Site icon Vistara News

Jai Shree Ram: ಜೈ ಶ್ರೀರಾಮ್‌ ಹೇಳುವಂತೆ ಒತ್ತಾಯಿಸಿ ಅಂಧ ಮುಸ್ಲಿಂ ವ್ಯಕ್ತಿಗೆ ಹಲ್ಲೆ?

Muslim Man Jai Shree ram

ಕೊಪ್ಪಳ: ಯುವಕರ ತಂಡವೊಂದು ಮುಸ್ಲಿಂ ಅಂಧ ವ್ಯಕ್ತಿಯನ್ನು (Blind Muslim old man) ಅಪಹರಿಸಿ ಜೈ ಶ್ರೀ ರಾಮ್‌ (Jai Shree Ram) ಎಂದು ಹೇಳುವಂತೆ ಒತ್ತಾಯಿಸಿ ಹಲ್ಲೆ ಮಾಡಿದ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ (Gangavati News) ನಡೆದಿದೆ. ಗಂಗಾವತಿಯ ಮಹಿಬೂಬ ನಗರದ ನಿವಾಸಿ ಹುಸೇನಸಾಬ ಎಂಬ ವೃದ್ಧನ ಮೇಲೆ ಹಲ್ಲೆ (Attack on Muslim Man) ನಡೆದಿದೆ.

ಹುಸೇನ ಸಾಬ ಅವರಿಗೆ ಎರಡೂ ಕಣ್ಣುಗಳಲ್ಲಿ ದೃಷ್ಟಿ ಇಲ್ಲ. ಅಂಧರಾಗಿರುವ ಅವರು ನವೆಂಬರ್‌ 25ರಂದು ಕಷ್ಟಪಟ್ಟು ವಾಹನಗಳನ್ನು ಬಳಸಿ ಪೇಟೆ ಕಡೆಗೆ ಬಂದಿದ್ದರು. ಅಲ್ಲಿಂದ ಮನೆಗೆ ತೆರಳಲು ಆಟೋ ರಿಕ್ಷಾಕ್ಕಾಗಿ ಕಾಯುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಕೆಲವರು ಅವರ ಮೇಲೆ ಹಲ್ಲೆ ಮಾಡಿದ್ದಾರೆ.

ಬಳಿಕ ಅವರನ್ನು ಎತ್ತಾಕಿಕೊಂಡು ನಗರದ ಹೊರವಲಯದ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ ಎಂದು ಗಂಗಾವತಿ ನಗರ ಠಾಣೆಯಲ್ಲಿ ದೂರು ನೀಡಲಾಗಿದೆ.

ನಗರದ ಹೊರವಲಯಕ್ಕೆ ಕರೆದುಕೊಂಡು ಹೋಗಿ ಅವರ ಗಡ್ಡಕ್ಕೆ ಬೆಂಕಿ ಹಚ್ಚಲಾಗಿದೆ. ಆದರೆ, ಅವರು ಕೂಡಲೇ ಅದನ್ನು ನಂದಿಸಿಕೊಂಡಿದ್ದಾರೆ. ಬಳಿಕ ಹಲ್ಲೆ ಮಾಡಲಾಗಿದೆ. ಹುಸೇನ ಸಾಬ ಅವರ ಬೆನ್ನಿನಲ್ಲಿ ಹಲ್ಲೆಯಿಂದಾದ ಗಾಯದ ಗುರುತುಗಳು ಕಂಡುಬಂದಿವೆ.

ನವೆಂಬರ್‌ 25ರಂದು ಸಂಜೆ ಈ ಘಟನೆ ನಡೆದಿದ್ದು, ಆವತ್ತು ರಾತ್ರಿ ಇಡೀ ಹುಸೇನಸಾಬ ಅವರು ಆ ಗುಡ್ಡದಲ್ಲೇ ಇದ್ದರು. ಬೆಳಗ್ಗೆ ಕುರಿ ಕಾಯುವವರು ಬಂದು ನೋಡಿದಾಗ ಇವರು ಬಿದ್ದುಕೊಂಡಿರುವುದು ಕಂಡಿದೆ. ಅವರು ಹುಸೇನ್‌ ಸಾಬ್‌ ಅವರನ್ನು ಮನೆಗೆ ಸೇರಿಸಿದ್ದಾರೆ. ಮನೆಯಲ್ಲಿ ಹೀಗೆಲ್ಲ ನಡೆದಿದೆ ಎಂದು ಹೇಳಿದ ಬಳಿಕ ಈಗ ಗಂಗಾವತಿ ನಗರ ಠಾಣೆಗೆ ದೂರು ನೀಡಲಾಗಿದೆ.

ಹಲ್ಲೆ ನಡೆದಿದ್ದು ನಿಜವಾ?

ಹುಸೇನ ಸಾಬ ಅವರನ್ನು ನೋಡಿದರೆ ಯಾರಿಗೂ ಹಲ್ಲೆ ಮಾಡಬೇಕು, ಗಡ್ಡಕ್ಕೆ ಬೆಂಕಿ ಹಚ್ಚಬೇಕು ಎಂದು ಅನಿಸುವ ಹಾಗಿದ್ದಾರೆ. ಒಬ್ಬ ಬಡ ಮುಸ್ಲಿಂ ಮಾತ್ರವಲ್ಲದೆ, ಕಣ್ಣೇ ಕಾಣದ ಅಂಧನಿಗೆ ಹಲ್ಲೆ ಮಾಡುವ ಉದ್ದೇಶವಾದರೂ ಏನು ಎನ್ನುವುದು ಸ್ಪಷ್ಟವಾಗಿಲ್ಲ.

ನಿಜಕ್ಕೂ ಯಾರಾದರೂ ಕುಡಿತ ಇಲ್ಲವೇ ನಶೆಯ ಮತ್ತಿನಲ್ಲಿ ಈ ರೀತಿ ನಡೆದುಕೊಂಡರೇ ಎನ್ನುವ ಸಂಶಯವೂ ಇದೆ. ಆ ರೀತಿ ನಡೆದಿದ್ದರೆ ಅವರನ್ನು ಬೈಕ್‌ ಮೂಲಕ ಎತ್ತಾಕಿಕೊಂಡ ಪ್ರದೇಶದಲ್ಲಿ ಯಾವುದಾದರೂ ಸಿಸಿಟಿವಿಯಲ್ಲಿ ಈ ಘಟನೆ ದಾಖಲಾಗಿರುವ ಸಾಧ್ಯತೆ ಇದೆ. ಇದನ್ನು ಗಮನಿಸಿ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಬೇಕಾಗಿದೆ.

ಒಂದು ವೇಳೆ ಹಲ್ಲೆ ನಡೆದಿರುವುದು ನಿಜವೇ ಆಗಿದ್ದರೆ ಹಲ್ಲೆ ಮಾಡಿದವರು ಯಾರು? ಏನು ಉದ್ದೇಶ ಎನ್ನುವುದು ಅಪರಾಧಿಗಳ ಬಂಧನದ ಬಳಿಕ ಸ್ವಷ್ಟವಾಗಲಿದೆ.

ಅಥವಾ ಯಾವುದೋ ಬೇರೆ ಕಾರಣದಿಂದ ಮನೆಯಿಂದ ನಾಪತ್ತೆಯಾದ ಹುಸೇನ ಸಾಬ ಅವರು ಹಲ್ಲೆ, ಜೈಶ್ರೀರಾಮ್‌ ಹೇಳಿಕೆಯ ಕಥೆಗಳನ್ನು ಕಟ್ಟಿದ್ದರೆ ಅದು ಕೂಡಾ ತನಿಖೆಯಿಂದ ಬಯಲಾಗಲಿದೆ.

ಒಂದೊಮ್ಮೆ ದುಷ್ಕರ್ಮಿಗಳ ತಂಡ ಒಬ್ಬ ಅಂಧ ವ್ಯಕ್ತಿಯ ಮೇಲೆ ಈ ರೀತಿ ದೌರ್ಜನ್ಯ ಮಾಡಿದ್ದೇ ಹೌದಾಗಿದ್ದಲ್ಲಿ, ಇದಕ್ಕಿಂತ ದುಷ್ಟ ಕೃತ್ಯ ಬೇರೆ ಇಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

Exit mobile version