ಬೆಂಗಳೂರು: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದ ಪ್ರಮುಖ ಆರೋಪಿ ಜಾಗೃತ್ ಈಗಾಗಲೇ ಬಂಧನವಾಗಿದ್ದಾನೆ. ಆದರೆ ಬಂಧನಕ್ಕೂ ಮೊದಲು ಈತನಿಗಾಗಿ ಹುಡುಕಾಟ ನಡೆಸಿದ್ದ ಸಿಐಡಿ ಅಧಿಕಾರಿಗಳಿಗೆ ವಿಪರೀತ ಕಾಟ ಕೊಟ್ಟಿದ್ದ ಎಂಬ ವಿಷಯ ಇದೀಗ ಬಯಲಾಗಿದೆ.
ಕಣ್ಣ ಮುಂದೆ ಆರೋಪಿ ಇದ್ದರೂ ಜಾಗೃತ್‌ನನ್ನು ಬಂಧಿಸಲಾಗದೆ ಸಿಐಡಿ ಅಧಿಕಾರಿಗಳು ಹೆಣಗಾಡಿದ್ದರು. ಇನ್ನೇನು ಸಿಕ್ಕಿಬೀಳಬೇಕು ಎನ್ನುವಷ್ಟರಲ್ಲಿ ಈತ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದ. ತುಮಕೂರಿನ ಗಲ್ಲಿ ಗಲ್ಲಿಗಳನ್ನು ತಿಳಿದುಕೊಂಡಿದ್ದ ಜಾಗೃತ್, ಇನ್ನೇನು ಪೊಲೀಸರು ಹಿಡಿಯಬೇಕು ಎನ್ನುವಷ್ಟರರಲ್ಲಿ ಬುಲೆಟ್ ಬೈಕ್‌ನಲ್ಲಿ ಗಲ್ಲಿಗಳೊಳಗೆ ನುಗ್ಗಿ ಪರಾರಿಯಾಗಿಬಿಡುತ್ತಿದ್ದ.
ಇದನ್ನೂ ಓದಿ | ಐಪಿಎಸ್-ಐಎಎಸ್ ಬಂಧನ; ಕಾನೂನಿನ ಮುಂದೆ ಎಲ್ಲರೂ ಒಂದೇ ಎಂದ ಐಜಿಪಿ ಡಿ. ರೂಪ ಮೌದ್ಗಿಲ್
ಕಣ್ಣ ಮುಂದೆ ಇದ್ದ ಒಬ್ಬ ಆರೋಪಿಯನ್ನು ಬಂಧಿಸಲು ಸಿಐಡಿ ಅಧಿಕಾರಿಗಳಿಗೆ 24 ಗಂಟೆ ಸಮಯ ಹಿಡಿದಿದೆ. ತುಮಕೂರಿನಲ್ಲಿಯೇ ಅಡಗಿ ಕೂತಿದ್ದ ಜಾಗೃತ್, ಸಿಐಡಿ ಅಧಿಕಾರಿಗಳು ಬಂಧಿಸಲು ಬಂದಿದ್ದಾರೆಂದು ತಿಳಿದು ಎಸ್ಕೇಪ್ ಆಗಲು ಯತ್ನಿಸಿದ್ದ. ಆದರೆ, ಸಿಐಡಿ ಅಧಿಕಾರಿಗಳು ಕಾರಿನಲ್ಲಿ ಬೆನ್ನಟ್ಟಿದರೆ ಜಾಗೃತ್ ಬುಲೆಟ್‌ನಲ್ಲಿ ಎಸ್ಕೇಪ್ ಆಗುತ್ತಿದ್ದ. ಅಧಿಕಾರಿಗಳು ಎಷ್ಟೇ ಸಮೀಪಕ್ಕೆ ಹೋದರೂ ತಪ್ಪಿಸಿಕೊಳ್ಳುವಲ್ಲಿ ಜಾಗೃತ್ ಯಶಸ್ವಿಯಾಗಿದ್ದ. ಕೊನೆಗೆ ಸ್ಥಳೀಯ ಪೊಲೀಸರ ನೆರವಿನಿಂದ ಸಿಐಡಿ ಅಧಿಕಾರಿಗಳು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಚನ್ನಪಟ್ಟಣದಲ್ಲಿ ಜುಲೈ ೨ರಂದು ಬಂಧಿಸಿದ್ದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ
ಪಿಎಸ್‌ಐ ಪರೀಕ್ಷೆಯಲ್ಲಿ ಓಎಂಆರ್ ತಿದ್ದುಪಡಿ ಮಾಡಿ ಆಯ್ಕೆಯಾಗಿದ್ದ ಆರೋಪಿ ಜಾಗೃತ್ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಏ.30ರಂದು ಪ್ರಕರಣ ದಾಖಲಾಗಿತ್ತು. ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣ ಬಯಲಿಗೆ ಬಂದು, ಪ್ರಕರಣ ದಾಖಲಾದ ಮೇಲೆ ಜಾಗೃತ್ ತಲೆಮರೆಸಿಕೊಂಡಿದ್ದ. ಹಗರಣ ಬೆಳಕಿಗೆ ಬಂದು ಪರೀಕ್ಷೆ ರದ್ದಾದ ಮೇಲೆ ಸರ್ಕಾರದ ನಿರ್ಧಾರ ವಿರೋಧಿಸಿ ಅಭ್ಯರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದಾಗ ಆರೋಪಿ ಜಾಗೃತ್ ಮುಂಚೂಣಿಯಲ್ಲಿದ್ದ ಎನ್ನಲಾಗಿದೆ.
ಇದನ್ನೂ ಓದಿ | ಪಿಎಸ್‌ಐ ನೇಮಕಾತಿ ಅಕ್ರಮ | ಇಡಿ ತನಿಖೆ ಇಲ್ಲವೆಂದ ಗೃಹ ಸಚಿವ