಪ್ರತಿಕ್ರಿಯೆ ನೀಡುವಾಗ ದಸರಾ ಉದ್ಘಾಟನೆ ವೇಳೆ ವೇದಿಕೆ ಮೇಲೆ 13 ಜನರು ಇರುತ್ತಾರೆ ಎಂದಿದ್ದಾರೆ.
ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ಮಾಜಿ ಸಿಎಂಗೆ ಇಲ್ಲ ವೇದಿಕೆ ಮೇಲೆ ಸ್ಥಾನ
ದಸರಾ ಉದ್ಘಾಟನೆಯ ಬಳಿಕ ದ್ರೌಪದಿ ಮುರ್ಮು ಹುಬ್ಬಳ್ಳಿಗೆ ತೆರಳುವರು. ಅಲ್ಲಿ ಹುಬ್ಬಳ್ಳಿ-ಧಾರವಾಡ ಪಾಲಿಕೆಯಿಂದ ಅವರಿಗೆ ಪೌರ ಸನ್ಮಾನ ನೆರವೇರಿಸಲಾಗುವುದು. ಆದರೆ ಈ ಕಾರ್ಯಕ್ರಮದ ಸಂಬಂಧ ರಾಜ್ಯ ಸರ್ಕಾರದ ಆಹ್ವಾನ ಪತ್ರಿಕೆಯಲ್ಲಿ ವೇದಿಕೆ ಹತ್ತಲು ಮಾಜಿ ಸಿಎಂ ಜಗದೀಶ್ ಶೆಟ್ಟರ್ಗೆ ಅವಕಾಶ ನೀಡಲಾಗಲಿಲ್ಲ ಎನ್ನಲಾಗಿದೆ.
ಹುಬ್ಬಳ್ಳಿ-ಧಾರವಾಡ ಪಾಲಿಕೆಯಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಜ್ಯಪಾಲ ಥಾವರ್ ಚಂದ್ರ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಸಚಿವರಾದ ಅಶ್ವತ್ಥ್ ನಾರಾಯಣ, ಶಂಕರ್ ಪಾಟೀಲ್ ಮುನೇನಕೊಪ್ಪ, ಬೈರತಿ ಬಸವರಾಜ್, ಹಾಲಪ್ಪ ಆಚಾರ್, ಹುಬ್ಬಳ್ಳಿ-ಧಾರವಾಡ ಮೇಯರ್ ಈರೇಶ್ ಅಂಚಟಗೇರಿ ಮಾತ್ರ ವೇದಿಕೆ ಮೇಲೆ ಇರಲಿದ್ದಾರೆ ಎಂದು ಇಳಿಸಲಾಗಿದೆ. ಆದರೆ, ರಾಷ್ಟ್ರಪತಿ ಭವನದಿಂದ ಆಗಮಿಸಿರುವ ಆಹ್ವಾನ ಪತ್ರಿಕೆಯಲ್ಲಿ ಶೆಟ್ಟರ್ ಅವರ ಹೆಸರನ್ನು ನಮೂದು ಮಾಡಲಾಗಿದೆ.
ಹಾಗೇ, ಧಾರವಾಡ ಐಐಐಟಿ ಕ್ಯಾಂಪಸ್ ಉದ್ಘಾಟನೆ ಸಮಾರಂಭದಲ್ಲೂ ರಾಷ್ಟ್ರಪತಿ ದ್ರೌಪದಿ ಮುರ್ಮು ಇರಲಿದ್ದಾರೆ. ಆದರೆ ಈ ಕಾರ್ಯಕ್ರಮದ ವೇದಿಕೆಯಲ್ಲೂ ಜಗದೀಶ್ ಶೆಟ್ಟರ್ ಇರುವುದಿಲ್ಲ. ಇಲ್ಲಿ ರಾಷ್ಟ್ರಪತಿ, ರಾಜ್ಯಪಾಲರು, ಮುಖ್ಯಮಂತ್ರಿ, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಪ್ರಲ್ಹಾದ್ ಜೋಶಿ ಮತ್ತು ಸುಧಾ ಮೂರ್ತಿ ಇರಲಿದ್ದಾರೆ. ಈ ಕಾರ್ಯಕ್ರಮ ಸಿದ್ಧತೆಯಲ್ಲೆಲ್ಲ ಜಗದೀಶ್ ಶೆಟ್ಟರ್ ಸಕ್ರಿಯವಾಗಿದ್ದಾರೆ. ಆದರೆ ಅವರದ್ದೇ ರಾಜಕೀಯ ನೆಲೆಯಾದ ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯುತ್ತಿರುವ ರಾಷ್ಟ್ರಪತಿಯವರ ಕಾರ್ಯಕ್ರಮದಲ್ಲಿ ಜಗದೀಶ್ ಶೆಟ್ಟರ್ಗೆ ಅವಕಾಶ ಕೊಡದೆ ಇರುವುದು ಯಾಕೆ ಎಂಬ ಪ್ರಶ್ನೆ ದೊಡ್ಡದಾಗಿ ಕಾಡುತ್ತಿದೆ. ಬೇಕಂತಲೇ ಅವರನ್ನು ದೂರ ಇಡಲಾಗುತ್ತಿದೆಯಾ ಎಂಬ ಪ್ರಶ್ನೆಯೂ ಎದ್ದಿದೆ.
ಇದನ್ನೂ ಓದಿ: Mysore Dasara 2022 | ಮಹಾಲಯ ಅಮಾವಾಸ್ಯೆ ನಿಮಿತ್ತ ದಸರಾ ಗಜಪಡೆ ತಾಲೀಮು ರದ್ದು